'ಎಚ್ಡಿಕೆ ಸಿಎಂ ಮಾಡಿದ್ದಕ್ಕೆ ಸಿಕ್ತು ಬಂಪರ್ ಕೊಡುಗೆ'

By Kannadaprabha NewsFirst Published Sep 9, 2020, 11:44 AM IST
Highlights

ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಮಂಡ್ಯ ಜಿಲ್ಲೆಗೆ ಅತ್ಯಂತ ಹೆಚ್ಚಿನ ಕೊಡುಗೆ ನೀಡಿದ್ದಾರೆ ಎಂದು ಚೆಲುವರಾಯಸ್ವಾಮಿ ಹೇಳಿದ್ದಾರೆ.

 ನಾಗಮಂಗಲ (ಸೆ.09):  ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ತಾಲೂಕಿನ ಬೆಂಗಳೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿ ಬದಿಯ 1200ಕ್ಕೂ ಹೆಚ್ಚು ಎಕರೆ ರೈತರ ಕೃಷಿಭೂಮಿಯನ್ನು ಕೈಗಾರಿಕೆ ಅಭಿವೃದ್ಧಿ ಹೆಸರಿನಲ್ಲಿ ಕೆಐಡಿಬಿಗೆ ಭೂಸ್ವಾಧೀನ ಪಡಿಸಿಕೊಳ್ಳುವ ಕ್ರಿಯಾ ಯೋಜನೆಗೆ ಒಪ್ಪಿಗೆ ನೀಡುವ ಮೂಲಕ ಜಿಲ್ಲೆಯ ಜನರಿಗೆ ದೊಡ್ಡ ಕೊಡುಗೆ ನೀಡಿದ್ದಾರೆ ಎಂದು ಮಾಜಿ ಸಚಿವ ಎನ್‌.ಚಲುವರಾಯಸ್ವಾಮಿ ಕಿಡಿಕಾರಿದರು.

ಪಟ್ಟಣದ ಬ್ಲಾಕ್‌ ಕಾಂಗ್ರೆಸ್‌ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನ ಕಾಳಿಂಗನಹಳ್ಳಿ ಸೇರಿದಂತೆ ಜಿಲ್ಲೆಯ ಕೆ.ಆರ್‌ .ಪೇಟೆ, ಮಂಡ್ಯ ಹಾಗೂ ಮದ್ದೂರು ತಾಲೂಕುಗಳಲ್ಲಿ ಕೈಗಾರಿಕಾ ಅಭಿವೃದ್ಧಿಗಾಗಿ ಸಾಕಷ್ಟುಭೂಮಿಯಿದ್ದರೂ ಸಹ ಈ ವ್ಯಾಪ್ತಿಯ ರೈತರು ಭೂಮಿ ಕಳೆದುಕೊಳ್ಳಲು ಕಾರಣರಾಗಿದ್ದಾರೆ ಎಂದು ದೂರಿದರು.

ಜೆಡಿ​ಎಸ್‌ ತೊರೆದು ಕಾಂಗ್ರೆಸ್‌ ಸೇರಲು ಸಜ್ಜಾದ ಪ್ರಭಾವಿ ಮುಖಂಡ

ಜಿಲ್ಲೆಯ ಏಳು ಕ್ಷೇತ್ರಗಳಲ್ಲಿ ಜೆಡಿಎಸ್‌ ಶಾಸಕರನ್ನು ಆಯ್ಕೆ ಮಾಡುವ ಮೂಲಕ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ಶ್ರಮಿಸಿದ್ದ ಜನರ ಮೇಲೆ ಅದ್ಯಾವ ಸಿಟ್ಟಿದೆಯೋ ಗೊತ್ತಿಲ್ಲ. ಬೆಂಗಳೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿ ಬದಿಯ 1200ಕ್ಕೂ ಹೆಚ್ಚು ಎಕರೆ ರೈತರ ಕೃಷಿಭೂಮಿಯನ್ನು ಕಸಿದುಕೊಂಡು ಕೈಗಾರಿಕೆ ಅಭಿವೃದ್ಧಿಗಾಗಿ ಭೂಸ್ವಾಧೀನ ಪಡಿಸಿಕೊಳ್ಳುವ ಕ್ರಿಯಾಯೋಜನೆಗೆ ಒಪ್ಪಿಗೆ ನೀಡಿದ್ದರಿಂದ ಇಂದು ಆ ಭೂಮಿಯನ್ನು ಕೆಐಡಿಬಿ ಸ್ವಾಧೀನಪಡಿಸಿಕೊಳ್ಳಲು ಮುಂದಾಗಿದೆ ಆರೋಪಿಸಿದರು.

