ನನ್ನ ಉಸಿರಿರುವವರೆಗೂ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಹೋರಾಟ ನಿಲ್ಲುವುದಿಲ್ಲ| ಜೈಲು ಸೇರಿದರು ಹೆದರೊಲ್ಲ: ಎಂಎಲ್ಸಿ ಸಿ.ಎಂ. ಇಬ್ರಾಹಿಂ|ಸಂವಿಧಾನ ಉಳಿದರೆ ದೇಶ ಉಳಿಯುತ್ತದೆ|
ವಿಜಯಪುರ(ಫೆ.09): ನನ್ನ ಉಸಿರಿರುವವರೆಗೂ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಹೋರಾಟ ನಿಲ್ಲುವುದಿಲ್ಲ. ನನಗೆ ಗುಂಡು ಹಾಕಿದರೂ ಸ್ವಾಗತಿಸುತ್ತೇನೆ. ನನಗೆ ಮತದಾನದ ಹಕ್ಕಿಗಿಂತ ದೇಶದ ಸಂವಿಧಾನ ಹೆಚ್ಚು ಮಹತ್ವವಾಗಿದೆ. ಸಂವಿಧಾನ ಉಳಿದರೆ ದೇಶ ಉಳಿಯುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ ಹೇಳಿದ್ದಾರೆ.
ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹೋರಾಟದಲ್ಲಿ ಜೈಲು ಸೇರಿದರೂ ಚಿಂತೆ ಇಲ್ಲ, ಜೈಲು ನಮಗೆ ಹೊಸತೇನಲ್ಲ. ಮೀಸಲಾತಿ ತೆಗೆದುಹಾಕಿ, ಎಲ್ಲರನ್ನೂ ಶೂದ್ರರನ್ನಾಗಿಸುವುದು ಕೇಂದ್ರ ಸರ್ಕಾರದ ಉದ್ದೇಶ ಎಂದು ಆರೋಪಿಸಿದ್ದಾರೆ.
undefined
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಭಾರತೀಯ ಸಂವಿಧಾನವನ್ನು ಪೂರ್ತಿಯಾಗಿ ಬದಲಿಸದೇ ಅದರಲ್ಲಿರುವ ಒಂದೊಂದು ಕಾಗದ ಬದಲಿಸುವಲ್ಲಿ ಕೇಂದ್ರ ಸರ್ಕಾರ ನಿರತವಾಗಿದೆ. ಸಂವಿಧಾನ ಬದಲಾವಣೆಯಿಂದಾಗಿ ಗಂಭೀರ ಪರಿಸ್ಥಿತಿ ಅದರಲ್ಲೂ ದಲಿತ ಸಮುದಾಯಕ್ಕೆ ಗಂಭೀರ ಸಮಸ್ಯೆ ಎದುರಾಗಲಿದೆ. ಎನ್‌ಆರ್‌ಸಿಯಿಂದ ಮುಸ್ಲಿಮರಿಗೆ ಏನೂ ಆಗುವುದಿಲ್ಲ, ನಾವು ಮೀಸಲಾತಿಯನ್ನೂ ಪಡೆಯುತ್ತಿಲ್ಲ. ಮತದಾನದ ಹಕ್ಕು ತೆಗೆದು ಹಾಕಿದರೂ ನಮಗೇನು ಆಗುವುದಿಲ್ಲ. ದಲಿತರು ಈ ವಿಷಯವನ್ನು ಅರಿತಿದ್ದಾರೆ. ದಲಿತ ಸಂಸದರು ಈ ವಿಷಯವನ್ನು ಅರಿತುಕೊಳ್ಳಬೇಕಿದೆ ಎಂದರು.
ದೇಶದಲ್ಲಿರುವ ಎಲ್ಲರನ್ನೂ ಶೂದ್ರರನ್ನಾಗಿಸುವುದು ಕೇಂದ್ರದ ಉದ್ದೇಶ. ಇದು ಅನುಷ್ಠಾನಗೊಂಡರೆ ಸಂಸದ ರಮೇಶ ಜಿಗಜಿಣಗಿ, ಡಿಸಿಎಂ ಗೋವಿಂದ ಕಾರಜೋಳ ಕ್ಷೌರ ಮಾಡಿಸಿಕೊಳ್ಳುವುದು ಸಹ ಕಷ್ಟ(ಮುಷ್ಕಿಲ್) ಆಗುತ್ತದೆ ಎಂದು ಲೇವಡಿ ಮಾಡಿದರು.
