ದಕ್ಷಿಣ ಶಿಕ್ಷಕರ ಕ್ಷೇತ್ರ : ಬಿಜೆಪಿ- ಜೆಡಿಎಸ್ ಮೈತ್ರಿ ಮುಂದುವರಿಯುತ್ತಾ?, ಅಭ್ಯರ್ಥಿ ಯಾರು?

By Kannadaprabha NewsFirst Published May 3, 2024, 11:51 AM IST
Highlights

ಮೈಸೂರು, ಚಾಮರಾಜನಗರ, ಮಂಡ್ಯ ಹಾಗೂ ಹಾಸನ ಜಿಲ್ಲೆಗಳನ್ನು ಒಳಗೊಂಡ ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಜೂ.3ರಂದು ಚುನಾವಣೆ ನಡೆಯಲಿದೆ.

 ಅಂಶಿ ಪ್ರಸನ್ನಕುಮಾರ್

 ಮೈಸೂರು :  ಮೈಸೂರು, ಚಾಮರಾಜನಗರ, ಮಂಡ್ಯ ಹಾಗೂ ಹಾಸನ ಜಿಲ್ಲೆಗಳನ್ನು ಒಳಗೊಂಡ ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಜೂ.3ರಂದು ಚುನಾವಣೆ ನಡೆಯಲಿದೆ.

Latest Videos

ನಿಂದ ಮಾಜಿ ಉಪ ಸಭಾಪತಿ ಮರಿತಿಬ್ಬೇಗೌಡ ಕಣಕ್ಕಿಳಿಯಲಿದ್ದು, ನಿಂದ ಮಾಜಿ ಸದಸ್ಯ ಕೆ.ಟಿ. ಶ್ರೀಕಂಠೇಗೌಡ, ವಿವೇಕಾನಂದ, ಬಿಜೆಪಿಯಿಂದ ಮೈವಿವಿ ಸಿಂಡಿಕೇಟ್ ಮಾಜಿ ಸದಸ್ಯ ಡಾ.ಈ.ಸಿ.ನಿಂಗರಾಜ್‌ಗೌಡ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ.

ಮರಿತಿಬ್ಬೇಗೌಡ ಅವರು ಈಗಾಗಲೇ ಸತತ ನಾಲ್ಕು ಬಾರಿ ಆಯ್ಕೆಯಾಗಿದ್ದಾರೆ. 2000- ಕಾಂಗ್ರೆಸ್, 2006- ಪಕ್ಷೇತರ, 2012, 2018- ಜೆಡಿಎಸ್. ಈ ಬಾರಿ ಕಾಂಗ್ರೆಸ್‌ನಿಂದ ಸ್ಪರ್ಧಿಸುವ ಸಲುವಾಗಿಯೇ ಅವರು ಮಾ.21 ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

2000ರಲ್ಲಿ ಈ ಕ್ಷೇತ್ರದ ಚುನಾವಣೆ ನಡೆದಾಗ ಕಾಂಗ್ರೆಸ್ ಟಿಕೆಟ್ ಯಾರಿಗೂ ಬೇಡವಾಗಿತ್ತು. ಏಕೆಂದರೆ ಸುಶಿಕ್ಷತರ ಕ್ಷೇತ್ರದಲ್ಲಿ ಜನತಾ ಪರಿವಾರ ಹಾಗೂ ಬಿಜೆಪಿಯದ್ದೇ ಆಟ. ಕಾಂಗ್ರೆಸ್ ಗೆಲ್ಲುವುದಿಲ್ಲ ಎಂಬುದು ಇದಕ್ಕೆ ಕಾರಣ. ಆದರೆ ಇದನ್ನು ಸುಳ್ಳು ಮಾಡುವಂತೆ ಅಚ್ಚರಿಯ ಫಲಿತಾಂಶಕ್ಕೆ ಕಾರಣರಾದವರು ಮರಿತಿಬ್ಬೇಗೌಡರು. ಈ ಭಾಗದ ಶಿಕ್ಷಕರ ಹಾಗೂ ಪದವೀಧರ ಕ್ಷೇತ್ರಗಳಲ್ಲಿ ಕಾಂಗ್ರೆಸ್ಗೆ ಮೊದಲ ಗೆಲವು ತಂದುಕೊಟ್ಟ ಹೆಗ್ಗಳಿಕೆಯೂ ಅವರದೇ.

