'ಬೆಡ್‌ ಇಲ್ಲ': ಮಂಗಳೂರಲ್ಲೂ ಶುರುವಾಯ್ತು ಹೊಸ ಗೋಳು, ಪ್ರಭಾವಿಗಳಿಗಷ್ಟೇ ಸೌಲಭ್ಯ

By Kannadaprabha NewsFirst Published Jul 31, 2020, 12:13 PM IST
Highlights

ಮಂಗಳೂರಿನ ಖಾಸಗಿ ಆಸ್ಪತ್ರೆಗಳ ಹೊಸ ವರಸೆ ಇದು. ಕ್ಯಾನ್ಸರ್‌, ಹೃದಯ ತೊಂದರೆ ಇತ್ಯಾದಿ ಗಂಭೀರ ರೋಗ ಉಲ್ಭಣಿಸಿ ಮರಣಶಯ್ಯೆಯಲ್ಲಿರುವವರಿಗೂ ಬಹುತೇಕ ಖಾಸಗಿ ಆಸ್ಪತ್ರೆಗಳು ನಿರ್ದಾಕ್ಷಿಣ್ಯವಾಗಿ ಚಿಕಿತ್ಸೆ ನಿರಾಕರಿಸುತ್ತಿವೆ. ಕಳೆದೆರಡು ದಿನಗಳಲ್ಲಿ ಇಂತಹ ನಾಲ್ಕೈದು ಘಟನೆಗಳು ನಡೆದಿದ್ದು, ಜನಸಾಮಾನ್ಯರು- ಅದರಲ್ಲೂ ಬಡವರು ಚಿಕಿತ್ಸೆ ಸಿಗದೆ ಹೈರಾಣಾಗುತ್ತಿದ್ದಾರೆ.

ಮಂಗಳೂರು(ಜು.31): ಮಂಗಳೂರಿನ ಖಾಸಗಿ ಆಸ್ಪತ್ರೆಗಳ ಹೊಸ ವರಸೆ ಇದು. ಕ್ಯಾನ್ಸರ್‌, ಹೃದಯ ತೊಂದರೆ ಇತ್ಯಾದಿ ಗಂಭೀರ ರೋಗ ಉಲ್ಭಣಿಸಿ ಮರಣಶಯ್ಯೆಯಲ್ಲಿರುವವರಿಗೂ ಬಹುತೇಕ ಖಾಸಗಿ ಆಸ್ಪತ್ರೆಗಳು ನಿರ್ದಾಕ್ಷಿಣ್ಯವಾಗಿ ಚಿಕಿತ್ಸೆ ನಿರಾಕರಿಸುತ್ತಿವೆ. ಕಳೆದೆರಡು ದಿನಗಳಲ್ಲಿ ಇಂತಹ ನಾಲ್ಕೈದು ಘಟನೆಗಳು ನಡೆದಿದ್ದು, ಜನಸಾಮಾನ್ಯರು- ಅದರಲ್ಲೂ ಬಡವರು ಚಿಕಿತ್ಸೆ ಸಿಗದೆ ಹೈರಾಣಾಗುತ್ತಿದ್ದಾರೆ.

ಕೊರೋನಾದ ಈ ಸಂಕಷ್ಟದ ಸಮಯದಲ್ಲಿ ಯಾವುದೇ ಆಸ್ಪತ್ರೆಯಲ್ಲಿ ಯಾವುದೇ ರೋಗಕ್ಕೆ ಚಿಕಿತ್ಸೆ ನಿರಾಕರಿಸುವಂತಿಲ್ಲ ಎಂದು ಸಚಿವರಾದಿಯಾಗಿ ಜಿಲ್ಲಾಡಳಿತ ಸ್ಪಷ್ಟವಾಗಿ ಹೇಳಿದ್ದರೂ, ಮಂಗಳೂರಿನ ಖಾಸಗಿ ಆಸ್ಪತ್ರೆಗಳು ಮಾತ್ರ ಜನಸಾಮಾನ್ಯರನ್ನು ಹತ್ತಿರಕ್ಕೂ ಸೇರಿಸುತ್ತಿಲ್ಲ. ತಿಂಗಳ ಹಿಂದೆ ಕೊರೋನಾ ಚಿಕಿತ್ಸೆಗೆ ಭಾರೀ ಬಿಲ್‌ ವಿಧಿಸಿ ಕೆಲವು ಖಾಸಗಿ ಆಸ್ಪತ್ರೆಗಳು ಚರ್ಚೆಗೆ ಗ್ರಾಸವಾಗಿದ್ದವು. ಇದೀಗ ಜಿಲ್ಲಾಡಳಿತದ ಎಚ್ಚರಿಕೆಯನ್ನೂ ಮೀರಿ ರೋಗಿಗಳನ್ನು ಸೇರಿಸಿಕೊಳ್ಳಲು ‘ಬೆಡ್‌ ಖಾಲಿ ಇಲ್ಲ’ ಎನ್ನುವ ಸಬೂಬು ಹೇಳುತ್ತಿವೆ. ಆದರೆ ಪ್ರಭಾವ ಬಳಸಿದರೆ ಅದುವರೆಗೂ ಇಲ್ಲದ ಬೆಡ್‌ ಕೂಡಲೆ ಪ್ರತ್ಯಕ್ಷವಾಗುತ್ತದೆ!

