ಎದುರಾಳಿಗೆ ಸಾವು ಸಮೀಪಿಸಿದಾಗ...

By Web Desk  |  First Published Sep 30, 2019, 4:56 PM IST

ಸಾವು ಒಮ್ಮೆ ತನ್ನ ಬೆರಳಿಂದ ಸವರಿ ಹೋದ ತಕ್ಷಣ ಎದೆ ಝಲ್ಲೆನುತ್ತದೆ. ಸಾವೆಂಬ ಪರಕೀಯ ಯಾವ ಕ್ಷಣದಲ್ಲಿ ಬೇಕಾದರೂ ಬರಬಲ್ಲ. ಅವನು ಎಲ್ಲವನ್ನೂ ನಾಶಮಾಡಬಲ್ಲ ಎಂಬುದು ಗೊತ್ತಿದ್ದೂ ತನ್ನ ಎದುರಾಳಿಯನ್ನು ಮಟ್ಟಹಾಕಲು, ಹಣಿಯಲು ಹವಣಿಸುತ್ತಿದ್ದವನಿಗೆ ಇದ್ದಕ್ಕಿದ್ದಂತೆ ಎದುರಾಳಿ ಸಾಯುತ್ತಿದ್ದಾನೆ ಅಂತ ಗೊತ್ತಾದರೆ?


ಒಬ್ಬ ಗುರು.

ಅವನಿಗೆ ಇಬ್ಬರು ಶಿಷ್ಯರು. ಇಬ್ಬರೂ ಪ್ರತಿಭಾವಂತರೇ. ಆದರೆ ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಆಗದು. ದಿನಾ ವಾಗ್ವಾದ, ಜಗಳ. ಅವನನ್ನು ಸದೆಬಡಿಯಲಿಕ್ಕೆ ಇವನು ನೋಡುತ್ತಿದ್ದ. ಇವನನ್ನು ಮಣಿಸಲಿಕ್ಕೆ ಅವನು ಒದ್ದಾಡುತ್ತಿದ್ದ. ಹೀಗೆ ಅವರಿಬ್ಬರೂ ಒಬ್ಬರನ್ನೊಬ್ಬರು ಮಣಿಸಲಿಕ್ಕೆಂದೇ ಬದುಕಿದಂತೆ ಕಾಣುತ್ತಿದ್ದರು.

Tap to resize

Latest Videos

ಅವರ ಈ ಹುಚ್ಚಾಟವನ್ನು ಕಂಡ ಊರ ಮಂದಿ ಗುರುಗಳ ಬಳಿ ಬಂದು ವಿನಂತಿಸಿಕೊಂಡರು: ಹೇಗಾದರೂ ಮಾಡಿ ಅವರಿಬ್ಬರ ಜಗಳ ನಿಲ್ಲಿಸಿ. ಇಬ್ಬರು ಪ್ರತಿಭಾವಂತರು ಹೀಗೆ ನಷ್ಟವಾಗಿ ಹೋಗುತ್ತಿದ್ದಾರೆ. ಅವರ ಶ್ರದ್ಧೆ, ಛಲ, ಸೃಜನಶೀಲತೆ, ಬುದ್ಧಿಮತ್ತೆಯೆಲ್ಲ ಹೀಗೆ ಕ್ಷುಲ್ಲಕ ಜಗಳದಲ್ಲಿ ನಷ್ಟವಾಗುತ್ತಿದೆ. ನೀವಾದರೂ ಅವರಿಗೆ ಯಾಕೆ ವಿವೇಕ ಹೇಳಬಾರದು.

ಗುರು ಸುಮ್ಮನೆ ನಕ್ಕ. ಅವನಿಗೆ ತನ್ನ ಮಾತು ಅವರ ವರ್ತನೆಯನ್ನು ಬದಲಾಯಿಸಲಾರದು ಅನ್ನುವುದು ಗೊತ್ತಿತ್ತು. ಬಂದವರ ಬಳಿ ನೋಡೋಣ ಅಂತಷ್ಟೇ ಹೇಳಿ ಕಳುಹಿಸಿದ. ಆಮೇಲೆ ಸುಮ್ಮನಾದ.

