19 ವಿವಿ, 413 ಪ್ರಥಮ ದರ್ಜೆ ಪದವಿ ಕಾಲೇಜುಗಳಲ್ಲಿನ 17 ಸಾವಿರ ಅತಿಥಿ ಬೋಧಕರು ಬೀದಿಗೆ| ಯಾರನ್ನೂ ಕೈಬಿಡಬೇಡಿ ಎಂದ ಪ್ರಧಾನಿ ನರೇಂದ್ರ ಮೋದಿ ನಿರ್ದೇಶನಕ್ಕೂ ಸಿಗದ ಗೌರವ| ಕಳೆದ 25 ವರ್ಷಗಳಿಂದ ಕಡಿಮೆ ಸಂಭಾವನೆಗೆ ದುಡಿದವರು ಈಗ ಅತಂತ್ರ|
ಮಲ್ಲಿಕಾರ್ಜುನ ಸಿದ್ದಣ್ಣವರ
ಹುಬ್ಬಳ್ಳಿ(ಸೆ.25): ಕೊರೋನಾ ಸಂಕಷ್ಟದಲ್ಲಿ ಯಾವುದೇ ನೌಕರ, ಕಾರ್ಮಿಕರನ್ನು ಕೈಬಿಡಬೇಡಿ. ಮಾನವೀಯ ನೆಲೆಯಲ್ಲಿ ಅವರಿಗೆ ಕಾಲಕಾಲಕ್ಕೆ ಸಂಬಳವನ್ನೂ ನೀಡಿ...’ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಎಲ್ಲ ರಾಜ್ಯ ಸರ್ಕಾರಗಳಿಗೆ ಮತ್ತು ಖಾಸಗೀ ಉದ್ಯಮಿಗಳಲ್ಲಿ ಇಂಥದೊಂದು ಕಳಕಳಿಯ ಮನವಿ ಮಾಡಿದ್ದರು.
undefined
ಪ್ರಧಾನಿ ಮಾತು ಗೌರವಿಸಿ ಹಲವು ಖಾಸಗಿ ಶಿಕ್ಷಣ ಸಂಸ್ಥೆಗಳು ತಮ್ಮಲ್ಲಿನ ಶಿಕ್ಷಕರು, ಇತರ ಸಿಬ್ಬಂದಿಗೆ ತಮ್ಮ ಶಕ್ತ್ಯಾನುಸಾರ ಸಂಬಳ ನೀಡಿವೆ. ಆದರೆ ರಾಜ್ಯದ ಉನ್ನತ ಶಿಕ್ಷಣ ಇಲಾಖೆ ಮಾತ್ರ ಇದಾವುದಕ್ಕೂ ಕಿವಿಗೊಡದೆ ತನ್ನ ವ್ಯಾಪ್ತಿಯ 19 ವಿಶ್ವವಿದ್ಯಾಲಯಗಳು ಮತ್ತು 413 ಪ್ರಥಮ ದರ್ಜೆ ಪದವಿ ಕಾಲೇಜುಗಳಲ್ಲಿನ 17264 ‘ಅತಿಥಿ ಬೋಧಕ’ರನ್ನು ಇದೀಗ ಬೀದಿಗೆ ತಳ್ಳಿದೆ!
ಆರಂಭದಲ್ಲಿ ಸ್ವತಃ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೂಡ ಅತಿಥಿ ಬೋಧಕರಿಗೆ ಗೌರವಧನ ನೀಡುವಂತೆ ಸೂಚಿಸಿದ್ದರು. ಆದರೆ ಕಷ್ಟಕಾಲದಲ್ಲಿ ಗೌರವ ಧನ ನೀಡುವುದು ದೂರವಿರಲಿ, ಕೆಲಸದಿಂದಲೇ ಹೊರಹಾಕಲಾಗಿದೆ. ಕಟ್ಟಡ ಕಾರ್ಮಿಕರಿಗೆ ಸಿಕ್ಕ ಆಹಾರದ ಕಿಟ್ ಕೂಡ ಈ ‘ಗೌರವಾನ್ವಿತ ಗುರುವೃಂದ’ಕ್ಕೆ ಸಿಕ್ಕಿಲ್ಲ ಎನ್ನುವುದು ಖೇದಕರ ಸಂಗತಿ. ಮತ್ತೆ ಕೆಲಸ ಬೇಕಿದ್ದರೆ ಹೊಸದಾಗಿ ಅರ್ಜಿ ಸಲ್ಲಿಸಿ, ಸಂದರ್ಶನಕ್ಕೆ ಹಾಜರಾಗಿ. ಅದರಲ್ಲಿ ಪಾಸಾದರೆ ಮಾತ್ರ ‘ಅತಿಥಿ ಬೋಧಕ’ ಆಗಬಹುದು ಎಂದಿರುವುದು ಕಳೆದ 20, 25 ವರ್ಷಗಳಿಂದ ಅಲ್ಪ ಗೌರವಧನಕ್ಕೆ ದುಡಿಯುತ್ತ ಬಂದವರಿಗೆ ದಿಕ್ಕುಗಾಣದಂತಾಗಿದೆ.
