
ಫಸ್ಟ್ ಡೇಟ್ ನಿಮಗೆ ಸದುಪಯೋಗಪಡಿಸಿಕೊಳ್ಳಿ ಎಂದು ಅವಕಾಶವೊಂದನ್ನು ನೀಡುತ್ತದೆ. ನೀವು ಅದನ್ನು ಸರಿಯಾಗಿ ಬಳಸಿಕೊಳ್ಳದೆ ಹೋದರೆ ಎರಡನೇ ಅವಕಾಶ ಸಿಗುವುದು ದುಸ್ತರ. ಒಂದು ವೇಳೆ ಸಿಕ್ಕರೂ, ಫಸ್ಟ್ ಇಂಪ್ರೆಶನ್ ಮಾಡುವ ಅವಕಾಶವನ್ನು ಆಗಲೇ ಕಳೆದುಕೊಂಡಿರುತ್ತೀರಲ್ಲಾ... ಹಾಗಾಗಿ, ಮೊದಲ ಬಾರಿ ಡೇಟ್‌ಗೆ ಹೋದಾಗ ನಿಮ್ಮ ಡೇಟ್‌ನ್ನು ಇಂಪ್ರೆಸ್ ಮಾಡಲು ಕೆಲ ಸರಳವಾದ ಮಂತ್ರಗಳಿವೆ. ಅವನ್ನು ಬಳಸಿ ನೋಡಿ.
1. ನಿಮ್ಮ ಡೇಟ್‌ನ ಮಾತುಗಳನ್ನು ಆಸಕ್ತಿಯಿಂದ ಕೇಳಿ
ನಮಗೆ ದೇವರು ಒಂದೇ ಬಾಯಿ ನೀಡಿ, ಎರಡು ಕಿವಿ ಕೊಟ್ಟಿದ್ದಕ್ಕೊಂದು ಕಾರಣವಿದೆ. ಅದರಲ್ಲೂ ಮೊದಲ ಡೇಟ್‌ನಲ್ಲಿ ಈ ಕಾರಣವನ್ನು ಚೆನ್ನಾಗಿ ನೆನಪಿಟ್ಟುಕೊಂಡಿರಬೇಕು. ನಿಮ್ಮ ಡೇಟ್‌ಗೆ ನೀವು ಅವರ ಮಾತನ್ನು ಬಹಳ ಆಸಕ್ತಿಯಿಂದ ಕೇಳಿಸಿಕೊಳ್ಳುತ್ತಿದ್ದೀರಿ ಎನಿಸಿದರೆ, ಅವರು ತಮ್ಮ ಭಾವನೆಗಳನ್ನು ಆರಾಮಾಗಿ ವ್ಯಕ್ತಪಡಿಸಬಲ್ಲರು. ಅಲ್ಲದೆ, ತಮ್ಮ ಮಾತನ್ನು ಕೇಳುವವರು ಯಾರಿಗೆ ತಾನೇ ಇಷ್ಟವಾಗುವುದಿಲ್ಲ ಹೇಳಿ?
ದಾಂಪತ್ಯ ಸುಖವಾಗಿರಬೇಕೆ? ನಿಮ್ಮ ಸಂಗಾತಿಯಿಂದ ಇದನ್ನೆಲ್ಲಾ ನಿರೀಕ್ಷಿಸಬೇಡಿ!
2. ಹೆಸರು ಹಿಡಿದು ಮಾತನಾಡಿ
ಯಾರಿಗೇ ಆಗಲಿ, ತಮ್ಮ ಹೆಸರು ಹಿಡಿದು ಕರೆದು ಮಾತನಾಡುವವರು ಆಪ್ತವೆನಿಸುತ್ತಾರೆ. ಅಲ್ಲದೆ, ಅವರು ತಮಗೆ ಬೆಲೆ ನೀಡುತ್ತಿದ್ದಾರೆ ಎಂಬ ಭಾವ ಹುಟ್ಟಿಸುತ್ತದೆ. ಜೊತೆಗೆ, ಇದು ಅವರ ಗಮನ ನಿಮ್ಮತ್ತಲೇ ಇರುವಂತೆ ಮಾಡುತ್ತದೆ. ಇದು ಎಂಥ ಇಂಪ್ರೆಶನ್ ಹುಟ್ಟು ಹಾಕುತ್ತದೆ ಎಂದರೆ ನೀವು ಎರಡನೇ ಬಾರಿ ಡೇಟ್‌ಗೆ ಹೋಗುವುದು ಬಹುತೇಕ ಖಚಿತ. ಹಾಗಂಥ ಎಲ್ಲೆಲ್ಲೋ ಹೆಸರು ಹಿಡಿದು ಕರೆಯಬೇಡಿ. ಅಗತ್ಯವಿದ್ದಲ್ಲಿ, ಹೆಸರು ಕರೆಯುವ ಸಂದರ್ಭ ಸಹಜವೆನಿಸುವಲ್ಲಿ ಮಾತ್ರ ಹೆಸರಿನಿಂದ ಕರೆಯಿರಿ. ಒಂದು ವೇಳೆ ಅದು ಲಾಂಗ್ ಟೈಂ ರಿಲೇಶನ್‌ಶಿಪ್‌ಗೆ ತಿರುಗಿದರೆ, ಆಗ ಮೊದಲ ಡೇಟ್‌ನಲ್ಲಿ ತಮ್ಮ ಬಾಳಸಂಗಾತಿಯ ಬಾಯಲ್ಲಿ ಮೊದಲ ಬಾರಿ ಹೆಸರು ಕರೆಸಿಕೊಂಡಿದ್ದು ಯಾರೂ ಮರೆಯಲು ಸಾಧ್ಯವಿಲ್ಲ.
