ರಂಜಾನ್ ಉಪವಾಸ ಯಾಕೆ ಮಾಡಬೇಕು?

 |  First Published May 28, 2018, 5:25 PM IST

ಸಾಮಾನ್ಯ ದಿನಗಳಲ್ಲಿ ಮಾಡುವ ಪುಣ್ಯ ಕಾರ್ಯಕ್ಕೆ ಸಿಗುವುದಕ್ಕಿಂತ 70 ರಷ್ಟು ಅಧಿಕ ಫಲ ರಂಜಾನ್’ನಲ್ಲಿ ಸಿಕ್ಕುತ್ತದೆ. ಹಾಗಾಗಿಯೇ ಮಹಮದ್ ಪೈಗಂಬರ್ ಅನುಯಾಯಿಗಳಾದ ಎಲ್ಲರಿಗೂ ಪವಿತ್ರ ಮಾಸ. ಜಗತ್ತಿನಲ್ಲಿ ಕುರಾನ್ 30  ಭಾಗವಾಗಿ ವಿಭಜನೆಯಾಗಿದೆ. ಒಂದೊಂದು ಪ್ಯಾರವೂ ಮೂವತ್ತು ದಿನಗಳಲ್ಲಿ ಒಂದೊಂದಾಗಿ ಆಕಾಶದಿಂದ ಭೂಮಿಗೆ ಇಳಿದಿವೆ. ಅದಕ್ಕಾಗಿ ಮೂವತ್ತು ದಿನಗಳ ಕಾಲ ರಂಜಾನ್ ಆಚರಣೆ ಮಾಡಲಾಗುತ್ತದೆ ಎನ್ನುವ ನಂಬಿಕೆ ನಮ್ಮಲ್ಲಿದೆ. ಅದಕ್ಕಾಗಿಯೇ ರಂಜಾನ್ ಮಾಸದ ಮೂವತ್ತು ದಿನಗಳು ನಾವು ಕುರಾನ್ ಕೇಳುವುದು, ಪಠಿಸುವುದು ಮಾಡಬೇಕು.


ನಮ್ಮ ಪಾಲಿಗೆ ರಂಜಾನ್ ಎಂದರೆ ಆಶೀರ್ವಾದದ ತಿಂಗಳು. ಈ ವೇಳೆ ದೇವರು ನಮ್ಮ ಎಲ್ಲಾ ಒಳ್ಳೆಯ ಕಾರ್ಯಗಳಿಗೂ ಹೆಚ್ಚು ಮೆಚ್ಚುಗೆ ಸೂಚಿಸುತ್ತಾನೆ. ಒಂದು ತಿಂಗಳ ಉಪವಾಸದಲ್ಲಿ ನಾವು ಮಾಡಿರುವ ತಪ್ಪು, ಕರ್ಮಗಳೆಲ್ಲವೂ ಕಳೆಯುತ್ತದೆ. ಆದರೆ ನಾವು ನಿಷ್ಠೆಯಿಂದ ನಡೆದುಕೊಳ್ಳಬೇಕು ಅಷ್ಟೇ. ಸಾಮಾನ್ಯ ದಿನಗಳಲ್ಲಿ ಮಾಡುವ ಪುಣ್ಯ ಕಾರ್ಯಕ್ಕೆ ಸಿಗುವುದಕ್ಕಿಂತ 70 ರಷ್ಟು ಅಧಿಕ ಫಲ ಈ ಮಾಸದಲ್ಲಿ ಸಿಕ್ಕುತ್ತದೆ. ಹಾಗಾಗಿಯೇ ಮಹಮದ್ ಪೈಗಂಬರ್ ಅನುಯಾಯಿಗಳಾದ ಎಲ್ಲರಿಗೂ ಪವಿತ್ರ ಮಾಸ.

