ಸಡಿಲ ಮಣ್ಣು|ಶಿವಾಜಿನಗರದ ಬಿಎಂಟಿಸಿ ಬಸ್ ನಿಲ್ದಾಣ ಸಮೀಪ ಮೆಟ್ರೋ ಕಾಮಗಾರಿ ವೇಳೆ ಘಟನೆ, ಹಾನಿ ಇಲ್ಲ| ನೆಲ ಸ್ಥಿರವಾಗಿಲ್ಲದಿದ್ದರೆ ಅದನ್ನು ಸಿಮೆಂಟ್ ಸೇರಿದಂತೆ ಇತರೆ ವಸ್ತುಗಳನ್ನು ಬಳಸಿ ಗಟ್ಟಿಮಾಡಿಕೊಂಡು ಕಾಮಗಾರಿ ನಡೆಸುವುದು ಅನಿವಾರ್ಯ|
ಬೆಂಗಳೂರು(ಸೆ.25): ನಮ್ಮ ಮೆಟ್ರೋ 2ನೇ ಹಂತದ ಗೊಟ್ಟಿಗೆರೆ-ನಾಗವಾರ ಮಾರ್ಗದ ಶಿವಾಜಿನಗರ ಮೆಟ್ರೋ ನಿಲ್ದಾಣ ಸಮೀಪದ ಸುರಂಗ ಮಾರ್ಗ ಕಾಮಗಾರಿ ವೇಳೆ ಮಣ್ಣು ಕುಸಿದು ಹತ್ತು ಅಡಿಗಳಿಗೂ ಅಧಿಕ ಆಳದ ಗುಂಡಿ ಸೃಷ್ಟಿಯಾಗಿದ ಘಟನೆ ನಡೆದಿದೆ.
ಗುರುವಾರ ಶಿವಾಜಿನಗರದ ಬಿಎಂಟಿಸಿ ಬಸ್ ನಿಲ್ದಾಣ ಸಮೀಪದಲ್ಲಿ ಟಿಬಿಎಂ ಸುರಂಗ ನಿರ್ಮಾಣ ಕಾಮಗಾರಿ ಆರಂಭಿಸಿತ್ತು. ಈ ಸಂದರ್ಭದಲ್ಲಿ ಮಣ್ಣು ಕುಸಿತವಾಗಿದ್ದು ಯಾವುದೇ ಹಾನಿ ಸಂಭವಿಸಿಲ್ಲ. ಈ ಭಾಗದಲ್ಲಿ ಕಳೆದ ಒಂದು ವಾರದ ಹಿಂದೆ ಸುರಂಗ ಮಾರ್ಗ ಕೊರೆಯುವ ಕಾಮಗಾರಿಯನ್ನು ಆರಂಭಿಸಲಾಗಿತ್ತು. ಸುಮಾರು 350 ಟನ್ ತೂಕದ ಟಿಬಿಎಂ (ಅವನಿ) ದಿನಕ್ಕೆ 3.5 ಮೀಟರ್‌ನಿಂದ 5 ಮೀಟರ್‌ವರೆಗೂ ಸುರಂಗ ಮಾರ್ಗ ಕೊರೆಯುತ್ತಿದೆ (ಮೊದಲ ಹಂತದಲ್ಲಿ ಟಿಬಿಎಂ ಯಂತ್ರಗಳು ದಿನಕ್ಕೆ ಗರಿಷ್ಠ 18ರಿಂದ 20 ಮೀಟರ್ ಸುರಂಗ ಮಾರ್ಗ ಕೊರೆದಿದ್ದು ದಾಖಲೆ).
