Dakshina Kannada: ತುಳುನಾಡಿನ ದೈವಾರಾಧನೆ, ಭೂತಾರಾಧನೆ ಚಿತ್ರೀಕರಣ ನಡೆಸದಂತೆ ನಿಯಮ ಜಾರಿಗೆ?

By Suvarna NewsFirst Published Jan 12, 2022, 10:43 AM IST
Highlights

ತುಳುನಾಡಿನ (Tulunadu) ದೈವಾರಾಧನೆ ಮತ್ತು ಭೂತಾರಾಧನೆ ವೇಳೆ ಫೋಟೋ ವಿಡಿಯೋ ತೆಗೆಯುವವರೇ ಎಚ್ಚರ. ಇನ್ನು ಮುಂದೆ ಕರಾವಳಿಯ ದೈವ-ದೇವರುಗಳ ಆರಾಧನೆಯ ವೇಳೆ ಚಿತ್ರೀಕರಣ ನಡೆಸದಂತೆ ಹೊಸ ನಿಯಮ ಜಾರಿಗೆ ಬರಲಿದೆ! 

ಮಂಗಳೂರು (ಜ. 12):  ತುಳುನಾಡಿನ (Tulunadu) ದೈವಾರಾಧನೆ ಮತ್ತು ಭೂತಾರಾಧನೆ ವೇಳೆ ಫೋಟೋ ವಿಡಿಯೋ ತೆಗೆಯುವವರೇ ಎಚ್ಚರ. ಇನ್ನು ಮುಂದೆ ಕರಾವಳಿಯ ದೈವ-ದೇವರುಗಳ ಆರಾಧನೆಯ ವೇಳೆ ಚಿತ್ರೀಕರಣ ನಡೆಸದಂತೆ ಹೊಸ ನಿಯಮ ಜಾರಿಗೆ ಬರಲಿದೆ! 

ಮಂಗಳೂರಿನಲ್ಲಿ ದೈವಗಳ ಅವಹೇಳನದ ಬೆನ್ನಲ್ಲೇ ಹಿಂದೂಪರ ಸಂಘಟನೆಗಳು ಈ ನಿಯಮ ಜಾರಿಗೆ ಒತ್ತಾಯಿಸಿದ್ದು, ಸದ್ಯದಲ್ಲೇ ದೇವಸ್ಥಾನಗಳ ಆಡಳಿತ ಮಂಡಳಿ ಮೂಲಕ ನಿಯಮ ಜಾರಿಗೆ ತರಲು ಸಿದ್ಧತೆ ನಡೆಸಿದೆ. 

"

ಸದ್ಯ ಕರಾವಳಿ ಭಾಗದಲ್ಲಿ ಫೇಸ್ಬುಕ್, ವಾಟ್ಸಾಪ್ ತೆರೆದರೆ ಸಾಕು ಮೊದಲಿಗೆ ಕಣ್ಣಿಗೆ ಬೀಳುವುದೇ ತುಳುನಾಡಿನ ಅತ್ಯಂತ ನಂಬಿಕೆಯ ದೈವಾರಾಧನೆ ಮತ್ತು ಹತ್ತಾರು ದೈವಗಳ ಫೋಟೋಗಳು. ಇದರ ಜೊತೆಗೆ ತುಳುನಾಡಿನ ನಂಬಿಕೆಯ ನೂರಾರು ದೈವಗಳ ಹೆಸರಲ್ಲಿ ಸಾವಿರಾರು ಫೇಸ್ಬುಕ್ ಪೇಜ್ ಗಳು, ಗ್ರೂಪ್ ಸೇರಿದಂತೆ ಒಂದಷ್ಟು ಖಾತೆಗಳು ಚಾಲ್ತಿಯಲ್ಲಿವೆ. ದಿನ ಬೆಳಗಾದರೆ ಸಾಕು ಸೋಶಿಯಲ್ ಮೀಡಿಯಾದಲ್ಲಿ ತುಳುನಾಡಿನ ದೈವಗಳನ್ನು ಚಿತ್ರವಿಚಿತ್ರವಾಗಿ ಸಂಬಂಧವಿಲ್ಲದ ಮ್ಯೂಸಿಕ್ ಗಳನ್ನು ಸೇರಿಸಿ ಸಾಮಾಜಿಕ ತಾಣಗಳಲ್ಲಿ ಹರಿಬಿಡಲಾಗುತ್ತಿದೆ. ಇದರ ಜೊತೆಗೆ ಒಂದಿಷ್ಟು ಟ್ರೋಲ್ ಪೇಜ್ ಗಳಲ್ಲಿ ತಮಾಷೆಯ ವಸ್ತುವಾಗಿಯೂ ಈ ದೈವದ ಫೋಟೋ ಮತ್ತು ವಿಡಿಯೋಗಳು ಬಳಕೆಯಾಗ್ತಿದೆ. ಈ ಮಧ್ಯೆ ಇದನ್ನೇ ಬಳಸಿಕೊಂಡ ಅನ್ಯ ಧರ್ಮೀಯರು ಕೂಡ ದೈವಗಳ ಅವಹೇಳನಕ್ಕೆ ಇಳಿದಿದ್ದು, ವಿಟ್ಲದ ಸಾಲೆತ್ತೂರಿನಲ್ಲಿ ನಡೆದ ಕೊರಗಜ್ಜ ದೈವದ ವೇಷ ಹಾಕಿದ ಘಟನೆ ಸದ್ಯ ಭಾರೀ ಚರ್ಚೆಗೆ ಗ್ರಾಸವಾಗಿದೆ. 

