ಉಡುಪಿಯ ಹೆಜಮಾಡಿ ಎಂಬ ಪುಟ್ಟಗ್ರಾಮದ ಯುವಕ ಪುಷ್ಪರಾಜ್ ಅಮೀನ್ ಮತ್ತವರ 7 ಮಂದಿ ಗೆಳೆಯರು ಸೇರಿ 7 ಲಕ್ಷ ರು. ವೆಚ್ಚದಲ್ಲಿ ಪುಟ್ಟವಿಮಾನವೊಂದನ್ನು ತಯಾರಿಸಿದ್ದಾರೆ.
ಉಡುಪಿ (ಫೆ.27): ಕಾಪು ತಾಲೂಕಿನ ಶಾಂಭವಿ ಹೊಳೆಪಕ್ಕದ ಹೆಜಮಾಡಿ ಎಂಬ ಪುಟ್ಟಗ್ರಾಮದ ಯುವಕ ಪುಷ್ಪರಾಜ್ ಅಮೀನ್ ಮತ್ತವರ 7 ಮಂದಿ ಗೆಳೆಯರು ಸೇರಿ 7 ಲಕ್ಷ ರು. ವೆಚ್ಚದಲ್ಲಿ ಪುಟ್ಟವಿಮಾನವೊಂದನ್ನು ತಯಾರಿಸಿದ್ದಾರೆ.
ವಿಶೇಷ ಎಂದರೆ ಈ ಮೈಕ್ರೋ ಸೀ ಪ್ಲೇನ್ (ವಿಮಾನ)ಗೆ ಬೃಹತ್ ರನ್‌ವೇ ಬೇಕಾಗಿಲ್ಲ, ಹೊಳೆಯಿಂದಲೇ ಟೇಕಾಫ್ ಆಗಿ, ಹೊಳೆಯಲ್ಲಿಯೇ ಲ್ಯಾಂಡ್ ಆಗುತ್ತದೆ. 33 ಎಚ್‌ಪಿ (ಹಾರ್ಸ್ ಪವರ್) ಎಂಜಿನ್ ಹೊಂದಿರುವ ಈ ಸಿಂಗಲ್ ಸೀಟರ್ ವಿಮಾನವನ್ನು ಒಬ್ಬ ಪೈಲಟ್ ಹಾರಿಸಬಹುದಾಗಿದೆ. ಹಾರ್ಸ್ ಪವರ್ ಹೆಚ್ಚಿಸಿದರೆ ಒಬ್ಬರಿಗಿಂತ ಹೆಚ್ಚು ಮಂದಿ ಈ ವಿಮಾನದಲ್ಲಿ ಪ್ರಯಾಣಿಸಬಹುದಾಗಿದೆ.
undefined
ಪುಷ್ಪರಾಜ್ ಮೂಲತಃ ಎನ್‌ಸಿಸಿ ಕೆಡೆಟ್ ಮತ್ತು ಇತರ ಆಸಕ್ತರಿಗೆ ಏರೋ ಮಾಡೆಲಿಂಗ್ ಇಸ್ಸ್‌ಟ್ರಕ್ಟರ್ (ವಿಮಾನ ಮಾದರಿ ತಯಾರಿಕಾ ತರಬೇತುದಾರ)ರಾಗಿದ್ದು, ಇದುವರೆಗೆ ಒಂದು ಸಾವಿರಕ್ಕೂ ಅಧಿಕ ಮಾಡೆಲ್‌ಗಳನ್ನು ತಯಾರಿಸಿದ್ದಾರೆ. ಈ ವಿದ್ಯೆಯಲ್ಲಿ ಪಳಗಿರುವ ಅವರ 10 ವರ್ಷಗಳ ಕನಸು ಈ ಮೈಕ್ರೋ ಪ್ಲೇನ್. ಡ್ರೋನ್ ತಯಾರಿ ಮತ್ತು ಹಾರಾಟದ ತಂತ್ರಜ್ಞಾನವನ್ನು ಅರೆದು ಕುಡಿದಿರುವ ಅವರಿಗೆ ಈ ಮೈಕ್ರೋ ಪ್ಲೇನ್‌ನ ತಾಂತ್ರಿಕತೆಯ ಸ್ಪಷ್ಟಕಲ್ಪನೆ ಇತ್ತು. ಜೊತೆಗೆ ಈ ಕನಸು ತನ್ನದಾದರೂ ಅದು ತನ್ನೊಬ್ಬನಿಂದ ನನಸಾಗುವುದಿಲ್ಲ ಎಂಬುದೂ ಅವರಿಗೆ ಅರಿವಿತ್ತು.