ಭಯವೇ ನಮ್ಮನ್ನು ಬದುಕಿಸುವ ಸಂಜೀವಿನಿ ನೋಡೋಣ, ದೇವರಿದ್ದಾನೆ!

ಅವರಿಬ್ಬರ ಜಗಳ ನಿಲ್ಲಲಿಲ್ಲ. ಒಬ್ಬರನ್ನೊಬ್ಬರು ಹೀಯಾಳಿಸುತ್ತಾ, ಹಂಗಿಸುತ್ತಾ ಮತ್ತೊಂದಷ್ಟುಕಾಲ ಸಂದಿತು. ಮತ್ತೆ ಊರವರೆಲ್ಲ ಸೇರಿ ದೂರು ತಂದರು. ನೀವು ಸುಮ್ಮನಿದ್ದೀರಿ. ನಿಮ್ಮ ಮೌನ ಬೇರೆ ಶಿಷ್ಯಂದಿರನ್ನೂ ಹಾಳು ಮಾಡುತ್ತದೆ. ಈಗಲೂ ನೀವು ಸುಮ್ಮನಿದ್ದರೆ ನಾವು ದೊರೆಗೆ ದೂರು ಕೊಡುತ್ತೇವೆ. ದೊರೆ ಇಬ್ಬರಿಗೂ ಕಠಿಣ ಶಿಕ್ಷೆ ಕೊಡುತ್ತಾನೆ. ಅದಕ್ಕೂ ಮುಂಚೆ ನೀವೇನಾದರೂ ಮಾಡಿ ಎಂದು ಮತ್ತೊಮ್ಮೆ ಕೊಂಚ ಕಟುವಾಗಿ ಕೇಳಿಕೊಂಡರು.

ಗುರು ಅವರಿಬ್ಬರನ್ನೂ ಕರೆಸಿದ. ಪ್ರತ್ಯೇಕವಾಗಿ ಮಾತಾಡಿಸಿದ. ಇಬ್ಬರೂ ಅಹಂಕಾರಿಗಳೆಂದು ಗೊತ್ತಾಯಿತು. ಇಬ್ಬರನ್ನೂ ಶ್ರೇಷ್ಠತೆಯ ವ್ಯಸನ ಅಂಟಿಕೊಂಡಿತ್ತು. ಇಬ್ಬರಿಗೂ ತಿಳಿಹೇಳಿ ಒಂದಾಗಿಸಲು ಯತ್ನಿಸಿ ಸೋತ ಗುರು ಕೊನೆಗೆ ಅವರಿಗೊಂದು ಪರೀಕ್ಷೆ ಒಡ್ಡುವುದಾಗಿ ಹೇಳಿದ. ಅದರಲ್ಲಿ ಗೆದ್ದವರು ಶ್ರೇಷ್ಠರೆಂದು ತೀರ್ಮಾನ ಆಗುತ್ತದೆ. ಆದರೆ ಸೋತವರಿಗೆ ಒಂದು ಶಿಕ್ಷೆಯನ್ನೂ ಕೊಡುತ್ತೇನೆ. ಆ ಶಿಕ್ಷೆ ಮರಣದಂಡನೆ ಅಂದುಬಿಟ್ಟ. ಇಬ್ಬರೂ ಒಂದು ಕ್ಷಣ ಬೆಚ್ಚಿಬಿದ್ದರು. ಅವರಿಗೆ ಗೆಲ್ಲುವ ಆಸೆಯಿತ್ತು. ಸಾಯುವ ಇಚ್ಛೆಯಿರಲಿಲ್ಲ.

