ಪುತ್ರರ ನಡುವಿನ ಪೈಪೋಟಿಯ ಕ್ಷೇತ್ರವಿದು

By Kannadaprabha News  |  First Published Apr 6, 2023, 8:19 AM IST

ಕಬಿನಿ, ನುಗು, ತಾರಕ, ಹೆಬ್ಬಳ- ಹೀಗೆ ನಾಲ್ಕು ಜಲಾಶಯಗಳಿರುವ, ಅಕ್ಕಪಕ್ಕದಲ್ಲಿ ಬಂಡೀಪುರ, ನಾಗರಹೊಳೆ ಅಭಯಾರಣ್ಯ ಇರುವುದರಿಂದ ‘ವನಸಿರಿಯ ನಾಡು’ ಎಂದು ಕರೆಸಿಕೊಳ್ಳುವ ಹೆಗ್ಗಡದೇವನ ಕೋಟೆ ರಾಜ್ಯದ ಅತ್ಯಂತ ಹಿಂದುಳಿದ ತಾಲೂಕುಗಳಲ್ಲಿ ಒಂದು. ಪರಿಶಿಷ್ಟಜಾತಿ ಮತ್ತು ಪಂಗಡದ ಜನರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇಲ್ಲಿ ಮಾಜಿ ಶಾಸಕರಾದ ಎಸ್‌. ಚಿಕ್ಕಮಾದು ಹಾಗೂ ಚಿಕ್ಕಣ್ಣ ಅವರ ಪುತ್ರರ ನಡುವಿನ ಹೋರಾಟದ ಪ್ರತಿಷ್ಠಿತ ಕಣವಾಗಿದೆ.


 ಅಂಶಿ ಪ್ರಸನ್ನಕುಮಾರ್‌

 ಮೈಸೂರು :  ಕಬಿನಿ, ನುಗು, ತಾರಕ, ಹೆಬ್ಬಳ- ಹೀಗೆ ನಾಲ್ಕು ಜಲಾಶಯಗಳಿರುವ, ಅಕ್ಕಪಕ್ಕದಲ್ಲಿ ಬಂಡೀಪುರ, ನಾಗರಹೊಳೆ ಅಭಯಾರಣ್ಯ ಇರುವುದರಿಂದ ‘ವನಸಿರಿಯ ನಾಡು’ ಎಂದು ಕರೆಸಿಕೊಳ್ಳುವ ಹೆಗ್ಗಡದೇವನ ಕೋಟೆ ರಾಜ್ಯದ ಅತ್ಯಂತ ಹಿಂದುಳಿದ ತಾಲೂಕುಗಳಲ್ಲಿ ಒಂದು. ಪರಿಶಿಷ್ಟಜಾತಿ ಮತ್ತು ಪಂಗಡದ ಜನರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇಲ್ಲಿ ಮಾಜಿ ಶಾಸಕರಾದ ಎಸ್‌. ಚಿಕ್ಕಮಾದು ಹಾಗೂ ಚಿಕ್ಕಣ್ಣ ಅವರ ಪುತ್ರರ ನಡುವಿನ ಹೋರಾಟದ ಪ್ರತಿಷ್ಠಿತ ಕಣವಾಗಿದೆ.

Latest Videos

undefined

ಹಾಲಿ ಶಾಸಕ ಅನಿಲ್‌ ಚಿಕ್ಕಮಾದು ಅವರಿಗೆ ಮೊದಲ ಪಟ್ಟಿಯಲ್ಲಿಯೇ ಟಿಕೆಟ್‌ ಘೋಷಿಸಿದೆ. ಚಿಕ್ಕಮಾದು ಅವರು ಕೂಡ ಬಿಳಿಕೆರೆಯಿಂದ ಜಿಪಂ ಸದಸ್ಯರಾಗಿ ನಂತರ ಹುಣಸೂರಿನಿಂದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌, ಇಲ್ಲಿಂದ 2013 ರಲ್ಲಿ ಜೆಡಿಎಸ್‌ ಟಿಕೆಟ್‌ ಮೇಲೆ ಶಾಸಕರಾಗಿದ್ದರು. ಅಲ್ಲದೇ ಒಂದು ಅವಧಿಗೆ ಜೆಡಿಎಸ್‌ನಿಂದ ವಿಧಾನ ಪರಿಷತ್‌ ಸದಸ್ಯರೂ ಆಗಿದ್ದರು. ಅವರ ಪುತ್ರ ಅನಿಲ್‌ ಕೂಡ ಹನಗೋಡಿನಿಂದ ಜಿಪಂ ಸದಸ್ಯರಾಗಿದ್ದರು. ಕಳೆದ ಬಾರಿ ಮೊದಲ ಪ್ರಯತ್ನದಲ್ಲಿಯೇ ಗೆದ್ದು, ರಾಜ್ಯದಲ್ಲಿಯೇ ಅತಿ ಕಿರಿಯ ವಯಸ್ಸಿನ ಶಾಸಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದದರು.