ಅಂತಾರಾಷ್ಟ್ರೀಯ ವಾಣಿಜ್ಯ ವಿಮಾನ ನಿರ್ಬಂಧ ವಿಸ್ತರಿಸಿದ ಭಾರತ! ..
ಅದಕ್ಕಾಗಿ ಅವರು ತನ್ನಂತೆ ಕನಸು ಕಾಣುತ್ತಿರುವವರನ್ನು ಸಂಪರ್ಕಿಸಿದರು. ಡ್ರೋನ್ ಪೈಲಟ್ ಅಭಿಷೇಕ್ ಕೋಟ್ಯಾನ್, ಏರೋನಾಟಿಕ್ ಎಂಜಿನಿಯರುಗಳಾದ ಉತ್ಸವ್ ಉಮೇಶ್ ಮತ್ತು ಶಯನಿ ರಾವ್ ಶೃಂಗೇರಿ, ವಿಮಾನದ ಪೈಲಟ್ ವಿನಯ ಯು., ಹಡಗೊಂದರ ಕ್ಯಾಪ್ಟನ್ ಆಗಿರುವ ವಸುರಾಜ್ ಅಮೀನ್, ಸಮನಾಸಕ್ತ ಕಾಮರ್ಸ್ ವಿದ್ಯಾರ್ಥಿನಿಯರಾದ ರೇಷ್ಮಾ ಬಂಗೇರ ಮತ್ತು ಅಶ್ವಿನಿ ರಾವ್ ಜೊತೆಯಾದರು, ಹೀಗೆ ಹುಟ್ಟಿಕೊಂಡಿತು ‘ಟೀಮ್ ವಿಯಡ್ ಡ್ರೋನಿ’ ಎಂಬ ತಂಡ.
ಧೃತಿ ಮೈಕ್ರೋ ಸೀ ಪ್ಲೇನ್ ಹುಟ್ಟಿದ್ದು ಹೀಗೆ: 2019ರ ನವೆಂಬರ್‌ನಲ್ಲಿ ಪುಷ್ಪರಾಜ್ ಅವರ ಮನೆಯಂಗಳ, ಮನೆಯ ಹಿಂದಿನ ತೆಂಗಿನ ತೋಟ, ಮನೆಯ ಟೆರೇಸ್‌ಗಳೇ ವಿಮಾನ ನಿರ್ಮಾಣದ ವರ್ಕ್ಶಾಪ್‌ಗಳಾದವು. ವಿಮಾನಕ್ಕೆ ಬೇಕಾದ ಅಲ್ಯುಮಿನಿಯಂ ಶೀಟ್ ಫೋಮ…, ಫೈಬರ್ ಬಟ್ಟೆ, ರೆಸಿನ್ ಶೀಟ್, ನೈಲಾನ್ ಹಗ್ಗ ಇತ್ಯಾದಿಗಳೆಲ್ಲಾ ಸ್ಥಳೀಯವಾಗಿ ಸಿಕ್ಕಿದವು. ಆದರೆ ಮುಖ್ಯವಾಗಿ ಬೇಕಾದ ಎಂಜಿನ್ ಮಾತ್ರ ನಮ್ಮ ದೇಶದಲ್ಲೆಲ್ಲಿಯೂ ಸಿಗಲಿಲ್ಲ, ಕೊನೆಗೆ ಅದನ್ನು 2.80 ಲಕ್ಷ ರು. ತೆತ್ತು ಇಟೆಲಿಯ ಸಿಮೊನಿನಿ ಕಂಪನಿಯಿಂದ ತರಿಸಿಕೊಳ್ಳಲಾಯಿತು. ನಡುವೆ ಕೆಲತಿಂಗಳು ಕೊರೋನಾ ಕಾಡಿತ್ತು, ಆದರೂ ಛಲ ಬಿಡದೆ ಎಲ್ಲರೂ ಸೇರಿ ಕಟ್ಟಿ, ಹೋಲಿದು, ಬೆಸುಗೆ ಹಾಕಿ ಕೇವಲ 120 ಕೆಜಿ ತೂಕದ, 35 ಅಡಿ ಅಗಲದ, 15 ಅಡಿ ಉದ್ದದ ‘ಧೃತಿ’ ಎಂಬ ಮೈಕ್ರೋ ಸೀ ಪ್ಲೇನ್ ರೂಪುಗೊಳಿಸಿದ್ದಾರೆ.
