ಲಾಭ ನಷ್ಟಗಳ ತಕ್ಕಡಿಯಲ್ಲಿ ಅವರೇಕಾಯಿ ಧಾರಣೆ

By Kannadaprabha NewsFirst Published Dec 26, 2022, 6:09 AM IST
Highlights

  ಅವರೇಕಾಯಿ ಸೊಗಡು ಇತ್ತೀಚಿನ ದಿನಗಳಲ್ಲಿ ಸುರಿದ ಜಡಿ ಮಳೆಯಿಂದಾಗಿ ಕಡಿಮೆಯಾಗಿದೆ ಎನ್ನಬಹುದು. ಇದು ಅವರೇ ಸೊಗಡು ಪ್ರಿಯರಲ್ಲಿ ಬೇಸರ ಮೂಡಿಸಿದೆ. ಆದರೂ ಜಿಲ್ಲೆಯಲ್ಲಿ ಅವರೇ ಕಾಯಿ ಪ್ರಿಯರು ಅವರೇ ಕಾಯಿ ಖರೀದಿಯಿಂದ ದೂರ ಸರಿದಿಲ್ಲ. ಸದ್ಯ ಮಾರುಕಟ್ಟೆಯಲ್ಲಿ ಬೇಡಿಕೆಯೂ ಇದೆ. ಸದ್ಯದ ದರದಲ್ಲಿ ಕಾಯಿಯ ತಾಜಾತನದ ಮೇಲೆ ಕೆಜಿಗೆ 40 ರಿಂದ 60 ರೂಪಾಯಿ ಧಾರಣೆ ನಡೆಯುತ್ತಿದೆ.

 ಸ್ಕಂದಕುಮಾರ್‌ ಬಿ.ಎಸ್‌

 ಕೋಲಾರ :  ಅವರೇಕಾಯಿ ಸೊಗಡು ಇತ್ತೀಚಿನ ದಿನಗಳಲ್ಲಿ ಸುರಿದ ಜಡಿ ಮಳೆಯಿಂದಾಗಿ ಕಡಿಮೆಯಾಗಿದೆ ಎನ್ನಬಹುದು. ಇದು ಅವರೇ ಸೊಗಡು ಪ್ರಿಯರಲ್ಲಿ ಬೇಸರ ಮೂಡಿಸಿದೆ. ಆದರೂ ಜಿಲ್ಲೆಯಲ್ಲಿ ಅವರೇ ಕಾಯಿ ಪ್ರಿಯರು ಅವರೇ ಕಾಯಿ ಖರೀದಿಯಿಂದ ದೂರ ಸರಿದಿಲ್ಲ. ಸದ್ಯ ಮಾರುಕಟ್ಟೆಯಲ್ಲಿ ಬೇಡಿಕೆಯೂ ಇದೆ. ಸದ್ಯದ ದರದಲ್ಲಿ ಕಾಯಿಯ ತಾಜಾತನದ ಮೇಲೆ ಕೆಜಿಗೆ 40 ರಿಂದ 60 ರೂಪಾಯಿ ಧಾರಣೆ ನಡೆಯುತ್ತಿದೆ.

ಅವರೇಕಾಯಿ ವಹಿವಾಟಿನ ಪ್ರಮುಖಗಳಲ್ಲಿ (Market)  ಪ್ರಮುಖವಾದುದ್ದು. ಸಂಜೆ 4 ಗಂಟೆ ಆಗುತ್ತಿದ್ದಂತೆ ಇಲ್ಲಿನ ಮಹಾತ್ಮಗಾಂಧಿ ರಸೆಯಲ್ಲಿನ (Road)  (ತರಕಾರಿ ಮಾರುಕಟ್ಟೆ) ಅವರೇಕಾಯಿ ಮಂಡಿಗಳು ಚುರುಕಿನ ವ್ಯವಹಾರ ಪ್ರಾರಂಭಿಸುತ್ತವೆ. ಈ ವೇಳೆಗೆ ರೈತರು ತಮ್ಮ ದ್ವಿಚಕ್ರ ವಾಹನ, ಟ್ರಾಕ್ಟರ್‌, ಟೆಂಪೋಗಳಲ್ಲಿ ಅವರೇಕಾಯಿ ತರುವುದರಿಂದ ಲೋಡಿಂಗ್‌, ಅನ್‌ಲೋಡಿಂಗ್‌ ಮತ್ತು ಸಾಗಾಣೆಯಿಂದಾಗಿ ರಸ್ತೆಯ ಸಾಮಾನ್ಯ ಸಂಚಾರಕ್ಕೆ ಅಡ್ಡಿಯಾಗುವುದು ಉಂಟು. ಇಂತಹ ಸಂದರ್ಭದಲ್ಲಿ ಸಾಮಾನ್ಯವಾಗಿ ಗೊಣಗಾಡುವ ಜನ ಅವರೇ ಸೊಗಡಿನ ವಾಸನೆಯ ಮೋಡಿಯೂ ಏನೋ ಗೊಣಗದೆ ಸಹನೆ ವಹಿಸುವುದು ಆಶ್ಚರ್ಯ ಉಂಟು ಮಾಡುತ್ತದೆ ಇದು ಅವರೇಕಾಯಿಯ ಮಹಿಮೆ ಇದ್ದೀತು.

