ಮೈಸೂರಲ್ಲಿ 28ಕ್ಕೆ ಜಿಲ್ಲಾ ಮಟ್ಟದ ಸಿರಿಧಾನ್ಯ ಹಬ್ಬ ಮತ್ತು ಸಿರಿಧಾನ್ಯ ನಡಿಗೆ

By Kannadaprabha NewsFirst Published Dec 23, 2023, 8:42 AM IST
Highlights

ಆಹಾರ ಮತ್ತು ಪೌಷ್ಟಿಕ ಭದ್ರತಾ ಯೋಜನೆಯಡಿ ಸಾರ್ವಜನಿಕರಲ್ಲಿ ಸಿರಿಧಾನ್ಯಗಳ ಬಗ್ಗೆ ಅರಿವು ಮೂಡಿಸಲು ಡಿ. 28ರಂದು ಜಿಲ್ಲಾ ಮಟ್ಟದ ಸಿರಿಧಾನ್ಯ ಹಬ್ಬ ಹಾಗೂ ಸಿರಿಧಾನ್ಯ ನಡಿಗೆ ಆಯೋಜಿಸಲಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ಬಿ.ಎಸ್. ಚಂದ್ರಶೇಖರ್ ಹೇಳಿದರು.

  ಮೈಸೂರು: ಆಹಾರ ಮತ್ತು ಪೌಷ್ಟಿಕ ಭದ್ರತಾ ಯೋಜನೆಯಡಿ ಸಾರ್ವಜನಿಕರಲ್ಲಿ ಸಿರಿಧಾನ್ಯಗಳ ಬಗ್ಗೆ ಅರಿವು ಮೂಡಿಸಲು ಡಿ. 28ರಂದು ಜಿಲ್ಲಾ ಮಟ್ಟದ ಸಿರಿಧಾನ್ಯ ಹಬ್ಬ ಹಾಗೂ ಸಿರಿಧಾನ್ಯ ನಡಿಗೆ ಆಯೋಜಿಸಲಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ಬಿ.ಎಸ್. ಚಂದ್ರಶೇಖರ್ ಹೇಳಿದರು.

ನಗರದ ಕಾಡಾ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 8 ಗಂಟೆಗೆ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ ನಡಿಗೆಗೆ ಚಾಲನೆ ನೀಡಲಿದ್ದು, ಅಲ್ಲಿಂದ ಹೊರಟು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಹಳೆಯ ಜಿಲ್ಲಾಧಿಕಾರಿ ಕಚೇರಿ ತಲುಪಲಿದೆ ಎಂದರು.

Latest Videos

ಬೆಳಗ್ಗೆ 11ಕ್ಕೆ ಪಿ. ಕಾಳಿಂಗರಾವ್ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಸಿರಿಧಾನ್ಯ ಹಬ್ಬ ನಡೆಯಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಉದ್ಘಾಟಿಸುವರು. ಈ ಹಬ್ಬದಲ್ಲಿ 500ಕ್ಕೂ ಹೆಚ್ಚು ರೈತರು ಭಾಗವಹಿಸುವರು. ಸಿರಿಧಾನ್ಯ ಬೆಳೆಯುವ ಸುಧಾರಿತ ಕ್ರಮಗಳು, ಅವುಗಳ ಸಂಸ್ಕರಣೆ, ಮೌಲ್ಯವರ್ಧನೆ ಮತ್ತು ಸಿರಿಧಾನ್ಯಗಳಿಂದ ತಯಾರಿಸಬಹುದಾದ ಖಾದ್ಯಗಳ ಬಗ್ಗೆ ನುರಿತ ತಜ್ಞರಿಂದ ಉಪನ್ಯಾಸ ಏರ್ಪಡಿಸಲಾಗಿದೆ ಎಂದರು.

ಇದಲ್ಲದೆ, ಗಳ ಮೌಲ್ಯವರ್ಧನೆಗೊಳಿಸಿ ಮಾಡಲು ಇಚ್ಛಿಸುವ ಉದ್ದಿಮೆದಾರರಿಗೆ ಅವರ ಉತ್ಪನ್ನ ಪ್ರದರ್ಶಿಸಲು ಹಾಗೂ ಮಾರಾಟ ಮಾಡಲು ಅನುಕೂಲವಾಗುವಂತೆ 20 ಮಾರಾಟ ಮಳಿಗೆ ನಿರ್ಮಿಸಲಾಗುತ್ತಿದೆ ಎಂದು ಅವರು ಹೇಳಿದರು.