3. ಮಾತು ಮಿತವಾಗಿರಲಿ
ಡೇಟ್‌ಗೆ ಹೋದಾಗ ಯಾವ ವಿಷಯ ಮಾತನಾಡುತ್ತೀರಿ, ಮಾತನ್ನು ಹೇಗೆ ಬೆಳೆಸುತ್ತೀರಿ ಎಂಬುದು ಬಹಳ ಮುಖ್ಯ. ಹಳೆಯ ಸಂಬಂಧಗಳು ಹಾಗೂ ವೈಯಕ್ತಿಕ ಬದುಕಿನ ನೋವು ಕಷ್ಟಗಳ ಬಗ್ಗೆ ಗಂಟೆಗಟ್ಟಲೆ ಮಾತನಾಡಿದರೆ ಯಾರಿಗೂ ಇಷ್ಟವಾಗುವುದಿಲ್ಲ. ಈ ವಿಷಯಗಳ ಬಗ್ಗೆ ಪದೇ ಪದೆ ಪ್ರಶ್ನೆ ಕೇಳುವುದು ಕೂಡಾ ತನಿಖೆ ಮಾಡಿದಂತೆನಿಸುತ್ತದೆ. ಅದರ ಬದಲಿಗೆ ಹವ್ಯಾಸಗಳು, ಆಸಕ್ತಿಗಳ ಕುರಿತು ಮಾತನಾಡಿ. ಇಬ್ಬರಿಗೂ ಸಮಾನ ಆಸಕ್ತಿಯ ವಿಷಯ ಯಾವುದೆಂದು ಕಂಡುಕೊಂಡು ಅದರಲ್ಲಿ ಮಾತನ್ನು ಬೆಳೆಸಿದರೆ ಇಬ್ಬರೂ ಎಂಜಾಯ್ ಮಾಡಬಹುದು. ನೀವು ನಿಮ್ಮ ಬಗ್ಗೆ ಹೇಳಿಕೊಂಡು ಡೇಟ್‌ನ್ನು ಇಂಪ್ರೆಸ್ ಮಾಡುವ ಬದಲು, ಅವರ ಬಗ್ಗೆ ವಿಚಾರಿಸುವ ಆಸಕ್ತಿ ತೋರಿದರೆ ಅವರು ಹೆಚ್ಚು ಇಂಪ್ರೆಸ್ ಆಗುತ್ತಾರೆ. ಹಾಗಂತ ಯಾವುದರ ಕುರಿತೂ ನಟಿಸುವ ಅಗತ್ಯವಿಲ್ಲ.
ಮದುವೆ ಆಗೋ ಹುಡುಗಿನ ಮೊದಲ ಬಾರಿ ಭೇಟಿ ಆಗೋ ಮುನ್ನ....