ಹೋರಾಟ ಮಾಡಿದವರು ಹೊರಕ್ಕೆ:
ವಿವಿ ಮತ್ತು ಪದವಿ ಕಾಲೇಜುಗಳಲ್ಲಿ ವಿವಿಧ ಕಾರಣಗಳಿಂದ ಖಾಲಿಯಾದ ಬೋಧಕ ಹುದ್ದೆಗಳನ್ನು ಹಣಕಾಸಿನ ಅಭಾವ ಮುಂದೊಡ್ಡಿ ಭರ್ತಿ ಮಾಡದೇ ಆ ಬೋಧಕರ ಕೊರತೆ ನೀಗಿಸಿಕೊಳ್ಳಲು 2005 ರಿಂದ ‘ಅತಿಥಿ ಬೋಧಕ’ ಎನ್ನುವ ಅರೆಕಾಲಿಕ ಉಪನ್ಯಾಸಕ, ಸಹಾಯಕ ಪ್ರಾಧ್ಯಾಪಕ ಮತ್ತು ಪ್ರಾಧ್ಯಾಪಕರ ಸೇವೆ ಆರಂಭಿಸಿತು.
ಮಹಾಮಾರಿ ಕೊರೋನಾಗೆ ಬಿಪಿ, ಶುಗರ್ ರೋಗಿಗಳೇ ಅಧಿಕ ಬಲಿ!
ಸ್ನಾತಕೋತ್ತರ ಪದವಿಯ ಜತೆಗೆ ನೆಟ್, ಸೆಟ್, ಪಿಎಚ್‌ಡಿ ಓದಿದವರೂ ಖಾಯಂ ಬೋಧಕರಾಗುವ ಅವಕಾಶ ಇಲ್ಲದಾದಾಗ ಈ ‘ಅತಿಥಿ ಬೋಧಕ’ ಸೇವೆಗೆ ಸೇರಿ ಕಡಿಮೆ ಗೌರವಧನದಲ್ಲೇ ಕಾಲ ನೂಕುತ್ತ ಬಂದರು. ಯುಜಿಸಿ ನಿಯಮದಡಿ ಇವರನ್ನು ನೇಮಕ ಮಾಡಿಕೊಂಡ ವಿವಿ, ಪದವಿ ಕಾಲೇಜುಗಳು ಅದೇ ಯುಜಿಸಿ ನಿಯಮದಂತೆ ಗೌರವಧನ ನೀಡದೇ ಇದ್ದಾಗ ಇವರೆಲ್ಲ ಬೀದಿಗಿಳಿದು ಹೋರಾಟ ಮಾಡಿದರು. ಆದರೆ, ಗೌರವಧನಕ್ಕಾಗಿ ಹೋರಾಡಿದವರನ್ನು ಅತಿಥಿ ಬೋಧಕ ಸ್ಥಾನದಿಂದಲೇ ಈಗ ಹೊರಹಾಕಲಾಗಿದೆ. ಮುಂದೆ ಈ ಅತಿಥಿ ಬೋಧಕರಾಗಿ ಬರುವವರಿಗೆ ಇದು ಪರೋಕ್ಷ ಎಚ್ಚರಿಕೆ ಗಂಟೆಯಾಗಿದೆ. ಕೊಟ್ಟಷ್ಟರಲ್ಲಿ ದುಡಿಯಬೇಕು, ಇಲ್ಲದೇ ಹೋದರೆ ಶೈಕ್ಷಣಿಕ ವರ್ಷ ಮುಗಿಯುತ್ತಿದ್ದಂತೆ ಮತ್ತೆ ಇತ್ತ ತಲೆಹಾಕುವಂತಿಲ್ಲ ಎನ್ನುವ ಸೂಚನೆ ಇದಾಗಿದೆ ಎನ್ನುವುದು ನೊಂದವರ ಆಕ್ರೋಶ.