undefined
ನೆಲ ಮಟ್ಟದಿಂದ ಹತ್ತು ಅಡಿಗಳಿಗೂ ಹೆಚ್ಚು ಆಳದಲ್ಲಿ ಸುರಂಗ ಮಾರ್ಗದ ಕಾಮಗಾರಿ ನಡೆಯುತ್ತಿದ್ದು, ಟನಲ್ ಬೋರಿಂಗ್ ಮಷಿನ್ (ಟಿಬಿಎಂ) ಕಾರ್ಯಾಚರಣೆ ವೇಳೆ ಭೂ ಕಂಪನದಿಂದ ಮಣ್ಣು ಕುಸಿದಿದೆ. ಸುರಂಗ ಮಾರ್ಗದ ಕಾಮಗಾರಿ ಆರಂಭಕ್ಕೂ ಮುನ್ನವೇ ಇಲ್ಲಿನ ನೆಲ ಗಟ್ಟಿಯಾಗಿಲ್ಲ ಎಂಬುದು ಗೊತ್ತಾಗಿತ್ತು. ಆದರೆ, ಈಗಾಗಲೇ ಮೆಟ್ರೋ ಮಾರ್ಗದ ಸ್ಥಳ ನಿಗದಿಯಾಗಿದ್ದು ಬೇರೆ ದಾರಿಯಲ್ಲಿ ಮಾರ್ಗ ನಿರ್ಮಾಣ ಸಾಧ್ಯವಿಲ್ಲ. ನೆಲ ಸ್ಥಿರವಾಗಿಲ್ಲದಿದ್ದರೆ ಅದನ್ನು ಸಿಮೆಂಟ್ ಸೇರಿದಂತೆ ಇತರೆ ವಸ್ತುಗಳನ್ನು ಬಳಸಿ ಗಟ್ಟಿಮಾಡಿಕೊಂಡು ಕಾಮಗಾರಿ ನಡೆಸುವುದು ಅನಿವಾರ್ಯ. ಹಾಗೆಯೇ ಗುಂಡಿ ಬಿದ್ದ ಸ್ಥಳವನ್ನು ಮಣ್ಣು, ಸಿಮೆಂಟ್ ಸೇರಿದಂತೆ ಇತರೆ ವಸ್ತುಗಳನ್ನು ಬಳಸಿ ಗಟ್ಟಿಮಾಡಿಕೊಂಡು ಸುರಂಗ ಕೊರೆಯುವುದನ್ನು ಮುಂದುವರೆಸಲಾಗುವುದು ಎಂದು ಮೆಟ್ರೋ ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರು : ಮಾರ್ಚ್ ವೇಳೆಗೆ ಮೆಟ್ರೋ ಸುರಂಗ ಕಾಮಗಾರಿ?
ಮೊದಲ ಹಂತದ ಸುರಂಗ ಮಾರ್ಗದ ಕಾಮಗಾರಿ ಸಂದರ್ಭದಲ್ಲಿ 2015ರಲ್ಲಿ ಸಿಟಿ ಸಿವಿಲ್ ಕೋರ್ಟ್ ಬಳಿ ಮತ್ತು 2016 ಆಗಸ್ಟ್ 2ರಂದು ನಗರದ ಕೆ.ಜಿ.ರಸ್ತೆಯಲ್ಲಿ ಮೆಟ್ರೋ ಸುರಂಗ ಮಾರ್ಗದ ಬಳಿ ಆರು ಅಡಿ ಭೂ ಕುಸಿತ ಉಂಟಾಗಿತ್ತು. ಹೀಗೆ ಸುಮಾರು ಏಳೆಂಟು ಬಾರಿ ಭೂ ಕುಸಿತವಾದ ಘಟನೆಗಳು ನಡೆದಿದ್ದನ್ನು ಸ್ಮರಿಸಬಹುದು.
ಸುರಂಗ ಮಾರ್ಗ:
ವೆಲ್ಲಾರ ಜಂಕ್ಷನ್- ಶಿವಾಜಿನಗರ (ಪ್ಯಾಕೇಜ್ 2) 2.76 ಕಿ.ಮೀ. ಉದ್ದ ಹಾಗೂ ಶಿವಾಜಿನಗರ-ಪಾಟರಿ ಟೌನ್ (ಪ್ಯಾಕೇಜ್-3) 2.88 ಕಿ.ಮೀ ಸೇರಿ ಒಟ್ಟು 5.63 ಕಿ.ಮೀ ಉದ್ದದ ಸುರಂಗ ಕೊರೆಯಲಾಗುತ್ತಿದೆ. ಈ ಮಾರ್ಗದ ಪ್ಯಾಕೇಜನ್ನು ಎಲ್ ಆ್ಯಂಡ್ ಟಿ ಕಂಪನಿಗೆ ಗುತ್ತಿಗೆ ನೀಡಲಾಗಿದೆ. 2,628 ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ.