ಮೈಸೂರು ನಗರದ ಚಾಮರಾಜ ಕ್ಷೇತ್ರದಲ್ಲಿ ಬಿಜೆಪಿಯಿಂದ ಹಾಲಿ ಶಾಸಕ ಎಲ್. ನಾಗೇಂದ್ರ ಅವರಿಗೆ ಮತ್ತೊಂದು ಬಾರಿ ಟಿಕೆಟ್ ಸಿಗುವ ಸಾಧ್ಯತೆ ಇದೆ. ಆದರೆ ಕಾಂಗ್ರೆಸ್ ಹಾಗೂ ಜೆಡಿಎಸ್‌ನಲ್ಲಿ ಟಿಕೆಟ್‌ಗಾಗಿ ‘ಗೌಡ್ರ ಗದ್ಲ’ ನಡೆಯುತ್ತಿದೆ.
ಅಂಶಿ ಪ್ರಸನ್ನಕುಮಾರ್
ಮೈಸೂರು : ಮೈಸೂರು ನಗರದ ಚಾಮರಾಜ ಕ್ಷೇತ್ರದಲ್ಲಿ ಬಿಜೆಪಿಯಿಂದ ಹಾಲಿ ಶಾಸಕ ಎಲ್. ನಾಗೇಂದ್ರ ಅವರಿಗೆ ಮತ್ತೊಂದು ಬಾರಿ ಟಿಕೆಟ್ ಸಿಗುವ ಸಾಧ್ಯತೆ ಇದೆ. ಆದರೆ ಕಾಂಗ್ರೆಸ್ ಹಾಗೂ ಜೆಡಿಎಸ್‌ನಲ್ಲಿ ಟಿಕೆಟ್‌ಗಾಗಿ ‘ಗೌಡ್ರ ಗದ್ಲ’ ನಡೆಯುತ್ತಿದೆ.
undefined
ಬಿಜೆಪಿಯ ಟಿಕೆಟ್‌ಗೆ ಮೈವಿವಿ ಸೆನೆಟ್ ಮಾಜಿ ಸದಸ್ಯ ಎಸ್. ಜಯಪ್ರಕಾಶ್, ಮಾಜಿ ಶಾಸಕ ದಿವಂಗತ ಎಚ್.ಎಸ್. ಶಂಕರಲಿಂಗೇಗೌಡರ ಪುತ್ರ, ಪಾಲಿಕೆ ಮಾಜಿ ಸದಸ್ಯ ಎಚ್.ಎಸ್. ನಂದೀಶ್ ಪ್ರೀತಮ್, ಎಂಡಿಎ ಅಧ್ಯಕ್ಷ ಯಶಸ್ವಿ ಸೋಮಶೇಖರ್, ಮುಖಂಡರಾದ ಡಾ.ಬಿ.ಎಚ್. ಮಂಜುನಾಥ್, ಮಲ್ಲಪ್ಪಗೌಡ ಮೊದಲಾದವರು ಆಕಾಂಕ್ಷಿಗಳಾದರೂ ಬಹುತೇಕ ನಾಗೇಂದ್ರ ಅವರಿಗೆ ಅವಕಾಶ ಮಾಡಿಕೊಡುವ ಸಂಭವವಿದೆ.
ನಲ್ಲಿ ಕಳೆದ ಬಾರಿ ಸೋತ ಮಾಜಿ ಶಾಸಕ ವಾಸು ಹಾಗೂ ಜೆಡಿಎಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ, ನಂತರ ಕಾಂಗ್ರೆಸ್ ಸೇರಿದ ಕೆ. ಹರೀಶ್‌ಗೌಡರ ನಡುವೆ ತೀವ್ರ ಪೈಪೋಟಿ ಇದೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರು ಹರೀಶಗೌಡರ ಪರ ಇದ್ದರೆ ಉಳಿದ ನಾಯಕರು ವಾಸು ಪರ ಇದ್ದಾರೆ. ಕೃಷ್ಣರಾಜದಲ್ಲಿ ಕಳೆದ ಬಾರಿ ಸೋತ ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ಅವರಿಗೆ ಕೊಡುವುದಾದರೆ ಇಲ್ಲಿ ವಾಸು ಅವರಿಗೆ ಏಕೆ ಬೇಡ? ಎಂಬುದು ಇತರ ನಾಯಕರ ಪ್ರಶ್ನೆಯಾಗಿದೆ. ಹೀಗಾಗಿ ಟಿಕೆಟ್ ಕಗ್ಗಂಟು ಇನ್ನೂ ಬಗೆಹರಿದಿಲ್ಲ.