ಕಳೆದ ಬಾರಿ ಜೆಡಿಎಸ್‌ ಅಭ್ಯರ್ಥಿಯಾಗಿದ್ದ ಮಾಜಿ ಶಾಸಕ ಚಿಕ್ಕಣ್ಣ ವಯೋಮಿತಿಯ ಕಾರಣದಿಂದ ಈ ಬಾರಿ ಸ್ಪರ್ಧಿಸುತ್ತಿಲ್ಲ. ಬದಲಿಗೆ ಅವರ ಪುತ್ರ ಜಯಪ್ರಕಾಶ್‌ ಅವರನ್ನು ಜೆಡಿಎಸ್‌ನಿಂದ ಕಣಕ್ಕಿಳಿಸುತ್ತಿದ್ದಾರೆ. ಚಿಕ್ಕಣ್ಣ ಅವರು ಎರಡು ಬಾರಿ ಜಿಪಂ ಸದಸ್ಯರಾಗಿ, ಒಂದು ಅವಧಿಗೆ ಶಾಸಕರಾಗಿದ್ದರು. ಅವರ ಪತ್ನಿ ಮಹದೇವಮ್ಮ ಕೂಡ ಒಂದು ಅವಧಿಗೆ ಜಿಪಂ ಸದಸ್ಯರಾಗಿದ್ದರು.ಇದೀಗ ಅವರ ಪುತ್ರ ಜಯಪ್ರಕಾಶ್‌ ಅದೃಷ್ಟಪರೀಕ್ಷೆಗೆ ಮುಂದಾಗಿದ್ದಾರೆ.

ಕ್ಷೇತ್ರದ ಇತಿಹಾಸ

ಎಚ್‌.ಡಿ. ಕೋಟೆ 1952 ರಲ್ಲಿ ನಡೆದ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಗುಂಡ್ಲುಪೇಟೆ ದ್ವಿಸದಸ್ಯ ಕ್ಷೇತ್ರಕ್ಕೂ, 1957 ರಲ್ಲಿ ನಡೆದ ಎರಡನೇ ಸಾರ್ವತ್ರಿಕ ಚುನಾವಣೆಯಲ್ಲಿ ಹುಣಸೂರು ದ್ವಿಸದಸ್ಯ ಕ್ಷೇತ್ರಕ್ಕೂ ಸೇರಿತ್ತು. 1962 ರಲ್ಲಿ ಪ್ರತ್ಯೇಕ ಪ.ಜಾತಿ ಮೀಸಲು ಏಕ ಸದಸ್ಯ ಕ್ಷೇತ್ರವಾಗಿ ಅಸ್ತಿತ್ವಕ್ಕೆ ಬಂದಿತು.