ನಂತರ ಎಚ್.ಡಿ. ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ ಜೆಡಿಎಸ್ ಜೊತೆ ಗುರುತಿಸಿಕೊಂಡಿದ್ದರು. ಆದರೆ, ಅವರಿಗೆ 2006ರಲ್ಲಿ ಟಿಕೆಟ್ ಸಿಗಲಿಲ್ಲ. ಬದಲಿಗೆ ಶಿಕ್ಷಣ ಇಲಾಖೆಯ ನಿವೃತ್ತ ನಿರ್ದೇಶಕಿ ಪಿ.ಶಾರದಮ್ಮ ಅವರಿಗೆ ಟಿಕೆಟ್ ನೀಡಲಾಗಿತ್ತು. ಆದರೂ ಮರಿತಿಬ್ಬೇಗೌಡರು ಎದೆಗುಂದೆ ಶಿಕ್ಷಕರ ವೇದಿಕೆಯ ಹೆಸರಿನಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ, ಕಾಂಗ್ರೆಸ್, ಬಿಜೆಪಿ, ಜೆಡಿಎಸ್- ಹೀಗೆ ಮೂರು ಪಕ್ಷಗಳ ಅಭ್ಯರ್ಥಿಗಳನ್ನು ಸೋಲಿಸಿ, ಎರಡನೇ ಬಾರಿ ಆಯ್ಕೆಯಾದರು.

ಮತ್ತೆ ಜೆಡಿಸ್‌ನಲ್ಲಿ ಗುರುತಿಸಿಕೊಂಡ ಅವರು 2012ರಲ್ಲಿ ಮೂರನೇ ಬಾರಿ ಗೆದ್ದು, ಹ್ಯಾಟ್ರಿಕ್ ವೀರ ಎನಿಸಿಕೊಂಡರು.

ಉಪ ಸಭಾಪತಿಯೂ ಆದರು. 2018ರಲ್ಲಿ ಅವರು ಜೆಡಿಎಸ್ ಅಭ್ಯರ್ಥಿಯಾಗಿ ಸತತ ನಾಲ್ಕನೇ ಬಾರಿಗೆ ಆಯ್ಕೆಯಾದರು.ದಕ್ಷಿಣ ಪದವೀಧರ ಕ್ಷೇತ್ರದಿಂದ 2022ರಲ್ಲಿ ತಮ್ಮ ಆಪ್ತ ಜಯರಾಂ ಕೀಲಾರ ಅವರಿಗೆ ಟಿಕೆಟ್ ಬಯಸಿದ್ದರು. ಆದರೆ, ವರಿಷ್ಠರು ರಾಜ್ಯ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಎಚ್.ಕೆ.ರಾಮು ಅವರಿಗೆ ಟಿಕೆಟ್ ನೀಡಿದ್ದನ್ನು ವಿರೋಧಿಸಿ, ಪಕ್ಷದಿಂದ ದೂರ ಸರಿದರು. ಕಾಂಗ್ರೆಸ್ ಅಭ್ಯರ್ಥಿ ಮಧು ಜಿ.ಮಾದೇಗೌಡರ ಪರ ಕೆಲಸ ಮಾಡಿದ್ದರು. 2023ರ ಚುನಾವಣೆಯಲ್ಲಿ ಕೂಡ ಕಾಂಗ್ರೆಸ್ ಪರ ಪ್ರಚಾರ ಮಾಡಿದ್ದರು. ತಮ್ಮ ಅವಧಿ ಮುಗಿದು, ಚುನಾವಣೆ ಸಮೀಪಿಸಿದ್ದರಿಂದಾಗಿ ಅವರು ತಾಂತ್ರಿಕ ಕಾರಣದಿಂದ ಸಮಸ್ಯೆಯಾಗಬಾರದು ಎಂಬ ಕಾರಣದಿಂದ ಮುಂಚಿತವಾಗಿ ರಾಜೀನಾಮೆ ನೀಡಿ, ಕಾಂಗ್ರೆಸ್ ಸೇರಿದರು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮೈಸೂರು, ಮಂಡ್ಯ, ಚಾಮರಾಜನಗರದಲ್ಲಿ ಕಾಂಗ್ರೆಸ್ ಪರ ಪ್ರಚಾರ ಮಾಡಿದರು.

ಕಳೆದ ಎರಡು ಚುನಾವಣೆಗಳಲ್ಲೂ ಮರಿತಿಬ್ಬೇಗೌಡರ ಎದುರಾಳಿಯಾಗಿದ್ದ ಎಂ. ಲಕ್ಷ್ಮಣ ಈ ಬಾರಿ ಮೈಸೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ. ಕಳೆದ ಬಾರಿ ಬಿಜೆಪಿಯಿಂದ ಜೆಎಸ್ಎಸ್ ಮಹಾವಿದ್ಯಾಪೀಠದ ಕಾಲೇಜು ಶಿಕ್ಷಣ ವಿಭಾಗದ ಸಹಾಯಕ ನಿರ್ದೇಶಕ ಬಿ.ನಿರಂಜಮೂರ್ತಿ ಅಭ್ಯರ್ಥಿಯಾಗಿದ್ದರು.

