ಎರಡೂವರೆ ದಶಕ ಕಾಶ್ಮೀರದಲ್ಲಿ ಅನಾಥನಾಗಿದ್ದ ಕೆಂಚಪ್ಪ ಮರಳಿ ಕಲಘಟಗಿಗೆ!

By Kannadaprabha NewsFirst Published Feb 25, 2021, 7:29 AM IST
Highlights

ಕಲಘಟಕಿಯಿಂದ ತೆರಳಿದ್ದ ವ್ಯಕ್ತಿಯೋರ್ವರು ಬರೋಬ್ಬರಿ 20 ವರ್ಷಗಳ ಬಳಿಕ ಮರಳಿದ್ದಾರೆ. ಕಾಶ್ಮೀರದಿಂದ ಇದೀಗ ತವರು ತಲುಪಿದ್ದಾರೆ.  

 ಕಲಘಟಗಿ (ಫೆ.25):  ಎರಡೂವರೆ ದಶಕಗಳ ಹಿಂದೆ ಮನೆ-ಮಠ, ಹೆಂಡತಿ-ಮಕ್ಕಳಿಂದ ದೂರವಾಗಿ ದೂರದ ಜಮ್ಮು-ಕಾಶ್ಮೀರದ ಹೋಟೆಲ್‌ವೊಂದರಲ್ಲಿ ಒತ್ತೆ ಆಳಾಗಿ ಇದೀಗ ಕನ್ನಡಿಗ ಯೋಧರ ಸಹಕಾರದಿಂದ ಮರಳಿ ಮನೆ ಸೇರಿದ್ದಾರೆ ಈ ವೃದ್ಧ.

ಪಟ್ಟಣದ ಗಾಂಧಿನಗರದ ವಡ್ಡರ ಓಣಿಯ ನಿವಾಸಿ ಕೆಂಚಪ್ಪ ಗೋವಿಂದಪ್ಪ ವಡ್ಡರ 25 ವರ್ಷಗಳ ಹಿಂದೆ ಕೂಲಿ ಕೆಲಸಕ್ಕೆಂದು ಮನೆಯಿಂದ ಹೊರ ಹೋಗಿ, ಟಿಕೆಟ್‌ ತೆಗೆ​ಸದೇ ರೈಲು ಹತ್ತಿ​ದ್ದಾರೆ. ಆ ರೈಲು ಎಲ್ಲಿಗೆ ಹೋಗು​ತ್ತದೆ ಎನ್ನು​ವುದು ಅವ​ರಿಗೆ ಗೊತ್ತಿ​ರ​ಲಿಲ್ಲ. ಹರಿ​ದ್ವಾ​ರ​ದಲ್ಲಿ ರೈಲು ಅಧಿ​ಕಾ​ರಿ​ಗಳು ತಪಾ​ಸಣೆ ಮಾಡಿ ಅಲ್ಲೇ ಇಳಿ​ಸಿ​ದ್ದಾರೆ. ಅಲ್ಲಿ ಸ್ವಲ್ಪ ಕಾಲ ಇದ್ದು, ಮತ್ತೆ ರೈಲು ಹತ್ತಿ​ದ್ದಾರೆ, ಆ ರೈಲು ಉತ್ತ​ರಾ​ಖಂಡ ತಲು​ಪಿದೆ. ಹೀಗೆ ಊರೂರು ಸುತ್ತಿ ಜಮ್ಮು ಕಾಶ್ಮೀರ ತಲುಪಿದ್ದರು. ಅಲ್ಲಿ ಹೋಟೆಲೊಂದರ ಮಾಲೀಕರ ಕಡೆ ಕೆಲಸ ಮಾಡುತ್ತ ಕಷ್ಟದ ಪರಿಸ್ಥಿತಿಯಲ್ಲಿ ಜೀವನ ಕಳೆದ ಕೆಂಚಪ್ಪ ಇದೀಗ ತವರೂರಿಗೆ ಮರಳಿದ್ದಾರೆ.