1962 ರಲ್ಲಿ ಸ್ವತಂತ್ರ ಪಾರ್ಟಿಯ ಆರ್‌. ಪೀರಣ್ಣ ಅವರು ಕಾಂಗ್ರೆಸ್‌ನ ಎನ್‌. ರಾಚಯ್ಯ ಅವರನ್ನು ಸೋಲಿಸಿ, ಆಯ್ಕೆಯಾದರು. ಬಿ. ರಾಚಪ್ಪ ಪಕ್ಷೇತರರಾಗಿ ಕಣದಲ್ಲಿದ್ದರು. 1967 ರಲ್ಲಿ ಆರ್‌. ಪೀರಣ್ಣ ಅವರು ಕಾಂಗ್ರೆಸ್‌ ಅಭ್ಯರ್ಥಿಯಾಗಿ ಪುನಾರಾಯ್ಕೆಯಾದರು. ಎಚ್‌.ಬಿ. ಚಲುವಯ್ಯ- ಪಕ್ಷೇತರ, ಎಂ. ಶಿವಣ್ಣ- ಎಸ್‌ಎಸ್‌ಪಿ ಸ್ಪರ್ಧಿಸಿದ್ದರು. 1972 ರಲ್ಲಿ ಆರ್‌. ಪೀರಣ್ಣ ಅವರು ಸಂಸ್ಥಾ ಕಾಂಗ್ರೆಸ್‌ ಅಭ್ಯರ್ಥಿಯಾಗಿ ‘ಹ್ಯಾಟ್ರಿಕ್‌ ಗೆಲವು’ ದಾಖಲಿಸಿದರು. ಕಾಂಗ್ರೆಸ್‌ನಿಂದ ಎಚ್‌.ಬಿ. ಚಲುವಯ್ಯ ಸ್ಪರ್ಧಿಸಿದ್ದರು. 1978 ರಲ್ಲಿ ಇಂದಿರಾ ಕಾಂಗ್ರೆಸ್‌ನ ಸುಶೀಲಾ ಚಲುವರಾಜ್‌ ಜಯಭೇರಿ ಬಾರಿಸಿದರು. ಜನತಾಪಕ್ಷದಿಂದ ಎಚ್‌.ಬಿ. ಚಲುವಯ್ಯ ’ಹ್ಯಾಟ್ರಿಕ್‌ ಸೋಲು’ ಅನುಭವಿಸಿದರು. ಪಕ್ಷೇತರರಾಗಿದ್ದ ಆರ್‌. ಪೀರಣ್ಣ, ಕಾಂಗ್ರೆಸ್‌ನ ಕೆ.ಎಂ. ದೊಡ್ಡಯ್ಯ ಕೂಡ ಸೋತರು.

1983 ರಲ್ಲಿ ಮತ್ತೆ ಜನತಾಪಕ್ಷದ ಅಭ್ಯರ್ಥಿಯಾದ ಎಚ್‌.ಬಿ. ಚಲುವಯ್ಯ ಅವರು ಕಾಂಗ್ರೆಸ್‌ ಸುಶೀಲಾ ಅವರನ್ನು ಸೋಲಿಸಿ, ಸತತ ನಾಲ್ಕನೇ ಪ್ರಯತ್ನದಲ್ಲಿ ಶಾಸಕರಾದರು. ಎನ್‌. ನಾಗರಾಜು, ಎಂ. ಶಿವಣ್ಣ ಮತ್ತಿತರರು ಪಕ್ಷೇತರರಾಗಿ ಕಣದಲ್ಲಿದ್ದರು. 1985 ರಲ್ಲಿ ಕಾಂಗ್ರೆಸ್‌ನ ಎಂ. ಶಿವಣ್ಣ ಅವರು ಜನತಾಪಕ್ಷದ ಎಚ್‌.ಬಿ. ಚಲುವಯ್ಯ ಅವರನ್ನು ಸೋಲಿಸಿದರು. ಎಂ.ಪಿ. ವೆಂಕಟೇಶ್‌, ಬಿ.ಎನ್‌. ಚಲುವರಾಜ್‌ ಮತ್ತಿತರರು ಪಕ್ಷೇತರರಾಗಿದ್ದರು. 1989 ರಲ್ಲಿ ಸಮಾಜವಾದಿ ಜನತಾಪಕ್ಷದ ಎಂ.ಪಿ. ವೆಂಕಟೇಶ್‌ ಅವರು ಕಾಂಗ್ರೆಸ್‌ನ ಎಂ. ಶಿವಣ್ಣ, ಜನತಾದಳದ ಎಚ್‌.ಬಿ. ಚಲುವಯ್ಯ ಅವರನ್ನು ಸೋಲಿಸಿ, ಆಯ್ಕೆಯಾದರು. ಎನ್‌. ನಾಗರಾಜು ಪಕ್ಷೇತರರಾಗಿದ್ದರು.

