ಕೊರೋನಾ ವಾರಿಯರ್ಸ್‌ ಅಂತರಾಳದ ಮಾತು: 'ಒಂದೇ ಮನ್ಯಾಗಿದ್ರೂ ಅಪರಿಚಿತರಂತೆ ಇರ್ತೇನ್ರಿ'

By Kannadaprabha News  |  First Published Apr 17, 2020, 11:40 AM IST

ಕೊರೋನಾ ಸೋಂಕಿತರನ್ನು ಗುಣಪಡಿಸುವಲ್ಲಿ ವೈದ್ಯರ ಪಾಲು ಎಷ್ಟಿದೆಯೋ ಅಷ್ಟೇ ಮಹತ್ತರ ಪಾತ್ರ ನಿರ್ವಹಿಸುವುದು ದಾದಿಯರು| ಕಿಮ್ಸ್‌ನಲ್ಲಿ ಕೊರೋನಾ ವಿಭಾಗದಲ್ಲಿ ಕೆಲಸ ಮಾಡಲು ದಾದಿಯರದ್ದು ಮೂರು ತಂಡಗಳನ್ನಾಗಿ ಮಾಡಲಾಗಿದೆ|


ಶಿವಾನಂದ ಗೊಂಬಿ

ಹುಬ್ಬಳ್ಳಿ(ಏ.17): ಕೊರೋನಾ ವಿಭಾಗದಾಗ ಕೆಲಸ ಮಾಡಾಕ ಚಾಲೋ ಮಾಡಿದ ಮ್ಯಾಲೆ ಮಕ್ಕಳನ ಸದೇಕ್ ಹತ್ತಿರಾ ಬಿಟ್ಕೊಂಡಿಲ್ರಿ... ಅಮ್ಮಾ ಯಾಕ್ ನನ್ನ ಎತ್ತಕೊಳ್ತಾ ಇಲ್ಲ.. ನಿನ್ಜೊತಿನ ಮಲಗತೇನಮ್ಮಾ.. ಅಂತ ನನ್ನ ಸಣ್ಣ ಮಗಳು ಹೇಳ್ತಾಳೆ ಸಾರ್..!

Latest Videos

undefined

ಇದು ಕಿಮ್ಸ್‌ನಲ್ಲಿ ಕೊರೋನಾ ವಿಭಾಗದ ನರ್ಸಿಂಗ್‌ ಮೇಲುಸ್ತುವಾರಿಯಾಗಿ ಕಾರ್ಯ ನಿರ್ವಹಿಸುವ ಸ್ಟಾಫ್‌ ನರ್ಸ್ ಸುನಿತಾ ನಾಯ್ಕ ಹೇಳುವ ಮಾತಿದು. ಕೊರೋನಾ ಸೋಂಕಿತರನ್ನು ಗುಣಪಡಿಸುವಲ್ಲಿ ವೈದ್ಯರ ಪಾಲು ಎಷ್ಟಿದೆಯೋ ಅಷ್ಟೇ ಮಹತ್ತರ ಪಾತ್ರ ನಿರ್ವಹಿಸುವುದು ದಾದಿಯರು. ಕಿಮ್ಸ್‌ನಲ್ಲಿ ಕೊರೋನಾ ವಿಭಾಗದಲ್ಲಿ ಕೆಲಸ ಮಾಡಲು ದಾದಿಯರದ್ದು ಮೂರು ತಂಡಗಳನ್ನಾಗಿ ಮಾಡಲಾಗಿದೆ. 

ಧಾರವಾಡದ ಕೊರೋನಾ ಸೋಂಕಿತ ವ್ಯಕ್ತಿ ಗುಣಮುಖ, ವೈದ್ಯರು ಹೇಳಿದ ಕೊನೆ ಮಾತು!