ಜೆಡಿಎಸ್‌ನಲ್ಲಿ ನಗರಪಾಲಿಕೆ ಸದಸ್ಯರಾದ ಕೆ.ವಿ. ಶ್ರೀಧರ್, ಎಸ್‌ಬಿಎ ಮಂಜು, ಮಾಜಿ ಸದಸ್ಯ ಸಿ. ಮಹದೇಶ ಅವರ ಹೆಸರುಗಳಿದ್ದವು. ಇತ್ತೀಚೆಗೆ ಮಾಜಿ ಶಾಸಕ ದಿವಂಗತ ಎಚ್. ಕೆಂಪೇಗೌಡರ ಪುತ್ರ ಎಚ್.ಕೆ. ರಮೇಶ್ ಅವರ ಹೆಸರು ಸೇರ್ಪಡೆಯಾಗಿದೆ. ಅಂತಿಮವಾಗಿ ಯಾರಿಗೆ ಟಿಕೆಟ್ ಸಿಗುತ್ತದೆ ಕಾದು ನೋಡಬೇಕು.
ಆಮ್ ಆದ್ಮಿಪಾರ್ಟಿಯಿಂದ ಮಾಲವಿಕ ಗುಬ್ಬಿವಾಣಿ ಮತ್ತೊಮ್ಮೆ ಕಣಕ್ಕಿಳಿಯುತ್ತಿದ್ದಾರೆ.
ಕ್ಷೇತ್ರದ ಇತಿಹಾಸ
1978 ರಲ್ಲಿ ರಚನೆಯಾಗಿರುವ ಚಾಮರಾಜ ಕ್ಷೇತ್ರ ’ಗೌಡ್ರ ಗದ್ಲ’ಕ್ಕೆ ಹೆಸರುವಾಸಿ. ಏಕೆಂದರೆ ಕಳೆದ ನಾಲ್ಕೂವರೆ ದಶಕಗಳಿಂದಲೂ ಇಲ್ಲಿಂದ ಆಯ್ಕೆಯಾದವರೆಲ್ಲಾ ಒಕ್ಕಲಿಗರೇ. ಆದ್ದರಿಂದ ಎಲ್ಲಾ ಪಕ್ಷಗಳು ಇದೇ ವರ್ಗದವರಿಗೆ ಟಿಕೆಟ್ ನೀಡುತ್ತವೆ. 1999 ರಲ್ಲಿ ಜೆಡಿಎಸ್ ಹಿಂದುಳಿದ ಯಾದವ (ಗೊಲ್ಲ) ಜನಾಂಗಕ್ಕೆ ಟಿಕೆಟ್ ನೀಡಿ, ಹೊಸ ಸಮೀಕರಣ ಬರೆಯಲು ಯತ್ನಿಸಿತ್ತು. ಆದರೆ ಕೈಗೂಡಲಿಲ್ಲ. ಎರಡು ಉಪ ಚುನಾವಣೆ ಸೇರಿದಂತೆ ಈವರೆಗೆ 12 ಬಾರಿ ಚುನಾವಣೆ ನಡೆದಿದೆ. ಮೂರು ಬಾರಿ ಕಾಂಗ್ರೆಸ್, ಉಳಿದ ಒಂಭತ್ತು ಬಾರಿ ಕಾಂಗ್ರೆಸ್ಸೇತರ ಅಭ್ಯರ್ಥಿಗಳು ಗೆದ್ದಿದ್ದಾರೆ.