 

ಒಂದು ಆಸ್ಪತ್ರೆ ಅಲ್ಲ, ಬಹುತೇಕ ಎಲ್ಲ ಖಾಸಗಿ ಆಸ್ಪತ್ರೆಗಳದ್ದು ಕೂಡ ಇದೇ ಉತ್ತರ. ಚಿಕಿತ್ಸೆ ಕೊಡಲ್ಲ ಎನ್ನುವುದರ ಬದಲು ಬೆಡ್‌ ಖಾಲಿ ಇಲ್ಲ ಎನ್ನುತ್ತಾರೆ ಎಂದು ನೊಂದ ಸಂತ್ರಸ್ತರನೇಕರು ‘ಕನ್ನಡಪ್ರಭ’ದೊಂದಿಗೆ ಅಳಲು ತೋಡಿಕೊಂಡಿದ್ದಾರೆ.

ಇಲ್ಲೂ ಇನ್ಫು$್ಲ್ಯಯೆನ್ಸ್‌!: ಕಳೆದ ಎರಡು ದಿನಗಳಲ್ಲಿ ಮಂಗಳೂರಿನಲ್ಲಿ ಚಿಕಿತ್ಸೆ ನಿರಾಕರಣೆಯ ನಾಲ್ಕೈದು ಪ್ರಕರಣಗಳು ನಡೆದಿರುವುದು ಬೆಳಕಿಗೆ ಬಂದಿದೆ. ಪ್ರಭಾವ ಬೀರಿದವರಿಗೆ ಮಾತ್ರ ಬೆಡ್‌ ಕೊಟ್ಟಿದ್ದಾರೆ. ಒಬ್ಬರು ಬೆಳ್ತಂಗಡಿಯ 60 ವರ್ಷದ ಕ್ಯಾನ್ಸರ್‌ ವ್ಯಕ್ತಿ ರೋಗ ಉಲ್ಭಣಿಸಿದ್ದರಿಂದ ಉಜಿರೆಯ ಖಾಸಗಿ ಆಸ್ಪತ್ರೆಗೆ ತೆರಳಿದ್ದರು. ಅಲ್ಲಿ ಚಿಕಿತ್ಸೆ ಕೊಡಲು ನಿರಾಕರಿಸಿದ್ದಕ್ಕೆ ರೋಗಿಯನ್ನು ಬಗಲಲ್ಲಿಟ್ಟುಕೊಂಡೇ ಅವರ ಮಗ ಮಂಗಳೂರಿನ ನಾಲ್ಕೈದು ಆಸ್ಪತ್ರೆಗಳ ಬಾಗಿಲು ತಟ್ಟಿದ್ದಾರೆ. ಎಲ್ಲಿ ಹೋದರೂ ‘ಬೆಡ್‌ ಖಾಲಿ ಇಲ್ಲ’ ಎಂಬ ಸಿದ್ಧ ಉತ್ತರ, ಬೇರೆ ಯಾವುದೇ ಕಾರಣ ನೀಡಿಲ್ಲ. ಒಂದು ಆಸ್ಪತ್ರೆಯಲ್ಲಿ ತಕ್ಷಣದ ಚಿಕಿತ್ಸೆ ನೀಡಿ 8 ಸಾವಿರ ರು.ಬಿಲ್‌ ಕೊಟ್ಟರೂ ದಾಖಲಿಸಿಕೊಳ್ಳಲು ಒಪ್ಪಲಿಲ್ಲ. ಕೊನೆಗೆ ಪರಿಚಿತ ಪ್ರಭಾವಿ ವ್ಯಕ್ತಿಯನ್ನು ಸಂಪರ್ಕಿಸಿ ಅವರ ಮೂಲಕ ಒಂದು ಆಸ್ಪತ್ರೆಯಲ್ಲಿ ಬೆಡ್‌ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಅವಕಾಶ ಇದ್ದರೂ ಇಎಸ್‌ಐ ಸೌಲಭ್ಯದಡಿ ಚಿಕಿತ್ಸೆ ಕೊಡಲು ಆಸ್ಪತ್ರೆಯವರು ಒಪ್ಪುತ್ತಲೇ ಇಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.