ಗುರುವಿನ ಮಾತನ್ನು ಮೀರುವಂತೆಯೂ ಇರಲಿಲ್ಲ. ಸ್ಪರ್ಧಿಸಲು ಹಿಂಜರಿದರೆ ಅವಮಾನ ಆಗುತ್ತಿತ್ತು. ಹೀಗಾಗಿ ಅವರು ಸ್ಪರ್ಧೆಗೆ ಒಪ್ಪಿಕೊಂಡರು. ಇಡೀ ಊರಿಗೆ ಊರೇ ನೆರೆದ ಒಂದು ಬೆಳಗ್ಗೆ ಸ್ಪರ್ಧೆ ಆರಂಭವಾಯಿತು. ಆಶ್ರಮದ ಮುಂದಿರುವ ಮಂಟಪದಲ್ಲಿ ಎರಡು ಕುರ್ಚಿಗಳನ್ನು ಹಾಕಲಾಗಿತ್ತು. ನಡುವೆ ಒಂದು ಮೇಜು. ಅದರ ಮೇಲೆ ಚದುರಂಗದ ಮಣೆ. ಗುರು ಅವರಿಬ್ಬರನ್ನೂ ಕರೆದು, ನೀವಿಬ್ಬರೂ ಚದುರಂಗ ಆಡಬೇಕು. ಗೆದ್ದವರನ್ನು ಶ್ರೇಷ್ಠ ಎಂದು ಘೋಷಿಸಲಾಗುವುದು. ಸೋತವರ ಕತ್ತನ್ನು ಕತ್ತರಿಸಲು ಸೈನಿಕ ಇಲ್ಲೇ ನಿಂತಿರುತ್ತಾನೆ ಎಂದು ಹೇಳಿ ಆಟ ಶುರುಮಾಡಿ ಅಂದರು.

ಆಟ ಆರಂಭವಾಯಿತು. ಪರಸ್ಪರರು ಒಬ್ಬರ ಮುಖ ಮತ್ತೊಬ್ಬರು ನೋಡದೇ ಆಟ ಆರಂಭಿಸಿದರು. ಒಬ್ಬ ಸೈನಿಕನನ್ನು ಎರಡು ಮನೆ ಮುಂದೆ ನಡೆಸಿದ. ಮತ್ತೊಬ್ಬ ತನ್ನ ಸೈನಿಕನನ್ನು ಮುಂದಿಟ್ಟ. ಪ್ರತಿಯೊಂದು ನಡೆಯೂ ತಮ್ಮನ್ನು ಒಂದೋ ಸಾವಿನೆಡೆಗೆ ಅಥವಾ ಗೆಲುವಿನೆಡೆಗೆ ಕರೆದೊಯ್ಯುವುದೆಂದು ಇಬ್ಬರಿಗೂ ಗೊತ್ತಿತ್ತು. ಪ್ರತಿ ಹೆಜ್ಜೆಯನ್ನೂ ಎಚ್ಚರಿಕೆಯಿಂದಲೇ ಇಡಬೇಕಾಗಿತ್ತು. ಅವರಿಬ್ಬರ ಮಧ್ಯೆ ಅಂಥದ್ದೊಂದು ಜೀವನ್ಮರಣದ ಪ್ರಶ್ನೆ ಎದುರಾಗಿರಲೇ ಇಲ್ಲ. ಅಲ್ಲಿಯ ತನಕ ಅವರಿಬ್ಬರೂ ಉಡಾಫೆಯಾಗಿ ಒಬ್ಬರನ್ನು ಇನ್ನೊಬ್ಬರು ಬೈದುಕೊಂಡು, ಗೇಲಿ ಮಾಡಿಕೊಂಡು, ಶಪಿಸಿಕೊಂಡು ಅದೇ ಜೀವನ ಅಂದುಕೊಂಡಿದ್ದರು. ಗುರು ಅವರನ್ನು ಸಾವಿನ ಬಾಗಿಲಲ್ಲಿ ನಿಲ್ಲಿಸಿಬಿಟ್ಟಿದ್ದ.