ಹೊಸತಾಗಿ ಮದುವೆಯಾದ ಯುವಕ ಸಾಲೆತ್ತೂರಿನ ಹೆಣ್ಣಿನ ಮನೆಗೆ ಬರುವಾಗ ಕೊರಗಜ್ಜನ ವೇಷ ತೊಟ್ಟು ಅಸಭ್ಯವಾಗಿ ವರ್ತಿಸೋ ಮೂಲಕ ಹಿಂದೂ ಪರ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದ್ದ. ಸದ್ಯ ಈ ವಿಚಾರ ಕರಾವಳಿಯಲ್ಲಿ ಎರಡು ಧರ್ಮಗಳ ಮಧ್ಯೆ ಸಂಘರ್ಷಕ್ಕೆ ಕಾರಣವಾಗಿದ್ದರೂ ಸ್ವತಃ ಮುಸ್ಲಿಂ ಧರ್ಮಗುರುಗಳೇ ಇದನ್ನ ಖಂಡಿಸಿದ್ದಾರೆ. ಅಲ್ಲದೇ ಅನ್ಯಧರ್ಮೀಯರೂ ತುಳುನಾಡಿನ ಆರಾಧ್ಯ ದೈವಗಳನ್ನ ಈ ರೀತಿ ಚಿತ್ರಿಸೋಕೆ ಕಾರಣ ಕೆಲ ಹಿಂದೂಗಳೇ ದೈವಗಳ ಹೆಸರಲ್ಲಿ ಅನಗತ್ಯ ಫೋಟೋ, ವಿಡಿಯೋ ಎಡಿಟ್ ಮಾಡ್ತಿರೋದು ಅನ್ನೋ ಆರೋಪವೂ ಇದೆ. ತುಳುನಾಡಿನಲ್ಲಿ ನಡೆಯೋ ಭೂತ ಕೋಲ, ನೇಮೋತ್ಸವ, ದೈವಾರಾಧನೆ ವೇಳೆ ದೈವಗಳ ಕುಣಿತ, ಆರಾಧನಾ ಕ್ರಮ, ನುಡಿಗಳನ್ನ ವಿಡಿಯೋ ಅಥವಾ ಫೋಟೋ ತೆಗೆದು ಹಲವರು ಸೋಶಿಯಲ್ ಮೀಡಿಯಾಗಳಲ್ಲಿ ಹರಿ ಬಿಡ್ತಿದಾರೆ. 