ಜಿಲ್ಲೆಯಲ್ಲಿ 35 ರೈತರು ಆತ್ಮಹತ್ಯೆ

ಸಾಲ, ಬೆಳೆ ನಷ್ಟ ಸೇರಿದಂತೆ ವಿವಿಧ ಕಾರಣಕ್ಕಾಗಿ ಜಿಲ್ಲೆಯಲ್ಲಿ ಪ್ರಸಕ್ತ ವರ್ಷದಲ್ಲಿ 35 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಈವರೆಗೆ 23 ಮೃತ ರೈತರ ಕುಟುಂಬಕ್ಕೆ ಪರಿಹಾರ ನೀಡಲಾಗಿದೆ. 2023 ಏಪ್ರಿಲ್‌ನಿಂದ ಡಿಸೆಂಬರ್ ವರೆಗೆ ಪಿರಿಯಾಪಟ್ಟಣ ತಾಲೂಕಿನಲ್ಲಿ ಅತಿ ಹೆಚ್ಚು ಸೇರಿದಂತೆ 35 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದರು.

ಎಸಿ ಸಮಿತಿಯ ಶಿಫಾರಸ್ಸಿನ ವರದಿಯಂತೆ 23 ಮೃತ ರೈತರ ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರ ವಿತರಿಸಲಾಗಿದೆ. ಮೂರು ಪ್ರಕರಣಗಳಲ್ಲಿ ಸರಿಯಾದ ದಾಖಲೆ ಇಲ್ಲದ ಕಾರಣ ಪುನರ್ ಪರಿಶೀಲನೆ ನಡೆಸಲಾಗುತ್ತದೆ. ಉಳಿದ ಪ್ರಕರಣಗಳ ವರದಿಯನ್ನು ಸರ್ಕಾರಕ್ಕೆ ಕಳುಹಿಸಲಾಗಿದೆ ಎಂದು ಅವರು ಹೇಳಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರದ ನಿಯಮಾನುಸಾರ ಮೃತ ರೈತರ ಕುಟುಂಬಗಳಿಗೆ ಪರಿಹಾರ ನೀಡಲಾಗುತ್ತದೆ. ಪಿರಿಯಾಪಟ್ಟಣ ತಾಲೂಕಿನಲ್ಲಿ ತಂಬಾಕು ಬೆಳೆ ಬೆಳೆದರೂ ಪ್ರತಿ ಕೂಲಿ ಕಾರ್ಮಿಕರ ಮೂಲಕ ಕೆಲಸ ಮಾಡಿಸಿದರೆ ಆದಾಯ ಬರುವುದಿಲ್ಲ. ಅಲ್ಲದೆ ಕೃಷಿ ವ್ಯವಸಾಯಕ್ಕೆ ಅನುಸರಿಸಬೇಕಾದ ಕ್ರಮ ಪಾಲಿಸದೆ ನಷ್ಟ ಅನುಭವಿಸುವುದರಿಂದ ಆತ್ಮಹತ್ಯೆಗೆ ಕಾರಣವಾಗಿದೆ ಎಂದರು.

ಮುಂಗಾರು ಮಳೆ ಕೈಕೊಟ್ಟರೂ ಹಿಂಗಾರು ಮಳೆಯಲ್ಲಿ 60,300 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿ ಶೇ. 103ರಷ್ಟು ಬಿತ್ತನೆಯಾಗಿದೆ. ಹುರುಳಿ, ಅಲಸಂದೆ, ಮುಸುಕಿನಜೋಳ ಬಿತ್ತನೆಯಾಗಿದೆ. ಜಿಲ್ಲೆಯಲ್ಲಿ ರಸಗೊಬ್ಬರ, ಬಿತ್ತನೆ ಬೀಜ, ಕ್ರಿಮಿನಾಶಕವನ್ನು ದಾಸ್ತಾನು ಮಾಡಿದ್ದರಿಂದ ಯಾವುದೇ ರೈತರಿಗೆ ದೊರಕಿಲ್ಲ ಎನ್ನುವ ದೂರು ಬರದಂತೆ ಕ್ರಮಕೈಗೊಳ್ಳಲಾಗಿದೆ ಎಂದು ಅವರು ನುಡಿದರು.

