
ಅದು ನವೆಂಬರ್ ತಿಂಗಳೇ. ಇಸವಿ 1980. ನೆನಪು ಚೆನ್ನಾಗಿಯೇ ಇದೆ. ಅನುಮಾನವಿಲ್ಲ. ಬೆಂಗಳೂರು ಇನ್ನೂ ಜಿಟಿಜಿಟಿ ಮಳೆಯಿಂದ ಬಿಡುಗಡೆಯಾಗಿರಲಿಲ್ಲ. ಲಂಕೇಶರು ಅಷ್ಟಾಗಿ ಬಯಸದ, ಆದರೆ ಹಿತವಾದ, ಮುದವಾದ ಸಣ್ಣ ಚಳಿ ಗಾಳಿ ಬೀಸುತ್ತಿತ್ತು. ಲಂಕೇಶರಿಗೆ ಚಳಿ ಸ್ವಲ್ಪ ಅಲರ್ಜಿಯೇ. ಅವರು ಚಳಿಯನ್ನು ಎಂದೂ ಮೆಚ್ಚಿದವರಲ್ಲ. ಆದರೆ ಸಣ್ಣ ಚಳಿಯನ್ನು ಬಯಸುತ್ತಿದ್ದರು. ಲಂಕೇಶರು ಎಂದಿನ ತಮ್ಮ ಆದಿಶೇಷನ ಮೇಲೆ ಪವಡಿಸಿರುವ ರಂಗನಾಥ ದೇವರ ಶೈಲಿಯಲ್ಲಿ ಮಂಚದ ಮೇಲೆ ಪವಡಿಸಿದ್ದರು. ಒಂದು ರೀತಿಯಲ್ಲಿ ಹೆಬ್ಬಾವಿನಂತೆ. ಮುಷ್ಟಿಯಲ್ಲಿ ಉರಿವ ಸಿಗರೇಟೂ ಇತ್ತು. 'ಲಂಕೇಶ್ ಪತ್ರಿಕೆ'ಯ ಪ್ರಸಾರ ಆ ದಿನಗಳಲ್ಲಿ ಸುಮಾರು ನಲವತ್ತು ಸಾವಿರವಿತ್ತು. ಪತ್ರಿಕೆಯೊಂದು ಆರಂಭದ 4-5 ತಿಂಗಳಲ್ಲೇ ಅಷ್ಟು ಪ್ರಸಾರ ಕಂಡದ್ದು ದೇಶದ ಇತಿಹಾಸದಲ್ಲಿ ಮತ್ತೊಂದು ದಾಖಲಾತಿಯೇ ಇಲ್ಲ. ಲಂಕೇಶರು ಸ್ವರ್ಗದ ತುತ್ತ ತುದಿಯಲ್ಲಿದ್ದ ದಿನಗಳು ಅವು. ಬೆಂಗಳೂರಿನ ಬಸವನಗುಡಿಯ ಗೋವಿಂದಪ್ಪ ರಸ್ತೆಯ ಮೊದಲ ಮಹಡಿಯಲ್ಲಿದ್ದ ಅವರ ಮನೆ ಕಂ ಪತ್ರಿಕೆಯ ಕಚೇರಿಯಲ್ಲಿದ್ದದ್ದು ನಾವಿಬ್ಬರೇ. ಮಾತು ನಡೆದದ್ದು ಸಹ ಪತ್ರಿಕೆಯ ಕುರಿತೇ. ಮತ್ತೇನು ಸಾಧ್ಯವಿತ್ತು ಆ ದಿನಗಳಲ್ಲಿ?
ಲೆಕ್ಕಾಚಾರದ ಕವಿಯಾಗಿದ್ದರು ಪಿ.ಲಂಕೇಶ್!