1978 ರಲ್ಲಿ ಕ್ಷೇತ್ರ ರಚನೆಯಾದಾಗ ಮಾಜಿ ಸಚಿವ ಕೆ. ಪುಟ್ಟಸ್ವಾಮಿ ಆಯ್ಕೆಯಾದರು. ಅವರು ಅದಕ್ಕೂ ಮೊದಲು ಒಂದು ಬಾರಿ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ, ನಾಲ್ಕು ಬಾರಿ ಮೈಸೂರು ತಾಲೂಕು ಕ್ಷೇತ್ರದಿಂದ ಆಯ್ಕೆಯಾಗಿ ಎಸ್. ನಿಜಲಿಂಗಪ್ಪ ಹಾಗೂ ವೀರೇಂದ್ರ ಪಾಟೀಲರ ಸಂಪುಟದಲ್ಲಿ ಸಚಿವರಾಗಿ ಅಪಾರ ಜನಾನುರಾಗಿಯಾಗಿದ್ದರು. ಇಂದಿರಾ ಕಾಂಗ್ರೆಸ್‌ನಿಂದ ಬಿ.ಎನ್. ಕೆಂಗೇಗೌಡ, ಕಾಂಗ್ರೆಸ್‌ನಿಂದ ಎಂ.ಎನ್. ತಿಮ್ಮಯ್ಯ ಕಣದಲ್ಲಿದ್ದರು. ಕೆ. ಪುಟ್ಟಸ್ವಾಮಿ ಅವರು ಆಯ್ಕೆಯಾದ ಕೆಲವೇ ದಿನಗಳಲ್ಲಿ ನಿಧನರಾಗಿದ್ದರಿಂದ ಉಪ ಚುನಾವಣೆ ನಡೆಯಿತು. ಇಂದಿರಾ ಕಾಂಗ್ರೆಸ್‌ನ ಬಿ.ಎನ್. ಕೆಂಗೇಗೌಡ ಆಯ್ಕೆಯಾದರು. ಆಗ ಎಚ್. ಕೆಂಪೇಗೌಡರು ಜನತಾಪಕ್ಷದ ಅಭ್ಯರ್ಥಿಯಾಗಿದ್ದರು.
1983ರ ಚುನಾವಣೆಯಲ್ಲಿ ಜನತಾಪಕ್ಷದ ಎಚ್. ಕೆಂಪೇಗೌಡ ಆಯ್ಕೆಯಾದರು. ಬಿಜೆಪಿಯಿಂದ ಪುಟ್ಟೇಗೌಡ, ಕಾಂಗ್ರೆಸ್‌ನಿಂದ ಬಿ.ಎನ್. ಕೆಂಗೇಗೌಡ ಸ್ಪರ್ಧಿಸಿದ್ದರು. 1985 ರಲ್ಲಿ ಜನತಾಪಕ್ಷದ ಕೆ. ಕೆಂಪೀರೇಗೌಡರು ಆಯ್ಕೆಯಾದರು. ಕಾಂಗ್ರೆಸ್‌ನಿಂದ ಕೆ. ಹರ್ಷಕುಮಾರ್, ಬಿಜೆಪಿಯಿಂದ ಪಾಲಿಕೆ ಮಾಜಿ ಸದಸ್ಯ ಹಾಗೂ ವಕೀಲ ಸಿ. ಬಸವರಾಜು ಕಣದಲ್ಲಿದ್ದರು.
ಕೆಂಪೀರೇಗೌಡರ ನಿಧನದಿಂದ 1986ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಜನತಾಪಕ್ಷದ ಪ್ರೊ.ಪಿ.ಎಂ. ಚಿಕ್ಕಬೋರಯ್ಯ ಆಯ್ಕೆಯಾದರು.