ಇಂದಿಲ್ಲಾ ನಾಳೆ ಸರ್ಕಾರ ನಮ್ಮ ಬಗ್ಗೆ ಕರುಣೆ ತೋರಿ ಖಾಯಂ ಮಾಡೀತು ಎನ್ನುವ ಆಸೆಯಿಂದ ಸೇವೆ ಮಾಡುತ್ತ ಬಂದವರಿಗೆ ಸರ್ಕಾರ ಈ ನಿಲುವು ತೀವ್ರ ಆಘಾತ ಉಂಟು ಮಾಡಿದೆ. ಇವರಲ್ಲಿ ಅರ್ಧಕ್ಕೂ ಹೆಚ್ಚು ಮಂದಿ 25, 20 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರು. ಈಗ ಅವರಿಗೆ ವಯಸ್ಸೂ ಮೀರಿದೆ, ಬೇರೆ ಕೆಲಸ ಗೊತ್ತಿಲ್ಲ ಬದುಕಿಗೆ ಏನು ಮಾಡುವುದು ಎಂದು ಆಕಾಶ ನೋಡುತ್ತಿದ್ದಾರೆ.
ಪ್ರತ್ಯೇಕ ಅನುದಾನ ಇಲ್ಲ:
ಅತಿಥಿ, ಅರೆಕಾಲಿಕ, ತಾತ್ಕಾಲಿಕ ಸಹಾಯಕ ಪ್ರಾಧ್ಯಾಪಕರಿಗೆ ವೇತನಕ್ಕಾಗಿಯೇ ಪ್ರತ್ಯೇಕವಾಗಿ ಅನುದಾನವನ್ನೂ ನೀಡಲಿಲ್ಲ. ಆಯಾ ವಿವಿಗಳಲ್ಲಿ ಲಭ್ಯವಿರುವ ಅನುದಾನದ ಆಧಾರದ ಮೇಲೆ ಅತಿಥಿ ಬೋಧಕರಿಗೆ ವೇತನ ನಿಗದಿ ಮಾಡಲಾಗಿದೆ. ಇದರಿಂದಾಗಿ ವಿವಿಯಿಂದ ವಿವಿಗೆ ವೇತನ ತಾರತಮ್ಯ ಉಂಟಾಗಿದೆ.
ವಿವಿಗಳಿಗೆ ಕಾನೂನಿಗೆ ತಿದ್ದುಪಡಿ ಮಾಡಲು ಸುಗ್ರಿವಾಜ್ಞೆ ಹೊರಡಿಸಲಾಗಿದೆ. ಆದರೆ ವಿವಿಗಳಲ್ಲಿ ತಾತ್ಕಾಲಿಕ, ಅತಿಥಿ, ಹೊರಗುತ್ತಿಗೆ ನೌಕರರನ್ನು ಗಮನಕ್ಕೆ ತೆಗೆದುಕೊಂಡಿಲ್ಲ. ಯುಜಿಸಿ ಅತಿಥಿ ಬೋಧÜಕರಿಗೆ ತಿಂಗಳಿಗೆ 50 ಸಾವಿರ ಅಥವಾ ಗಂಟೆಗೆ 1500ರಂತೆ ವೇತನ ನೀಡುವಂತೆ ಸೂಚಿಸಿದೆ. ಆದರೆ 13000 ರಿಂದ 35 ಸಾವಿರ ವರೆಗೆ ಮಾತ್ರ ನೀಡಲಾಗುತ್ತಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಮಾತಿಗೆ ಗೌರವ ಕೊಟ್ಟು ಅತಿಥಿ ಬೋಧಕರನ್ನು ಮುಂದುವರೆಸಬೇಕು. ಸುಪ್ರೀಂ ಕೋರ್ಟ್ ನಿರ್ದೇಶನದಂತೆ ವಿವಿಗಳಲ್ಲಿ ಕನಿಷ್ಠ 8 ವರ್ಷ ಸೇವೆ ಸಲ್ಲಿಸಿದ ಅತಿಥಿ ಬೋಧಕರ ಸೇವೆಯನ್ನು ಖಾಯಂಗೊಳಿಸಬೇಕು. ಅಲ್ಲಿಯವರೆಗೆ ಪಶ್ಚಿಮ ಬಂಗಾಳ, ಹರಿಯಾಣ ಮಾದರಿಯಲ್ಲಿ ಸೇವಾ ಭದ್ರತೆ ಮತ್ತು ವೇತನ ನೀಡಬೇಕು ಎಂದು ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಅತಿಥಿ ಉಪನ್ಯಾಸಕರ/ ತಾತ್ಕಾಲಿಕ ಸಹಾಯಕ ಪ್ರಾಧ್ಯಾಪಕರ ಒಕ್ಕೂಟದ ಅಧ್ಯಕ್ಷರು ಡಾ.ಮಲ್ಲಿಕಾರ್ಜುನ ಮಾನ್ಪಡೆ ಅವರು ತಿಳಿಸಿದ್ದಾರೆ.