ಇನ್ನೊಂದೆಡೆ ವಿರೋಧ ಪಕ್ಷಕ್ಕೆ ವಿರೋಧ ಪಕ್ಷ ಸ್ಥಾನದ ಅನುಭವವಿಲ್ಲ. ಆಡಳಿತ ಪಕ್ಷದಲ್ಲಿರುವ ಪಕ್ಷಕ್ಕೆ ಆಡಳಿತದಲ್ಲಿದ್ದು ರೂಢಿಯಿಲ್ಲ, ಇಂದಿಗೂ ಆಡಳಿತಾರೂಢ ಪ್ರಧಾನಿ ಅವರು ವಿರೋಧ ಪಕ್ಷದ ನಾಯಕರಂತೆ ಮಾತನಾಡುತ್ತಿದ್ದಾರೆ. ಮಾತೆತ್ತಿದರೆ ಪ್ರತಿ ಪಕ್ಷಗಳನ್ನು ಟೀಕಿಸುವುದರಲ್ಲಿ ತೊಡಗಿದ್ದಾರೆ ಎಂದರು.
ಹೆಗಡೆ ವಿರುದ್ಧ ಮೋದಿ ಮೌನ:
ಕೇಂದ್ರ ಸರ್ಕಾರಕ್ಕೆ ನಿಜವಾಗಿಯೂ ಏನಾದರೂ ತಾಕತ್ತಿದ್ದರೆ ನೇರವಾಗಿ ಮೀಸಲಾತಿ ರದ್ದುಗೊಳಿಸುವ, ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸುವ ವಿಚಾರ ಹೇಳಲಿ ನೋಡೋಣ ಎಂದು ಸವಾಲು ಹಾಕಿದರು. ರಾಷ್ಟ್ರಪಿತ ಗಾಂಧೀಜಿಯವರ ಬಗ್ಗೆ ಅನಂತಕುಮಾರ ಹೆಗಡೆ ಹೇಳಿದಾಗ ಮೋದಿ ಮೌನ ವಹಿಸಿದರು. ಅವರ ಮೇಲೆ ಯಾವ ಕ್ರಮ ಕೈಗೊಂಡಿಲ್ಲ ಎಂದರು.
ಇಡೀ ಮನುಕುಲ ಹಜರತ್ ಆದಮ್ ಅವರ ಸಂತತಿ ಎಂದು ಇಸ್ಲಾಂ ಹೇಳುತ್ತದೆ. ಇಡೀ ಜಗತ್ತೇ ಒಂದು ಕುಟುಂಬ ಎಂದು ಹಿಂದೂಧರ್ಮ ಸಾರುತ್ತದೆ. ಹೀಗಿರುವಾಗ ಮೋದಿ ನಮ್ಮ ದೊಡ್ಡಪ್ಪನ ಮಗ, ಅಮಿತ ಶಾ ಚಿಕ್ಕಪ್ಪನ ಮಗ. ಆದರೂ ಈ ರೀತಿ ಏಕೆ ಮಾಡುತ್ತಿದ್ದಾರೋ ಗೊತ್ತಿಲ್ಲ ಎಂದರು.
