ಪಿಯುಸಿ ಹಂತದಲ್ಲಿ ಕನ್ನಡ ಭಾಷಾ ಪಠ್ಯ ಬೋಧನೆ ಅತ್ಯಂತ ಸವಾಲಿನ ಕೆಲಸ

By Kannadaprabha NewsFirst Published Nov 27, 2023, 10:16 AM IST
Highlights

ಪಿಯುಸಿ ಹಂತದಲ್ಲಿ ಕನ್ನಡ ಭಾಷಾ ಪಠ್ಯ ಬೋಧನೆ ಅತ್ಯಂತ ಸವಾಲಿನ ಕೆಲಸವಾಗಿದೆ ಎಂದು ವಿಮರ್ಶಕ ಪ್ರೊ.ಓ.ಎಲ್. ನಾಗಭೂಷಣಸ್ವಾಮಿ ತಿಳಿಸಿದರು.

  ಮೈಸೂರು :  ಪಿಯುಸಿ ಹಂತದಲ್ಲಿ ಕನ್ನಡ ಭಾಷಾ ಪಠ್ಯ ಬೋಧನೆ ಅತ್ಯಂತ ಸವಾಲಿನ ಕೆಲಸವಾಗಿದೆ ಎಂದು ವಿಮರ್ಶಕ ಪ್ರೊ.ಓ.ಎಲ್. ನಾಗಭೂಷಣಸ್ವಾಮಿ ತಿಳಿಸಿದರು.

ನಗರದ ವಿಜಯವಿಠಲ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿರಾಜ್ಯೋತ್ಸವದ ಅಂಗವಾಗಿ ಮೈಸೂರು ಜಿಲ್ಲೆ ಪದವಿ ಪೂರ್ವ ಕಾಲೇಜು ಕನ್ನಡ ಉಪನ್ಯಾಸಕರ ವೇದಿಕೆಯು ಶನಿವಾರ ಆಯೋಜಿಸಿದ್ದ ವಿಶೇಷ ಉಪನ್ಯಾಸವನ್ನು ಅವರು ಉದ್ಘಾಟಿಸಿ ಮಾತನಾಡಿದರು.

ಪಿಯುಸಿ ಹದಿಹರೆಯದ ವಯಸ್ಸಿನಲ್ಲಿದ್ದು ಅವರನ್ನು ತರಗತಿಯಲ್ಲಿ ನಿಯಂತ್ರಿಸುವುದೇ ಕಷ್ಟ ಸಾಧ್ಯ. ಅವರ ಮನಸ್ಸು ಹತೋಟಿಯಲ್ಲಿ ಇರುವುದಿಲ್ಲ. ವಿದ್ಯಾರ್ಥಿಗಳ ಮನಸ್ಸನ್ನು ಹತೋಟಿಗೆ ತಂದು ಏಕಾಗ್ರತೆಯಿಂದ ಕಲಿಯುವಂತೆ ಮಾಡುವುದೇ ಸವಾಲಿನ ಕೆಲಸ ಎಂದರು.

ಕನ್ನಡ ಭಾಷೆಯನ್ನು ಬೋಧಿಸಿ, ಮಕ್ಕಳಿಗೆ ಅರ್ಥೈಸುವಂತೆ ಮಾಡುವುದೇ ಯಶಸ್ವಿ ಅಧ್ಯಾಪಕನ ಕರ್ತವ್ಯ. ಇಂದು ಕನ್ನಡ ಭಾಷೆಯನ್ನು ಹೆಚ್ಚು ಬಳಸುತ್ತಿರುವವರು ಮಧ್ಯಮ ವರ್ಗ ಹಾಗೂ ತಳ ಸಮುದಾಯ. ಕುಟುಂಬ ಸುರಕ್ಷಿತವಾಗಿದ್ದಷ್ಟು ಕನ್ನಡವನ್ನು ಅಸಡ್ಡೆಯಾಗಿ ನೋಡುತ್ತಿರುವುದನ್ನು ನಮ್ಮ ಸುತ್ತಮುತ್ತಲಿನ ಸಮಾಜದಲ್ಲಿ ಕಾಣುತ್ತಿದ್ದೇವೆ. ಇದು ಅತ್ಯಂತ ಬೇಸರದ ಸಂಗತಿಯಾಗಿದೆ ಎಂದರು.