 

ಚಿಕಿತ್ಸೆ ಸಿಗದೆ ಸಾವು: ಇನ್ನೊಂದು ಕರುಣಾಜನಕ ಪ್ರಕರಣದಲ್ಲಿ ತೀವ್ರ ಜ್ವರದಿಂದ ಬಳಲುತ್ತಿದ್ದ ಪಡುಬಿದ್ರಿಯ ಮೀನುಗಾರರೊಬ್ಬರು ಚಿಕಿತ್ಸೆ ಸಿಗದೆ ದಾರುಣವಾಗಿ ಮಾರ್ಗಮಧ್ಯೆಯೇ ಅಸುನೀಗಿದ್ದಾರೆ. ಆದರೆ ಸತ್ತ ಬಳಿಕವೂ ಈ ಬಡ ಕುಟುಂಬ 20 ಸಾವಿರ ರು.ಗೂ ಅಧಿಕ ಬಿಲ್‌ನ್ನು (ಕೊರೋನಾ ಪರೀಕ್ಷೆ, ಪಿಪಿಇ ಕಿಟ್‌ ಶವಾಗಾರದ ವೆಚ್ಚ ಇತ್ಯಾದಿ) ಆಸ್ಪತ್ರೆಗೆ ಕಟ್ಟಬೇಕಾಯಿತು. ಸರ್ಕಾರದ ವತಿಯಿಂದ ಕೋವಿಡ್‌ ಪಾಸಿಟಿವ್‌ ಅಂತ್ಯಸಂಸ್ಕಾರ ನಡೆಯಬೇಕಾಗಿದ್ದರೂ ಇಲ್ಲಿ ಪಿಪಿಇ ಕಿಟ್‌ಗಾಗಿ 8500 ರು.ಗಳನ್ನು ಈ ಕುಟುಂಬ ಪಾವತಿಸಿದೆ. ಮತ್ತೊಂದು ಪ್ರಕರಣದಲ್ಲಿ ಎದೆ ನೋವಿನಿಂದ ಬಳಲುತ್ತಿದ್ದ ಪಾಂಡೇಶ್ವರದ ಬಡ ಯುವಕ, ಬೋಳಾರದ ಇನ್ನೊಬ್ಬ ವ್ಯಕ್ತಿಗೂ ಆಸ್ಪತ್ರೆಗಳು ದಾಖಲಿಸಿಕೊಂಡಿರಲಿಲ್ಲ. ಕೊನೆಗೆ ಯಾರಾರ‍ಯರನ್ನೋ ಅಂಗಲಾಚಿ ಶಾಸಕ ಯು.ಟಿ. ಖಾದರ್‌ ಅವರನ್ನು ಸಂಪರ್ಕಿಸಿದ್ದಾರೆ. ಖಾದರ್‌ ತುರ್ತು ಸ್ಪಂದನೆಯಿಂದ ದಾಖಲಾಗಿದ್ದಾರೆ.

ಕೊರೋನಾ ವರದಿ ಬಳಿಕ ಚಿಕಿತ್ಸೆ: ಪ್ರಭಾವ ಬೀರಿ ಆಸ್ಪತ್ರೆ ಸೇರಿದರೂ ಕೊರೋನಾ ಟೆಸ್ಟ್‌ ರಿಪೋರ್ಟ್‌ ಬರಲು ಎರಡು ದಿನ ಕಾಯಬೇಕು. ಅಲ್ಲಿಯವರೆಗೆ ರೋಗಕ್ಕೆ ಸರಿಯಾದ ಚಿಕಿತ್ಸೆಯೂ ಸಿಗಲ್ಲ ಎನ್ನುವ ಆರೋಪ ಸಂತ್ರಸ್ತ ಕುಟುಂಬಗಳಿಂದ ಕೇಳಿಬಂದಿದೆ. ಸಾವಿರದ ಲೆಕ್ಕದಲ್ಲಿ ರಾರ‍ಯಪಿಡ್‌ ಆಂಟಿಜನ್‌ ಕಿಟ್‌ ಬಂದಿದೆ ಎಂದು ಜಿಲ್ಲಾಡಳಿತ ಲೆಕ್ಕ ನೀಡುತ್ತಿದ್ದರೂ, ತುರ್ತು ಚಿಕಿತ್ಸೆ ಅಗತ್ಯವಿರುವ ಬಡ ರೋಗಿಗಳಿಗೆ ಮಾತ್ರ ಈ ಟೆಸ್ಟ್‌ ಕಿಟ್‌ನ ಪ್ರಯೋಜನ ಸಿಕ್ಕಿಲ್ಲ.