-2-

ಅಂಥ ಸಂದಿಗ್ಧದಲ್ಲೇ ನಮ್ಮ ಕ್ರಿಯೆಗಳ ನಿರರ್ಥಕತೆ ಅರಿವಿಗೆ ಬರುತ್ತದೆಯಾ? ಸಾವಿನ ಸಮೀಪ ಹೋಗಿ ಬಂದವರು ಮಾನವೀಯರಾಗುತ್ತಾರಾ? ಅಂಥ ಖಾತ್ರಿಯೇನೂ ಇಲ್ಲ. ಆದರೆ ಸಾವು ಒಮ್ಮೆ ತನ್ನ ಬೆರಳಿಂದ ಸವರಿ ಹೋದ ತಕ್ಷಣ ಎದೆ ಝಲ್ಲೆನುತ್ತದೆ. ತನ್ನ ಶತ್ರುವಿನ ಸಾವನ್ನು ನಿರೀಕ್ಷಿಸುತ್ತ ಕೂತವನು ಕೂಡ ಅವನ ಸಾವಿನಿಂದ ಕಂಗಾಲಾಗುತ್ತಾನೆ. ಸಾವೆಂಬ ಪರಕೀಯ ಯಾವ ಕ್ಷಣದಲ್ಲಿ ಬೇಕಾದರೂ ಬರಬಲ್ಲ. ಅವನು ಎಲ್ಲವನ್ನೂ ನಾಶಮಾಡಬಲ್ಲ ಎಂಬುದು ಗೊತ್ತಿದ್ದೂ ತನ್ನ ಎದುರಾಳಿಯನ್ನು ಮಟ್ಟಹಾಕಲು, ಹಣಿಯಲು ಹವಣಿಸುತ್ತಿದ್ದವನಿಗೆ ಇದ್ದಕ್ಕಿದ್ದಂತೆ ಎದುರಾಳಿ ಸಾಯುತ್ತಿದ್ದಾನೆ ಅಂತ ಗೊತ್ತಾದರೆ?

ಅನೂಹ್ಯವಾದ ಭಯವೊಂದು ಆವರಿಸಿಕೊಳ್ಳುತ್ತದೆ. ಅದು ಭಯವೋ ನಶ್ವರತೆಯೋ ಇಡೀ ಬದುಕೇ ವ್ಯರ್ಥವಾಯಿತು ಎಂಬ ಭಾವನೆಯೋ? ಸಾಯೋ ತನಕ ನಿನ್ನನ್ನು ಬಿಡಲ್ಲ ಎಂದು ಶಪಥಗೈದು ಒಬ್ಬ ಹೋರಾಡುತ್ತಾನೆ ಅಂತಿಟ್ಟುಕೊಳ್ಳಿ. ಇದ್ದಕ್ಕಿದ್ದಂತೆ ಅವನ ಎದುರಾಳಿ ಸತ್ತು ಮಲಗುತ್ತಾನೆ. ಅವನನ್ನು ಕೊಂದವನು ಇವನಲ್ಲ. ಅವನ ಪಾಡಿಗೆ ಅವನು ಸಾಯುತ್ತಾನೆ. ಥಟ್ಟನೆ ತಿರುಗಿ ನೋಡಿದರೆ ಅಲ್ಲಿ ಅವನಿಲ್ಲ. ಅಷ್ಟೂವರುಷ ತನ್ನ ನೆರಳಂತೆ ಕಾಡಿದ, ತನ್ನನ್ನು ಹಿಂಬಾಲಿಸಿದ, ತನ್ನ ಯೋಚನೆಯನ್ನು, ನಡೆಯನ್ನು, ನುಡಿಯನ್ನು ಪ್ರಭಾವಿಸಿದ ವ್ಯಕ್ತಿ ಕಣ್ಮರೆಯಾದಾಗ ಶೂನ್ಯವೊಂದು ಅವರಿಸಿಕೊಳ್ಳುತ್ತದೆ. ಪ್ರೀತಿಯಂತೆ ದ್ವೇಷ ಕೂಡ ಖಾಲಿಜಾಗವನ್ನು ತುಂಬುತ್ತದೆ. ಪ್ರೀತಿಗಾಗಿ ಸಾಯುವಂತೆ ದ್ವೇಷಕ್ಕೂ ಸಾಯುತ್ತೇವೆ. ಪ್ರೀತಿ ಇಬ್ಬರನ್ನೂ ಜೀವನ ಪೂರ್ತಿ ಸಂತೋಷವಾಗಿಡುತ್ತದೆ. ದ್ವೇಷ ವಿಕ್ಷಿಪ್ತ ಹುಮ್ಮಸ್ಸನ್ನು ತುಂಬುತ್ತದೆ.

