ಮಂಗಳೂರು: ಫಲವತ್ತಾದ ಪ್ರದೇಶದಲ್ಲೀಗ ಎಲ್ಲಿ ನೋಡಿದರೂ ಮರಳು..!

By Kannadaprabha NewsFirst Published Aug 21, 2019, 3:19 PM IST
Highlights

ಬೆಳ್ತಂಗಡಿಯ ದಿಡುಪೆ, ಚಾರ್ಮಾಡಿ ಭಾಗದಲ್ಲಿ ಪ್ರವಾಹದಿಂದಾಗಿ ಕೃಷಿ ಭೂಮಿ ನಾಶವಾಗಿದೆ. ಫಲವತ್ತಾದ ಕೃಷಿ ಭೂಮಿಯಲ್ಲಿ ಈಗ ಎಲ್ಲಿ ನೋಡಿದರೂ ಬರೀ ಮರಳು. ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದ ತೋಟ, ಮರಳು ತುಂಬಿ ಬೀಚ್‌ನಂತಾಗಿದೆ. ತಮ್ಮ ಭೂಮಿಯಲ್ಲಿ ಮತ್ತೆ ಬೆಳೆ ಬೆಳೆಯಬಹುದಾ, ಫಲವತ್ತಾದ ಭೂಮಿಯನ್ನು ಕಳೆದುಕೊಂಡೆವಾ ಎಂದು ಕೊರಗುತ್ತಿದ್ದಾರೆ ಈ ಭಾಗದ ಕೃಷಿಕರು.

ಮಂಗಳೂರು(ಆ.21): ನಾವು 60 ವರ್ಷ ದಾಟಿದವರು. ಕಳೆದ ಇಪ್ಪತ್ತೈದು ವರ್ಷಗಳ ಕಾಲ ಈ ಮಣ್ಣಿನಲ್ಲಿ ದುಡಿದು ಅಡಕೆ ತೋಟವನ್ನೋ, ಗದ್ದೆ ಕೃಷಿಯನ್ನೋ ಮಾಡಿಕೊಂಡು ಬರುತ್ತಿದ್ದೆವು. ಸಾಕಷ್ಟು ಆದಾಯವನ್ನೂ ಗಳಿಸಿದ್ದೆವು. ತಕ್ಕಮಟ್ಟಿಗೆ ಮನೆಯಲ್ಲಿ ಬೇಕು ಬೇಕಾದ ಅವಶ್ಯಕತೆಗಳನ್ನು ಹೊಂದಿದ್ದೆವು. ಆದರೆ ಆ.೯ರಂದು ಮಧ್ಯಾಹ್ನ ಎಲ್ಲವೂ ಕೊಚ್ಚಿಕೊಂಡು ಹೊಯ್ತು. ಭೀಕರ ಜಲಸ್ಫೋಟ ನಮ್ಮ ಸಂಪೂರ್ಣ ಬದುಕನ್ನು ಕಸಿದುಕೊಂಡು ಬಿಟ್ಟಿತ್ತು.

ಇನ್ನು ಇದನ್ನು ಮತ್ತೆ ಮೊದಲಿನಂತೆ ಮಾಡಲು ಸಾಧ್ಯವೇ? ಇನ್ನು ದುಡಿಯುವ ವಯಸ್ಸೇ ನಮ್ಮದು? ಮುಂದಿನ ಪೀಳಿಗೆಗಂತೂ ಕೃಷಿ ಇತ್ಯಾದಿ ಯಾರಿಗೂ ಬೇಡ. ಹೀಗಿರುವಾಗ ಹೋಗಿದ್ದು ಹೋಗಿದೆ ಇನ್ನೇನು ಮಾಡಲು ಸಾಧ್ಯವಿಲ್ಲ... ಇಂಥ ನಿರಾಸೆಯ ಮಾತುಗಳು ಕೇಳಿ ಬರುತ್ತಿರುವುದು ಪ್ರವಾಹ ಪೀಡಿತ ದಿಡುಪೆ, ಚಾರ್ಮಾಡಿ ಪರಿಸರದ ಕೃಷಿಕರದ್ದು.

