ಕೃಷಿಕರ ಸಮಸ್ಯೆ ಪರಿಹರಿಸುವಲ್ಲಿ ಸರ್ಕಾರಗಳು ವಿಫಲ

By Kannadaprabha NewsFirst Published Nov 14, 2021, 6:26 AM IST
Highlights
  • ಕೃಷಿಕರ ಸಮಸ್ಯೆ ಪರಿಹರಿಸುವಲ್ಲಿ ಸರ್ಕಾರಗಳು ವಿಫಲ
  • - ಕರ್ನಾಟಕ ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಡಾ. ಪ್ರಕಾಶ್‌ ಕಮ್ಮರಡಿ ಆರೋಪ

ಮೈಸೂರು (ನ.14): ಇಂದಿನ ಪರಿಸ್ಥಿತಿಯಲ್ಲಿ ದೇಶದ ಕೃಷಿಕರ (Agriculture) ಸಮಸ್ಯೆಗಳನ್ನು ಪರಿಹರಿಸುವಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳೂ ಸಂಪೂರ್ಣವಾಗಿ ವಿಫಲವಾಗಿವೆ ಎಂದು ಕರ್ನಾಟಕ (karnataka) ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಡಾ.ಟಿ.ಎನ್‌. ಪ್ರಕಾಶ್‌ ಕಮ್ಮರಡಿ ತಿಳಿಸಿದರು.

ಕೃಷಿಕರ ನೈಜ ಸಮಸ್ಯೆಗಳನ್ನು ಬಗೆಹರಿಸುವ ಜವಾಬ್ದಾರಿಯಿಂದ ಕೇಂದ್ರ ಸರ್ಕಾರ (govt Of india) ಹೊರಗೆ ಬರಲು ಪ್ರಯತ್ನಿಸುತ್ತಿದೆ ಎಂಬುದು ತಮ್ಮ ತಂಡ ನಡೆಸಿದ ಅಧ್ಯಯನ, ಸಮೀಕ್ಷೆಯಿಂದ ಸ್ಪಷ್ಟವಾಗಿದೆ. ಅಧಿಕಾರ ಹಿಡಿಯಲು ಬಯಸುವ ಯಾವುದೇ ರಾಜಕೀಯ ಪಕ್ಷ ರೈತರನ್ನು ಜಾತಿ, ಧರ್ಮಗಳ ಹಿನ್ನೆಲೆಯಿಂದ ಒಡೆದು ನೋಡುವುದರ ಬದಲಾಗಿ, ಇಂದು ಅನ್ನದಾತರ ನೈಜ ಕೂಗನ್ನು ಅರಿತು ಹೆಜ್ಜೆ ಇಡಬೇಕಾದ ಜರೂರಿದೆ ಎಂದು ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ದೇಶದ ಕಟುವಾಸ್ತವಾಗಿರುವ ಜಾತಿ (Caste) ಹಿನ್ನೆಲೆಯನ್ನು ಪರಿಗಣಿಸಿ ರಾಜ್ಯದ ಎಲ್ಲಾ ಜಿಲ್ಲೆಗಳ ಮಾದರಿ ರೈತರ ಅಭಿಪ್ರಾಯ ಪಡೆಯಲಾಗಿದ್ದು, ಕೊರೋನಾ ಲಾಕ್‌ಡೌನ್‌ ಸಂದರ್ಭದಲ್ಲಿ ರೈತರು ಅನುಭವಿಸಿದ ಬವಣೆ ಮತ್ತು ಸರ್ಕಾರದ ನಿಲುವುಗಳ ಬಗ್ಗೆ ವಿವಿಧ ಹಿನ್ನೆಲೆಯ ರಾಜ್ಯದ ರೈತರು ದಿಟ್ಟಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ ಎಂದರು.

