ಕೂದಲು ಬಿಳಿಯಾಗುವುದಿಲ್ಲ, ಬಿಳಿಯಾಗಿ ಹುಟ್ಟುತ್ತದೆ...

By Web DeskFirst Published Sep 21, 2019, 3:45 PM IST
Highlights

ಕೆಲವರು ತಮ್ಮ ಬಿಳಿ ಕೂದಲನ್ನು ಹೆಮ್ಮೆಯಿಂದಲೇ ಒಪ್ಪಿಕೊಂಡು ಅದು ಮೆಚ್ಯುರಿಟಿಯ ಸಂಕೇತ ಎಂದುಕೊಳ್ಳುತ್ತಾರಾದರೂ, ಹಲವರಿಗೆ ಬಿಳಿಕೂದಲು ಬೇಡದ ಅತಿಥಿ. ಈ ಎರಡನೆಯ ಕೆಟಗರಿಯವರಿಗೆ ಒಂದು ಸಂತೋಷದ ಸುದ್ದಿಯೆಂದರೆ ಕೂದಲು ಬೆಳ್ಳಗಾಗದಂತೆ ತಡೆಯುವ ಫಾರ್ಮುಲಾವನ್ನು ವಿಜ್ಞಾನಿಗಳು ಕಂಡುಹಿಡಿಯುತ್ತಿದ್ದಾರೆ. ಅವರು ಈಗಾಗಲೇ ಬಿಳಿಕೂದಲ ಬಗ್ಗೆ ತಿಳಿದಿರುವ, ನಿಮಗೆ ತಿಳಿಯದ ವಿಷಯಗಳೇನು ಗೊತ್ತಾ? 

ಬಿಳಿ ಕೂದಲು ಯಾರನ್ನೂ ಬಿಡದ ಪೆಡಂಭೂತ. ಬೇಕೋ ಬೇಡವೋ ಬಿಳಿಕೂದಲು ನಮ್ಮ ತಲೆಯನ್ನಾವರಿಸಿಕೊಂಡು ಒಂದಿಷ್ಟು ದಿನ ಹೇಗಪ್ಪಾ ಕಪ್ಪು ಮಾಡುವುದು  ಎಂದು ತಲೆ ತಿಂದೇ ತಿನ್ನುತ್ತದೆ. ಅಂತೂ ಒಲ್ಲದ ಮನಸ್ಸಿನಿಂದ ಡೈ ಮಾಡಿಕೊಂಡು ತಲೆಕೂದಲನ್ನು ಕಪ್ಪು ಮಾಡಿಕೊಳ್ಳುವ ಹೊತ್ತಿಗೆ ಗಡ್ಡ ಮೀಸೆಗಳು ಬಣ್ಣ ಕಳೆದುಕೊಂಡು ಅಣಕಿಸತೊಡಗುತ್ತವೆ.

ಅವಕ್ಕೆ ಡೈ ಮಾಡಿದರೆ ಅಲರ್ಜಿ, ಮಾಡಿದಿದ್ದರೆ ಚೆನ್ನಾಗಿ ಕಾಣಿಸುವುದಿಲ್ಲ ಎಂಬ ಗೊಂದಲ ಒಂದಷ್ಟು ದಿನ ಕಾಡಿ, ಧೈರ್ಯ ಮಾಡಿ ಅವಕ್ಕೂ ಬಣ್ಣ ಹಚ್ಚಿಸಿಕೊಂಡರಾಗಲೇ ಕೆಲವರಿಗೆ ಹುಬ್ಬು, ಕಣ್ಣ ರೆಪ್ಪೆಗಳು ಕೂಡಾ ಅಲ್ಲೊಂದು ಇಲ್ಲೊಂದು ಬಿಳಿಯ ಕೂದಲನ್ನು ಇಟ್ಟುಕೊಂಡು ಸವಾಲೊಡ್ಡುತ್ತವೆ. ವಯಸ್ಸಾಯ್ತು ಎಂದು ಒಪ್ಪಿಕೊಳ್ಳದ ಮನಸ್ಸಿಗೆ ದೇಹ ಸಹಕಾರ ನೀಡದೆ ಆಟ ಆಡಿಸುವ ಪರಿ ಇದು. ಅಂದ ಹಾಗೆ ಬಿಳಿ ಕೂದಲ ಕುರಿತ ಕೆಲ ಆಸಕ್ತಿಕರ ವಿಷ್ಯಗಳು ಇಲ್ಲಿವೆ... ಓದಿ ನೋಡಿ.

ಬಾಲ್ಡಿ ಪ್ಲಾಬ್ಲಂಗೆ ಬೈ ಹೇಳಲು ಪುರುಷರೇನು ಮಾಡ್ಬೇಕು?

1. ನಿಮ್ಮ ತಲೆಕೂದಲು ಬಿಳಿಯಾಗಿ ಬದಲಾಗುವುದಿಲ್ಲ.

ರಾತ್ರಿ ಮಲಗುವಾಗ ಪೂರ್ತಿ ಕಪ್ಪಿದ್ದ ಕೂದಲು ಬೆಳಗ್ಗೆ ಏಳುವಾಗ ಬಿಳಿಯಾಗಿ ಶಾಕ್ ನೀಡುವುದಿಲ್ಲ. ಕಪ್ಪಾಗಿ ಹುಟ್ಟಿದ ಕೂದಲು ಬಿಳಿಯಾಗಿ ಬದಲಾಗುವುದಿಲ್ಲ. ಬದಲಿಗೆ, ಕೂದಲಿನ ಬುಡದಿಂದಲೇ ಬಿಳಿಯಾಗಿ ಬೆಳೆಯತೊಡಗುತ್ತದೆ. ಒಂದು ಕೂದಲು ಸುಮಾರು 2ರಿಂದ 3 ವರ್ಷವಿರುತ್ತದೆ. ನಂತರ ಉದುರುತ್ತದೆ. ಪ್ರತಿ ಬಾರಿ ಫೋಲಿಕಲ್‌ನಿಂದ ಹೊಸ ಕೂದಲು ಹುಟ್ಟಿದಂತೆಲ್ಲ ಅದು ಮೊದಲಿಗಿಂತ ಸ್ವಲ್ಪ ಕಡಿಮೆ ಬಣ್ಣ ಹೊಂದಿರುತ್ತದೆ. ಗಾಢ ವರ್ಣದಿಂದ ತಿಳಿಯಾಗತೊಡಗುತ್ತದೆ. ಬಹಳ ವರ್ಷಗಳಾದ ಬಳಿಕ ಅದರಲ್ಲಿ ಯಾವ ಬಣ್ಣವೂ ಉಳಿಯುವುದೇ ಇಲ್ಲ. ಆಗ ಹುಟ್ಟುವ ಕೂದಲು ಬಿಳಿಯಾಗಿರುತ್ತದೆ. 

2. ಬಿಳಿಕೂದಲ ಜನ್ಮರಹಸ್ಯ

ಚರ್ಮದ ಬಣ್ಣಕ್ಕೆ ಹೇಗೆ ಮೆಲನಿನ್ ಕಾರಣವೋ, ಕೂದಲಿನ ಬಣ್ಣಕ್ಕೂ ಅದೇ ಕಾರಣ. ಪ್ರತೀ ಕೂದಲ ಫೋಲಿಕಲ್‌ಗೂ ಅದರದೇ ಆದ ಪಿಗ್ಮೆಂಟ್ ಕೋಶವಿರುತ್ತದೆ. ಇದು ಕೂದಲಿಗೆ ಬಣ್ಣ ನೀಡುವ ಮೆಲನಿನ್ ಉತ್ಪಾದಿಸುತ್ತದೆ. ವಯಸ್ಸಾದಂತೆಲ್ಲ ಈ ಪಿಗ್ಮೆಂಟ್ ಸೆಲ್ಸ್ ಸಾಯತೊಡಗುತ್ತವೆ. ಆ ಕೂದಲು ಬಣ್ಣವಿಲ್ಲದೆಯೇ ಹುಟ್ಟಲಾರಂಭಿಸುತ್ತದೆ. 

ಕಪ್ಪು ಕೂದಲಿಗೂ ಉಂಟು ಯೋಗ..

3. ಕೂದಲನ್ನು ಬುಡದಿಂದ ಕಿತ್ತು ತೆಗೆಯುವುದರಿಂದ ಉಪಯೋಗವಿಲ್ಲ

ಬಹಳಷ್ಟು ಜನರು ಆರಂಭದಲ್ಲಿ ಕಾಣಿಸಿಕೊಳ್ಳುವ ಕೆಲ ಬಿಳಿ ಕೂದಲನ್ನು ಕಿತ್ತು ತೆಗೆಯುತ್ತಾರೆ. ಆದರೆ, ಇದರಿಂದ ಮತ್ತೆ ಹುಟ್ಟುವುದಿಲ್ಲ ಎಂದಾಗಲೀ, ಅಥವಾ ಒಂದು ತೆಗೆದಲ್ಲಿ ಎರಡು ಬಿಳಿ ಕೂದಲು ಹುಟ್ಟುತ್ತವೆ ಎಂಬುದಾಗಲಿ ಸುಳ್ಳು. ಏಕೆಂದರೆ ಒಂದು ಹೇರ್ ಫೋಲಿಕಲ್‌ನಲ್ಲಿ ಒಂದು ಕೂದಲು ಮಾತ್ರ ಹುಟ್ಟಲು ಸಾಧ್ಯ.

4. ಅನುವಂಶೀಯತೆಯು ಮಹತ್ತರ ಪಾತ್ರ ವಹಿಸುತ್ತದೆ.

ನಿಮ್ಮ ಪೋಷಕರು, ಅಜ್ಜಅಜ್ಜಿಯರಿಗೆ ಸಣ್ಣ ವಯಸ್ಸಿನಲ್ಲೇ ಬಿಳಿ ಕೂದಲು ಕಾಣಿಸಿಕೊಂಡಿದ್ದರೆ ನಿಮಗೆ ಕೂಡಾ ಅವಧಿಗೆ ಮುನ್ನವೇ ಬಿಳಿಕೂದಲಾಗತೊಡಗುವ ಸಾಧ್ಯತೆಗಳು ಹೆಚ್ಚು. ಏಕೆಂದರೆ ಬಿಳಿಕೂದಲ ವಿಷಯದಲ್ಲಿ ಅನುವಂಶೀಯತೆ ಹೆಚ್ಚಿನ ಪಾತ್ರ ವಹಿಸುತ್ತದೆ. 

5. 50ನೇ ವಯಸ್ಸಿನ ಹೊತ್ತಿಗೆ ಕೂದಲು ಅರ್ಧದಷ್ಟು ಬೆಳ್ಳಗಾಗಿರುತ್ತದೆ.

ಶೇ.50ರಷ್ಟು ಜನರು 50 ವಯಸ್ಸನ್ನು ದಾಟುವ ಹೊತ್ತಿಗೆ ಅವರ ತಲೆಯ ಶೇ.50ರಷ್ಟು ಕೂದಲು ಬೆಳ್ಳಗಾಗಿರುತ್ತದೆ. ಆದರೆ, ಕೆಲ ಅದೃಷ್ಟವಂತರಿಗೆ ಮಾತ್ರ ಈಗಷ್ಟೇ ಅಲ್ಲೊಂದು ಇಲ್ಲೊಂದು ಬಿಳಿ ಕೂದಲು ಕಾಣಿಸಿಕೊಳ್ಳುತ್ತಿರುತ್ತದೆ. ಚರ್ಮದಂತೆ ಕೂದಲ ವಿನ್ಯಾಸ ಕೂಡಾ ವಯಸ್ಸಾದಂತೆ ಬದಲಾಗುತ್ತಾ ಹೋಗುತ್ತದೆ.  

ಬ್ಯೂಟಿಯ ಸಮಸ್ಯೆಗಳು ಮತ್ತು ಸ್ವೀಟಿಯ ಪರಿಹಾರ!

6. ಒತ್ತಡವೂ ಪಾತ್ರ ವಹಿಸುತ್ತದೆ.

ಒತ್ತಡವು ಕೂದಲು ಬಿಳಿಯಾಗುವಂತೆ ನೇರ ಪಾತ್ರ ವಹಿಸದಿದ್ದರೂ, ಒತ್ತಡದಿಂದಾಗಿ ಕೂದಲುದುರುವುದು ಸಾಮಾನ್ಯ. ಮತ್ತೆ ಕೂದಲು ಹುಟ್ಟುವಾಗ ಅದು ಸ್ವಲ್ಪ ಬಣ್ಣ ಕಳೆದುಕೊಂಡಿರುತ್ತದೆ. ಹೀಗಾಗಿ, ಒತ್ತಡ ಹೆಚ್ಚಿದ್ದಾಗ ಬೇಗ ಕೂದಲು ಬಿಳಿಯಾಗುತ್ತದೆ ಇಲ್ಲವೇ ತಲೆ ಬೋಳಾಗುತ್ತದೆ. 

7. ಜೀವನಶೈಲಿ ಕೂಡಾ ಕೂದಲ ಬಣ್ಣ ಬದಲಿಸಬಲ್ಲದು.

ಉದಾಹರಣೆಗೆ ನಿಮಗೆ ಸ್ಮೋಕಿಂಗ್ ಚಟವಿದ್ದರೆ, ಅದು ಕೂದಲು ಹಾಗೂ ಚರ್ಮದ ಮೇಲೆ ದುಷ್ಪರಿಣಾಮ ಬೀರುತ್ತದೆ. ವಿಟಮಿನ್ ಬಿ12 ಕಡಿಮೆಯಾದರೆ, ಅದು ಕೂದಲು ಬಣ್ಣ ಕಳೆದುಕೊಳ್ಳುವಂತೆ ಮಾಡುತ್ತದೆ. ಹಾಗಾಗಿ, ವಿಟಮಿನ್ಸ್, ಪ್ರೋಟೀನ್ಸ್ ಹಾಗೂ ಆ್ಯಂಟಿ ಆಕ್ಸಿಡೆಂಟ್ಸ್ ಹೆಚ್ಚಿರುವ ಕೆಮಿಕಲ್‌ರಹಿತ ಆಹಾರ ಸೇವನೆ ಹೆಚ್ಚಿಸಿ. 

click me!