ಉತ್ಸಾಹ ಕಳೆದುಕೊಂಡಿರುವ ಕೃಷಿಕರು:

ಜಲಪ್ರವಾಹ ಆಪೋಶನ ತೆಗೆದುಕೊಂಡದ್ದು ತೆಂಗು, ಕಂಗು, ಬಾಳೆ ಕೃಷಿಯನ್ನು. ತೆಂಗಿನ ಗಿಡಗಳೇನೋ ಇವೆ. ಆದರೆ ಅಡಕೆ ಮತ್ತು ಬಾಳೆ ನೆಲಸಮವಾಗಿದ್ದು ಅದರ ಮೇಲೆ ಸುಮಾರು ಮೂರು ನಾಲ್ಕು ಅಡಿಯಷ್ಟು ಮರಳು ತುಂಬಿದೆ. ಫಲವತ್ತಾದ ಭೂಮಿ ಮರಳು ನೆಲವಾಗಿ ಕಾಣುತ್ತಿದೆ. ನದಿಯ ಪಾತ್ರ ವಿಶಾಲವಾಗಿ ಎಲ್ಲ ಕೃಷಿ ಸರ್ವನಾಶವಾಗಿದ್ದು ಕೆಲವು ಮನೆಗಳು ಮುರಿದು ಬಿದ್ದಿವೆ.

ಕರಾವಳಿಗೆ ಮೊದಲ ಸಲ ಕೈತಪ್ಪಿತು ಸಚಿವ ಸ್ಥಾನ: 16 ಬಿಜೆಪಿ ಶಾಸಕರಿದ್ದರೂ ಒಬ್ಬರೂ ಮಂತ್ರಿ ಇಲ್ಲ

ಕಂಗಿನ ತೋಟವನ್ನು ಮತ್ತೆ ಎಬ್ಬಿಸಬೇಕಾದರೆ ಆಯಾ ಜಾಗದಲ್ಲಿ ಯುವಕರು ಇರಬೇಕು. ಆದರೆ ಕೃಷಿಯನ್ನು ಮಾಡುವ ತರುಣರು ಯಾರೂ ಇಲ್ಲವೇನೋ ಎಂಬಂತಾಗಿದೆ. ಎಲ್ಯಣ್ಣ ಗೌಡವರು ಹೇಳುವ ಹಾಗೆ ನಾವೇನೋ ಮಾಡಿದೆವು. ಇನ್ನು ನಮ್ಮಿಂದ ಮಾಡಲು ಸಾಧ್ಯವಿಲ್ಲ. ಮಕ್ಕಳಿಗೆ ಇದು ಬೇಡ ಎನ್ನುತ್ತಾರೆ. ಹೀಗಿರುವಾಗ ಪ್ರವಾಹವು ಮುಂದೇನು ಎಂಬ ದೊಡ್ಡ ಪ್ರಶ್ನಾರ್ಥಕತೆಯನ್ನು ಎಲ್ಲ ಕೃಷಿಕರಲ್ಲಿ ಬಿಟ್ಟು ಹೋಗಿದೆ.

ಅಯೋಗ್ಯವಾದ ಕೃಷಿ ಭೂಮಿ:

ಒಟ್ಟಾರೆ ಪ್ರವಾಹ ಪೀಡಿತ ಜಾಗಗಳನ್ನು ವೀಕ್ಷಿಸುವಾಗ ಎಕರೆಗಟ್ಟಲೆ ಇದ್ದ ಕೃಷಿ ಭೂಮಿ ಇನ್ನು ಮುಂದಕ್ಕೆ ಯಾವುದಕ್ಕೂ ಪ್ರಯೋಜನವಿಲ್ಲವಾದಂತಾಗಿದೆ. ಏನಾದರೊಂದು ಮಾಡಲು ಹೋದಲ್ಲಿ ಮತ್ತೆ ಹೀಗಾದಲ್ಲಿ ಹೇಗೆ ಎಂಬ ಪ್ರಶ್ನೆ ಎದುರಾಗುತ್ತದೆ. ಇರುವ ಮನೆಗಳನ್ನು ವ್ಯವಸ್ಥಿತವಾಗಿಟ್ಟುಕೊಳ್ಳಬಹುದಷ್ಟೇ ಹೊರತು ಸುತ್ತಲಿನ ಜಮೀನನ್ನು ಮತ್ತೆ ಕೃಷಿ ಯೋಗ್ಯವನ್ನಾಗಿ ಮಾಡಲು ಸಾಧ್ಯವೇ ಇಲ್ಲ ಎನ್ನುವಂತಾಗಿದೆ. ಕಿರು ಹೊಳೆಗಳು ನದಿಗಳಾಗಿ ಅದರ ಪಾತ್ರ ಹಿಗ್ಗಿದ್ದು ಹಲವಾರು ಎಕರೆ ಜಾಗವನ್ನು ಪ್ರವಾಹ ನುಂಗಿ ಹಾಕಿದೆ.