ಇಂದಿಗೂ ದೇಶದಲ್ಲಿ ಶೇ.50 ರಷ್ಟು ವೀರಯೋಧರಿಗೆ ಸೂಕ್ತವಾದ ಪಾದರಕ್ಷೆ, ಗುಣಮಟ್ಟದ ಆಹಾರವಿಲ್ಲ ಎನ್ನುವುದು ಸಿಎಜಿ ವರದಿಯೇ ದೃಢಪಡಿಸಿದೆ. ಶಿವಸೇನೆಯ ಅನೇಕ ಸಂಸದರು ದನಿ ಎತ್ತಿದ್ದಾರೆ. ಆದರೆ ಕೇಂದ್ರ ಸರ್ಕಾರ ಮೌನವಾಗಿದೆ. ದಿ.ಇಂದಿರಾ ಗಾಂಧಿ ಪಾಕಿಸ್ತಾನವನ್ನು ಎರಡು ತುಂಡು ಮಾಡಿ, ಲಕ್ಷಾಂತರ ಪಾಕ್ ಸೈನಿಕರನ್ನು ಒತ್ತೆಯಾಳುಗಳಾಗಿ ಇರಿಸಿಕೊಂಡರು. ನಂತರ ಭುಟ್ಟೋ ಕೈಕಾಲು ಹಿಡಿದು ಪಾಕ್ ಸೆರೆಯಾಳುಗಳನ್ನು ಬಿಡಿಸಿಕೊಂಡು ಹೋದರು. ನಮ್ಮ ಸೈನಿಕರಲ್ಲಿ ಶತ್ರು ರಾಷ್ಟ್ರವನ್ನು ಹುಟ್ಟಡಗಿಸುವ ಶಕ್ತಿ ಇದೆ. ಆದರೆ ಸೈನಿಕರ ಶಕ್ತಿ ಉಪಯೋಗಿಸಿಕೊಳ್ಳುವ ಸಾಮರ್ಥ್ಯ ಕೇಂದ್ರ ಸರ್ಕಾರಕ್ಕೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎನ್‌ಆರ್‌ಸಿಗೆ ವಿರೋಧ:
ರಾಮ ಜನ್ಮವೆತ್ತಿದ ಪುಣ್ಯಭೂಮಿಯಲ್ಲಿ ಈ ರೀತಿಯ ವಿದ್ಯಮಾನಗಳು ನಡೆಯುತ್ತಿರುವುದು ನೋವಿನ ಸಂಗತಿ. 120 ಕೋಟಿ ಜನರನ್ನು ತಹಸೀಲ್ದಾರ ಕಚೇರಿ ಮುಂದೆ ಕ್ಯೂ ನಿಲ್ಲಿಸುವುದು ಸರ್ಟಿಫಿಕೇಟ್ ಪಡೆದುಕೊಳ್ಳುವ ಉದ್ದೇಶ. ಅಸ್ಸಾಂನಲ್ಲಿ 1600 ಕೋಟಿ ಖರ್ಚು ಮಾಡಿ ಸಿದ್ಧಪಡಿಸಿದ ಎನ್‌ಆರ್‌ಸಿ ವರದಿಯನ್ನೇ ಅಲ್ಲಿನ ಸರ್ಕಾರ ರದ್ದುಗೊಳಿಸಿದೆ ಎಂದರು.
ಎನ್‌ಆರ್‌ಸಿಗೆ ಇಡೀ ಭಾರತದ ವಿರೋಧವಿದೆ. ಇದರ ವರದಿ ಬೇಕಿದ್ದರೆ ಸಬ್ ಇನ್ಸಪೆಕ್ಟರ್ ಅಥವಾ ಗ್ರಾಮ ಪಂಚಾಯತಿ ಅಧ್ಯಕ್ಷರಿಂದ ಕೇಳಿ ಪಡೆಯಬಹುದು. ಕಾಂಗ್ರೆಸ್, ಜನತಾದಳದವರನ್ನು ಕೇಳಬೇಡಿ. ಎಲ್.ಕೆ. ಅಡ್ವಾಣಿ ಅವರನ್ನು ಕೇಳಿ. ನಿವೃತ್ತ ನ್ಯಾಯಾಧೀಶರನ್ನು ಕೇಳಿ. ಅವರೂ ಕೂಡಾ ಸಿಎಎ, ಎನ್‌ಆರ್‌ಸಿಗೆ ವಿರೋಧ ವ್ಯಕ್ತಪಡಿಸುತ್ತಾರೆ ಎಂದು ವ್ಯಂಗ್ಯವಾಡಿದರು.
ವಿವಾಹ ನೋಂದಣಿ ದಾಖಲೆ ಮುಸಲ್ಮಾನರಿಗೆ ಸುಲಭವಾಗಿ ದೊರಕುತ್ತದೆ. ಆದರೆ ಅನೇಕರು ಅಗ್ನಿಸಾಕ್ಷಿಯಾಗಿ ಮದುವೆಯಾಗಿದ್ದಾರೆ. ಅವರ ದಾಖಲೆ ಎಲ್ಲಿಂದ ತರಬೇಕು. ಈ ಕಾಯ್ದೆ ಬಗ್ಗೆ ಯಾರಲ್ಲೂ ಸ್ಪಷ್ಟತೆ ಇಲ್ಲ. ಎನ್‌ಆರ್‌ಸಿಗೆ ಸಂಬಂಧಿಸಿದಂತೆ ಸ್ಪಷ್ಟವಾದ ಚಿತ್ರಣವಿಲ್ಲ, ಮೋದಿ ಅವರು ಈ ಬಗ್ಗೆ ಸ್ಪಷ್ಟೀಕರಣ ನೀಡುವ ಪ್ರಯತ್ನ ಕೂಡ ಮಾಡಿಲ್ಲ ಎಂದರು.