ಈ ಮಾರುಮಟ್ಟೆಯ ವಹಿವಾಟು ಅಲ್ಲದೆ ಜಿಲ್ಲೆಯ ತಾಲೂಕುಗಳ ಪ್ರವೇಶದ ಮುಖ್ಯರಸ್ತೆಗಳಲ್ಲಿ ವಾಹನ ಸಂಚಾರವಿರುವ ರಸ್ತೆಗಳಲ್ಲಿ ಹೊಲ ತೋಟಗಳ ಬಳಿ ಹಾದು ಹೋಗುವ ರಸ್ತೆಗಳಲ್ಲಿ ಅವರೇಕಾಯಿ ಬಿಕರಿಯೂ (ಮಾರಾಟ) ಜೋರಿನಿಂದ ಸಾಗುತ್ತದೆ. ಅಲ್ಲದೆ ತಳ್ಳುಗಾಡಿ, ರಸ್ತೆಬದಿಗಳಲ್ಲಿ ಅವರೇಕಾಯಿ ಮಾರಾಟಕ್ಕಿದ್ದು, ತಳ್ಳುಗಾಡಿಗಳಲ್ಲಿ ಅದು ಪಟ್ಟಣಗಳ ಬೀದಿ ಬೀದಿಗಳಲ್ಲಿ ಓಡಾಡುತ್ತದೆ.

ಇತ್ತೀಚಿನ ವರ್ಷಗಳಲ್ಲಿ ತಳ್ಳುಗಾಡಿ ವ್ಯಾಪಾರಗಾರರು. ರಸ್ತೆ ಬೀದಿ ವ್ಯಾಪಾರಗಾರರು ತಮ್ಮ ಸರಕುಗಳನ್ನು ಮಾರಾಟಲು ಮಾಡಲು ಕೂಗುವುದಿಲ್ಲ, ಬದಲಿಗೆ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಚಿಪ್‌ ಗಳಲ್ಲಿ ಧ್ವನಿಮುದ್ರಿಸಿಕೊಂಡು ಮೆಗಾಪೋನ್‌ ಅಥವಾ ಮೊಬೈಲ್‌ಗಳ ಮೂಲಕ ತಮ್ಮ ಸರಕಿನ ಗುಣಮಟ್ಟಮತ್ತು ಬೆಲೆಯನ್ನು ಪ್ರಸಾರ ಮಾಡುತ್ತಾ ಸಾಗುತ್ತಾರೆ. ಹಿಂದೆ ಜವಳಿ ಅಂಗಡಿಗಳಲ್ಲಿ ‘ಪಿಕ್ಸಿಡ್‌ ರೇಟ್‌’ ಎಂಬ ಬೋರ್ಡು ಕಾಣುತ್ತಿತ್ತು. ಈಗ ಈ ಬೋರ್ಡು ಪ್ರತಿಯೊಬ್ಬ ವ್ಯಾಪಾರಿಯ ಬಳಿಯೂ ರಾರಾಜಿಸುತ್ತಿದೆ. ಇದು ಅವರೇಕಾಯಿಯ ವ್ಯಾಪಾರಿಗಳಿಗೂ ಅನ್ವಯಿಸಿದೆ.