ನಮ್ಮನ್ನು ಪ್ರೀತಿಸಿಕೊಳ್ಳದೇ ಇತರರರನ್ನು ಪ್ರೀತಿಸಲು ಸಾಧ್ಯವೇ ಇಲ್ಲ!

ಇದರಿಂದ ಪಾರಾಗುವುದಕ್ಕೆಂದೇ ನಮಗೆ ಸುಸ್ತಾಗುತ್ತದೆ. ದಣಿವು ಆವರಿಸಿಕೊಳ್ಳುತ್ತದೆ. ತುಘಲಕ್‌ ಎಲ್ಲವನ್ನೂ ಮಾಡಿ ಮುಗಿಸಿದ ನಂತರ, ನಾನು ಕರೆದಾಗ ಯಾವತ್ತೂ ಬರದ ನಿದ್ದೆ ಇವತ್ತು ನನ್ನನ್ನು ಆವರಿಸಿಕೊಳ್ಳುತ್ತಿದೆ ಅನ್ನುತ್ತಾನೆ. ನಿದ್ದೆ ಬರುತ್ತಿದೆ ಎಂದರೆ ದಣಿವಾಗಿದೆ ಎಂದೇ ಅರ್ಥ. ದಣಿವಾಗದೇ ಹೋಗಿದ್ದರೆ ನಾವು ದಿನಗಟ್ಟಲೆ ದ್ವೇಷಿಸುತ್ತಾ, ಪ್ರೇಮಿಸುತ್ತಾ ಇದ್ದುಬಿಡುತ್ತಿದ್ದೆವು. ಅದೊಂದು ನಿರಂತರ ಪ್ರಕ್ರಿಯೆ ಆದಾಗ ಯಾಂತ್ರಿಕವಾಗುತ್ತಿತ್ತೋ ಇಲ್ಲವೋ ಗೊತ್ತಿಲ್ಲ, ಬಾಳಿನ ಅರ್ಥವನ್ನಂತೂ ನಾವು ಕಳಕೊಳ್ಳುತ್ತಿದ್ದೆವು.

ವಾಲಿಯ ಹಾಗೆ. ವಾಲಿಗೊಂದು ವಿಶೇಷ ಶಕ್ತಿಯಿತ್ತು. ಅವನ ಮುಂದೆ ನಿಂತು ಯುದ್ಧ ಮಾಡುವವರ ಅರ್ಧಶಕ್ತಿ ಅವನದ್ದಾಗುತ್ತಿತ್ತು. ಹೀಗಾಗಿ ಅವನನ್ನು ಸೋಲಿಸುವವರೇ ಇರಲಿಲ್ಲ. ನನಗೆ ಸೋಲಿಲ್ಲ ಅಂತ ಆಟಗಾರಿಗೆ, ಯೋಧನಿಗೆ, ಕವಿಗೆ, ಗಾಯಕನಿಗೆ ಗೊತ್ತಾದರೆ ಗೆಲುವಿನ ಸಂತೋಷವೂ ಇರುವುದಿಲ್ಲ. ನಮಗೆ ಸಿಗಬಹುದಾದ ಅತ್ಯಂತ ದೊಡ್ಡ ಶಿಕ್ಷೆ ಎಂದರೆ ಚಿರಂಜೀವತ್ವ. ನಿನಗೆ ಸಾವೇ ಬರದಿರಲಿ ಎಂದು ವರ ಪಡೆಯುತ್ತೇವೆ ಅಂತಿಟ್ಟುಕೊಳ್ಳಿ. ಆಗೇನಾಗುತ್ತದೆ. ನಮ್ಮ ಓರಗೆಯ ಮಂದಿಯೆಲ್ಲ ಸತ್ತು ಹೋಗಿರುತ್ತಾರೆ. ಹೊಸ ತಲೆಮಾರು ನಮ್ಮೆದುರು ಬೆಳೆಯುತ್ತಾ ಹೋಗುತ್ತದೆ. ಅವರ ಜೊತೆ ನಮಗೆ ಯಾವ ಸಂವಾದವೂ ಸಾಧ್ಯವಾಗುವುದಿಲ್ಲ. ಅವರ ಪಾಲಿಗೆ ಈ ಚಿರಂಜೀವಿ ಒಂದು ಅಚ್ಚರಿ ಮಾತ್ರ. ಯಾವತ್ತೂ ಕೆಡದ ಸೈಕಲ್ಲು ಮನೆಯ ಮೂಲೆಯಲ್ಲಿ ಎಲ್ಲರ ನಿರಾಸಕ್ತಿಗೆ ಗುರಿಯಾಗಿ ಬಿದ್ದಿರುತ್ತದೆ. ವರುಷಾನಗಟ್ಟಲೆ ಹಾಕಿದರೂ ಹರಿಯದ ಶರಟು ನಮಗೇ ಬೇಸರ ಹುಟ್ಟಿಸುತ್ತದೆ. ಆದ್ದರಿಂದಲೇ ವಾಸಾಂಸಿ ಜೀರ್ಣಾನಿ ಯಥಾವಿಹಾಯ