ಕಳೆದ ನಾಲ್ಕೈದು ದಶಕಗಳಿಂದ ಕೃಷಿಗೆ ಯೋಗ್ಯವಾದ ಜಮೀನು ಇಂದು ಬೆಳ್ಳೂರು ಹೋಬಳಿಯ ನೂರಾರು ರೈತರ ಕೈತಪ್ಪುವ ಸಾಧ್ಯತೆ ಎದುರಾಗಿದೆ. ತಾಲೂಕಿನಲ್ಲಿ ಅರಣ್ಯ ಪ್ರದೇಶ ಹೊರತುಪಡಿಸಿದರೆ ಒಂದು ಎರಡು ಎಕರೆಯಷ್ಟುಜಮೀನು ಹೊಂದಿರುವ ರೈತರೇ ಹೆಚ್ಚು. ಐದು ಎಕರೆಗೂ ಹೆಚ್ಚು ಜಮೀನು ಹೊಂದಿರುವ ರೈತರು ಬೆರಳೆಣಿಕೆಯಷ್ಟುಮಾತ್ರ ಎಂದರು.

ಚುನಾವಣೆ ಗೆಲುವಿಗೆ ಟಾರ್ಗೆಟ್ : ಜೆಡಿಎಸ್ ಮಾಸ್ಟರ್ ಪ್ಲಾನ್

ಜನರು ಸಾಕಷ್ಟುತೊಂದರೆ ಅನುಭವಿಸುತ್ತಿರುವ ಇಂತಹ ಪರಿಸ್ಥಿತಿಯಲ್ಲಿ 1220ಕ್ಕೂ ಹೆಚ್ಚು ಎಕರೆ ರೈತರ ಕೃಷಿಭೂಮಿಯನ್ನು ಗೋಮಾಳವೆಂದು ಪರಿಗಣಿಸಿ ಕೆಐಡಿಬಿ ಭೂಸ್ವಾಧೀನಪಡಿಸಿಕೊಳ್ಳುತ್ತಿರುವುದು ರೈತವಿರೋಧಿತನವಾಗಿದೆ ಎಂದು ಆಕ್ರೋಷವ್ಯಕ್ತಪಡಿಸಿದರು.

ಮಾಜಿ ಸಿಎಂ ಕುಮಾರಸ್ವಾಮಿಮಾಡಿರುವ ಈ ಕೆಲಸ ಅವರಿಗೆ ಒಳ್ಳೆಯದೆನಿಸಿರಬಹದು. ಆದರೆ ಇದರಿಂದ ತಾಲೂಕಿನ ಬಡಜನರಿಗೆ ಕುತ್ತುಬಂದಿದೆ. ಜಿಲ್ಲೆಯಲ್ಲಿ ಸಕ್ಕರೆ ಕಾರ್ಖಾನೆಗಳು ನಿಂತರೂ, ನೀರಾವರಿ ಯೋಜನೆಗಳಿಗೆ ಯಾವುದೇ ಅನುದಾನ ಬಿಡುಗಡೆ ಮಾಡದಿದ್ದರೂ, ಸಾರ್ವಜನಿಕರಿಗೆ ತೊಂದರೆಯಾಗುವ ಇಂತಹ ಕೆಲಸವನ್ನು ಕೈಗೆತ್ತಿಕೊಂಡು ಮಾಡಿಹೋಗಿದ್ದಾರೆ. ಇದಕ್ಕೆ ಪೂರಕವಾಗಿ ಅವರಿಗೆ ಮನವರಿಕೆ ಮಾಡಿಕೊಟ್ಟಿರುವ ಜಿಲ್ಲೆಯ ಜನಪ್ರತಿನಿದಿಗಳೇ ಸ್ಪಷ್ಟೀಕರಣ ನೀಡಬೇಕು ಎಂದು ಆಗ್ರಹಿಸಿದರು.