1994 ರಲ್ಲಿ ಜನತಾದಳದಿಂದ ಕಣಕ್ಕಿಳಿದ ಎನ್‌. ನಾಗರಾಜು ಅವರು ಕಾಂಗ್ರೆಸ್‌ನ ಎಂ. ಶಿವಣ್ಣ ಅವರನ್ನು ಸೋಲಿಸಿ, ಆಯ್ಕೆಯಾದರು. ರೈತ ಸಂಘದಿಂದ ಚಾ. ನಂಜುಂಡಮೂರ್ತಿ ಸ್ಪರ್ಧಿಸಿದ್ದರು. 1999 ರಲ್ಲಿ ಕಾಂಗ್ರೆಸ್‌ನ ಎಂ. ಶಿವಣ್ಣ ಅವರು ಪಕ್ಷೇತರಾದ ಎಂ.ಪಿ. ವೆಂಕಟೇಶ್‌ ಅವರನ್ನು ಸೋಲಿಸಿ, ಆಯ್ಕೆಯಾದರು. ಬಿಜೆಪಿಯ ಚಾ. ನಂಜುಂಡಮೂರ್ತಿ, ಜನತಾದಳದ ದೇವನೂರು ಶಿವಮಲ್ಲು ಮತ್ತಿತರರು ಕಣದಲ್ಲಿದ್ದರು. ಶಿವಣ್ಣ ಅವರು ಎಸ್‌.ಎಂ. ಕೃಷ್ಣ ಸಂಪುಟದಲ್ಲಿ ಸಚಿವರಾಗಿದ್ದರು. 2004 ರಲ್ಲಿ ಜೆಡಿಎಸ್‌ನ ಎಂ.ಪಿ. ವೆಂಕಟೇಶ್‌ ಅವರು ಕಾಂಗ್ರೆಸ್‌ನ ಎಂ. ಶಿವಣ್ಣ ಅವರನ್ನು ಸೋಲಿಸಿ ಆಯ್ಕೆಯಾದರು. ಬಿಜೆಪಿಯಿಂದ ಎನ್‌. ನಾಗರಾಜು ಅಭ್ಯರ್ಥಿಯಾಗಿದ್ದರು.

2008 ರಲ್ಲಿ ಕ್ಷೇತ್ರದ ಮೀಸಲಾತಿ ಪ.ಪಂಗಡಕ್ಕೆ ಬದಲಾಯಿತು. ಕಾಂಗ್ರೆಸ್‌ನ ಚಿಕ್ಕಣ್ಣ ಅವರು ಜೆಡಿಎಸ್‌ನ ಎಂ.ಸಿ. ದೊಡ್ಡನಾಯಕರನ್ನು ಸೋಲಿಸಿದರು. ಬಿಜೆಪಿಯಿಂದ ಚಿಕ್ಕವೀರನಾಯಕ, ಬಿಎಸ್ಪಿಯಿಂದ ಜಿ.ಎನ್‌. ದೇವದತ್ತ ಮೊದಲಾದವರು ಸ್ಪರ್ಧಿಸಿದ್ದರು. 2013 ರಲ್ಲಿ ಜೆಡಿಎಸ್‌ನ ಎಸ್‌. ಚಿಕ್ಕಮಾದು ಅವರು ಕಾಂಗ್ರೆಸ್‌ನ ಚಿಕ್ಕಣ್ಣ ಅವರನ್ನು ಸೋಲಿಸಿದರು. ಬಿಜೆಪಿಯಿಂದ ಸಿದ್ದರಾಜು, ಬಿಎಸ್ಪಿಯಿಂದ ಜೆ.ಕೆ. ಗೋಪಾಲ, ಕೆಜೆಪಿಯಿಂದ ಡಾ.ಎಂ.ವಿ. ಕೃಷ್ಣಸ್ವಾಮಿ ಸ್ಪರ್ಧಿಸಿದ್ದರು.