ರೂಪವೇ ಇಲ್ಲದ. ದೈವಗಳಿಗೆ ಆರಾಧನೆ ವೇಳೆ ಪಾತ್ರಿಗಳು ಕಟ್ಟುವ ರೂಪಗಳನ್ನೇ ದೈವದ ಹೆಸರಿನಲ್ಲಿ ಸೋಶಿಯಲ್ ಮೀಡಿಯಾಗಳ ಮೂಲಕ ಮ್ಯೂಸಿಕ್ ಸೇರಿಸಿ ಹರಿ ಬಿಡಲಾಗ್ತಿದೆ. ಹಲವು ವರ್ಷಗಳ ಹಿಂದೆ ದೈವಗಳ ರೂಪ, ಆಕಾರಗಳ ಹೊರತಾಗಿಯೂ ಹಿಂದಿನ ಸಂಪ್ರದಾಯದಂತೆ ಆರಾಧನೆ ನಡೆಯುತ್ತಿತ್ತು. ಆದರೆ ಇದೀಗ ಮೊಬೈಲ್ ಫೋಟೋ, ವಿಡಿಯೋಗಳ ಮೂಲಕ ಕೆಟ್ಟ ಪರಿಪಾಠ ಬೆಳೆದಿದೆ. ಇದರಿಂದಲೇ ಅವುಗಳನ್ನು ನೋಡಿ ಅನ್ಯ ಧರ್ಮದವರು ಕೂಡ ಅಸಭ್ಯವಾಗಿ ವ್ಯಂಗ್ಯ ‌ಮಾಡಿ ಕೊರಗಜ್ಜ ಸೇರಿ ಇತರೆ ದೈವಗಳನ್ನ ಹಾಸ್ಯಕ್ಕೆ ಬಳಸೋ ಆರೋಪವಿದೆ. ಇದೇ ಕಾರಣಕ್ಕೆ ವಿಶ್ವಹಿಂದೂ ಪರಿಷತ್ ಬಜರಂಗದಳ ದೇವಸ್ಥಾನಗಳಲ್ಲಿ ಫೋಟೋ ಮತ್ತು ವಿಡಿಯೋ ನಿಷೇಧಿಸುವ ನಿಯಮ ತರಲು ಆಗ್ರಹಿಸಿದ್ದು,ಎಲ್ಲಾ ಸಿದ್ದತೆ ‌ನಡೆಸಿದೆ..

Udupi: ಸಂಪ್ರದಾಯ ಉಂಟು, ಸಂಭ್ರಮ ಇಲ್ಲದ ಸರಳ ಉಡುಪಿ ಪರ್ಯಾಯೋತ್ಸವ

ಸದ್ಯ ಕರಾವಳಿಯ ಕೆಲ ದೈವಸ್ಥಾನ ಮತ್ತು ದೇವಸ್ಥಾನಗಳಲ್ಲಿ ಫೋಟೋ ಮತ್ತ್ತು ವಿಡಿಯೋ ನಿಷೇಧವಿದ್ದರೂ ಹಲವೆಡೆ ಇದಕ್ಕೆ ನಿರ್ಬಂಧ ಇಲ್ಲ. ದೈವಾರಾಧನೆ ಹಾಗೂ ನೇಮೋತ್ಸವದ ವೇಳೆ ಚಿತ್ರೀಕರಣದ ಅವಕಾಶ ಇದೆ. ಆದರೆ ವಿಟ್ಲದ ಘಟನೆ ಬಳಿಕ ಹಿಂದೂ ಪರ ಸಂಘಟನೆಗಳು ಎಚ್ಚೆತ್ತುಕೊಂಡಿದ್ದು, ಕರಾವಳಿಯ ಸಾವಿರಕ್ಕೂ ಹೆಚ್ಚು ದೈವಸ್ಥಾನಗಳಲ್ಲಿ ಚಿತ್ರೀಕರಣ ನಿಷೇಧದ ನಿಯಮ ರೂಪಿಸಲು ಒತ್ತಾಯಿಸಿದೆ. ಅದರ ಮುಂದಿನ ಭಾಗವಾಗಿ ಸದ್ಯ ಸಂಘಟನೆ ಜಾಗೃತಿ ಕಾರ್ಯಕ್ಕೆ ಮುಂದಾಗಿದ್ದು, ಎಲ್ಲಾ ದೈವಸ್ಥಾನಗಳ ಆಡಳಿತ ಮಂಡಳಿಯನ್ನ ಸಂಪರ್ಕಿಸಿದೆ. 

