ಗಣಿ ನಿಷೇಧಕ್ಕೆ 2018ರಲ್ಲೇ ನೈಸರ್ಗಿಕ ವಿಕೋಪ ಕೇಂದ್ರದ ಶಿಫಾರಸು

By Kannadaprabha NewsFirst Published Jul 14, 2021, 9:14 AM IST
Highlights

* ಸ್ಫೋಟದಿಂದ ಕೆಆರೆಸ್‌ ಡ್ಯಾಂ ಬಿರುಕು ಬಿಡೋದು ನಿಶ್ಚಿತ
* ಗಣಿ ಬಂದ್‌ ಮಾಡಿ
* ಭೂಕಂಪನ ವಲಯದಲ್ಲಿದೆ ಅಣೆಕಟ್ಟೆ
 

ಮಂಡ್ಯ ಮಂಜುನಾಥ

ಮಂಡ್ಯ(ಜು.14): ಕೆಆರ್‌ಎಸ್‌ ಸುತ್ತ ನಡೆಯುತ್ತಿರುವ ಕಲ್ಲು ಗಣಿ ಪ್ರದೇಶಗಳಲ್ಲಿನ ಸ್ಫೋಟದಿಂದ ಅಣೆಕಟ್ಟೆಗೆ ಅಪಾಯವಿರುವ ಬಗ್ಗೆ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಈಗಾಗಲೇ ಮುನ್ಸೂಚನೆ ನೀಡಿದೆ. ಕಾವೇರಿ ನೀರಾವರಿ ನಿಗಮದವರೂ ಗಣಿಗಾರಿಕೆ ನಿಷೇಧಕ್ಕೆ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಇವೆಲ್ಲವನ್ನೂ ಪರಿಗಣಿಸಿ ರಾಜ್ಯ ಸರ್ಕಾರ ಕೂಡಲೇ ಕೆಆರ್‌ಎಸ್‌ ಅಣೆಕಟ್ಟು ಸುತ್ತ 20 ಕಿ.ಮೀ. ವ್ಯಾಪ್ತಿಯಲ್ಲಿ ಎಲ್ಲ ರೀತಿಯ ಗಣಿ ಚಟುವಟಿಕೆಗಳ ಮೇಲೆ ಶಾಶ್ವತ ನಿರ್ಬಂಧ ವಿಧಿಸಬೇಕು. ಇಲ್ಲದಿದ್ದರೆ ಸ್ಫೋಟಕ ಬಳಕೆಯಿಂದ ಆಣೆಕಟ್ಟು ಬಿರುಕು ಬಿಡುವುದರಲ್ಲಿ ಯಾವ ಅನುಮಾನವೂ ಇಲ್ಲ. ಇದು ಮೈಸೂರಿನ ಎಂಜಿನಿಯ​ರ್ಸ್ ಸಂಸ್ಥೆ ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿನ ಉಲ್ಲೇಖ.

ಕೆಲವು ವರ್ಷಗಳಿಂದ ಆಣೆಕಟ್ಟೆಯ ಸುಮಾರು 25 ಕಿ.ಮೀ ವ್ಯಾಪ್ತಿ ಪ್ರದೇಶದಲ್ಲಿ ಕಲ್ಲು ಮತ್ತು ಮರಳು ಗಣಿಗಾರಿಕೆಗೆ ದೊಡ್ಡ ಪ್ರಮಾಣದಲ್ಲಿ ಸ್ಫೋಟಕಗಳನ್ನು ಉಪಯೋಗಿಸಲಾಗುತ್ತಿದೆ. ಗಣಿ ಪ್ರದೇಶಗಳಲ್ಲಿ ನಡೆಸುತ್ತಿರುವ ಬೋರ್‌ ಬ್ಲಾಸ್ಟಿಂಗ್‌ನಿಂದ ಈ ವ್ಯಾಪ್ತಿಯ ಪ್ರದೇಶ ನಡುಗುತ್ತಿದೆ ಮತ್ತು ಮನೆಗಳು ಬಿರುಕು ಬಿಡುತ್ತಿರುವುದು ವರದಿಯಾಗುತ್ತಿವೆ. ಕಲ್ಲು ಮತ್ತು ಮಣ್ಣನ್ನು ಉಪಯೋಗಿಸಿ ಕೆಆರ್‌ಎಸ್‌ ಅಣೆಕಟ್ಟು ನಿರ್ಮಿಸಿರುವುದರಿಂದ ದೊಡ್ಡ ಮಟ್ಟದ ಸ್ಫೋಟಕಗಳಿಂದ ಡ್ಯಾಂ ಬಿರುಕು ಬಿಡುವುದಂತೂ ನೂರಕ್ಕೆ ನೂರರಷ್ಟುಖಚಿತ. ಈಗಾಗಲೇ ರಾಜ್ಯ ಸರ್ಕಾರದ ಸಂಸ್ಥೆಯಾಗಿರುವ ಕರ್ನಾಟಕ ರಾಜ್ಯ ಭೂಕಂಪ ಮಾಪನ ಸಂಸ್ಥೆ (ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ) 25 ಸೆಪ್ಟೆಂಬರ್‌ 2018ರಲ್ಲಿ ಗಣಿ ಸ್ಫೋಟದ ಅಧ್ಯಯನ ನಡೆಸಿ ಜಿಲ್ಲಾಧಿಕಾರಿಗೆ ವರದಿ ನೀಡಿದೆ.

ಕೆಆರ್‌ಎಸ್ ಡ್ಯಾಂನಲ್ಲಿ ಯಾವುದೇ ಬಿರುಕಿಲ್ಲ, ಮಂಡ್ಯ ರಾಜಕಾರಣದ ಬಗ್ಗೆ ಮಾತಾಡಲ್ಲ: ನಿರಾಣಿ

ಮೈಸೂರು ಎಂಜಿನಿಯರ್‌ ಸಂಸ್ಥೆ ವರದಿ:

ಇಡೀ ದೇಶದಲ್ಲಿ ದೊಡ್ಡ ಅಣೆಕಟ್ಟುಗಳ ಸುತ್ತಮುತ್ತ ಗಣಿಗಾರಿಕೆ ಹಾಗೂ ಸ್ಫೋಟಕಗಳನ್ನು ಕೂಡಲೇ ನಿಷೇಧಿಸಬೇಕೆಂದು ಸುಪ್ರೀಂಕೋರ್ಟ್‌ ಆದೇಶ ಮಾಡಿದೆ. ಕೆಆರ್‌ಎಸ್‌ ಅಣೆಕಟ್ಟು ಭೂಕಂಪನ ವಲಯದಲ್ಲಿ ನಿರ್ಮಿಸಿರುವುದರಿಂದ ಎಲ್ಲಾ ರೀತಿಯ ಸ್ಫೋಟಕಗಳನ್ನು ಸಂಪೂರ್ಣವಾಗಿ ನಿಷೇಧಿಸಬೇಕು. ಸ್ಫೋಟಕಗಳಿಂದ ಡ್ಯಾಂನ ಕಟ್ಟಡ ಬಿರುಕು ಬಿಡುವ ಎಲ್ಲಾ ಸಾಧ್ಯತೆಗಳಿವೆ. ಅಣೆಕಟ್ಟು ನಿರ್ಮಾಣವಾಗಿ 90 ವರ್ಷ ಆಗಿರುವುದರಿಂದ ಕೇಂದ್ರ ಭೂವಿಜ್ಞಾನ ಇಲಾಖೆಯಿಂದ ಸರ್ವೇ ಮಾಡಿಸಬೇಕು. ಹಾಗೂ ಕೂಡಲೇ ಡ್ಯಾಂ ಸುರಕ್ಷತತೆ ಬಗ್ಗೆ ವರದಿಯನ್ನು ನೀಡಬೇಕು. ಸರ್ಕಾರ ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೆ ಕೆಆರ್‌ಎಸ್‌ ಅಣೆಕಟ್ಟೆಯ ಹಿತದೃಷ್ಟಿಯಿಂದ ಶಾಶ್ವತವಾಗಿ ಡ್ಯಾಂನ ಸುತ್ತಮುತ್ತ ಸುಮಾರು 20 ಕಿ.ಮೀ.ವರೆಗೆ ಎಲ್ಲಾ ರೀತಿಯ ಗಣಿಗಾರಿಕೆಯನ್ನು ನಿಷೇಧಿಸಬೇಕು ಎಂದು ಮೈಸೂರು ಎಂಜಿನಿಯರ್‌ ಸಂಸ್ಥೆಯೂ ಸರ್ಕಾರಕ್ಕೆ ಈ ಹಿಂದೆಯೇ ವರದಿ ನೀಡಿದೆ.

ವೈಜ್ಞಾನಿಕ ಅಧ್ಯಯನ ಏಕೆ ಇನ್ನೂ ನಡೆದಿಲ್ಲ?

ರಾಜ್ಯದಲ್ಲಿರುವ ಯಾವುದೇ ಅಣೆಕಟ್ಟುಗಳ ಸುರಕ್ಷತೆ ಕುರಿತಂತೆ ಇದುವರೆಗೆ ವೈಜ್ಞಾನಿಕ ಅಧ್ಯಯನವೇ ನಡೆದಿಲ್ಲವೆಂದು ಭೂಗರ್ಭ ತಜ್ಞರು ಹೇಳುತ್ತಾರೆ. ಗಣಿ ಸ್ಫೋಟದಿಂದ ಕೆಆರ್‌ಎಸ್‌ ಆಣೆಕಟ್ಟೆಗೆ ಎದುರಾಗಿರುವ ಅಪಾಯದ ಕುರಿತು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವರದಿ ಆತಂಕ ವ್ಯಕ್ತಪಡಿಸಿದ್ದರೂ, ಅದನ್ನು ರಾಜ್ಯಸರ್ಕಾರ ಗಂಭೀರವಾಗಿ ಪರಿಗಣಿಸದಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಅಸಮಾಧಾನ ಆಕ್ರೋಶ ವ್ಯಕ್ತವಾಗಿದೆ.

2013ರಲ್ಲೇ ಅಪಾಯ ಗುರುತಿಸಿದ್ದ ಪುಟ್ಟಣ್ಣಯ್ಯ

ಕೆಆರ್‌ಎಸ್‌ ಸುತ್ತ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆಯಿಂದ ಅಣೆಕಟ್ಟೆಗೆ ಕಂಟಕವಿರುವುದನ್ನು ಮನಗಂಡಿದ್ದ ದಿವಂಗತ ಶಾಸಕ ಕೆ.ಎಸ್‌.ಪುಟ್ಟಣ್ಣಯ್ಯ ಅವರು ಎಂಟು ವರ್ಷಗಳ ಹಿಂದೆಯೇ ವಿಧಾನಸಭಾ ಅಧಿವೇಶನದಲ್ಲಿ ಈ ಬಗ್ಗೆ ಪ್ರಬಲವಾದ ದನಿ ಎತ್ತಿದ್ದರು. ಆಗಿನ ಕಾನೂನು ಸಚಿವ ಟಿ.ಬಿ.ಜಯಚಂದ್ರ ಅವರು ಕೆಆರ್‌ಎಸ್‌ ಸುತ್ತಲಿನ ಪ್ರದೇಶದಲ್ಲಿ ವ್ಯಾಪಕ ಕಲ್ಲು ಕ್ವಾರಿಗಳು ತಲೆ ಎತ್ತಿರುವ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ನಿಷೇಧ ಹೇರಲಾಗುವುದು. ಕೆಆರ್‌ಎಸ್‌ ಸುತ್ತ 5 ಕಿ.ಮೀ. ವ್ಯಾಪ್ತಿಯಲ್ಲಿ ಕಲ್ಲು ಗಣಿಗಾರಿಕೆ ಸೇರಿದಂತೆ ಎಲ್ಲ ರೀತಿಯ ಗಣಿ ಚಟುವಟಿಕೆಗಳ ಮೇಲೆ ನಿಷೇಧ ಹೇರುವುದಾಗಿ ತಿಳಿಸಿದ್ದರು. ಆದರೆ ನಂತರ ಯಾವುದೇ ಕ್ರಮ ಕೈಗೊಳ್ಳಲಿಲ್ಲ.
 

click me!