ಪ್ರಾಯೋಗಿಕ ಹಾರಾಟ: ಸ್ಥಳೀಯ ಬಂಕ್‌ಗಳಲ್ಲಿ ಸಿಗುವ ಪೆಟ್ರೋಲನ್ನೇ ಬಳಸಿ ಇದುವರೆಗೆ 8 ಬಾರಿ ಈ ಪುಟ್ಟವಿಮಾನವನ್ನು ಹೆಜಮಾಡಿಯ ಶಾಂಭವಿ ಹೊಳೆಯಿಂದ ಆಕಾಶಕ್ಕೆ ಹಾರಿಸಲಾಗಿದೆ, ಯಶಸ್ವಿಯಾಗಿ ಇಳಿಸಲಾಗಿದೆ. ಆದರೆ ದೇಶದ ಕಾನೂನಿನಡಿ ಇನ್ನೂ ಈ ವಿಮಾನಕ್ಕೆ ಪರವಾನಗಿ ಸಿಕ್ಕಿಲ್ಲ, ಆದ್ದರಿಂದ ಕೇವಲ 15 ಅಡಿ ಎತ್ತರದವರೆಗೆ, 800 ಮೀಟರ್ ದೂರಕ್ಕೆ ಮಾತ್ರ ಹಾರಿಸಿ ಪ್ರಯೋಗ ಮಾಡಲಾಗಿದೆ. ಪ್ರತಿ ಬಾರಿಯೂ ವಿಮಾನ ತಾಂತ್ರಿಕವಾಗಿ ಸರಿಯಾಗಿ ಕೆಲಸ ಮಾಡಿದೆ, ಯಾವ ತೊಂದರೆಯೂ ಆಗಿಲ್ಲ ಎನ್ನುತ್ತಾರೆ ಪುಷ್ಪರಾಜ್ ಅಮೀನ್.
ಈ ಸಿಂಗಲ್ ಸೀಟರ್ ವಿಮಾನದ ಯಶಸ್ಸಿನಿಂದ ಉತ್ತೇಜಿತವಾಗಿರುವ ಈ ತಂಡ, ಇದನ್ನು ಮುಂದೆ ಇನ್ನಷ್ಟುಅಭಿವೃದ್ಧಿಪಡಿಸಿ, ಪ್ರಯಾಸೋದ್ಯಮ, ಮನೋರಂಜನೆ, ರಕ್ಷಣೆ ಇತ್ಯಾದಿಗಳಿಗೆ ಬಳಸಬಹುದಾದ ವಿಮಾನಗಳನ್ನು ನಿರ್ಮಿಸುವ ಯೋಜನೆಯಲ್ಲಿದೆ. ಆದರೆ ಈ ಮೈಕ್ರೋ ಪ್ಲೇನ್‌ನ ನಿರ್ಮಾಣಕ್ಕೆ 7 ಲಕ್ಷ ರು. ಹಣವನ್ನು ಯಾರಾರಯರನ್ನೋ ಕಾಡಿ ಬೇಡಿ ಸಾಲ ತಂದಿರುವ ಈ ತಂಡಕ್ಕೆ ಸರ್ಕಾರ, ಸಮಾಜಸೇವಾ ಸಂಸ್ಥೆಗಳ ನೆರವು ಬೇಕಾಗಿದೆ.