ನವಾಣಿ ಗೃಹ್ಣಾತಿ ನರೋಪರಾಣಿ ಎಂಬ ಸಾಲು ನಮಗೆ ಆಪ್ಯಾಯಮಾನ ಅನ್ನಿಸುವುದು. ಹಳೆ ಬಟ್ಟೆಗಳನ್ನು ನಾವು ತ್ಯಜಿಸಿ ಹೊಸ ಬಟ್ಟೆಧರಿಸುವಂತೆ ಆತ್ಮ ಹೊಸದೇಹವನ್ನು ಧರಿಸುತ್ತದೆ ಎಂಬ ಮಾತು ಸಂತೋಷ ಕೊಡುವುದು.

ಹಾಗೆ ಮತ್ತೆ ಮತ್ತೆ ಹುಟ್ಟುವುದೆಂದರೆ ಸಮಕಾಲೀನ ಆಗುತ್ತಾ ಸಾಗುವುದು. ಮರವೊಂದು ವರ್ಷ ವರ್ಷ ಚಿಗುರುತ್ತದೆ. ವರುಷಕೊಮ್ಮೆ ಹೊಸತು ಜನನ, ವರುಷಕೊಮ್ಮೆ ಹೊಸತು ನೆಲೆಯು ಅಖಿಲ ಜೀವಜಾತಕೆ, ಒಂದೆ ಒಂದು ಜನ್ಮದಲ್ಲಿ ಒಂದೇ ಬಾಲ್ಯ ಒಂದೆ ಹರೆಯ ನಮಗದಷ್ಟೇ ಏತಕೆ ಎಂಬ ಕವಿಯ ಪ್ರಶ್ನೆಗೆ ಉತ್ತರವಿಲ್ಲ. ಅದೊಂದು ಆಶಯ ಮಾತ್ರ. ನಿದ್ದೆಗೊಮ್ಮೆ ನಿತ್ಯ ಮರಣ, ಎದ್ದ ಸಲ ನವೀನ ಜನನ ಆಗದೇ ಹೋದರೆ ಬಾಳು ಹೊಸದಾಗುವುದಾದರೂ ಹೇಗೆ?