ಮರಗಳನ್ನು ಸಾಗಿಸಲು ಅರಣ್ಯ ಇಲಾಖೆ ಸಿದ್ಧ:

ಪ್ರವಾಹ ಬಂದ ಎಲ್ಲ ಸ್ಥಳಗಳಲ್ಲಿ ಬೃಹತ್ ಮರಗಳ ರಾಶಿ ಎದ್ದು ಕಾಣುತ್ತಿದೆ. ಪ್ರತಿಯೊಂದು ಮರಗಳು ಸಿಪ್ಪೆಯನ್ನು ತೆಗೆದುಕೊಂಡೇ ದಡಕ್ಕೆ ಬಂದಿವೆ. ಬೆಲೆ ಬಾಳುವ ಮರಗಳ ಬೃಹತ್ ರಾಶಿಯನ್ನು ನೋಡಿದರೆ ಇಲ್ಲೇನೋ ಮರದ ಕಾರ್ಖಾನೆ ಇದೆಯೋನೋ ಎಂದು ಭಾಸವಾಗುತ್ತಿದೆ. ಅರಣ್ಯ ಇಲಾಖೆಯವರು ಎಲ್ಲ ಮರಗಳಿಗೆ ಸಂಖ್ಯೆಗಳನ್ನು ಕೊಟ್ಟು ಸಾಗಿಸಲು ಸಿದ್ಧತೆ ಮಾಡುತ್ತಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಬೀಚ್‌ನಂತಾದ ಕೃಷಿ ಭೂಮಿ:

ಒಂದೆಡೆ ಸ್ವಯಂ ಸೇವಕರು ನದಿ ದಡವನ್ನು ಗಟ್ಟಿ ಮಾಡಲು ನಿರತರಾಗಿದ್ದರೆ, ಇನ್ನೊಂದೆಡೆ ಕೆಲವರು ಬಾವಿಗಳಿಗೆ ಸಬ್‌ಮರ್ಸಿಬಲ್ ಪಂಪ್‌ಗಳನ್ನು ಇಳಿಬಿಟ್ಟು ಕೆಸರು ನೀರನ್ನು ಖಾಲಿ ಮಾಡುತ್ತಿದ್ದಾರೆ. ಮನೆಗಳ ಸ್ವಚ್ಛತೆ ಮುಂದುವರಿಸುತ್ತಿದ್ದಾರೆ. ಮತ್ತೊಂದೆಡೆ ಪ್ರವಾಹದಲ್ಲಿ ತೇಲಿ ಬಂದ ಮರಗಳನ್ನು ಬದಿಗೆ ಸರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇತ್ತ ಪ್ರವಾಹ ಪೀಡಿತ ಪ್ರದೇಶಗಳನ್ನು ನೋಡಲು ಮಕ್ಕಳಿಂದ ಹಿಡಿದು ಪ್ರಾಯದವರೆಗಿನ ಎಲ್ಲರೂ ಬರುತ್ತಿದ್ದಾರೆ. ಬೀಚ್‌ನಲ್ಲಿ ಸುತ್ತಾಡಿದಂತೆ ಸುತ್ತಾಡುತ್ತಾ ಪ್ರವಾಹದ ಪ್ರಕೋಪವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಕೆಲವರು ಮನೆಕಳೆದುಕೊಂಡವರಿಗೆ ಧನ ಸಹಾಯವನ್ನೂ ಮಾಡುತ್ತಿದ್ದಾರೆ. ಏನಿದ್ದರೂ ನಿವಾಸಿಗಳ ಬದುಕು ಸುಧಾರಿಸಲು ಒಂದು ವರ್ಷವಾದರೂ ಬೇಕಾಗಿದೆ.   

click me!