ಜಗತ್ತಿನಲ್ಲಿ ಕುರಾನ್ 30 ಭಾಗವಾಗಿ ವಿಭಜನೆಯಾಗಿದೆ. ಒಂದೊಂದು ಪ್ಯಾರವೂ ಮೂವತ್ತು ದಿನಗಳಲ್ಲಿ ಒಂದೊಂದಾಗಿ ಆಕಾಶದಿಂದ ಭೂಮಿಗೆ ಇಳಿದಿವೆ. ಅದಕ್ಕಾಗಿ ಮೂವತ್ತು ದಿನಗಳ ಕಾಲ ರಂಜಾನ್ ಆಚರಣೆ ಮಾಡಲಾಗುತ್ತದೆ ಎನ್ನುವ ನಂಬಿಕೆ ನಮ್ಮಲ್ಲಿದೆ. ಅದಕ್ಕಾಗಿಯೇ ರಂಜಾನ್ ಮಾಸದ ಮೂವತ್ತು ದಿನಗಳು ನಾವು ಕುರಾನ್ ಕೇಳುವುದು, ಪಠಿಸುವುದು ಮಾಡಬೇಕು.

Latest Videos

undefined

ನನ್ನ ಮೊದಲ ಉಪವಾಸ
ನಾನು ಮೊದಲು ಉಪವಾಸ ಮಾಡಿದ್ದು ನನ್ನ ಆರನೇ ವಯಸ್ಸಿನಲ್ಲಿ. ಆಗ ಎಲ್ಲರೂ ಉಪವಾಸ ಮಾಡುತ್ತಾರೆ ನಾನೂ ಮಾಡಬೇಕು, ಇದರಿಂದ ಏನು ಫಲ ಸಿಕ್ಕುತ್ತದೆ ಎನ್ನುವ ಕುತೂಹಲ ಇತ್ತು. ಉಪವಾಸವಿದ್ದಾಗ ಶಾಲೆಗೆ ಹೋದೆ. ಆಗ ಲಂಚ್ ಟೈಂನಲ್ಲಿ ಊಟ ಮಾಡಬೇಕು ಎನ್ನಿಸಿತು. ನನ್ನಂತೆಯೇ ಉಪವಾಸವಿದ್ದ ನನ್ನ ಸ್ನೇಹಿತರು ಹಸಿವನ್ನು ತಡೆದುಕೊಂಡರು. ಆದರೆ ನನ್ನಿಂದ ಸಾಧ್ಯವಾಗುತ್ತಿರಲಿಲ್ಲ. ಆಗ ಸ್ನೇಹಿತರೇ ಇದು ನಿನ್ನ ಮೊದಲ ಉಪವಾಸ ತಡೆದುಕೋ ಎಂದು ಸಲಹೆ ನೀಡಿದರು. ಮನೆಗೆ ಹೋದದ್ದೇ ತೀರಾ ಹಸಿವು, ದಾಹವಾಗಿತ್ತು. ಅಮ್ಮನನ್ನು  ನೀರು ಕೇಳಿದೆ. ಆಗ ಅಮ್ಮ ನೀರು ಕೊಟ್ಟು ಇದನ್ನು ಕುಡಿಯುವುದು ಬಿಡುವುದು ನಿನಗೆ ಬಿಟ್ಟದ್ದು, ನಿನಗೆ ನೀರು ಕುಡಿಯಲೇಬೇಕು ಎಂದಾದರೆ ಕುಡಿದು ಅಲ್ಲಾನ ಬಳಿ ಹೋಗಿ ತಪ್ಪೊಪ್ಪಿಕೋ ಎಂದು ಹೇಳಿದರು.