ಇದಕ್ಕೆ ಆಂಗ್ಲ ಭಾಷೆ ವ್ಯಾಮೋಹ, ಜಗತ್ತಿಗೆ ವ್ಯಾಪಾರ ವಹಿವಾಟು ಬಂದ ಮೇಲೆ ವ್ಯಾಪಾರ ಹೀನ ಭಾಷೆಯಾಗಿ ಕನ್ನಡವನ್ನು ಅಸಡ್ಡೆಯಾಗಿ ನೋಡ ತೊಡಗಿದರು. ಇದನ್ನು ಪ್ರತಿಯೊಬ್ಬರು ಕನ್ನಡಿಗನೂ ಅರಿಯಬೇಕಿದೆ. ಭಾಷೆ ನಿಂತ ನೀರಲ್ಲ ಹರಿಯುವ ನದಿ ಇದ್ದಂತೆ. ಆದ್ದರಿಂದ ಅಧ್ಯಾಪಕರಾದವರು ಕೂಡ ಸತತ ಅಭ್ಯಾಸ, ನಿರಂತರ ಪರಿಶ್ರಮದಲ್ಲಿ ತೊಡಗಿದಾಗ ಯಶಸ್ವಿ ಅಧ್ಯಾಪಕನಾಗುತ್ತಾನೆ. ಭಾಷೆ ಜೀವಂತವಾಗಿ ಉಳಿಯುತ್ತದೆ ಎಂದರು.

ಇತ್ತೀಚಿನ ದಿನಗಳಲ್ಲಿ ಕನ್ನಡ ಭಾಷಾ ಅಧ್ಯಾಪಕರಲ್ಲಿ ಆತ್ಮ ವಿಶ್ವಾಸದ ಕೊರತೆ ಎದ್ದು ಕಾಣುತ್ತಿರುವುದನ್ನು ನೋಡುತ್ತಿದ್ದೇವೆ. ಶಿಕ್ಷಣ ಯಾವುದೇ ಇರಲಿ, ಮಾಧ್ಯಮ ಯಾವುದೇ ಇರಲಿ ಮೊದಲು ನಾವು ಭಾಷೆಯನ್ನು ಕಲಿಯಬೇಕು. ಭಾಷೆ ಇಲ್ಲದಿದ್ದರೆ ಶಿಕ್ಷಣ ಮುಂದುವರಿಸಲು ಸಾಧ್ಯವಿಲ್ಲ ಎಂದರು.

ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎಂ. ಮರಿಸ್ವಾಮಿ, ವಿಜಯ ವಿಠಲ ಕಾಲೇಜು ಪ್ರಾಂಶುಪಾಲ ಎಚ್. ಸತ್ಯಪ್ರಸಾದ್, ಕನ್ನಡ ಉಪನ್ಯಾಸಕರ ವೇದಿಕೆಯ ಅಧ್ಯಕ್ಷ ಡಾ.ನೀ.ಗೂ. ರಮೇಶ್, ಕವಿ ಡಾ. ಸಂತೋಷ್ ಚೊಕ್ಕಾಡಿ, ಬಾಲಸುಬ್ರಮಣ್ಯಂ, ಡಾ.ಕೆ. ಮಾಲತಿ, ರಮೇಶ್, ಮಹಾದೇವಸ್ವಾಮಿ, ನಾಗಯ್ಯ, ರೇಣುಕಾರಾಧ್ಯ, ಡಾ. ಚಿಕ್ಕಮಾದು, ಪುಟ್ಟಗೌರಮ್ಮ, ಮಹೇಶ್, ಎಚ್.ಆರ್. ಸುರೇಶ್ ಇದ್ದರು. ಹರೀಶ್ ಸ್ವಾಗತಿಸಿದರು. ಕೆ. ಮಾಲತಿ ನಿರೂಪಿಸಿದರು.

click me!