1989ರ ವೇಳೆಗೆ ಜನತಾಪಕ್ಷ ಇಬ್ಭಾಗವಾಗಿತ್ತು. ಜನತಾದಳದಿಂದ ಸಿ. ಬಸವೇಗೌಡ, ಸಮಾಜವಾದಿ ಜನತಾಪಕ್ಷದಿಂದ ಪ್ರೊ.ಪಿ.ಎಂ. ಚಿಕ್ಕಬೋರಯ್ಯ, ಬಂಡಾಯ ಅಭ್ಯರ್ಥಿಯಾಗಿ ಎಚ್.ಎಸ್. ಶಂಕರಲಿಂಗೇಗೌಡ ಕಣದಲ್ಲಿದ್ದರು. ಜನತಾ ಪರಿವಾರದ ಮತಗಳ ವಿಭಜನೆಯಿಂದಾಗಿ ಕಾಂಗ್ರೆಸ್‌ನ ಕೆ. ಹರ್ಷಕುಮಾರ್‌ಗೌಡ ಆಯ್ಕೆಯಾದರು. ವಕೀಲೆ ವಿ. ಮೈಥಿಲಿ ಬಿಜೆಪಿ ಅಭ್ಯರ್ಥಿಯಾಗಿದ್ದರು.
1994, 1999, 2004 ಹಾಗೂ 2008- ಹೀಗೆ ಸತತ ನಾಲ್ಕು ಬಾರಿ ಬಿಜೆಪಿಯ ಎಚ್.ಎಸ್. ಶಂಕರಲಿಂಗೇಗೌಡರು ಆಯ್ಕೆಯಾಗಿ, ದಾಖಲೆ ನಿರ್ಮಿಸಿದರು. 1994 ರಲ್ಲಿ ಸಿ. ಬಸವೇಗೌಡ- ಜನತಾದಳ, ಕೆ. ಹರ್ಷಕುಮಾರ್‌ಗೌಡ- ಕಾಂಗ್ರೆಸ್, ಡಿ. ಮಾದೇಗೌಡ- ಜನತಾದಳ ಬಂಡಾಯ, ಪಿ. ವಿಶ್ವನಾಥ್- ಕೆಸಿಪಿ, 1999 ರಲ್ಲಿ ವಾಸು- ಕಾಂಗ್ರೆಸ್, ಡಿ. ಧ್ರುವಕುಮಾರ್- ಜೆಡಿಎಸ್, 2004 ರಲ್ಲಿ ಸಂದೇಶ್ ನಾಗರಾಜ್- ಕಾಂಗ್ರೆಸ್, ಕೆ. ಉಮಾಶಂಕರ್- ಜೆಡಿಎಸ್ ಕಣದಲ್ಲಿದ್ದರು. 2008 ರಲ್ಲಿ ವಾಸು- ಕಾಂಗ್ರೆಸ್, ಎಂ. ಪ್ರತಾಪ್- ಜೆಡಿಎಸ್ ಕಣದಲ್ಲಿದ್ದರು.
2013 ರಲ್ಲಿ ಕಾಂಗ್ರೆಸ್‌ನ ವಾಸು ಗೆದ್ದರು. ಬಿಜೆಪಿ ಬದಲು ಜೆಡಿಎಸ್‌ನಿಂದ ಕಣಕ್ಕಿಳಿದಿದ್ದ ಎಚ್.ಎಸ್. ಶಂಕರಲಿಂಗೇಗೌಡರು ಸೋತರು. ಎಂಡಿಎ ಮಾಜಿ ಅಧ್ಯಕ್ಷ ಎಲ್. ನಾಗೇಂದ್ರ ಬಿಜೆಪಿ ಅಭ್ಯರ್ಥಿಯಾಗಿದ್ದರು. 2018 ರಲ್ಲಿ ಬಿಜೆಪಿಯ ಎಲ್. ನಾಗೇಂದ್ರ ಗೆದ್ದರು. ಕಾಂಗ್ರೆಸ್‌ನಿಂದ ನಾಲ್ಕನೇ ಚುನಾವಣೆ ಎದುರಿಸಿದ್ದ ವಾಸು ಸೋತರು.