ಆಗ ನನಗೆ ಅನ್ನಿಸಿತು ನಾನು ಅಲ್ಲಾನ ಬಳಿಗೆ ಪಾರ್ಥನೆಗೆ ಹೋದರೆ ದಿನ ಪೂರ್ತಿ ನನಗಾಗಿ ಉಪವಾಸ ಇದ್ದ ನಿನಗೆ ಇನ್ನು ಎರಡು ಗಂಟೆಗಳ ಕಾಲ ಹಸಿವು, ಬಾಯಾರಿಕೆ ತಡೆದುಕೊಳ್ಳಲು ಆಗಲಿಲ್ಲವಾ? ಎಂದು ಕೇಳುತ್ತಾನೆ. ಆಗ ಏನು ಉತ್ತರ ಕೊಡುವುದು. ಹಾಗಾಗಿ ಬೇಡ. ಇದನ್ನೆಲ್ಲಾ ತಡೆದುಕೊಳ್ಳುತ್ತೇನೆ ಎಂದು ಉಪವಾಸ ಇದ್ದೆ. ಅದಾದ ಮೇಲೆ ಹದಿನಾರು ದಿನಗಳು ಉಪವಾಸ ಇದ್ದು ಕಂಪ್ಲೀಟ್ ಮಾಡಿದೆ. ಆಗ ನಮಾಜ್ ಮಾಡಿ ಬಂದರೆ ಮನಸ್ಸಿಗೆ ತುಂಬಾ ಖುಷಿಯಾಗುತ್ತಿತ್ತು. ಈ ವಯಸ್ಸಿಗೆ ಇದನ್ನೆಲ್ಲಾ ಮಾಡುತ್ತಿದ್ದೇನೆ ಎನ್ನುವ ಹೆಮ್ಮೆ ನನ್ನನ್ನು ಆವರಿಸಿಕೊಳ್ಳುತ್ತಿತ್ತು. ಮೂವತ್ತು ದಿನ ಉಪವಾಸವಿರಲೇಬೇಕಿಲ್ಲ ಮೂವತ್ತು ದಿನಗಳ ಉಪವಾಸ ಇದ್ದರೂ ಎಲ್ಲವನ್ನೂ ಪೂರೈಸಬೇಕು ಎಂದೇನಿಲ್ಲ. ನಾವು ಎಷ್ಟು ದಿನ  ಮಾಡುತ್ತೀವೋ ಅಷ್ಟು ಪುಣ್ಯ ನಮ್ಮ ಪಾಲಿಗೆ ಸಿಕ್ಕುತ್ತದೆ. ಉದಾಹರಣೆಗೆ ಮೂವತ್ತು ದಿನಗಳಲ್ಲಿ ಕೆಲವರು ಮೂರು ದಿನ, ಐದು ದಿನ, ಹದಿನೈದು ದಿನ, ಮೂವತ್ತು ದಿನವನ್ನೂ ಪೂರೈಸಬಹುದು.

ಮಹಿಳೆಯರಿಗೆ ರಿಯಾಯಿತಿ

ಮುಖ್ಯವಾಗಿ ಮಹಿಳೆಯರಿಗೆ ವಿಶೇಷ ದಿನಗಳಲ್ಲಿ (ಮುಟ್ಟು) ಏಳು ದಿನಗಳ ರಿಯಾಯಿತಿ ಇರುತ್ತದೆ. ಮುಖ್ಯವಾಗಿ ಅಲ್ಲಾ ನಮ್ಮ ಎಲ್ಲಾ ತಪ್ಪುಗಳನ್ನೂ ಮಾಫಿ ಮಾಡುತ್ತಾನೆ. ಆದರೆ ದೈಹಿಕವಾಗಿ ಗಟ್ಟಿಯಾಗಿದ್ದು, ಯಾವುದೇ ಸಮಸ್ಯೆಗಳಿಲ್ಲದೇ ಇದ್ದರೆ ರಂಜಾನ್ ತಿಂಗಳಲ್ಲಿ ಉಪವಾಸ ಮಾಡಲೇಬೇಕು. ಕಷ್ಟದ ಕೆಲಸ ಮಾಡುವವರಿಗೆ ಇದರಿಂದ ರಿಯಾಯಿತಿ ಇದೆಯಾದರೂ ಇಂದು ಹೆಚ್ಚಿನ  ಕೂಲಿ ಕಾರ್ಮಿಕರೂ ಉಪವಾಸ ಮಾಡುತ್ತಾರೆ. ನಾವು ನಮ್ಮ ಪುಣ್ಯದ ಗಂಟನ್ನು ಹೆಚ್ಚು ಮಾಡಿಕೊಳ್ಳಬೇಕು ಎಂದಾದರೆ ವೃತ ಉಪವಾಸ ಮಾಡುತ್ತಾ, ಎಲ್ಲರಿಗೂ ಒಳ್ಳೆಯದನ್ನು ಬಯಸುತ್ತಾ ಸನ್ಮಾರ್ಗದಲ್ಲಿ ಬದುಕಬೇಕು. ಅದಕ್ಕೆ ರಂಜಾನ್ ತಿಂಗಳು ಬಾಗಿಲ ರೀತಿಯಲ್ಲಿ ಇದ್ದು, ನಮ್ಮನ್ನು ಒಳ್ಳೆಯ ಚಿಂತನೆಗಳತ್ತ ಮುಂದೆ ಕರೆದೊಯ್ಯುತ್ತದೆ.

