ಬೈಕಿಗೆ ಕಾರು ಗುದ್ದಿಸಿ, ಕೆಳಗೆ ಬೀಳಿಸಿ ಹೊಡೆದು ಹತ್ಯೆ!

By Kannadaprabha NewsFirst Published Mar 11, 2020, 8:36 AM IST
Highlights

ಹಳೆ ದ್ವೇಷದ ಹಿನ್ನೆಲೆಯಲ್ಲಿ ವ್ಯಕ್ತಿಯೋರ್ವನನ್ನು ಬೈಕಿನಿಂದ ಬೀಳಿಸಿ ಹೊಡೆದು ಹತ್ಯೆ ಮಾಡಿರುವ ಭೀಕರ ಘಟನೆ ಬೆಂಗಳೂರಿನಲ್ಲಿ ನಡೆದಿದೆ. 

ಬೆಂಗಳೂರು [ಮಾ.11]:  ಹಳೇ ದ್ವೇಷದ ಹಿನ್ನೆಲೆಯಲ್ಲಿ ಕಾರು ಗುದ್ದಿಸಿ ಬಳಿಕ ಮಾರಣಾಂತಿಕವಾಗಿ ಹಲ್ಲೆ ನಡೆಸಿ ವ್ಯಕ್ತಿಯೊಬ್ಬನನ್ನು ದುಷ್ಕರ್ಮಿಗಳು ಕೊಂದು ಪರಾರಿಯಾಗಿರುವ ಘಟನೆ ಬಾಗಲೂರು ಠಾಣಾ ವ್ಯಾಪ್ತಿಯ ಮಿಟ್ಟಗಾನಹಳ್ಳಿ ಸಮೀಪ ಮಂಗಳವಾರ ನಡೆದಿದೆ.

ಶ್ರೀನಿವಾಸಪುರದ ಉಮಾಶಂಕರ್‌ (30) ಮೃತ. ಈ ಘಟನೆಯಲ್ಲಿ ಗಾಯಗೊಂಡಿರುವ ಆತನ ಸಹಚರ ಭರತ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಬೈಕ್‌ನಲ್ಲಿ ಸಂಜೆ ಭರತ್‌ ಜತೆ ಉಮಾಶಂಕರ್‌ ತೆರಳುತ್ತಿದ್ದ. ಆಗ ಬೆನ್ನುಹತ್ತಿ ಬಂದಿರುವ ದುಷ್ಕರ್ಮಿಗಳು, ಮಿಟ್ಟಗಾನಹಳ್ಳಿ ಸಮೀಪ ಹಿಂದಿನಿಂದ ಬೈಕ್‌ಗೆ ಗುದ್ದಿಸಿದ್ದಾರೆ. ಕೆಳಗೆ ಬಿದ್ದ ಉಮಾಶಂಕರ್‌ ಮೇಲೆ ಹಲ್ಲೆ ನಡೆಸಿ ಆರೋಪಿಗಳು ಪರಾರಿಯಾಗಿದ್ದಾರೆ. ತಕ್ಷಣವೇ ಗಾಯಾಳುಗಳನ್ನು ಸಾರ್ವಜನಿಕರು ಆಸ್ಪತ್ರೆಗೆ ಕರೆದೊಯ್ಯಲು ಮುಂದಾಗಿದ್ದಾರೆ. ಆದರೆ ತೀವ್ರ ರಕ್ತಸ್ರಾವದಿಂದ ಆತ ಕೊನೆಯುಸಿರೆಳೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಪಘಾತ ಎಂದು ಭಾವಿಸಿದ ಜನರು:  ಮೃತ ಉಮಾಶಂಕರ್‌ ಅಪರಾಧ ಹಿನ್ನೆಲೆಯುಳ್ಳವನಾಗಿದ್ದು, ಆತನ ಮೇಲೆ ಸಂಪಿಗೆಹಳ್ಳಿ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿದ್ದವು. ಹಲವು ದಿನಗಳಿಂದ ಸ್ಥಳೀಯವಾಗಿ ಹಿಡಿತ ಸಾಧಿಸುವ ವಿಷಯದಲ್ಲಿ ಕೆಲವರ ಜತೆ ಆತನಿಗೆ ಮನಸ್ತಾಪವಾಗಿತ್ತು. ಈ ದ್ವೇಷದ ಹಿನ್ನೆಲೆಯಲ್ಲಿ ಉಮಾಶಂಕರ್‌ ಕೊಲೆಗೆ ವಿರೋಧಿಗಳು ಹೊಂಚು ಹಾಕಿದ್ದರು. ಅದರಂತೆ ಮಿಟ್ಟಗಾನಹಳ್ಳಿ ಬಳಿ ಬೈಕ್‌ನಲ್ಲಿ ತೆರಳುವಾಗ ಹೊಂಚು ಹಾಕಿ ಆರೋಪಿಗಳು ದಾಳಿ ನಡೆಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಕಾರು ಅಪಘಾತ: ರಸ್ತೆ ಮಧ್ಯೆ ವಿದ್ಯಾರ್ಥಿಗಳ ಹೊಡೆದಾಟ!...