ಇಂದ್ರಜಿತ್ ಅಲಿಯಾಸ್ ಅಜಿತ್ ಬಂದ. ಲಂಕೇಶರ ಮುಖ ಹಿಗ್ಗಿತು. ಅವನು ಅವರ ಮುದ್ದಿನ ಮಗ. ಅವನನ್ನು ಕಂಡರೆ ಲಂಕೇಶರಿಗೆ ಅತೀವ ಪ್ರೀತಿ. ಮಂಚದ ಮೇಲೆ ಕೂತ ಅಜಿತನನ್ನು ತಬ್ಬಿಕೊಂಡ ಲಂಕೇಶರು ಅವನ ದೇಹದ ಕೆಲವು ಭಾಗಗಳಲ್ಲಿ ತಮ್ಮ ಕೈಯಾಡಿಸಿದರು. ಅವರು ಮಗನನ್ನು ಮುದ್ದಿಸುವ ರೀತಿ ಅದು. ಅಜಿತನೂ ಲಂಕೇಶರನ್ನು ತಬ್ಬಿ ಮುದ್ದಾಡಿ ತಿಂಡಿಗೆ ದುಡ್ಡು ಕೊಡು ಎಂದ.
ಅಕ್ಷರ ಪ್ರೇಮಿ ಪಿ.ಲಂಕೇಶ್ ಅಂಕಿ ಪ್ರೇಮಿಯಾಗಿದ್ದು!
ಅಜಿತ್ ಅದೇ ತಾನೇ ಸ್ಕೂಲಿನಿಂದ ಬಂದಿದ್ದ. ಅಮ್ಮ ಇಂದಿರಾ ಅಂಗಡಿಯಲ್ಲಿರುತ್ತಿದ್ದ ದಿನಗಳು ಅವು. ಮನೆಯಲ್ಲಿರುತ್ತಿದ್ದದ್ದು ಅಡುಗೆಯ ಹುಡುಗಿ ರತ್ನಮ್ಮ ಮತ್ತು ಲಂಕೇಶ್. ಗೌರಿ ಮತ್ತು ಕವಿತಾ ಬೆಳೆದ ಹುಡುಗಿಯರಾದ್ದರಿಂದ ಸಂಜೆಯ ವೇಳೆ ಮನೆಯಲ್ಲಿರುತ್ತಿದ್ದದ್ದು ಅಪರೂಪ. ರತ್ನಮ್ಮ ಮಾಡಿದ ತಿಂಡಿಯನ್ನು ಎಂದೂ ತಿನ್ನದ ಹುಡುಗ ಅಜಿತ್. ಬೇಕರಿ-ಹೋಟೆಲ್ ತಿಂಡಿ ತಿನ್ನುವ ಆಸೆಯುಳ್ಳ ಹುಡುಗ ಅವನು. ಆಗ ಅವನ ವಯಸ್ಸಾದರೂ ಎಷ್ಟು? ಎಂಟೋ, ಒಂಬತ್ತೋ? ಓದುತ್ತಿದ್ದದ್ದು ನಾಲ್ಕೋ ಅಥವಾ ಐದನೇ ಕ್ಲಾಸಿರಬಹುದು. ಹೊರಗೆ ತಿನ್ನುವ ಆಸೆ ಅವನ ವಯ ಸಹಜವಾದದ್ದು.