ಒಕ್ಕಲಿಗರೇ ಹೆಚ್ಚಿರುವ ಈ ಕ್ಷೇತ್ರದಲ್ಲಿ 1986ರ ಉಪ ಚುನಾವಣೆಯ ನಂತರ ಜೆಡಿಎಸ್ ಗೆದ್ದಿಲ್ಲ. 1989 ಹಾಗೂ 1994 ರಲ್ಲಿ ಬಂಡಾಯದಿಂದ ಸೋತರೆ, 1999 ರಲ್ಲಿ ಹೊಸ ಸಮೀಕರಣ ಮಾಡಲು ಹೋಗಿ ಸೋತರು. 2004 ರಲ್ಲಿ ಜನತಾದಳದ ಅಲೆ ಇದ್ದರೂ ತಮ್ಮತ್ತ ಮತ ಪರಿವರ್ತಿಸಿಕೊಳ್ಳಲು ಅಭ್ಯರ್ಥಿ ಸೋತರು. 2008 ರಲ್ಲಿ ವಚನಭ್ರಷ್ಟತೆ ತೀವ್ರ ಸ್ವರೂಪ ಪಡೆದುಕೊಂಡಿತ್ತು. 2013 ರಲ್ಲಿ ಕೊನೆ ಕ್ಷಣದಲ್ಲಿ ಶಂಕರಲಿಂಗೇಗೌಡರನ್ನು ಅಭ್ಯರ್ಥಿ ಮಾಡಿದ್ದು ಗೊಂದಲಗಳಿಗೆ ಕಾರಣವಾಗಿತ್ತು. ಆದರೆ 2018 ರಲ್ಲಿ ಶತಾಯಗತಾಯ ಗೆಲ್ಲಲೇಬೇಕು ಎಂದು ಕೆ. ಹರೀಶ್‌ಗೌಡರ ಬದಲಿಗೆ ಪ್ರೊ.ಕೆ.ಎಸ್. ರಂಗಪ್ಪ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಲಾಗಿತ್ತು. ಆದರೆ ಹರೀಶ್‌ಗೌಡರ ಬಂಡಾಯ ಅಭ್ಯರ್ಥಿಯಾಗಿ ಕಣದಲ್ಲಿದ್ದರಿಂದ ಪ್ರೊ.ರಂಗಪ್ಪ ಸೋತರು.
-----------
ಮತದಾರರ ವಿವರ
ಒಟ್ಟು ಮತದಾರರು- 2,37,285
ಪುರುಷರು- 1,17,190
ಮಹಿಳೆಯರು- 1,20,069
ಇತರರು- 26
ಮತಗಟ್ಟೆಗಳು- 244
---
ಕ್ಷೇತ್ರದ ಸ್ವಾರಸ್ಯಗಳು
- 1978 ರಲ್ಲಿ ಕ್ಷೇತ್ರ ರಚನೆಯಾಯಿತು. ಆ ವರ್ಷ ಆಯ್ಕೆಯಾದ ಮಾಜಿ ಸಚಿವ, ಜನತಾಪಕ್ಷದ ಕೆ. ಪುಟ್ಟಸ್ವಾಮಿ ಅವರು ಕೆಲವೇ ತಿಂಗಳಲ್ಲಿ ನಿಧನರಾಗಿದ್ದರಿಂದ ಉಪ ಚುನಾವಣೆ ನಡೆಯಿತು. ಸಾರ್ವತ್ರಿಕ ಚುನಾವಣೆಯಲ್ಲಿ ಸೋತಿದ್ದ ಕಾಂಗ್ರೆಸ್‌ನ ಬಿ.ಎನ್. ಕೆಂಗೇಗೌಡ ಆಯ್ಕೆಯಾದರು. ಪುಟ್ಟಸ್ವಾಮಿ ಅವರ ಪುತ್ರ, ಮಾಜಿ ಮೇಯರ್ ಪಿ. ವಿಶ್ವನಾಥ್ 1994 ರಲ್ಲಿ ಕೆಸಿಪಿ ಅಭ್ಯರ್ಥಿಯಾಗಿ ಸೋತರು.
- 1983 ರಲ್ಲಿ ಜನತಾಪಕ್ಷದ ಎಚ್. ಕೆಂಪೇಗೌಡರು ಬಿಜೆಪಿಯ ಪುಟ್ಟೇಗೌಡರನ್ನು ಸೋಲಿಸಿದರು. ಕಾಂಗ್ರೆಸ್‌ನ ಬಿ.ಎನ್. ಕೆಂಗೇಗೌಡ ಮೂರನೇ ಸ್ಥಾನಕ್ಕೆ ಹೋಗಿದ್ದರು. ಕೆಂಪೇಗೌಡರು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷರಾಗಿದ್ದರು.