4. ದೂರುವುದು, ವಾದ ಬೇಡ
ಮೊದಲ ಡೇಟ್‌ನಲ್ಲಿ ಮಾತುಗಳೆಲ್ಲವೂ ಬಹುತೇಕ ಸಕಾರಾತ್ಮಕ ಧ್ವನಿ ಹೊಂದಿರುವುದು ಮುಖ್ಯ. ಜೊತೆಗೆ ನಿಮ್ಮ ಸೆನ್ಸ್ ಆಫ್ ಹ್ಯೂಮರ್ ಚೆನ್ನಾಗಿದ್ದರೆ ಅದನ್ನೂ ಪರಿಚಯಿಸಬಹುದು. ನಿಮ್ಮ ದಿನಚರಿ ಬಗ್ಗೆ ಹಳಿಯುತ್ತಾ ಮಾತನಾಡುವುದರಿಂದ ನಿಮಗೆ ಸಮಾಧಾನ ಸಿಕ್ಕಬಹುದು, ಆದರೆ, ಅಂಥ ಮಾತುಗಳನ್ನು ಕೇಳಲು ಯಾರಿಗೂ ಇಷ್ಟವಿರುವುದಿಲ್ಲ. ನಿಮ್ಮ ಜೀವನ ಹಾಗೂ ನಿಮ್ಮ ಬಗ್ಗೆ ಪ್ರಾಮಾಣಿಕವಾಗಿರಿ. ನಗುಮುಖದಲ್ಲೇ ಮಾತನಾಡಿ. ಹಾಗಂಥ ಅತಿಯಾಗಿ ಹಲ್ಲುಗಿಂಜಬೇಡಿ. ಹಾಗಂಥ ಪಾಸಿಟಿವ್ ಆಗಿರುವುದನ್ನು ಮರೆಯಬೇಡಿ. ಇನ್ನು ಧರ್ಮ, ರಾಜಕೀಯ, ಜಾಗತಿಕ ವಿಷಯಗಳನ್ನೆಲ್ಲ ಮಾತನಾಡಲು ಫಸ್ಟ್ ಡೇಟ್ ಸರಿಯಾದ ಸಮಯವಲ್ಲ.
5. ನಿಮ್ಮ ಡೇಟ್‌ಗೆ ಅವರ ಬಗ್ಗೆ ಸ್ಪೆಶಲ್ ಎನಿಸುವಂತೆ ವರ್ತಿಸಿ
ನೀವು ಜೊತೆಗಿರುವವರನ್ನು ಖುಷಿ ಪಡಿಸುವ ಸುಲಭ ವಿಧಾನವೆಂದರೆ ಅವರಿಗೆ ಪೂರ್ತಿ ಗಮನ ಕೊಡುವುದು. ಮಧ್ಯೆ ಮಧ್ಯೆ ಫೋನ್ ನೋಡುವ ಅಭ್ಯಾಸ, ದಾರಿಹೋಕರನ್ನು ನೋಡುವ ಅಭ್ಯಾಸ ಬಿಟ್ಟುಬಿಡಿ. ಅವರ ಡ್ರೆಸ್ಸನ್ನೋ, ನಗುವನ್ನೋ- ಯಾವುದು ಚೆನ್ನಾಗೆನಿಸುತ್ತದೋ ಅದನ್ನು ಹೊಗಳಲು ಮರೆಯಬೇಡಿ.
ಮೊದಲ ನೋಟದಲ್ಲೇ ಹುಡುಗಿ ಗಮನಿಸುವುದೇನು?
6. ಸರಿಯಾದ ಉಡುಗೆ ಧರಿಸಿ
ಸ್ವಚ್ಛವಾದ, ಇಸ್ತ್ರಿ ಮಾಡಿದ ಕಂಫರ್ಟೇಬಲ್ ಎನಿಸುವ ಬಟ್ಟೆ ಧರಿಸಿಕೊಂಡು ಹೋಗಿ. ನಿಮ್ಮ ಡೇಟ್‌ಗೆ ನೀವು ಸ್ವಚ್ಛತೆ ಹಾಗೂ ಲುಕ್ಸ್‌ಗೆ ಪ್ರಯತ್ನ ಹಾಕುತ್ತೀರಿ ಎಂಬ ಸಂದೇಶ ಮುಟ್ಟುವಂತೆ ರೆಡಿಯಾಗಿ. ಅತಿಯಾಗಿ ಮೈ ತೋರಿಸುವ ಬಟ್ಟೆ ಬೇಡ. ಹಾಗಂಥ ಫಾರ್ಮಲ್ ಉಡುಗೆಗಳೂ ಬೇಡ. ಸಿಂಪಲ್ ಆದರೂ ಚೆನ್ನಾಗಿ ಕಾಣಿಸುವ ಬಟ್ಟೆ ಧರಿಸಿ ಅದಕ್ಕೆ ಮ್ಯಾಚಿಂಗ್ ಇಯರಿಂಗ್ ಧರಿಸಿ. ಹೇರ್‌ಸ್ಟೈಲ್ ಕೂಡಾ ಮುಖ್ಯ. ಹಾಕುವ ಚಪ್ಪಲಿ ಅದಕ್ಕೆ ಸೂಟ್ ಆಗುತ್ತಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಅತಿಯಲ್ಲದಿದ್ದರೂ ಸ್ವಲ್ಪ ಮೇಕಪ್ ಇರಲಿ. ಹುಡುಗರಾದರೆ ಕ್ಯಾಶುಯಲ್ ವೇರ್ ಬೆಸ್ಟ್. ದಾಡಿ ಮೀಸೆ ತಲೆಕೂದಲು ಎಲ್ಲವೂ ಟ್ರಿಮ್ ಆಗಿರಲಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.