ಸಾಮಾನ್ಯವಾಗಿ ಸಕ್ರಾಂತಿ ವೇಳೆಗೆ ಅವರೇಕಾಯಿ ಸೀಜನ್‌ ಮುಗಿಯುತ್ತದೆ. ಈ ಬಾರಿ ಮಳೆಯಿಂದಾಗಿ ಗಿಡಗಳಲ್ಲಿ ಹೊಸ ಚಿಗುರು ಹೂವು ಮೂಡುವುದರಿಂದ ಇನ್ನೊಂದು ತಿಂಗಳು ಅಂದರೆ ಮಾರ್ಚಿಯ ಕೊನೆಯವರೆಗೂ ಅವರೇಕಾಯಿ ಸಿಗಬಹುದೆಂದು ರೈತರು ಮತ್ತು ವರ್ತಕರು ಹೇಳುತ್ತಾರೆ. ಇದು ನಿಜವಾದರೆ ಅವರೇಕಾಯಿಯ ಮುಂದೆ ದಟ್ಟಿನ ಸೊಪ್ಪನ್ನು ಹೊರತುಪಡಿಸಿ ಉಳಿದ ತರಕಾರಿಗಳಿಗೆ ಡಿಮ್ಯಾಂಡ್‌ ಕಡಿಮೆಯಾದರೂ ಆಶ್ಚರ್ಯವಿಲ್ಲ.

ರೈತರಲ್ಲಿ ‘ಪಿಂದೆ’ಬಾಧೆಯ ಆತಂಕ

ಆಡಿ ಮಳೆಯ ಕಾರಣದಿಂದಾಗಿ ಹೂವು ಹೀಚಾಗುವ (ಪಿಂದೆ) ಮೊದಲೇ ರೋಗಪೀಡಿತವಾಗಿ ಉದುರತೊಡಗಿದ್ದು, ರೈತರಲ್ಲಿ ಆತಂಕ ಮೂಡಿಸಿದೆ. ಇದರಿಂದ ಇಳುವರಿಯು ಕಡಿಮೆಯಾಗುವ ಸಾಧ್ಯತೆ ಇದೆ. ಮಳೆ ನಿಂತ ಮೇಲೆ ಬಿಸಿಲು ಚುರುಕುಗೊಳ್ಳುತ್ತಿರುವುದರಿಂದ ಉಳಿದಿರುವ ಹೂವುಗಳು ಕಾಯಿ ಆದೀತ್ತೆಂಬ ನಿರೀಕ್ಷೆ ರೈತರದ್ದು. ಆದರೂ ಹುಳುಗಳ ಬಾಧೆ, ಜೊತೆಗೆ ಇತ್ತೀಚೆಗೆ ಜಿಂಕೆ ಹಾಗೂ ಮೊಲಗಳ ಸಂತಾನ ಹೆಚ್ಚಿರುವುದು ಇನ್ನೊಂದು ಆತಂಕಕ್ಕೆ ಕಾರಣವಾಗಿದೆ. ಒಮ್ಮೆ ಇವು ಹೊಲಗಳಿಗೆ ನುಗ್ಗಿದರೆ ಸಾಕಷ್ಟುಫಸಲು ಅವುಗಳಿಗೆ ಆಹಾರವಾಗುತ್ತದೆ. ಇವು ರಾತ್ರಿಯ ವೇಳೆ ಬರುವುದರಿಂದ ಕಾವಲಿನ ಸಮಸ್ಯೆಯೂ ಇದ್ದು, ಅವಕ್ಕೆ ಅವರೇಕಾಯಿ ದ್ವಾದಶಿಯ ಊಟದ್ದಂತೆ ಪುಷ್ಕಳವಾಗಿ ಸಿಗುತ್ತದೆ. ಕೆಲವು ರೈತರು ಈ ನಷ್ಟಕ್ಕೆ ಅನುಭವಿಸಿ ಮತ್ತು ವನ್ಯಜೀವಿಯ ಮೇಲಿನ ಕಾಳಜಿಯಿಂದಾಗಿ ಕ್ರಿಮಿನಾಶಕವನ್ನು ಸಿಂಪಡಿಸದೆ ಉಳಿದದ್ದೇ ನಮ್ಮ ಪಾಲು ಅನ್ನುತ್ತಾರೆ.

click me!