ಬೈಕ್‌ಗೆ ಕಾರು ಗುದ್ದಿಸಿದ್ದರಿಂದ ಕೆಳಗೆ ಬಿದ್ದ ಉಮಾಶಂಕರ್‌ ಮೇಲೆ ಮಾರಕಾಸ್ತ್ರಗಳಿಂದ ಆರೋಪಿಗಳು ಹಲ್ಲೆ ನಡೆಸಿ ಪರಾರಿಯಾಗಿದ್ದರು. ಈ ವೇಳೆ ಭರತ್‌ ಬೈಕ್‌ ಓಡಿಸುತ್ತಿದ್ದ. ಅಪಘಾತವಾಗಿದೆ ಎಂದು ಭಾವಿಸಿದ ನಾಗರಿಕರು, ಪೊಲೀಸರಿಗೆ ಮಾಹಿತಿ ನೀಡಿದರು. ಅದರಂತೆ ಘಟನಾ ಸ್ಥಳಕ್ಕೆ ಆಗಮಿಸಿದ ಚಿಕ್ಕಜಾಲ ಸಂಚಾರಿ ಪೊಲೀಸರು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಮೃತನ ಮೇಲೆ ಹಲ್ಲೆ ನಡೆದಿದೆ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ. ಬಳಿಕ ಪ್ರಕರಣವು ಬಾಗಲೂರು ಠಾಣೆಗೆ ವರ್ಗಾವಣೆಯಾಗಿದೆ.

ಈ ಘಟನೆ ವೇಳೆ ಬೈಕ್‌ ಓಡಿಸುತ್ತಿದ್ದ ಭರತ್‌ಗೆ ಸಹ ಗಾಯವಾಗಿದೆ. ಘಟನಾ ಸ್ಥಳ ಹಾಗೂ ಮೃತನ ಮೈ ಮೇಲಿನ ಗಾಯದ ಗುರುತುಗಳನ್ನು ಪರಿಶೀಲಿಸಿದಾಗ ಅಪಘಾತವಲ್ಲ, ಕೊಲೆ ಎಂಬುದು ಖಚಿತವಾಯಿತು. ಈ ಹಿನ್ನೆಲೆಯಲ್ಲಿ ಸಂಚಾರಿ ಠಾಣೆ ಬದಲಿಗೆ ಬಾಗಲೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೆತ್ತಿಕೊಳ್ಳಲಾಗಿದೆ ಎಂದು ಈಶಾನ್ಯ ವಿಭಾಗದ ಡಿಸಿಪಿ ಡಾ.ಭೀಮಾಶಂಕರ್‌ ಗುಳೇದ್‌ ತಿಳಿಸಿದರು.

ಹಳೇ ದ್ವೇಷದ ಹಿನ್ನೆಲೆಯಲ್ಲಿ ಕೃತ್ಯ ನಡೆದಿರುವ ಶಂಕೆ ಇದೆ. ಗಾಯಾಳು ಭರತ್‌ನ ಪಾತ್ರದ ಬಗ್ಗೆ ಸಹ ವಿಚಾರಣೆ ನಡೆದಿದ್ದು, ಆದಷ್ಟುಬೇಗ ಆರೋಪಿಗಳನ್ನು ಪತ್ತೆ ಹಚ್ಚುತ್ತೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

click me!