ಒಂದೊಂದು ಹಾಳೆಯನ್ನು ಮಾತ್ರ ತೆಗೆಯಲಾಗುತ್ತದೆ. ಎಲ್ಲವೂ ತೆಗೆದುಹಾಕಿದರೆ ಇಡೀ ಸಂವಿಧಾನವೇ ಖಾಲಿ ಉಳಿಯುತ್ತದೆ. ನಿಮ್ಮ ಬುಡಕ್ಕೆ ನೀರು ಬರುತ್ತಿದೆ. ವೋಟಿಂಗ್ ಹಕ್ಕು ಹೋಗುತ್ತದೆ. ಸಾಚಾರ್ ವರದಿಯನ್ವಯ, ಇಸ್ಲಾಂ ಧರ್ಮೀಯರ ಹೋರಾಟವಲ್ಲ, ಇದು ಸಂವಿಧಾನಕ್ಕೆ ಆಪತ್ತು ಇರುವ ಕಾರಣದಿಂದಾಗಿ ಈ ಹೋರಾಟ ನಡೆದಿದೆ. ಇದೊಂದು ಸ್ವಾತಂತ್ರ್ಯ ಸಂಗ್ರಾಮ, ಈಗಲಾದರೂ ಚರ್ಚೆ ಮಾಡಿ, ಕರೆದು ಚರ್ಚೆ ಮಾಡದೇ ಹೆದರಬೇಡಿ ಎಂದರು. ಶಹೀನ್‌ಭಾಗ್‌ನಲ್ಲಿ ನೂರಾರು ಹೆಣ್ಣುಮಕ್ಕಳು ಪ್ರತಿಭಟನೆ ಮಾಡುತ್ತಿದ್ದಾರೆ. ಬೇಟಿ ಬಚಾವೋ ಎನ್ನುವ ಕೇಂದ್ರ ಸರ್ಕಾರದ ನಾಯಕರು ಅಲ್ಲಿ ಸೌಜನ್ಯಕ್ಕೂ ಭೇಟಿ ನೀಡಿಲ್ಲ ಎಂದರು.
ರೈಲ್ವೆ ಅಂಗಡಿ ಬಂದ್:
ರೈಲ್ವೆ ಬಜೆಟ್‌ನಲ್ಲಿ ಅಂಗಡಿ ಬಂದ್ ಆಗುವ ಪರಿಸ್ಥಿತಿ ಬಂದಿವೆ. ಅಂಗಡಿ ಉದ್ಧಾರವೇ ಆಗಿಲ್ಲ, ಕೇಂದ್ರ ಬಜೆಟ್‌ನಲ್ಲಿ ರಾಜ್ಯಕ್ಕೆ ಮಲತಾಯಿ ಧೋರಣೆ ಅನುಸರಿಸಲಾಗಿದೆ. ಪ್ರವಾಹ ಪೀಡಿತರ ಮನೆ ಕಟ್ಟಿಕೊಳ್ಳಲು ಒಂದೇ ಒಂದು ದುಡ್ಡು ಬಂದಿಲ್ಲ ಎಂದು ದೂರಿದ ಅವರು, ರಾಜ್ಯದಲ್ಲೂ ಬಜೆಟ್ ನಂತರ ಸರ್ಕಾರ ಉಳಿಯುತ್ತದೆ ಎನ್ನುವ ನಿರೀಕ್ಷೆ ಇಲ್ಲ. ರಾಷ್ಟ್ರಪತಿ ಆಡಳಿತ ಬಂದರೂ ಬರಬಹುದು. ಉಪ ಚುನಾವಣೆಯಾದರೂ ಆಗಬಹುದು ಎಂದರು.
ಅಲ್ಪಸಂಖ್ಯಾತ ಮುಖಂಡರಾದ ಅಬ್ದುಲ್‌ಹಮೀದ್ ಮುಶ್ರೀಫ್, ಎಸ್.ಎಂ. ಪಾಟೀಲ ಗಣಿಹಾರ, ಎಂ.ಸಿ. ಮುಲ್ಲಾ, ಅಬ್ದುಲ್‌ರಜಾಕ್ ಹೊರ್ತಿ, ಅಕ್ರಂ ಮಾಶ್ಯಾಳಕರ, ಫಯಾಜ್ ಕಲಾದಗಿ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.