ಅನಕ್ಷರಸ್ಥರಾದ ಕೆಂಚಪ್ಪ ಅವರನ್ನು ಹಲವಾರು ವರ್ಷಗಳಿಂದ ಜೀತದಾಳಿನಂತೆ ದುಡಿಸಿಕೊಂಡು, ಸರಿಯಾಗಿ ಅನ್ನ, ನೀರು ನೀಡದೇ, ಕೂಲಿ ಹಣ ನೀಡದೆ ಸತಾಯಿಸಿದ್ದಾರೆ ಅಲ್ಲಿನ ಹೋಟೆಲ್‌ ಮಾಲೀಕರು. ನನ್ನನ್ನು ಸತತ 25 ವರ್ಷಗಳಿಂದ ಉಸಿರುಗಟ್ಟುವ ವಾತಾವರಣದಲ್ಲಿ ಇಟ್ಟಿದ್ದರು. ಮರಳಿ ಊರಿಗೆ ಕಳಿಸದೇ ರಾತ್ರಿ ಸಮಯದಲ್ಲಿ ಕೈ ಕಾಲು ಕಟ್ಟಿಹಾಕಿ ಕೂಡಿ ಹಾಕಿದ್ದರು. ಇದರಿಂದ ಮನನೊಂದರೂ ಯಾರಿಗೂ ಹೇಳಿಕೊಳ್ಳಲಾಗದೆ ನರಕ ಯಾತನೆ ಅನುಭವಿಸುತ್ತಿದ್ದೆ ಎಂದು ಎದುರು ಅಳಲು ತೋಡಿಕೊಂಡರು ಕೆಂಚಪ್ಪ.

ಗದಗ: ತೆಲಂಗಾಣದ 28 ಜೀತ ಕಾರ್ಮಿಕರ ರಕ್ಷಣೆ .

ಕರ್ನಾಟಕದ ಗದಗ, ಮಂಗಳೂರು ಮತ್ತು ಬೆಂಗಳೂರು ಮೂಲದ ಮೂವರು ಯೋಧರು ಆಕಸ್ಮಿಕವಾಗಿ ಕೆಂಚಪ್ಪ ಕೆಲಸ ಮಾಡುವ ಹೋಟೆಲ್‌ಗೆ ಹೋದಾಗ ಕನ್ನಡ ಮಾತನಾಡುವುದನ್ನು ಕಂಡು ಪರಿಚಯ ಮಾಡಿಕೊಂಡಿದ್ದಾರೆ. ಜತೆಗೆ ಮನೆ, ಕುಟುಂಬದ ಬಗ್ಗೆ ವಿಚಾರಣೆ ಮಾಡಿ ಕೆಂಚಪ್ಪ ಮರಳಿ ಕುಟುಂಬ ಸೇರಲು ಕಾರಣರಾಗಿದ್ದಾರೆ. ನಾಲ್ಕು ದಿನಗಳ ಹಿಂದಷ್ಟೇ ಗದಗಕ್ಕೆ ಬಂದು ಅಲ್ಲಿಂದ ಕಲಘಟಗಿಗೆ ಬಂದಿದ್ದಾರೆ ಕೆಂಚಪ್ಪ.

70 ವರ್ಷದ ಕೆಂಚಪ್ಪ ಅವರಿಗೆ ನಾಲ್ವರು ಗಂಡು ಮಕ್ಕಳು, ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಮರಳಿ ಮನೆಗೆ ಬಂದಿರುವ ಖುಷಿಯಲ್ಲಿದ್ದಾರೆ ಕುಟುಂಬಸ್ಥರು. ಕೆಂಚಪ್ಪ ಅವರನ್ನು ಕರೆದುಕೊಂಡು ಬಂದಿರುವ ಯೋಧರಿಗೆ ತುಂಬ ಹೃದಯದ ಧನ್ಯವಾದ ತಿಳಿಸಿ ಸನ್ಮಾನ ಮಾಡಿದ್ದಾರೆ ಕುಟುಂಬದವರು.