 

ಕ್ಯಾನ್ಸರ್‌ನಿಂದ ಬಳಲುತ್ತಿದ್ದ ನಮ್ಮ ದೊಡ್ಡಪ್ಪನನ್ನು ಅವರ ಮಗ ಕರೆದುಕೊಂಡು ನಾಲ್ಕೈದು ಆಸ್ಪತ್ರೆಗಳಿಗೆ ಹೋದರೂ ಬೆಡ್‌ ಖಾಲಿ ಇಲ್ಲ ಎಂದು ವಾಪಸ್‌ ಕಳುಹಿಸಿದರು. ಕೊನೆಗೆ ದಾರಿ ಕಾರಣದೆ ಪರಿಚಿತರೊಬ್ಬರ ಮುಖಾಂತರ ಪ್ರಭಾವ ಬೀರಿದ್ದಕ್ಕೆ ಒಂದು ಆಸ್ಪತ್ರೆ ಕೂಡಲೆ ದಾಖಲಿಸಿದೆ ಎಂದು ಬೆಳ್ತಂಗಡಿಯ ಕ್ಯಾನ್ಸರ್‌ ಪೀಡಿತ ವ್ಯಕ್ತಿಯ ಸಂಬಂಧಿ ತಿಳಿಸಿದ್ದಾರೆ.

ಖಾಸಗಿ ಆಸ್ಪತ್ರೆಗಳು ರೋಗಿಗಳನ್ನು ದಾಖಲು ಮಾಡುತ್ತಿಲ್ಲ ಎಂದಾದರೆ ಸಂತ್ರಸ್ತರು ನೇರವಾಗಿ ನನಗೆ ಅಥವಾ ಜಿಲ್ಲಾಧಿಕಾರಿಗೆ ದೂರು ನೀಡಬಹುದು. ಇದುವರೆಗೂ ನಮಗೆ ಯಾರೂ ಇಂಥ ದೂರು ನೀಡಿಲ್ಲ. ದೂರು ನೀಡಿದರೆ ಕೂಡಲೆ ವಿಚಾರಣೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಮಚಂದ್ರ ಬಾಯರಿ ತಿಳಿಸಿದ್ದಾರೆ.

 

ನಾನು ಈ ಬಗ್ಗೆ ತುರ್ತಾಗಿ ಶುಕ್ರವಾರವೇ ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸುತ್ತೇನೆ. ಆಸ್ಪತ್ರೆಗಳು ಚಿಕತ್ಸೆ ನಿರಾಕರಣೆ ಮಾಡುವಂತಿಲ್ಲ. ಯಾವ ಖಾಸಗಿ ಆಸ್ಪತ್ರೆ ಮೇಲೆ ದೂರಿದೆಯೋ ಆ ಆಸ್ಪತ್ರೆಗಳಿಗೆ ಖುದ್ದು ಭೇಟಿ ನೀಡಿ ವಿಚಾರಿಸುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಅನೇಕ ಖಾಸಗಿ ಆಸ್ಪತ್ರೆಗಳಲ್ಲಿ ವಯಸ್ಸಾದ ಕೆಲವು ವೈದ್ಯರು ದೂರ ಉಳಿದಿದ್ದಾರೆ. ನುರಿತ ವೈದ್ಯರ ಕೊರತೆ ಇರಬಹುದು. ಮೇಲಾಗಿ ಹಣ ಕಟ್ಟಲು ಸಾಧ್ಯವಾಗದ ಬಡವರು ಖಾಸಗಿ ಆಸ್ಪತ್ರೆಗೆ ಹೋದರೆ ಅದರಿಂದ ಲಾಭ ಕಡಿಮೆ, ಅವರಿಗೆ ಬಿಲ್‌ ಕಟ್ಟಲಾಗದೆ ಇದ್ದರೆ ಅದು ಇನ್ನೊಂದು ತಲೆನೋವು, ಯಾವ ಮೂಲದಿಂದಲೋ ಸಮಾಜಕ್ಕೆ ಗೊತ್ತಾದೀತು ಎನ್ನುವ ಕಾರಣಕ್ಕೂ ಚಿಕಿತ್ಸೆ ನಿರಾಕರಣೆ ಮಾಡುವ ಸಾಧ್ಯತೆಗಳೂ ಇವೆ ಎಂದು ಹೆಸರು ಹೇಳಲಿಚ್ಛಿಸದ ಖಾಸಗಿ ವೈದ್ಯ ತಿಳಿಸಿದ್ದಾರೆ.

-ಸಂದೀಪ್‌ ವಾಗ್ಲೆ

click me!