ಯಾವುದೇ ಪರೀಕ್ಷೆ - ಪ್ರಾತ್ಯಕ್ಷಿಕೆಗೆ ಸಿದ್ಧರಿದ್ದೇವೆ
ಇದೀಗ ಈ ತಂಡ ಈ ವಿಮಾನಕ್ಕೆ ಸಂಬಂಧಿತ ಕಾನೂನಿನಡಿ ಪರವಾನಗಿ, ಸರ್ಕಾರದ ಪ್ರೋತ್ಸಾಹ, ಇನ್ನಷ್ಟುಅವಿಷ್ಕಾರಕ್ಕೆ ನೆರವು ಯಾಚಿಸುತ್ತಿದೆ, ಪ್ರಧಾನಿ ಮೋದಿಯಿಂದ ಉಡುಪಿ ಜಿಲ್ಲಾಧಿಕಾರಿವರೆಗೆ ಎಲ್ಲರಿಗೂ ಪತ್ರ ಬರೆದಿದೆ. ಯಾರೇ ಅಧಿಕಾರಿಗಳು, ಜನಪ್ರತಿನಿಧಿಗಳು, ತಜ್ಞರು ಯಾವಾಗ ಬೇಕಾದರೂ ಬಂದು ನೋಡಬಹುದು, ತಾವು ಪ್ರಾತ್ಯಕ್ಷಿಕೆ ನೀಡುವುದಕ್ಕೆ, ಪರೀಕ್ಷೆಗೊಳಪಡುವುದಕ್ಕೆ ಸಿದ್ಧರಿದ್ದೇವೆ ಎಂಬ ಪ್ರಸ್ತಾಪವನ್ನು ಮುಂದಿಟ್ಟಿದೆ. ತಿಂಗಳೆರಡು ಕಳೆದರೂ ಇನ್ನೂ ಯಾವುದೇ ಪ್ರತಿಕ್ರಿಯೆ ಸರ್ಕಾರದಿಂದಾಗಲಿ, ಅಧಿಕಾರಿಗಳಿಂದಾಗಿ ಬಂದಿಲ್ಲ.
ಭಾರತದ ಪ್ರಪ್ರಥಮ ಸ್ವದೇಶಿ ನಿರ್ಮಿತ ಸೀಪ್ಲೇನ್
ದೇಶದ ಪ್ರಥಮ ಸೀ ಪ್ಲೇನ್ ಅಹಮದಾಬಾದ್‌ನಲ್ಲಿದೆ, ಆದರೆ ಅದು ವಿದೇಶದಲ್ಲಿ ನಿರ್ಮಿತವಾಗಿ ಆಮದು ಮಾಡಿಕೊಳ್ಳಲಾಗಿದೆ. ಆದ್ದರಿಂದ ನಾವು ನಿರ್ಮಿಸಿದ ಈ ವಿಮಾನ ಭಾರತದ ಪ್ರಪ್ರಥಮ ಸೀ ಪ್ಲೇನ್ ಆಗಿದೆ. ಎಂಜಿನ್ ನಮ್ಮಲ್ಲಿ ಲಭ್ಯವಾಗದ ಕಾರಣಕ್ಕೆ ವಿದೇಶದಿಂದ ತರಿಸಿದ್ದೇವೆ. ಅದನ್ನು ಹೊರತುಪಡಿಸಿದರೆ ಇದು ಆತ್ಮ ನಿರ್ಭರ ಭಾರತ್ ಕಲ್ಪನೆಯಡಿ ಸಂಪೂರ್ಣ ಸ್ಪದೇಶಿ ನಿರ್ಮಿತ ಸೀ ಪ್ಲೇನ್ ಆಗಿದೆ
- ಪುಷ್ಪರಾಜ್ ಅಮೀನ್ (9880044252)