ದಕ್ಷಿಣ ಪದವೀಧರ ಕ್ಷೇತ್ರದಲ್ಲಿ ಬಿಜೆಪಿ ಹಲವಾರು ಬಾರಿ ಗೆದ್ದಿದೆ. ಆದರೆ ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ ಈವರೆಗೆ ಗೆಲ್ಲಲು ಸಾಧ್ಯವಾಗಿಲ್ಲ. ಐದು ಬಾರಿ ಪಕ್ಷೇತರರು, ಮೂರು ಬಾರಿ ಜನತಾ ಪರಿವಾರ, ಒಮ್ಮೆ ಕಾಂಗ್ರೆಸ್ ಗೆದ್ದಿದೆ. ಆದರೆ ಈವರೆಗೆ ಬಿಜೆಪಿ ಗೆದ್ದಿಲ್ಲ.

ದಕ್ಷಿಣ ಪದವೀಧರ ಕ್ಷೇತ್ರದಿಂದ ಎರಡು ಬಾರಿ ಗೆದ್ದಿದ್ದ ಕೆ.ಟಿ.ಶ್ರೀಕಂಠೇಗೌಡರು ಕಳೆದ ಬಾರಿ ಸ್ಪರ್ಧಿಸಿರಲಿಲ್ಲ. ಆದರೆ, ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಈ ಬಾರಿ ಶಿಕ್ಷಕರ ಕ್ಷೇತ್ರದಿಂದ ಕಣಕ್ಕಿಳಿಯಲು ಪ್ರಯತ್ನಿಸಿದ್ದಾರೆ. ಅವರೊಂದಿಗೆ ಮಾಜಿ ಸಚಿವ ಸಾ.ರಾ.ಮಹೇಶ್ ಆಪ್ತ ವಿವೇಕಾನಂದ ಟಿಕೆಟ್‌ಗೆ ಪ್ರಯತ್ನಿಸುತ್ತಿದ್ದಾರೆ. ಬಿಜೆಪಿಯಿಂದ ಸಿಂಡಿಕೇಟ್ ಮಾಜಿ ಸದಸ್ಯ ಡಾ.ಈ.ಸಿ. ನಿಂಗರಾಜ್ ಗೌಡ ಪ್ರಬಲ ಆಕಾಂಕ್ಷಿ.

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು, ಈ ಚುನಾವಣೆಗೂ ಮುಂದುವರಿಯುವುದೇ ಕಾದು ನೋಡಬೇಕು. ಇದಲ್ಲದೇ ಈ ಎರಡು ಪಕ್ಷಗಳಲ್ಲೂ ಇನ್ನೂ ಕೆಲವರು ಟಿಕೆಟ್ಗೆ ಯತ್ನಿಸಬಹುದು.

ಈವರೆಗೆ ಪ್ರತಿನಿಧಿಸಿದವರು

ಫೋಟೋ 2 ಎಂವೈಎಸ್ 42

ಎಂ. ಸತ್ಯನಾರಾಯಣ ರಾವ್, ಎಸ್.ಚನ್ನಬಸವಯ್ಯ, ಕೆ.ಎಸ್.ಸಚ್ಚಿದಾನಂದ, ಮರಿತಿಬ್ಬೇಗೌಡ

1970- ಎಂ ಸತ್ಯನಾರಾಯಣ ರಾವ್ (ಪಕ್ಷೇತರ)

1976-ಎಸ್. ಚನ್ನಬಸವಯ್ಯ (ಪಕ್ಷೇತರ)

1982- ಎಸ್. ಚನ್ನಬಸವಯ್ಯ (ಪಕ್ಷೇತರ)

1988- ಟಿ.ಕೆ. ಚಿನ್ನಸ್ವಾಮಿ (ಪ್ರೌಢಶಾಲಾ ಸಹ ಶಿಕ್ಷಕರ ಸಂಘ)

ದಕ್ಷಿಣ ಶಿಕ್ಷಕರ ಕ್ಷೇತ್ರ ಎಂದು ಬದಲಾದ ನಂತರ...

1994- ಕೆ.ಎಸ್. ಸಚ್ಚಿದಾನಂದ (ಜನತಾದಳ)

2000- ಮರಿತಿಬ್ಬೇಗೌಡ (ಕಾಂಗ್ರೆಸ್)

2006- ಮರಿತಿಬ್ಹೇಗೌಡ (ಪಕ್ಷೇತರ)

2012- ಮರಿತಿಬ್ಬೇಗೌಡ (ಜೆಡಿಎಸ್)

2018- ಮರಿತಿಬ್ಬೇಗೌಡ (ಜೆಡಿಎಸ್)

ಬಾಕ್ಸ್

ಈ ಬಾರಿ ಚುನಾವಣಾ ವೇಳಾಪಟ್ಟಿ

ಅಧಿಸೂಚನೆ- ಮೇ 9

ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ- ಮೇ 16

ನಾಮಪತ್ರಗಳ ಪರಿಶೀಲನೆ- ಮೇ 17

ನಾಮಪತ್ರಗಳ ವಾಪಸ್‌ ಕೊನೆಯ ದಿನ- ಮೇ 20

ಮತದಾನ- ಜೂ.3

ಮತ ಎಣಿಕೆ- ಜೂ.6

click me!