
ಹಲಗೂರಿನಿಂದ ಮುತ್ತತ್ತಿ ಕಡೆ ಹೋಗುವಾಗ ಸುಮಾರು 5 ಕಿಮೀ ಅಂತರದಲ್ಲಿ ಬೀರೋಟ ಮಾರ್ಗ ಸಿಗುತ್ತದೆ. ಈ ಹಾದಿಯಲ್ಲಿ 12 ಕಿಮೀನಷ್ಟುದೂರ ಹೋದರೆ ಭೋರ್ಗರೆತದ ಸದ್ದು ಕೇಳುತ್ತದೆ. ಅದು ಬೆಂಕಿ ಜಲಪಾತದ ಅಬ್ಬರ!
ಮಂಡ್ಯ ಎಂಪಿ ತಂಗಿ, ಅಂಬಿ ಕಬೂತರ್ ಪ್ರಿಯಾ ವಿನ್ಸೆಂಟ್ ಫೋಟೋಸ್!
ನಡೆದದ್ದೇ ದಾರಿ
ಶಿಂಷಾ ನದಿಯಿಂದ ಧುಮ್ಮಿಕ್ಕುವ ಜಲಧಾರೆಯಿದು. ಮಳೆಗಾಲದಲ್ಲಿ ರುದ್ರರಮಣೀಯ. ಉಳಿದ ಸಮಯ ಸೌಮ್ಯ. ಸ್ಥಳೀಯರನ್ನು ಬಿಟ್ಟರೆ ಹೊರಗಿನವರ ಕಣ್ಣಿಗೆ ಬಿದ್ದಿಲ್ಲ. ಹಾಗಾಗಿ ಶುಚಿಯಾಗಿದೆ. ಈ ಜಲಪಾತದ ಬುಡಕ್ಕೆ ಹೋಗಲು ದಾರಿಯಿಲ್ಲ. ಕಚ್ಚಾರಸ್ತೆಯಲ್ಲಿ ಮೂರ್ನಾಲ್ಕು ಕಿ.ಮೀ ನಡೆದು ಕಣಿವೆಯನ್ನು ದಾಟಿ ಹೋಗಬೇಕು. ದಾರಿಯೇ ಇಲ್ಲ. ಗಿಡಗಂಟೆಗಳ ನಡುವೆ ದಾರಿ ಮಾಡಿಕೊಂಡು ಹೋಗಬೇಕು. ಸ್ಥಳೀಯರ ನೆರವು ಇಲ್ಲದಿದ್ದರೆ ಈ ಜಲಪಾತ ಕಂಡುಹಿಡಿಯಲಾಗದು. ಜೊತೆಗೆ ಇದಕ್ಕೆ ಬೆಂಕಿ ಜಲಪಾತ ಎಂಬ ಹೆಸರಿದ್ದ ಹಾಗೆ ಶಿಂಷಾ ನದಿಯಿಂದ ಧುಮ್ಮಿಕ್ಕುವ ಕಾರಣ ಶಿಂಷಾ ಜಲಪಾತ, ಕೊಂಡ ಜಲಪಾತ ಇತ್ಯಾದಿ ಹೆಸರುಗಳೂ ಇವೆ.
ಪ್ರವಾಸಿಗರ ಸ್ವರ್ಗ ಪಿಓಕೆ, ಹೋಗಿ ಬರಲು ತಡವೇಕೆ?
ಜಲಧಾರೆಯ ಸೌಂದರ್ಯ ನಿಜಕ್ಕೂ ರೋಮಾಂಚಕವಾಗಿದೆ. ಗಗನಚುಕ್ಕಿ-ಭರಚುಕ್ಕಿಯಷ್ಟೇ ಪ್ರಕೃತಿ ವೈಭವ ಇಲ್ಲಿದೆ. ಅತಿ ಕಡಿದಾದ ಸಣ್ಣ ಕಾಲು ದಾರಿಯಲ್ಲಿ ಜಲಪಾತದ ಕೆಳಕ್ಕೆ ಇಳಿದರೆ ಜಲಪಾತದ ವೈಭವ ಕಣ್ಮನ ತಣಿಸುತ್ತದೆ. ಕಲ್ಲುಗಳ ಮೇಲೆ ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ. ಜಾರುವ ಬಂಡೆಗಳ ಮೇಲೇರಿ ನೀರಾಟ ಆಡಲೂಬಹುದು. ಹಲವಾರು ಕವಲುಗಳಾಗಿ ಸುಮಾರು ನೂರು ಅಡಿಗಳಷ್ಟುಎತ್ತರದಿಂದ ದುಮ್ಮಿಕ್ಕುವ ಜಲಪಾತದ ಭೋರ್ಗರೆತ ನಮ್ಮೆಲ್ಲಾ ಆಯಾಸಗಳನ್ನು ಒಮ್ಮೆಲೆ ದೂರವಾಗಿಸುತ್ತದೆ.
ಹೋಗುವ ದಾರಿ
ಮಳವಳ್ಳಿ ತಾಲೂಕಿನ ಹಲಗೂರಿನಿಂದ ಮುತ್ತತ್ತಿಗೆ ಹೋಗುವ ಮಾರ್ಗದಲ್ಲಿ ಹಲಗೂರಿನಿಂದ 5 ಕಿ.ಮೀ. ಚಲಿಸಿದರೆ ಅಲ್ಲಿ ರಸ್ತೆ ಇಬ್ಬಾಗವಾಗುತ್ತದೆ. ಎಡ ರಸ್ತೆ ಮುತ್ತತ್ತಿಗೆ ಹೋದರೆ, ಬಲ ರಸ್ತೆ ಬೀರೋಟ ಗ್ರಾಮದ ಕಡೆಗೆ ಹೋಗುತ್ತದೆ. ಬೀರೋಟ ಮಾರ್ಗದಲ್ಲಿ ಕರಲಕಟ್ಟೆ, ಗಾಣಾಳು, ಕೆಂಚಬೋವಿದೊಡ್ಡಿ ಗ್ರಾಮಗಳನ್ನು ದಾಟಿದರೆ ಕೆಂಚಬೋವಿದೊಡ್ಡಿ ಗ್ರಾಮ ಬಿಟ್ಟು ಕೇವಲ 200 ಮೀಟರ್ ಸಾಗಿ ಮುಖ್ಯರಸ್ತೆಯಿಂದ ಬಲಕ್ಕೆ ತಿರುಗಿ (ಅಲ್ಲಿ ನಾಮಫಲಕ ಇಲ್ಲದ್ದರಿಂದ ಯಾರನ್ನಾದರೂ ಕೇಳಿದರೆ ಒಳ್ಳೆಯದು) ಕಿರಿದಾದ, ಬೇಲಿ ಇರುವ ರಸ್ತೆಯಲ್ಲಿ ಸಾಗಬೇಕು. ಇಲ್ಲಿಂದ ಕಚ್ಚಾರಸ್ತೆಯಲ್ಲಿ ಮೂರ್ನಾಲ್ಕು ಕಿ.ಮೀ ನಡೆದರೆ ರುದ್ರಮನೋಹರ ಜಲ ವೈಭವ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.