ಅದರಂತೆ ಭೂತ, ನೇಮ ನಡೆಯುವಾಗ ಮತ್ತು ಉಳಿದ ಸಮಯದಲ್ಲೂ ದೈವಸ್ಥಾನಗಳ ಎದುರು ಬ್ಯಾನರ್ ಅಳವಡಿಸಿ ಚಿತ್ರೀಕರಣ ನಿಷೇಧಿಸಲು ನಿಯಮ ರೂಪಿಸಲು ಮುಂದಾಗಿದೆ. ಬಹುತೇಕ ಎಲ್ಲಾ ದೈವಸ್ಥಾನಗಳ ಆಡಳಿತ ಮಂಡಳಿಗಳು ಇದಕ್ಕೆ ಒಪ್ಪಿಗೆ ಸೂಚಿಸಿದ್ದು, ಮುಂದಿನ ತಿಂಗಳಿನಿಂದ ಜಾರಿಗೆ ಬರೋ ಸಾಧ್ಯತೆಯಿದೆ. ಈ ಮೂಲಕ ದೈವಾರಾಧನೆ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿ ಮತ್ತೊಬ್ಬರ ಹಾಸ್ಯದ ವಸ್ತುವಾಗುವುದನ್ನ ತಪ್ಪಿಸಲು ಹಿಂದೂ ಪರ ಸಂಘಟನೆಗಳು ಮುಂದಾಗಿದೆ. 

ಇದಕ್ಕೂ ಮೊದಲು ತುಳುನಾಡಿನ ಸಂಘಟನೆಯೊಂದು ದೈವಾರಾಧನೆ ಪ್ರಚಾರ ಮಾಡುವ 72  ಸೋಶಿಯಲ್ ಮೀಡಿಯಾ ಪೇಜ್ ಗಳ ವಿರುಧ್ಧ ಪ್ರಕರಣ ದಾಖಲಿಸಿತ್ತು. ಇಷ್ಟಾದರೂ ಕೆಲವರು ದೈವ ನರ್ತನದ ವಿಡಿಯೋ ಮಾಡಿ ಅದಕ್ಕೆ ಬೇರೆ ಸಿನಿಮಾ ಹಾಡುಗಳನ್ನ ಬಳಸಿ ಎಡಿಟ್ ಮಾಡಿ ಸಾಮಾಜಿಕ ತಾಣಗಳಲ್ಲಿ ಕೆಟ್ಟದಾಗಿ ಚಿತ್ರಿಸುತ್ತಿದ್ದರು. ಇದರ ಪರಿಣಾಮವೇ ಅನ್ಯ ಧರ್ಮೀಯರು ಹಾಗೂ ಬೇರೆ ಜಿಲ್ಲೆಯ ಜನರು ಕೂಡ ತುಳುನಾಡಿನ ಆರಾಧ್ಯ ದೈವಗಳನ್ನ ಕೆಟ್ಟದಾಗಿ ಚಿತ್ರಿಸುತ್ತಿದ್ದಾರೆ ಅನ್ನೋದು ಸಂಘಟನೆಗಳ ವಾದ. ಇನ್ನು ಸಂಘಟನೆಗಳ ಈ ನಡೆಯ ಬಗ್ಗೆ ದ.ಕ ಜಿಲ್ಲಾ ಉಸ್ತುವಾರಿ ಸಚಿವರು ಕೂಡ ಸಹಮತ ವ್ಯಕ್ತಪಡಿಸಿದ್ದು, ಆದ್ರೆ ಈ‌ ನಿಷೇಧ ವಿಚಾರ ಆಯಾ ದೈವಸ್ಥಾನದ ಆಡಳಿತ ಮಂಡಳಿಗೆ ಬಿಟ್ಟದ್ದು ಅಂದಿದ್ದಾರೆ.

click me!