ಹೀಗೂ ಇದ್ದರು ಪಿ.ಲಂಕೇಶ್: ಆಗಿನ ಕಾಲದ ಐಷಾರಾಮಿ ಕಾರು ಕೊಂಡಿದ್ದ ಕವಿ
ಸಹಾಯ ಮಾಡಿದವರ ಮೇಲೆ ದ್ವೇಷ ಸಾಧಿಸಿದ ಪಿ.ಲಂಕೇಶ್
ಮಂಚದ ಮಗ್ಗುಲಲ್ಲಿದ್ದ ಟೀಪಾಯ್ ಮೇಲಿದ್ದ ನೂರಿನ್ನೂರು ರೂಪಾಯಿಗಳಿಂದ ಇಪ್ಪತ್ತು ರೂಪಾಯಿ ನೋಟೊಂದನ್ನು ತೆಗೆದು ಅಜಿತ್‌ಗೆ ಕೊಟ್ಟರು ಲಂಕೇಶ್. ಅಜಿತ್ ಮುಖ ಸಿಂಡರಿಸಿದ. ಇನ್ನೊಂದಿಷ್ಟು ಬೇಕೇನೋ? ಬೇಕಿದ್ದರೆ ಕೇಳು. ಹಾಗೆಲ್ಲ ಮುಖ ಸಿಂಡರಿಸಬೇಡ ಎಂದವರೇ ಹತ್ತರ ನೋಟೊಂದನ್ನು ತೆಗೆದುಕೊಟ್ಟರು. ಎರಡೂ ನೋಟುಗಳನ್ನು ತೆಗೆದುಕೊಂಡವನೇ ಅಜಿತ್ ಖುಷಿಯಿಂದ ಓಡಿದ. ಮೊದಲನೆ ಮಹಡಿಯ ಮೆಟ್ಟಿಲುಗಳನ್ನು ಧಡ ಧಡ ಇಳಿದವನೇ ಬೀದಿಗಿಳಿದು ತಿರುವಿನಲ್ಲಿ ಮಾಯವಾದ.
ಅದು 1980ನೇ ಇಸವಿಯ ಕೊನೆಯ ದಿನಗಳಲ್ಲಿ. ಗಾಂಧಿ ಬಜಾರಿನ ಮಸಾಲೆ ದೋಸೆ ಖ್ಯಾತಿಯ ವಿದ್ಯಾರ್ಥಿ ಭವನದಲ್ಲಿ ಮಸಾಲೆ ದೋಸೆಯ ಬೆಲೆ ಮೂರು ರೂಪಾಯಿ. ಇಡ್ಲಿ, ಖಾಲಿ ದೋಸೆಗಳ ಬೆಲೆ ಒಂದಕ್ಕೆ ಒಂದು ರೂಪಾಯಿ. ಅಕ್ಕಿಯ ಬೆಲೆ ಕೆ.ಜಿ.ಯೊಂದಕ್ಕೆ ಎರಡು-ಮೂರು ರೂಪಾಯಿ. ಒಂದು ಲೀಟರ್ ಪೆಟ್ರೋಲ್ ಬೆಲೆ ಆರು ರೂಪಾಯಿ.
ಕವಿ, ಪತ್ರಕರ್ತ ಪಿ.ಲಂಕೇಶ್‌ರಿಗಿತ್ತು ರೇಸ್ ಹುಚ್ಚು!
ಇದು ಮಗನ ಮೇಲಿನ ಅಪ್ಪನ ಪ್ರೀತಿ. ಲಂಕೇಶರು ಕೊಟ್ಟಿದ್ದು ಅವರ ದುಡ್ಡು. ಅದರ ಬಗ್ಗೆ ಪ್ರಶ್ನೆಯಾಗಲಿ, ಕೊಂಕು, ಟೀಕೆಗಳಾಗಲಿ ಬರುವಂತಿಲ್ಲ. ಬರಕೂಡದು. ಮಗನ ಒಂದು ಹೊತ್ತಿನ ತಿಂಡಿಗೆಂದು ಮೂವತ್ತು ರೂಪಾಯಿ ಕೊಡುವ ಸಿರಿವಂತಿಕೆ ಅವರದ್ದಾಗಿತ್ತು. ಮುಖ್ಯವಾಗಿ ಗಂಡುಮಕ್ಕಳ ಮೇಲಿನ ಅತೀವ ಪ್ರೀತಿ ಸಮಸ್ತ 'ಭಾರತೀಯರ ಸಹಜ ಗುಣ. ಲಂಕೇಶರೂ ಅದೇ 'ಭಾರತೀಯರು ತಾನೇ? ಅವರೂ ಅದರಿಂದ ಹೊರತಾಗಿರಲಿಲ್ಲ.
ಪತ್ರಕರ್ತ ಲಂಕೇಶ್ ಹಿಂದಿದ್ದ ಪಿ ಅರ್ಥವೇನು?
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.