ಪ್ರಧಾನ ಮಂತ್ರಿ ಕೃಷಿ ಸಂಚಯ ಯೋಜನೆಯಡಿ ಜಿಲ್ಲೆಗೆ 23.87 ಕೋಟಿ ರು. ನಿಗದಿಪಡಿಸಿದ್ದು, ಪ.ಜಾತಿ, ಪ.ಪಂಗಡ ಹಾಗೂ ಸಾಮಾನ್ಯ ವರ್ಗದ ರೈತರಿಗೆ ಶೇ. 90 ರಷ್ಟು ಸಹಾಯಧನ ಹನಿ ಮತ್ತು ತುಂತುರು ನೀರಾವರಿ ಘಟಕ ಒದಗಿಸಲು ಅವಕಾಶವಿರುತ್ತದೆ. 2023-24ನೇ ಸಾಲಿನ ಆಹಾರ ಮತ್ತು ಪೌಷ್ಟಿಕ ಭದ್ರತಾ ಯೋಜನೆಯಡಿ ರೈತರಿಗೆ ಲಘು ಪೋಷಕಾಂಶ, ಪೀಡೆ ನಾಶಕ, ಜಿಪ್ಸಂ ಮತ್ತು ಸುಧಾರಕಗಳನ್ನು ರೈತರಿಗೆ ರಿಯಾಯಿತಿ ದರದಲ್ಲಿ ವಿತರಿಸಲಾಗುತ್ತಿದೆ ಎಂದು ಅವರು ವಿವರಿಸಿದರು.

ಮಳೆಯಾಶ್ರಿತ ಕೃಷಿ ನೀತಿ- 2014ರ ಅನ್ವಯ ಜಿಲ್ಲೆಯ ನಂಜನಗೂಡು, ಟಿ. ನರಸೀಪುರ, ಕೆ.ಆರ್. ನಗರ ಮತ್ತು ಮೈಸೂರು ತಾಲೂಕುಗಳಲ್ಲಿ ಸುಸ್ಥಿರ ಕೃಷಿ ಉತ್ತೇಜಿಸಿ, ಬೆಳೆ ಉತ್ಪಾದಕತೆ ಮತ್ತು ರೈತರ ಜೀವನಮಟ್ಟ ಸುಧಾರಿಸಲು ಕೃಷಿ ಭಾಗ್ಯ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ ಎಂದರು.

ಸಮರ್ಪಕ ಮಳೆ ನೀರಿನ ಸಂಗ್ರಹಣೆ ಮತ್ತು ಉಪಯುಕ್ತ ಬಳಕೆ ಪದ್ಧತಿಯಿಂದ ಕೃಷಿ ಉತ್ಪಾದಕತೆ ಉತ್ತಮಪಡಿಸುವುದು ಮತ್ತು ಆದಾಯ ಹೆಚ್ಚಿಸುವ ಉದ್ದೇಶದಿಂದ ಈ ಯೋಜನೆ ಆರಂಭವಾಗಿದ್ದು, ಮಳೆ ನೀರನ್ನು ವ್ಯರ್ಥಮಾಡದೆ ಆಯ್ದ ಸ್ಥಳದಲ್ಲಿ ಕೃಷಿಹೊಂಡ ತೆಗೆದು ಜಲ ಸಂಗ್ರಹಿಸಿ ಬೆಳೆಗಳ ಸಂದಿಗ್ಧ ಹಂತಗಳಲ್ಲಿ ರಕ್ಷಣಾತ್ಮಕ ನೀರಾವರಿ ಒದಗಿಸುವುದು ಮುಖ್ಯ ಎಂದರು.

ಪಿಎಂ ಕಿಸಾನ್ ಸಮ್ಮಾನ್ ಯೋಜನೆಯಡಿ ಜಿಲ್ಲೆಯ 10 ಲಕ್ಷ ರೈತರಲ್ಲಿ 7.20ಲಕ್ಷ ರೈತರಿಗೆ ಸಹಾಯಧನ ಬಿಡುಗಡೆಯಾಗುತ್ತಿದ್ದು, ಇದುವರೆಗೆ ಹದಿನೈದನೇ ಕಂತಿನ ಹಣ ಸೇರಿ 511 ಕೋಟಿ ರು. ನೀಡಲಾಗಿದೆ ಎಂದರು.

click me!