2008 ರಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಗೆದ್ದು, 2013 ರಲ್ಲಿ ಅದೇ ಪಕ್ಷದ ಅಭ್ಯರ್ಥಿಯಾಗಿ ಸೋತ ಮಾಜಿ ಶಾಸಕ ಚಿಕ್ಕಣ್ಣ 2018 ರಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಿದ್ದರು. 2013 ರಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಿ ಗೆದ್ದಿದ್ದ ಎಸ್‌. ಚಿಕ್ಕಮಾದು 2017ರ ನ.1 ರಂದು ನಿಧನರಾದರು. ಜೆಡಿಎಸ್‌ನಿಂದ ಜಿಪಂ ಸದಸ್ಯರಾಗಿದ್ದ ಚಿಕ್ಕಮಾದು ಅವರ ಪುತ್ರ ಸಿ. ಅನಿಲ್‌ಕುಮಾರ್‌ ಅವರನ್ನು ಸೆಳೆದುಕೊಂಡು ಕಾಂಗ್ರೆಸ್‌ ಪಕ್ಷ ಟಿಕೆಟ್‌ ನೀಡಿತ್ತು. ಬಿಜೆಪಿಯಿಂದ ವಿಧಾನ ಪರಿಷತ್‌ ಮಾಜಿ ಸದಸ್ಯ ಸಿದ್ದರಾಜು ಅಭ್ಯರ್ಥಿ. 2013 ರಲ್ಲಿ ಬಿಎಸ್ಪಿ ಅಭ್ಯರ್ಥಿಯಾಗಿದ್ದ ಜೆ.ಕೆ. ಗೋಪಾಲ 2018 ರಲ್ಲಿ ಆರ್‌ಪಿಐನಿಂದ ಕಣಕ್ಕಿಳಿದಿದ್ದರು. ಅಂತಿಮವಾಗಿ ಅನಿಲ್‌ ಚಿಕ್ಕಮಾದು ಗೆದ್ದರು.

ಮತದಾರರ ವಿವರ

ಒಟ್ಟು ಮತದಾರರು- 2,21,346

ಪುರುಷರು- 1,11,305

ಮಹಿಳೆಯರು- 1,10,031

ಇತರೆ- 10

ಮತಗಟ್ಟೆಗಳು- 282

2018ರ ಫಲಿತಾಂಶ

ಸಿ. ಅನಿಲ್‌ ಕುಮಾರ್‌ (ಕಾಂಗ್ರೆಸ್‌ಃ- 76,652

ಚಿಕ್ಕಣ್ಣ- (ಜೆಡಿಎಸ್‌) 54,559

ಸಿದ್ದರಾಜು (ಬಿಜೆಪಿ)- 34,425

(ಇದಲ್ಲದೇ ಇನ್ನೂ ನಾಲ್ವರು ಕಣದಲ್ಲಿದ್ದರು)

ಕ್ಷೇತ್ರ ಸ್ವಾರಸ್ಯಗಳು

- 1962 ರಲ್ಲಿ ಪರಿಶಿಷ್ಟಜಾತಿ ಮೀಸಲು ಕ್ಷೇತ್ರವಾಗಿ ರಚನೆ. ಪ್ರಥಮ ಮೂರು ಚುನಾವಣೆಗಳಲ್ಲೂ ಅನುಕ್ರಮವಾಗಿ ಸ್ವತಂತ್ರ ಪಾರ್ಟಿ, ಕಾಂಗ್ರೆಸ್‌, ಸಂಸ್ಥಾ ಕಾಂಗ್ರೆಸ್‌ನಿಂದ ಆರ್‌. ಪೀರಣ್ಣ ಹ್ಯಾಟ್ರಿಕ್‌ ಗೆಲವು. ಇವರ ನಂತರ ಯಾರೊಬ್ಬರು ಸತತವಾಗಿ ಗೆದ್ದಿಲ್ಲ. ಅವರು ಮೊದಲ ಚುನಾವಣೆಯಲ್ಲಿ ಎನ್‌. ರಾಚಯ್ಯ, ಎರಡು ಹಾಗೂ ಮೂರನೇ ಚುನಾವಣೆಯಲ್ಲಿ ಎಚ್‌.ಬಿ. ಚಲುವಯ್ಯ ಅವರನ್ನು ಸೋಲಿಸಿದರು. ನಾಲ್ಕನೇ ಚುನಾವಣೆಯಲ್ಲಿ ಪೀರಣ್ಣ ಸೋತರು. ಪೀರಣ್ಣ ಇದಕ್ಕೂ ಮೊದಲು ಹುಣಸೂರಿನಲ್ಲಿ ಎನ್‌. ರಾಚಯ್ಯ ಅವರೆದುರು ಸೋತಿದ್ದರು.