ಅಭ್ಯುದಯದ ಹೆಬ್ಬಾಗಿಲು ಪ್ರತಿಯೊಬ್ಬ ಮನುಷ್ಯನಲ್ಲೂ ಕೆಟ್ಟತನಗಳಿರುತ್ತವೆ. ಅವುಗಳನ್ನು ನಾವು ನಾಶ ಮಾಡಿಕೊಳ್ಳುತ್ತಲೇ ಇರಬೇಕು. ಕೆಟ್ಟತನಗಳ ಸಂಖ್ಯೆ ಹೆಚ್ಚಾದರೆ ಬದುಕು ಕೆಟ್ಟದಾಗಿಯೇ ಇರುತ್ತದೆ. ಇದಕ್ಕಾಗಿಯೇ ರಂಜಾನ್ ತಿಂಗಳಲ್ಲಿ ನಮ್ಮ ಕೆಟ್ಟ ಕೆಲಸಗಳೆಲ್ಲಕ್ಕೂ ಮಾಫಿ ದೊರೆಯುತ್ತದೆ. ದೇವರು ನಮ್ಮ ಎಲ್ಲಾ ತಪ್ಪುಗಳನ್ನೂ ಈ ವೇಳೆ ಕ್ಷಮಿಸುತ್ತಾನೆ. ಹಾಗಾಗಿ ನಮ್ಮ ಮನಸ್ಸಿನಲ್ಲಿ  ಪಶ್ಚಾತ್ತಾಪ ಉಂಟಾಗಿ ನಾವು ಎಲ್ಲಾ ತಪ್ಪುಗಳಿಂದ ಹೊರಗೆ ಬಂದಿದ್ದೇವೆ ಎನ್ನುವ ಭಾವ ಹುಟ್ಟುತ್ತದೆ. ಈ ಭಾವವೇ ನಮ್ಮೆಲ್ಲಾ ಮುಂದಿನ ಒಳ್ಳೆಯ ಘಟನೆಗಳ ಮೂಲ ಸ್ಫೂರ್ತಿ. ನಮ್ಮಲ್ಲಿ ಒಳ್ಳೆಯತನ ಮೊಳಕೆಯೊಡೆದರೆ ಅದುವೇ ನಮ್ಮ ಅಭ್ಯುದಯದ ಹೆಬ್ಬಾಗಿಲು. ಹಾಗಾಗಿ ಅಲ್ಲಾ ನಮಗೆ ರಂಜಾನ್ ಮೂಲಕ ಒಳ್ಳೆಯ ಬದುಕು ನಡೆಸಲು ಮತ್ತೊಂದು ಅವಕಾಶ ನೀಡುತ್ತಾನೆ.

ಮೂವತ್ತು ದಿನದಲ್ಲಿ ಕೆಟ್ಟ ಚಟಗಳ ಹನನ
ರಂಜಾನ್ ತಿಂಗಳಲ್ಲಿ ಕೇವಲ ಉಪವಾಸವಷ್ಟೇ ಅಲ್ಲ, ಈ ವೇಳೆ ಯಾವುದೇ ಕೆಟ್ಟ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವಂತೆ ಇಲ್ಲ. ಒಳ್ಳೆಯದನ್ನೇ ಮಾಡಬೇಕು, ಒಳ್ಳೆಯದನ್ನೇ ನೋಡಬೇಕು. ಈಗ ಒಬ್ಬ ವ್ಯಕ್ತಿಗೆ ಸಿಗರೇಟ್ ಸೇದುವ ವ್ಯಸನ ಇರುತ್ತದೆ ಎಂದಾದರೆ ಅವನು ಮೂವತ್ತು ತಿಂಗಳಲ್ಲಿ ಅದೆಲ್ಲವನ್ನೂ ಬಿಡಬೇಕು. ಮತ್ತು ಅದೇ ಮುಂದಿನ ದಿನಗಳಲ್ಲಿ ಮುಂದುವರೆಯಬೇಕು. ಇದರಿಂದ ಸಮಾಜದಲ್ಲಿ, ಸಮುದಾಯದಲ್ಲಿ  ಕೆಟ್ಟ ಚಟಗಳು ಕಡಿಮೆಯಾಗಿ ಒಳ್ಳೆಯದೇ ಹೆಚ್ಚುತ್ತದೆ ಎನ್ನುವುದೇ ಮೂಲ ಆಶಯವಾಗಿದೆ.