ಉಗ್ರರ ಕೈಲಿ ಸಿಕ್ಕು ನರ​ಳಾ​ಡಿ​ದ್ದ​ರು

ಕೆಂಚಪ್ಪ ಒಮ್ಮೆ ಉಗ್ರರ ಕೈಯಲ್ಲಿ ಸಿಕ್ಕು ನರಳಾಡುವಂತಾಗಿತ್ತು. ಹೇಗೋ ಅವರಿಂದ ಬಚಾವಾದೆನು. ನಾನಿದ್ದ ಹೋಟೆಲ್‌ ಮಾಲೀಕರು, ಅಲ್ಲಿಯ ಜನರು ಚಿತ್ರಹಿಂಸೆ ಕೊಡುತ್ತಿದ್ದರು. ನಮ್ಮನ್ನು ಪರಕೀಯರಂತೆ ಕಾಣುವುದು ಹೆದರಿಸುವುದು, ಹೊಡೆಯುವುದು ಕೂಡ ಮಾಡುತ್ತಿದ್ದರು. ಕನ್ನಡ ಬಿಟ್ಟು ಬೇರೆ ಭಾಷೆ ತಿಳಿಯದೇ ತುಂಬ ಪರದಾಡುವಂತಾಗಿತ್ತು. ಇಂತಹ ಕಷ್ಟಯಾರಿಗೂ ಬರಬಾರದು. ನನಗೆ ಮರು ಜನ್ಮ ಬಂದಂತಾಯಿತು ಎನ್ನುತ್ತಾರೆ ಕೆಂಚಪ್ಪ.

ಕಲಘಟಗಿ ಪಟ್ಟಣದಲ್ಲಿ ನನ್ನ ಹೆಸರಿನಲ್ಲಿ ಯಾವುದೇ ರೇಶನ್‌ ಕಾರ್ಡ್‌, ಆಧಾರ್‌ ಕಾರ್ಡ್‌ ಹಾಗೂ ಯಾವುದೇ ದಾಖಲೆಗಳಿಲ್ಲ. ಸರಿಯಾದ ಸೂರು ಸಹ ನನ್ನ ಕುಟುಂಬಕ್ಕೆ ಇಲ್ಲ. ಸರ್ಕಾರದ ಸೌಲಭ್ಯವನ್ನು ಪಡೆದು ಜೀವನ ಸಾಗಿಸಲು ನೆರವಾಗಿ ಎಂದು ವಿನಂತಿ ಮಾಡಿಕೊಂಡರು.

ಜಮ್ಮು ಮತ್ತು ಕಾಶ್ಮೀರದ ಹೋಟೆಲ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ ಕೆಂಚಪ್ಪ ಅವರನ್ನು ನೋಡಿ ಮಾತನಾಡಿಸಿದಾಗ ಕನ್ನಡದವರು ಎಂದು ಗೊತ್ತಾಯಿತು. ಇವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲೂ ಪ್ರಚಾರ ಮಾಡಿದಾಗ ಅವರ ಕುಟುಂಬದ ಬಗ್ಗೆ ಮಾಹಿತಿ ಸಿಕ್ಕಿತು. ಕೆಂಚಪ್ಪ ಅವರನ್ನು ಅವರ ಕುಟುಂಬಕ್ಕೆ ಸುರಕ್ಷಿತವಾಗಿ ಒಪ್ಪಿಸಿದ್ದಕ್ಕೆ ನಮಗೂ ಧನ್ಯತಾಭಾವ ಉಂಟಾಗಿದೆ.

ಶರಣಬಸವ ರಾಗಾಪುರ, ಗದಗ ಮೂಲದ ಯೋಧ

click me!