- 1985 ರಲ್ಲಿ ಜನತಾಪಕ್ಷದ ಕೆ. ಕೆಂಪೀರೇಗೌಡರು ಆಯ್ಕೆಯಾದರು. ಇವರು 1972 ರಲ್ಲಿ ಟಿ. ನರಸೀಪುರ ಹಾಗೂ 1978 ರಲ್ಲಿ ಚಾಮುಂಡೇಶ್ವರಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸೋತಿದ್ದರು. ಆದರೆ ಇವರ ಪುತ್ರ ಕೆ. ಉಮಾಶಂಕರ್ 2004 ರಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸೋತರು. ಕೆಂಪೀರೇಗೌಡರ ನಿಧನದಿಂದ ನಡೆದ ಉಪ ಚುನಾವಣೆಯಲ್ಲಿ ಜನತಾಪಕ್ಷದಿಂದ ಸ್ಪರ್ಧಿಸಿದ್ದ ವಿದ್ಯಾವರ್ಧಕ ಕಾನೂನು ಕಾಲೇಜಿನ ಪ್ರಾಂಶುಪಾಲರಾಗಿದ್ದ ಪ್ರೊ.ಪಿ.ಎಂ. ಚಿಕ್ಕಬೋರಯ್ಯ ಆಯ್ಕೆಯಾದರು. ಇವರು 1989 ರಲ್ಲಿ ಸಜಪದಿಂದ ಸ್ಪರ್ಧಿಸಿ ಸೋತರು.
- 1985 ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸೋತಿದ್ದ ಕೆ. ಹರ್ಷಕುಮಾರ್ 1989ರ ಚುನಾವಣೆವೇಳೆಗೆ ತಮ್ಮ ಹೆಸರಿಗೆ ‘ಗೌಡ’ ಸೇರಿಸಿಕೊಂಡು ಗೆದ್ದರು. ಆದರೆ 1994ರ ಚುನಾವಣೆಯಲ್ಲಿ ಸೋತರು.
- 1989 ರಲ್ಲಿ ಜನತಾದಳ ಬಂಡಾಯ ಅಭ್ಯರ್ಥಿಯಾಗಿ ಸೋತ ಎಚ್.ಎಸ್. ಶಂಕರಲಿಂಗೇಗೌಡರು ನಂತರ ಸತತ ನಾಲ್ಕು ಬಾರಿ ಬಿಜೆಪಿ ಟಿಕೆಟ್ ಮೇಲೆ ಆಯ್ಕೆಯಾದರು. 2013 ರಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸೋತರು.
- ಎಂಡಿಎ ಮಾಜಿ ಅಧ್ಯಕ್ಷ ಸಿ. ಬಸವೇಗೌಡರು ಇಲ್ಲಿಂದ 1994 ರಲ್ಲಿ ಜನತಾದಳ, ಸಿಐಟಿಬಿ ಮಾಜಿ ಅಧ್ಯಕ್ಷ ಡಿ. ಮಾದೇಗೌಡರು 1994 ರಲ್ಲಿ ಜನತಾದಳ ಬಂಡಾಯ, ಎಂಡಿಎ ಮಾಜಿ ಅಧ್ಯಕ್ಷ ಡಿ. ಧ್ರುವಕುಮಾರ್ 1999 ರಲ್ಲಿ ಜೆಡಿಎಸ್, ಎಂಡಿಎ ಮಾಜಿ ಅಧ್ಯಕ್ಷ ಸಂದೇಶ್ ನಾಗರಾಜ್ 2004 ರಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಾಗಿ ಸೋತಿದ್ದಾರೆ. ಆದರೆ 2018 ರಲ್ಲಿ ಎಂಡಿಎ ಮಾಜಿ ಅಧ್ಯಕ್ಷ ಎಲ್. ನಾಗೇಂದ್ರ ಗೆದ್ದರು.