ದಣಿವರಿಯದವನು ಎಂಬುದು ಒಂದು ಶಾಪ. ಅಮರತ್ವ ಕೂಡ ಶಾಪವೇ. ಅಕಾಲ ಮೃತ್ಯು ಕೂಡ. ಈ ಗದ್ದಲ, ಗೊಂದಲ, ಹೋರಾಟಗಳ ನಡುವೆ ಜಗತ್ತು ವಿಸ್ಮಯಕಾರಿಯಾಗಿ ಸಾಗುತ್ತಿದೆ ಅಂತ ಪ್ರತಿಕ್ಷಣವೂ ಅನ್ನಿಸುತ್ತದೆ. ಮನೆ, ಮಡದಿ, ಗೆಳೆಯ, ಸಂಪತ್ತು, ಕೀರ್ತಿ ಮತ್ತು ನಮ್ಮ ಕೃತಿಗಳಿಗೆ ನಾವು ನಮ್ಮ ಆಯಸ್ಸನ್ನು ಹಂಚುತ್ತಾ ಹೋಗುತ್ತೇವೆ. ಯಾವುದಕ್ಕೆ ಎಷ್ಟನ್ನು ಹಂಚಬೇಕು ಎಂಬುದು ನಿಮಗೆ ಬಿಟ್ಟದ್ದು. ಗಂಡನೊಡನೆ ಸಂತೋಷದಿಂದ ಅರ್ಧಗಂಟೆ ಮಾತಾಡಲು ಪುರುಸೊತ್ತಿಲ್ಲದ ಹೆಂಡತಿ, ಫೇಸ್‌ಬುಕ್‌ನಲ್ಲಿ ನಾಲ್ಕೈದು ಗಂಟೆ ಮತ್ಯಾರ ಜೊತೆಗೋ ಹರಟುತ್ತಿರುತ್ತಾಳೆ ಅಂತ ಗೆಳೆಯರೊಬ್ಬರು ದೂರುತ್ತಾರೆ. ಆಫೀಸಿನಿಂದ ಸೀದಾ ಮನೆಗೆ ಬಂದು ಮಕ್ಕಳ ಜೊತೆ ಕಾಲ ಕಳೆಯುವ ಬದಲು, ಕ್ಲಬ್ಬಿನಲ್ಲಿ ಕೂತು ಹೊತ್ತುಕಳೆಯುತ್ತಾರೆ ಎಂದು ಹೆಂಡತಿ ಆಕ್ಷೇಪಿಸುತ್ತಾಳೆ. ನಮ್ಮ ಸಂತೋಷಗಳು ಎಲ್ಲಿವೆ ಅನ್ನುವುದು ನಮಗೆ ಸ್ಪಷ್ಟವಾಗಿ ಗೊತ್ತಾಗದೇ ಹೋದರೆ ಅದನ್ನು ನಾವು ಹುಡುಕುತ್ತಾ ಹೋಗುತ್ತೇವೆ. ಕೆಟ್ಟಸಿನಿಮಾಗಳಲ್ಲಿ, ಅನಗತ್ಯ ಹರಟೆಗಳಲ್ಲಿ, ಸುಮ್ಮನೆ ಭೇಟಿಗಳಲ್ಲಿ, ಮತ್ಯಾರದೋ ವೃತ್ತಾಂತ ಶ್ರವಣದಲ್ಲಿ ನಮ್ಮ ಆಯಸ್ಸು ಸೋರಿಹೋಗುತ್ತಲೇ ಇರುತ್ತದೆ. ನಾವು ದ್ವೇಷಕ್ಕೆ ಅಸೂಯೆಗೆ ಮತ್ತೊಬ್ಬರನ್ನು ಟೀಕಿಸುವುದಕ್ಕೆ ನಮ್ಮ ಒಟ್ಟು ಆಯಸ್ಸಿನ ಮೂರನೇ ಒಂದು ಭಾಗವನ್ನು ಖರ್ಚು ಮಾಡುತ್ತಿರುತ್ತೇವೆ! ಇನ್ನೊಬ್ಬರ ಮೇಲಿನ ಶತ್ರುತ್ವವೇ ನಮ್ಮ ಕ್ರಿಯೆಗಳನ್ನು ನಿರ್ಧರಿಸುತ್ತದೆ. ನೀನು ಇದನ್ನೇಕೆ ಮಾಡುತ್ತಿದ್ದೀಯಾ ಎಂಬ ಪ್ರಶ್ನೆಗೆ, ಅವನನ್ನು ಮಟ್ಟಹಾಕುವುದಕ್ಕೆ ಎಂಬ ಉತ್ತರ ಬಂದರೆ, ನೀನು ನಿನ್ನ ಆಯಸ್ಸನ್ನು ನಾಶಮಾಡಿಕೊಳ್ಳುತ್ತಿದ್ದಿ ಎಂದರ್ಥ. ಇನ್ನೊಂದು ದಿನ ಸಾಲ ಕೊಡು, ನನಗೋಸ್ಕರ ಬದುಕುತ್ತೇನೆ ಎಂದರೆ ಕಾಲ ಕೇಳಿಸಿಕೊಳ್ಳದೇ ಹೊರಟು ಹೋಗುತ್ತಾನೆ.