1220ಕ್ಕೂ ಹೆಚ್ಚು ಎಕರೆ ಪೈಕಿ 300 ಎಕರೆ ಹೊರತುಪಡಿಸಿ ಉಳಿದೆಲ್ಲಾ ರೈತರ ಇಡುವಳಿ ಜಮೀನಾಗಿದೆ. ಕಾಳಿಂಗನಹಳ್ಳಿ ಗ್ರಾಮ ವ್ಯಾಪ್ತಿ ಬಿಟ್ಟು ಸುತ್ತಮುತ್ತಲ ಎಲ್ಲಾ ಜಮೀನು ಭೂಸ್ವಾಧೀನವಾಗುತ್ತಿದೆ. ತಾಲೂಕಿಗೆ ಇಂತಹ ದುರಂತ ಬರುತ್ತದೆಂದು ನಾನು ಭಾವಿಸಿರಲಿಲ್ಲ ಎಂದು ಹೇಳಿದರು.

ಭೂಸ್ವಾಧೀನ ಕೈಬಿಡದಿದ್ದರೆ ಹೋರಾಟ

ತಾಲೂಕಿನ ರಾಷ್ಟ್ರೀಯ ಹೆದ್ದಾರಿ ಬದಿಯ ರೈತರ 1220ಕ್ಕೂ ಹೆಚ್ಚು ಎಕರೆ ಕೃಷಿಭೂಮಿಯನ್ನು ಕೈಗಾರಿಕೆ ಅಭಿವೃದ್ಧಿ ಹೆಸರಿನಲ್ಲಿ ಕೆಐಡಿಬಿಗೆ ಭೂ ಸ್ವಾಧೀನ ಪಡಿಸಿಕೊಟ್ಟರೆ ರೈತರ ಪರ ಬೀದಿಗಿಳಿದು ಹೋರಾಟ ಮಾಡುವ ಅನಿವಾರ್ಯತೆ ಎದುರಾಗಲಿದೆ. ಹಾಗಾಗಿ ಸರ್ಕಾರ ಈ ಬಗ್ಗೆ ವಿಶೇಷ ಕಾಳಜಿವಹಿಸಿ ಈ ಪ್ರಕ್ರಿಯೆಯನ್ನು ಕೈಬಿಟ್ಟು ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅಗತ್ಯ ಕ್ರಮವಹಿಸಬೇಕೆಂದು ಒತ್ತಾಯಿಸಿದರು.

ತಾಲೂಕಿನಲ್ಲಿ ನಿಗಧಿಯಾಗಿರುವ ಪ್ರದೇಶದಲ್ಲಿ ಮಾತ್ರ ಕೈಗಾರಿಕಾ ಘಟಕಗಳನ್ನು ಸ್ಥಾಪಿಸಲಿ. ನಂತರ ಅಶ್ಯಕತೆಯಿದ್ದರೆ ಮಾತ್ರ ರೈತರಿಗೆ ತೊಂದರೆಯಾಗದ ರೀತಿಯಲ್ಲಿ ಎಲ್ಲಿ ಜಾಗವಿದೆಯೋ ಅಂತಹ ಸ್ಥಳವನ್ನು ಗುರುತಿಸಿ ಕಾರ್ಖಾನೆ ಸ್ಥಾಪಿಸಲಿ. ಆದರೆ ಈ ಜಾಗವನ್ನು ಯಾವುದೇ ಕಾರಣಕ್ಕೂ ಭೂ ಸ್ವಾಧೀನ ಪಡಿಸಿಕೊಳ್ಳಬಾರದೆಂದು ಆಗ್ರಹಿಸಿದರು.

ಡ್ರಗ್‌ ಮಾಫಿಯಾ ಕೇಂದ್ರಸ್ಥಾನ ಬೆಂಗಳೂರಿನಲ್ಲಿದ್ದರೆ ಅದು ಇಡೀ ಅಖಂಡ ಕರ್ನಾಟಕದಲ್ಲಿದ್ದಂತೆ. ಯಾವುದೇ ಒಂದು ಗ್ರಾಮ, ತಾಲೂಕು ಅಥವಾ ಜಿಲ್ಲೆಯಲ್ಲಿದ್ದರೂ ಸಹ ಹಾನಿಕಾರಕ. ಹಾಗಾಗಿ ಸಮಾಜದ ಸ್ವಾಸ್ಥ್ಯ ಹಾಳುಮಾಡುವ ಡ್ರಗ್ ಮಾಫಿಯಾವನ್ನು ಸಂಪೂರ್ಣವಾಗಿ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಮತ್ತು ಪೊಲೀಸ್ ಇಲಾಖೆಯೇ ಜವಾಬ್ದಾರಿವಹಿಸಿ ಕೆಲಸಮಾಡಬೇಕಿದೆ ಆಗ್ರಹಿಸಿದರು.

click me!