- 1999 ಹಾಗೂ 2008 ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸೋತ ವಾಸು 2013 ರಲ್ಲಿ ಆಯ್ಕೆಯಾದರು. 2018 ರಲ್ಲಿ ಮತ್ತೆ ಸೋತರು.
- ಪಾಲಿಕೆ ಸದಸ್ಯರಾಗಿದ್ದ ಸಿ. ಬಸವರಾಜು 1985, ವಕೀಲರಾದ ವಿ. ಮೈಥಿಲಿ 1989 ರಲ್ಲಿ ಇಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದರು.
- ವರ್ತಮಾನ ಪತ್ರಿಕೆ ಸಂಸ್ಥಾಪಕ ಎಂ.ಎನ್. ತಿಮ್ಮಯ್ಯ ಒಮ್ಮೆ , ರಾಜ್ಯಧರ್ಮ ಪತ್ರಿಕೆ ಸಂಸ್ಥಾಪಕ ಬಿ.ಪಿ.ಆರ್. ವಿಠಲ್, ಪತ್ರಕರ್ತ ಸರ್ವೋತ್ತಮ, ಮೈಸೂರು ಗ್ರಾಹಕರ ಪರಿಷತ್ತಿನ ಭಾಮಿ ವಿ. ಶೆಣೈ ತಲಾ ಎರಡು ಬಾರಿ, ಶಫಿ ಅಹ್ಮದ್, ಸಮಾಜವಾದಿ ಎನ್. ಈಶ್ವರ್, ಎಸಿಐಸಿಎಂ ಸಂಚಾಲಕ ಎನ್. ಲಕ್ಷ್ಮಣ್ ಒಂದು ಬಾರಿ ಸ್ಪರ್ಧಿಸಿ, ಸೋತಿದ್ದಾರೆ.
---
ಈವರೆಗೆ ಪ್ರತಿನಿಧಿಸಿದವರು
ಫೋಟೋ 8 ಎಂವೈಎಸ್33
ಕೆ. ಪುಟ್ಟಸ್ವಾಮಿ, ಬಿ.ಎನ್. ಕೆಂಗೇಗೌಡ, ಎಚ್. ಕೆಂಪೇಗೌಡ, ಕೆ. ಕೆಂಪೀರೇಗೌಡ, ಪ್ರೊ.ಪಿ.ಎಂ. ಚಿಕ್ಕಬೋರಯ್ಯ, ಕೆ. ಹರ್ಷಕುಮಾರ್ ಗೌಡ, ಎಚ್.ಎಸ್. ಶಂಕರಲಿಂಗೇಗೌಡ, ವಾಸು, ಎಲ್. ನಾಗೇಂದ್ರ
-
1978- ಕೆ. ಪುಟ್ಟಸ್ವಾಮಿ (ಜನತಾಪಕ್ಷ)
1978- (ಉಪ ಚುನಾವಣೆ)- ಬಿ.ಎನ್. ಕೆಂಗೇಗೌಡ (ಕಾಂಗ್ರೆಸ್)
1983- ಎಚ್. ಕೆಂಪೇಗೌಡ (ಜನತಾಪಕ್ಷ)
1985- ಕೆ. ಕೆಂಪೀರೇಗೌಡ (ಜನತಾಪಕ್ಷ)
1986- (ಉಪ ಚುನಾವಣೆ)- ಪ್ರೊ.ಪಿ.ಎಂ. ಚಿಕ್ಕಬೋರಯ್ಯ(ಜನತಾಪಕ್ಷ)
1989- ಕೆ. ಹರ್ಷಕುಮಾರ್‌ಗೌಡ (ಕಾಂಗ್ರೆಸ್)
1994, 1999, 2004, 2008- ಎಚ್.ಎಸ್. ಶಂಕರಲಿಂಗೇಗೌಡ (ಬಿಜೆಪಿ)
2013- ವಾಸು (ಕಾಂಗ್ರೆಸ್)
2018- ಎಲ್. ನಾಗೇಂದ್ರ (ಬಿಜೆಪಿ)