- ಎಚ್‌.ಬಿ. ಚಲುವಯ್ಯ ಅವರು ಹ್ಯಾಟ್ರಿಕ್‌ ಸೋಲಿನ ನಂತರ 1983 ರಲ್ಲಿ ಪ್ರಥಮ ಬಾರಿಗೆ ಶಾಸಕರಾದರು.

- ಈ ಕ್ಷೇತ್ರದಲ್ಲಿ ಸೋತವರೆಲ್ಲ ನಂತರ ಶಾಸಕರಾಗಿರುವುದು ವಿಶೇಷ. ಅವರಲ್ಲಿ ಎಚ್‌.ಬಿ. ಚಲುವಯ್ಯ, ಎಂ. ಶಿವಣ್ಣ, ಎಂ.ಪಿ. ವೆಂಕಟೇಶ್‌, ಎನ್‌. ನಾಗರಾಜು ಪ್ರಮುಖರು.

- ಆರ್‌. ಪೀರಣ್ಣ ಅವರ ಪುತ್ರ ಎಂ.ಪಿ. ವೆಂಕಟೇಶ್‌ 1989 ಹಾಗೂ 2004 ರಲ್ಲಿ ಇದೇ ಕ್ಷೇತ್ರದಿಂದ ಜನತಾ ಪರಿವಾರದ ಟಿಕೆಟ್‌ ಮೇಲೆ ಆಯ್ಕೆಯಾಗಿದ್ದರು. ಅವರು 1989 ರಲ್ಲಿ ಎಚ್‌.ಡಿ. ದೇವೇಗೌಡರ ಸಮಾಜವಾದಿ ಜನತಾಪಕ್ಷದಿಂದ ಆಯ್ಕೆಯಾದ ಇಬ್ಬರು ಶಾಸಕರಲ್ಲಿ ಒಬ್ಬರು. ಮತ್ತೊಬ್ಬರು ಕೋಲಾರ ಜಿಲ್ಲೆಯ ವೇಮಗಲ್‌ನ ಸಿ. ಬೈರೇಗೌಡರು.

- ಮಂತ್ರಿಯಾಗಲು ಅವಕಾಶ ಸಿಕ್ಕಿರುವುದು ಎಂ. ಶಿವಣ್ಣ ಅವರಿಗೆ ಮಾತ್ರ.

- 2013 ರಲ್ಲಿ ಗೆದ್ದಿದ್ದ ಎಸ್‌. ಚಿಕ್ಕಮಾದು ಅವರು ಅವಧಿ ಪೂರ್ಣವಾಗುವ ಮುನ್ನವೇ ನಿಧನರಾದರು.

- ಈ ಕ್ಷೇತ್ರದಲ್ಲಿ ಆರ್‌. ಪೀರಣ್ಣ ಅವರ ಮಕ್ಕಳು ಶಾಸಕರಾಗಿದ್ದಾರೆ. ಆದರೆ ಚಲುವಯ್ಯ ಅವರ ಮಕ್ಕಳಿಗೆ ಆ ಅವಕಾಶ ಸಿಗಲಿಲ್ಲ.

- ಚಾ. ನಂಜಂಡಮೂರ್ತಿ ಅವರು ಒಮ್ಮೆ ರೈತ ಸಂಘ, ಮತ್ತೊಮ್ಮೆ ಬಿಜೆಪಿ ಅಭ್ಯರ್ಥಿಯಾಗಿ ಗಣನೀಯ ಮತ ಪಡೆದಿದ್ದರು.

- ಜನತಾದಳದಿಂದ ಶಾಸಕರಾಗಿದ್ದ ಎನ್‌. ನಾಗರಾಜು ಬಿಜೆಪಿಯಿಂದ ಸ್ಪರ್ಧಿಸಿ ಸೋತರು.

- ವಯಸ್ಕರ ಶಿಕ್ಷಣ ಸಮಿತಿ ಹಾಗೂ ಕಾಡಾ ಮಾಜಿ ಅಧ್ಯಕ್ಷ ದೇವನೂರು ಶಿವಮಲ್ಲು ಕೂಡ ಇಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಿ ಸೋತಿದ್ದಾರೆ.

ಈವರೆಗೆ ಪ್ರತಿನಿಧಿಸಿದವರು

ಆರ್‌. ಪೀರಣ್ಣ, ಎಚ್‌.ಬಿ. ಚಲುವಯ್ಯ. ಎಂ. ಶಿವಣ್ಣ, ಎಂ.ಪಿ. ವೆಂಕಟೇಶ್‌, ಎನ್‌. ನಾಗರಾಜು, ಚಿಕ್ಕಣ್ಣ, ಎಸ್‌. ಚಿಕ್ಕಮಾದು, ಅನಿಲ್‌ ಚಿಕ್ಕಮಾದು

ಪ.ಜಾತಿ ಮೀಸಲು ಕ್ಷೇತ್ರವಾಗಿದ್ದಾಗ...

1962- ಆರ್‌. ಪೀರಣ್ಣ (ಸ್ವತಂತ್ರ ಪಾರ್ಟಿ)

1967- ಆರ್‌. ಪೀರಣ್ಣ (ಕಾಂಗ್ರೆಸ್‌)

1972- ಆರ್‌. ಪೀರಣ್ಣ (ಸಂಸ್ಥಾ ಕಾಂಗ್ರೆಸ್‌)

1978- ಸುಶೀಲಾ ಚಲುವರಾಜ್‌ (ಇಂದಿರಾ ಕಾಂಗ್ರೆಸ್‌)

1983- ಎಚ್‌.ಬಿ. ಚಲುವಯ್ಯ (ಜನತಾಪಕ್ಷ)

1985- ಎಂ. ಶಿವಣ್ಣ (ಕಾಂಗ್ರೆಸ್‌)

1989- ಎಂ.ಪಿ. ವೆಂಕಟೇಶ್‌ (ಸಜಪ)

1994- ಎನ್‌. ನಾಗರಾಜು (ಜನತಾದಳ)

1999- ಎಂ. ಶಿವಣ್ಣ (ಕಾಂಗ್ರೆಸ್‌)

2004- ಎಂ.ಪಿ. ವೆಂಕಟೇಶ್‌ (ಜೆಡಿಎಸ್‌)

ಪ.ಪಂಗಡ ಕ್ಷೇತ್ರವಾಗಿ ಬದಲಾದ ನಂತರ...

2008- ಚಿಕ್ಕಣ್ಣ (ಕಾಂಗ್ರೆಸ್‌)

2013- ಎಸ್‌. ಚಿಕ್ಕಮಾದು (ಜೆಡಿಎಸ್‌)

2018- ಅನಿಲ್‌ ಚಿಕ್ಕಮಾದು (ಕಾಂಗ್ರೆಸ್‌)

ಬಿಜೆಪಿಯಲ್ಲಿ ಭಾರೀ ಪೈಪೋಟಿ

5 ಎಂವೈಎಸ್‌32- ಬಿಜೆಪಿ ಟಿಕೆಟ್‌ ಆಕಾಂಕ್ಷಿಗಳಾದ ಕೃಷ್ಣನಾಯಕ, ಕೃಷ್ಣಸ್ವಾಮಿ, ಎಂ. ಅಪ್ಪಣ್ಣ

ಬಿಜೆಪಿಯಿಂದ ಕಳದೆರಡು ಬಾರಿ ಸ್ಪರ್ಧಿಸಿದ್ದ ವಿಧಾನ ಪರಿಷತ್‌ ಮಾಜಿ ಸದಸ್ಯ ಸಿದ್ದರಾಜು ಬದಲಿಗೆ ಅರಣ್ಯ ವಿಹಾರಧಾಮ ಮಾಜಿ ಅಧ್ಯಕ್ಷ ಎಂ. ಅಪ್ಪಣ್ಣ, 2008 ರಲ್ಲಿ ವರುಣದಿಂದ ಜೆಡಿಎಸ್‌, 2013 ರಲ್ಲಿ ಇಲ್ಲಿಂದ ಕೆಜೆಪಿ ಅಭ್ಯರ್ಥಿಯಾಗಿದ್ದ ಡಾ.ಎಚ್‌.ವಿ. ಕೃಷ್ಣಸ್ವಾಮಿ ಹಾಗೂ ಇತ್ತೀಚೆಗೆ ಜೆಡಿಎಸ್‌ ತೊರೆದು ಪಕ್ಷಕ್ಕೆ ಬಂದಿರುವ ಕೃಷ್ಣನಾಯಕ ನಡುವೆ ಟಿಕೆಟ್‌ಗೆ ಪೈಪೋಟಿ ಇದೆ.

click me!