ನಿಯಂತ್ರಣ ಶಕ್ತಿ  

ಒಂದು ತಿಂಗಳು ಕೆಟ್ಟ ಚಟವೆಲ್ಲವನ್ನೂ ತಡೆದುಕೊಂಡಿದ್ದಾನೆ  ಎಂದ ಮೇಲೆ ಅವನಿಂದ ಜೀವನ ಪೂರ್ತಿ ಕೆಟ್ಟ ಚಟವನ್ನು ಕಂಟ್ರೋಲ್ ಮಾಡುವ ಶಕ್ತಿ ಇದೇ ಎಂದು ಅರ್ಥ. ಅದನ್ನು ಮುಖ್ಯವಾಗಿ ಅರ್ಥ ಮಾಡಿಕೊಳ್ಳಬೇಕು. ನಮಗೆ ಉಪದೇಶ ಮಾಡುವವರು ದಿನವೂ ಸಿಕ್ಕುವುದಿಲ್ಲ. ಬುದ್ದ, ಮಹಾತ್ಮಾ ಗಾಂಧಿ, ಮಹಾವೀರ ಮೊದಲಾದ  ಎಲ್ಲರ ಬಾಳಲ್ಲೂ ಯಾವುದೋ ಒಂದೊಂದು ಘಟನೆಗಳು ಪ್ರಭಾವ  ಬೀರಿ ಅವರು ದೊಡ್ಡ ಮಟ್ಟಕ್ಕೆ ಏರಿ ಮಹಾತ್ಮರಾಗಿದ್ದಾರೆ. ಹಾಗೆಯೇ ನಾವುಗಳೂ ಕೂಡ ರಂಜಾನ್ ಎನ್ನುವ ಪವಿತ್ರ ಮಾಸದಲ್ಲಿ ನಮ್ಮ ನಡತೆ, ನೋಟ, ಅಭ್ಯಾಸ, ಜೀವನ ಕ್ರಮ ಎಲ್ಲವನ್ನೂ ಸನ್ಮಾರ್ಗದ ಕಡೆಗೆ ಕೊಂಡೊಯ್ಯಬೇಕು. ದಿನೇ ದಿನೇ ನಾವು ಮಾಡುವ ತಪ್ಪುಗಳ ಸಂಖ್ಯೆ ಕಡಿಮೆಯಾಗುತ್ತಾ ಹೋಗಬೇಕು. ಆಗ ಮಾತ್ರ ವರ್ಷ ಪೂರ್ತಿ ಪವಿತ್ರ ಮಾಸವಾಗುತ್ತದೆ. ಪ್ರತಿ ಮಾಸವೂ ಪವಿತ್ರವೇ ಆಗುತ್ತದೆ.

ರಂಜಾನ್ ದಿನ ಮೊದಲ ನಮಾಜ್ 5 ಗಂಟೆ ಸುಮಾರಿಗೆ ಇರುತ್ತದೆ. ಆಮೇಲೆ ಎರಡನೆಯದು ಮಧ್ಯಾಹ್ನ 1.30 ಸಂಜೆ 5.30, ಸಾಯಂಕಾಲ 6.50, ರಾತ್ರಿ 8.15 ಹೀಗೆ ದಿನದಲ್ಲಿ ಐದು ಸಲ ನಮಾಜ್ ಇರುತ್ತದೆ. ಇದು ಒಂದು ತಿಂಗಳು ಪೂರ್ತಿ ನಡೆಯುವ ಪ್ರಾರ್ಥನೆ. ಆದರೆ ಕೆಲವರು ಶುಕ್ರವಾರ ಮಾತ್ರ ನಮಾಜ್ ಮಾಡುತ್ತಾರೆ, ಮತ್ತೆ ಕೆಲವರು  ಅನುಕೂಲಕ್ಕೆ ತಕ್ಕಂತೆ ಇದನ್ನು ಮಾಡುತ್ತಾರೆ. ಆದರೆ ರಂಜಾನ್ ಹಬ್ಬದ ದಿನ ಐದು ಸಲ ನಮಾಜ್ ಮಾಡುವುದು
ಕಡ್ಡಾಯವಾಗಿರುತ್ತದೆ. 

 

-ಸದ್ದಾಂ ಹುಸೇನ್ 

click me!