ಕೋವಿಡ್‌ ಲಾಕ್‌ಡೌನ್‌ (Covid lockdown) ಅವಧಿಯಲ್ಲೇ ಕೃಷಿ ಚಟುವಟಿಕೆ ಬಿರುಸಾಗಿ ನಡೆದು ಸಾಮಾನ್ಯವಾಗಿ ಉತ್ಪಾದಿಸಲಾಗುತ್ತಿದ್ದ ಬೆಳೆ ಪ್ರಮಾಣ ಹೆಚ್ಚಾಗಿತ್ತು. ಆದರೆ ಆ ಅವಧಿಯಲ್ಲಿ ಶೇ.70 ರಷ್ಟುರೈತರು ತಾವು ಬೆಳೆದಿರುವ ಉತ್ಪನ್ನಗಳನ್ನು ಸಂಪೂರ್ಣವಾಗಿ ಮಾರಾಟ ಮಾಡಲು ಸಾಧ್ಯವಾಗಲೇ ಇಲ್ಲ. ಈ ಕಾರಣದಿಂದ ರೈತರು ಬೆಳೆದ ಬಹುಪಾಲು ಬೆಳೆ ಕೊಳೆತು ನಾಶವಾಗುವಂತಾಯಿತು. ಕೇವಲ ಶೇ.20 ರಷ್ಟುರೈತರಿಗೆ ಮಾತ್ರ ಬೆಳೆ ವಿಮೆಯ ಸಹಾಯ ದೊರೆತಿದೆ ಎಂದು ಹೇಳಿದರು.

ಲಾಕ್‌ಡೌನ್‌ ಸಂದರ್ಭದಲ್ಲಿ ಉದ್ಯೋಗ ಖಾತರಿ ನರೇಗಾ ಯೋಜನೆಯ ಫಲಾನುಭವವನ್ನು ರೈತರಿಗೆ ದೊರಕಿಸಿಕೊಡುವ ಆಶ್ವಾಸನೆಯನ್ನು ಕೇಂದ್ರ ಸರ್ಕಾರ ನೀಡಿತ್ತು. ಇದು ಕೂಡ ಮುಖ್ಯವಾಗಿ ಬಡ ಮತ್ತು ಸಣ್ಣ ರೈತರಿಗೆ ಸಿಕ್ಕಿಲ್ಲ. ರೈತರ ಖಾತೆಗೆ ನೇರ ಹಣ ವರ್ಗಾಯಿಸುವ ಪಿಎಂ ಕಿಸಾನ್‌ ಮತ್ತು ಪಡಿತರ ವಿತರಣೆ ಯೋಜನೆಗಳು ಮಾತ್ರ ಅಲ್ಪ ಸ್ವಲ್ಪ ಪ್ರಮಾಣದಲ್ಲಿ ರೈತರ ನೆರವಿಗೆ ಬಂದಿದೆ ಎಂದರು.

ಮುಖಂಡ ಡಾ. ಮಹೇಶ್‌ ರಾವ್‌, ಹೊಸೂರು ಕುಮಾರ್‌, ಕೆಂಪುಗೌಡ, ಕುರುಬೂರು ಶಾಂತಕುಮಾರ್‌, ಮಂಜು ಕಿರಣ್‌, ಶಿವಸ್ವಾಮಿ ಇದ್ದರು.

ರೈತ ಆತ್ಮಹತ್ಯೆ : 

ಗುರುವಾರ (ಅ. 28) ಬಿಡುಗಡೆಯಾದ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ( National Crime Records Bureau- NCRB) ವರದಿಯ ಪ್ರಕಾರ 2020 ರಲ್ಲಿ ಆತ್ಮಹತ್ಯೆಯಿಂದ ಸಾವನ್ನಪ್ಪಿದ ಕೃಷಿ ಕಾರ್ಮಿಕರ ಸಂಖ್ಯೆ ಹಿಂದಿನ ವರ್ಷಕ್ಕಿಂತ 18% ಹೆಚ್ಚಾಗಿದೆ ಎಂದು ತಿಳಿದು ಬಂದಿದೆ. ಆದಾಗ್ಯೂ, ಸ್ವಂತ ಭೂಮಿಯನ್ನು ಹೊಂದಿರುವ ರೈತರ ಆತ್ಮಹತ್ಯೆ ಪ್ರಮಾಣ ಕಳೆದ ವರ್ಷ ಇಳಿಕೆ ಕಂಡಿದೆ.

ಹೆಚ್ಚು ಆತ್ಮಹತ್ಯೆ: ಕರ್ನಾಟಕ ನಂ.5 - ಮಹಾರಾಷ್ಟ್ರ ನಂ.1

ಕಳೆದ ವರ್ಷ ಭಾರತೀಯ ಆರ್ಥಿಕತೆಯಲ್ಲಿ ಕೃಷಿ ವಲಯದ ಬಗ್ಗೆ ಸಾಕಷ್ಟು ಚರ್ಚೆಗಳು ಆಗಿದ್ದವು. ಕೊರೊನಾ ಲಾಕ್‌ಡೌನ್‌ನಿಂದ ಇತರ ಉದ್ಯಮಗಳನ್ನು ನಷ್ಟವನ್ನು ಅನುಭವಿಸಿದ್ದವು. ಆದರೆ ಉತ್ತಮ ಮಾನ್ಸೂನ್ ಮತ್ತು ನಿರಂತರ ಕೃಷಿ ಚಟುವಟಿಕೆಗಳ ಮುಂದುವರಿಕೆಯ ಹಿನ್ನೆಲೆಯಲ್ಲಿ ಈ ವಲಯ ಉತ್ತಮ ಬೆಳವಣಿಗೆಯನ್ನು ದಾಖಲಿಸಿದೆ. ಆದಾಗ್ಯೂ, ಪಿಎಂ ಕಿಸಾನ್‌ನಂತಹ ಆದಾಯ ಬೆಂಬಲ ಯೋಜನೆಗಳಿಂದ ಪ್ರಯೋಜನ ಪಡೆಯದ ಅಥವಾ ಭೂರಹಿತ ಕೃಷಿ ಕಾರ್ಮಿಕರು ಕೊರೊನಾ ಲಾಕ್‌ಡೌನ್‌ನಲ್ಲಿ ಹೆಚ್ಚಿನ ಮಟ್ಟದ ಸಂಕಷ್ಟವನ್ನು ಎದುರಿಸಿದ್ದಾರೆ ಎಂದು ವರದಿ ತಿಳಿಸಿದೆ. ಆದರೆ ಎನ್‌ಸಿಆರ್‌ಬಿ ವರದಿಯು ರೈತರ ಆತ್ಮಹತ್ಯೆಗೆ ನಿರ್ದಿಷ್ಟ ಕಾರಣಗಳನ್ನು ನೀಡಿಲ್ಲ.

2020ರಲ್ಲಿ 10,677  ಕೃಷಿಕರ ಆತ್ಮಹತ್ಯೆ!

ಒಟ್ಟಾರೆಯಾಗಿ ಕೃಷಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ 10,677 ಜನರು 2020ರಲ್ಲಿ ಆತ್ಮಹತ್ಯೆಯಿಂದ ಸಾವನ್ನಪ್ಪಿದ್ದಾರೆ, ಇದು 2019 ರಲ್ಲಿ ಸಾವನ್ನಪ್ಪಿದ 10,281 ಕ್ಕಿಂತ ಸ್ವಲ್ಪ ಹೆಚ್ಚಾಗಿದೆ. ಇವರಲ್ಲಿ ಹಲವರು ಕೃಷಿ ಚಟುವಟಿಕೆ ಹಾಗೂ ಕೆಲಸವನ್ನೇ ಅವಲಂಬಿಸಿ ಜೀವನ ಸಾಗಿಸುತ್ತಿದ್ದವರು ಎಂದು ವರದಿ ತಿಳಿಸಿದೆ. 2020 ರಲ್ಲಿ ಕೃಷಿ ಕಾರ್ಮಿಕರಲ್ಲಿ 5,098 ಮಂದಿ ಆತ್ಮಹತ್ಯೆಯಿಂದ ಸಾವನ್ನಪ್ಪಿದ್ದರು, ಇದು ಕಳೆದ ವರ್ಷ ಸಾವನ್ನಪ್ಪಿದ 4,324 ಕ್ಕಿಂತ 18% ಹೆಚ್ಚಾಗಿದೆ.

click me!