ಬೆಳಿಗ್ಗೆ, ಮಧ್ಯಾಹ್ನ ಹಾಗೂ ರಾತ್ರಿ ಹೀಗೆ ಮೂರು ಶಿಫ್ಟ್‌ಗಳಲ್ಲಿ ಇವರು ಕೆಲಸ ಮಾಡುತ್ತಾರೆ. ಪ್ರತಿ ತಂಡದಲ್ಲಿ ಐವರು ದಾದಿಯರು ಇರುತ್ತಾರೆ. ಈ ಐವರಲ್ಲಿ ಇಬ್ಬರು ವಾರ್ಡ್‌ನ ಒಳಗೆ ಕೆಲಸ ಮಾಡಿದರೆ, ಇನ್ನೂ ಮೂವರು ವಾರ್ಡ್ ಹೊರಗೆ ಕರ್ತವ್ಯದಲ್ಲಿ ನಿರತರಾಗಿರುತ್ತಾರೆ. ಈ ತಂಡಗಳ ಕಾರ್ಯವೈಖರಿಯನ್ನು ನೋಡಿಕೊಳ್ಳಲು ಸುನಿತಾ ನಾಯ್ಕ ಅವರನ್ನು ಮೇಲುಸ್ತುವಾರಿಯನ್ನಾಗಿ ಮಾಡಿದ್ದಾರೆ. ಹಾಗೆ ನೋಡಿದರೆ ಏ.3ರವರೆಗೆ ಇವರನ್ನು ಮೇಲುಸ್ತುವಾರಿಯನ್ನಾಗಿ ಮಾಡಿರಲಿಲ್ಲ. ಕೆಲವೇ ಜನ ನಿಭಾಯಿಸುತ್ತಿದ್ದರು. ಸೋಂಕಿತರ ಸಂಖ್ಯೆ ಜಾಸ್ತಿ ಆದ ಬಳಿಕ ಇವರನ್ನು ಸುನಿತಾ ಅವರನ್ನು ಮೇಲುಸ್ತುವಾರಿಯನ್ನಾಗಿ ಮಾಡಿದರು.

ಮಕ್ಕಳನ್ನು ಹತ್ತಿರಕ್ಕೆ ಬಿಟ್ಟುಕೊಂಡಿಲ್ಲ;

ಕೊರೋನಾ ವಿಭಾಗದಲ್ಲಿ ಕೆಲಸ ಮಾಡಲು ಶುರು ಮಾಡಿದಾಗಿನಿಂದಲೂ ಇವರು ಮಕ್ಕಳನ್ನು ಹತ್ತಿರಕ್ಕೆ ಬಿಟ್ಟುಕೊಂಡಿಲ್ಲ. ಮನೆಯಲ್ಲೇ ಇದ್ದರೂ ಮಕ್ಕಳು, ಕುಟುಂಬಸ್ಥರಿಂದ ದೂರವೇ ಇದ್ದಾರೆ. ಪ್ರತ್ಯೇಕವಾದ ಕೊಠಡಿಯಲ್ಲೇ ಪರಸ್ಥಳಗಳಿಂದ ಬಂದ ಅತಿಥಿಗಳಂತೆ ವಾಸವಾಗಿದ್ದಾರೆ. ಇವರ ಎರಡನೆಯ ಮಗಳಿಗೆ ಬರೀ ಆರು ವರ್ಷವಂತೆ. ಆಕೆಯನ್ನೂ ಸುನಿತಾ ಹತ್ತಿರಕ್ಕೆ ಬಿಟ್ಟುಕೊಂಡಿಲ್ಲ. ಅದಕ್ಕೆ ಮಗಳು, "ಯಾಕಮ್ಮ ನನ್ನನ್ನು ಎತ್ತಿಕೊಳ್ತಾ ಇಲ್ಲ. ನನಗೂ ನಿನ್ಜೊತೆನೇ ಮಲಗಬೇಕಮ್ಮ ಎಂದು ಹಠ ಹಿಡಿತಾಳಂತೆ. ಬಾಲೆಗೆ ತಂದೆ ಸಮಾಧಾನ ಮಾಡಿದರೆ, ತಾಯಿ ದೂರದಿಂದಲೇ ರಮಿಸುತ್ತಾರಂತೆ. ಉಳಿದಂತೆ ಮಕ್ಕಳ ಆರೈಕೆಯನ್ನೆಲ್ಲ ಇವರ ಪತಿಯೇ ನಿಭಾಯಿಸುತ್ತಾರಂತೆ.

ಅವಕಾಶವಿದೆ ಇರಲ್ಲ:

ಆಸ್ಪತ್ರೆಯಲ್ಲೇ ಇರಲು ನರ್ಸ್‌ಗಳಿಗೂ ಅವಕಾಶವಿದೆ. ಆದರೆ ಮನೆಯಲ್ಲಿ ಮಕ್ಕಳು ಸೇರಿದಂತೆ ಕುಟುಂಬಸ್ಥರಿಗೆ ಅಡುಗೆ ಯಾರು ಮಾಡಬೇಕು. ಮನೆಗೆ ಹೋಗದಿದ್ದರೆ ಮಕ್ಕಳು, ಗಂಡ ಸೇರಿದಂತೆ ಕುಟುಂಬಸ್ಥರೆಲ್ಲ ಉಪವಾಸವೇ ಇರಬೇಕಾಗುತ್ತೆ. ಅದಕ್ಕಾಗಿಯೇ ಮನೆಗೆ ಬಂದು ಅಡುಗೆ ಮಾಡಿಟ್ಟು ಪ್ರತ್ಯೇಕ ಕೊಠಡಿಯಲ್ಲೇ ಉಳಿಯುತ್ತೇನೆ. ಯಾವುದೇ ಕಾರಣಕ್ಕೂ ಮಕ್ಕಳನ್ನು, ಇತರೆ ಕುಟುಂಬಸ್ಥರ ಸಮೀಪ ಹೋಗಿಲ್ಲ. ಮನೆಯಲ್ಲೇ ಇದ್ದರೂ ಸ್ವಯಂ ಕ್ವಾರಂಟೈನ್‌ನಂತೆ ಬದುಕು ಸಾಗಿಸುತ್ತಿದ್ದೇನೆ ಎಂದು ನುಡಿಯುತ್ತಾರೆ.

ಎಲ್ಲರೂ ಹೀಗೆ..

ಇದು ನನ್ನೊಬ್ಬಳ ಕಥೆಯಲ್ಲ. ಕಿಮ್ಸ್‌ನಲ್ಲಿ ಕೊರೋನಾ ವಿಭಾಗದಲ್ಲಿ ಕೆಲಸ ಮಾಡುವ ಎಲ್ಲರೂ ಇದೇ ರೀತಿ ಮಾಡುತ್ತಾರೆ. ಅಕ್ಷರಶಃ ಎಲ್ಲರೂ ಕುಟುಂಬಸ್ಥರಿಂದ ದೂರವೇ ಇರುತ್ತೇವೆ. ಇದು ನಮಗೆ ಅನಿವಾರ್ಯ ಕೂಡ. ನಾವು ಸರ್ಕಾರಿ, ಜನರ ಸೇವಕರು. ಸೋಂಕಿತರಿಗೆ ಯಾವುದೇ ಹೆಚ್ಚು ಕಡಿಮೆಯಾಗದಂತೆ ನೋಡಿಕೊಂಡು ಗುಣಮುಖ ಮಾಡಿ ಕಳುಹಿಸುವದು ನಮ್ಮ ಕರ್ತವ್ಯ ಎಂದು ತಿಳಿಸುತ್ತಾರೆ.

ಮೊದ ಮೊದಲಿಗೆ ನಮಗೂ ಭಯ ಕಾಡುತ್ತಿತ್ತು. ಹೊಸ ಬಗೆಯ ಸೋಂಕು. ಚಿಕಿತ್ಸೆ ನೀಡುವಾಗ ನಮಗೆ ಬಂದರೆ ಹೇಗಪ್ಪ ಎಂಬ ಆತಂಕದಲ್ಲಿದ್ದೇವು. ಆದರೆ ನಮ್ಮ ನಿರ್ದೇಶಕರು, ವೈದ್ಯರು ತುಂಬಿದ ಧೈರ್ಯ. ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ತಿಳಿಸಿದ ಮೇಲೆ ಧೈರ್ಯ ಬಂತು. ಮನೋಬಲ ಹೆಚ್ಚಾಯಿತು. ಅವರ ಹೇಳಿದಂತೆ ಮುನ್ನೆಚ್ಚರಿಕೆ ಕ್ರಮಕೈಗೊಂಡು ನಿರ್ಭಯವಾಗಿ ಕೆಲಸ ನಿರ್ವಹಿಸುತ್ತಿದ್ದೇವೆ ಎಂದು ಆತ್ಮವಿಶ್ವಾಸದಿಂದ ನುಡಿಯುತ್ತಾರೆ.

ಗುಣಮುಖರಾದಾಗ ಖುಷಿ:

ನಾವು ಕುಟುಂಬಸ್ಥರೊಂದಿಗೆ ಸರಿಯಾಗಿ ಮಾತನಾಡಲು ಆಗಲ್ಲ. ಸಮೀಪಕ್ಕೆ ಕರೆದುಕೊಳ್ಳಲು ಆಗಲ್ಲ. ಆ ಬೇಸರ ಇದ್ದೇ ಇರುತ್ತದೆ. ಆದರೆ ಇದೆಲ್ಲಕ್ಕಿಂತ ಖುಷಿ. ಹೊಸಯಲ್ಲಾಪುರದ ಸೋಂಕಿತ ಬಿಡುಗಡೆಯಾದಾಗ ಪಟ್ಟ ಸಂಭ್ರಮ ಅಷ್ಟಿಷ್ಟಲ್ಲ. ಈಗಲೂ ದಿನೇ ದಿನೇ ಸೋಂಕಿತರು ಚೇತರಿಸಿಕೊಳ್ಳುವುದನ್ನು ನೋಡಿದಾಗ ಹೆಚ್ಚು ಖುಷಿಯಾಗುತ್ತೆ. ಮಕ್ಕಳನ್ನು, ಕುಟುಂಬಸ್ಥರನ್ನು ದೂರವಿಟ್ಟು ಕೆಲಸ ಮಾಡಿದ್ದು ಸಾರ್ಥಕವೆನಿಸುತ್ತದೆ. ಸಾರ್ವಜನಿಕರು ಹೆಚ್ಚೆಚ್ಚು ಮನೆಯಲ್ಲೇ ಇದ್ದು ಈ ಸೋಂಕು ತಗುಲದಂತೆ ನೋಡಿಕೊಳ್ಳಬೇಕು. ಅದೇ ಈ ಸಮಾಜಕ್ಕೆ ಮಾಡುವ ದೊಡ್ಡ ಉಪಕಾರ ಎಂದು ನುಡಿಯುತ್ತಾರೆ.
ಒಟ್ಟಿನಲ್ಲಿ ವೈದ್ಯರಿಗೆ ಹೆಗಲಿಗೆ ಹೆಗಲು ಕೊಟ್ಟು ಕೊರೋನಾ ವಿರುದ್ಧ ಹೋರಾಟ ನಡೆಸುತ್ತಿರುವ ದಾದಿಯರಿಗೆ ದೊಡ್ಡ ಸಲಾಂ ಎಂದ್ಹೇಳುವುದು ನಮ್ಮೆಲ್ಲರ ಕರ್ತವ್ಯ ಎಂದರೆ ತಪ್ಪಾಗಲಿಕ್ಕಿಲ್ಲ

ಮನೆಗೆ ಹೋಗದಿದ್ದರೆ ಮಕ್ಕಳು ಉಪವಾಸ ಇರಬೇಕಾಗುತ್ತೆ. ಮನೆಯಲ್ಲಿ ಅಡುಗೆ ಮಾಡಲು ಯಾರು ಇಲ್ಲ ಎಂಬ ಕಾರಣದಿಂದ ಮಾತ್ರ ಹೋಗುತ್ತೇವೆ. ಆದರೆ ಮಕ್ಕಳನ್ನು ಯಾವುದೇ ಕಾರಣಕ್ಕೂ ಹತ್ತಿರ ಕೂಡ ಬಿಟ್ಟುಕೊಂಡಿಲ್ಲ. ಆದರೆ ಸೋಂಕಿತರು ಗುಣಮುಖರಾದಾಗ, ಚೇತರಿಸಿಕೊಳ್ಳುವುದನ್ನು ನೋಡಿದಾಗ ನಮ್ಮ ಶ್ರಮ ಸಾರ್ಥಕವೆನಿಸುತ್ತೆ. ಆಗುವ ಖುಷಿ ಅಷ್ಟಿಷ್ಟಲ್ಲ ಎಂದು ಕಿಮ್ಸ್ ಕೋವಿಡ್ ನರ್ಸಿಂಗ್ ವಿಭಾಗದ ಮೇಲುಸ್ತುವಾರಿ ಸುನಿತಾ ನಾಯ್ಕ ಹೇಳಿದ್ದಾರೆ.

click me!