-3-

ಮೂರು ಹಗಲು ಮೂರು ರಾತ್ರಿ ಅವರು ಕಣ್ಣೆವೆ ಮುಚ್ಚದೆ ಆಟ ಆಡಿಯೇ ಆಡಿದರು. ಯಾರೊಬ್ಬರಿಗೂ ಸಾಯುವ ಆಸೆಯಿಲ್ಲ. ಸೋತರೆ ಅದು ಸಾವು ಅನ್ನುವುದು ಅವರಿಬ್ಬರಿಗೂ ಗೊತ್ತಿತ್ತು. ಗುರು ಕಾಯುತ್ತಿದ್ದ. ಸೈನಿಕ ಕತ್ತಿ ಝಳಪಿಸುತ್ತಾ ನಿಂತಿದ್ದ. ಪ್ರೇಕ್ಷಕರು ಅತ್ಯಂತ ಆಸಕ್ತಿಯಿಂದ ಇಬ್ಬರಲ್ಲೊಬ್ಬರ ಸಾವು ನೋಡಲು ಕಾತರಿಸುತ್ತಿದ್ದರು.

ಕೊನೆಗೂ ಆಟ ಕೊನೆಯ ಹಂತಕ್ಕೆ ಬಂದು ನಿಂತಿತು. ಇನ್ನೊಂದೇ ಒಂದು ನಡೆ. ಇಬ್ಬರಲ್ಲಿ ಒಬ್ಬರು ಸೋಲುವುದು ಖಚಿತ ಅನ್ನುವ ಸ್ಥಿತಿಗೆ ಬಂದು ಮುಟ್ಟಿತು. ಇಬ್ಬರೂ ನಖಶಿಖಾಂತ ಬೆವರತೊಡಗಿದರು. ಮೂರು ದಿನ ಮೂರು ರಾತ್ರಿ ಅವರು ತಮ್ಮ ದ್ವೇಷದ ಬಗ್ಗೆ ಚಿಂತಿಸಿರಲಿಲ್ಲ. ಇಬ್ಬರ ಮಧ್ಯೆ ಅಹಂಕಾರ ಕರಗುತ್ತಾ ಬಂದಿತ್ತು.

ಒಬ್ಬ ಕೊನೆಯ ನಡೆ ನಡೆಸಲು ಕೈ ಎತ್ತಿದ. ಇನ್ನೊಬ್ಬ ಅವನನ್ನೇ ನೋಡುತ್ತಿದ್ದ. ಏನನ್ನಿಸಿತೋ ಏನೋ, ನಾನು ಸೋತೆ ಅಂದ. ಇನ್ನೊಬ್ಬ ನಾನೇ ಸೋತೆ ಅಂತ ಹಿಂದೆಗೆದ. ಇಬ್ಬರೂ ನಾನು ಸೋಲುತ್ತೇನೆ. ನಾನು ಸೋಲುತ್ತೇನೆ ಎಂದು ವಾದಿಸತೊಡಗಿದರು. ಯಾವಾಗ ನಾನು ಸೋಲುತ್ತೇನೆ ಅಂತ ಅಂದುಕೊಂಡರೋ ಆ ಕ್ಷಣ ಅವರಿಗೆ ಗೆಲುವಿನ ಅನುಭವ ಆಗತೊಡಗಿತ್ತು.

ಗುರು ಸಣ್ಣಗೆ ನಕ್ಕು, ಎಡಗೈಯಿಂದ ಅವರ ಮುಂದಿದ್ದ ಚದುರಂಗದ ಮಣೆಯನ್ನು ಎಗರಿಸಿದ. ಕಾಯಿಗಳು ದಿಕ್ಕಾಪಾಲಾದವು. ಅವರಿಬ್ಬರೂ ಅಚ್ಚರಿಯಿಂದ ನೋಡಿದರು.

-ಜೋಗಿ 

click me!