ವಿಚ್ಛೇದಿತ ಪುತ್ರಿಗೆ ಅನುಕಂಪದ ನೌಕರಿ ಇಲ್ಲ: ಸುಪ್ರೀಂಕೋರ್ಟ್‌

Kannadaprabha News   | Asianet News
Published : Sep 15, 2021, 07:28 AM ISTUpdated : Sep 15, 2021, 08:20 AM IST
ವಿಚ್ಛೇದಿತ ಪುತ್ರಿಗೆ ಅನುಕಂಪದ ನೌಕರಿ ಇಲ್ಲ: ಸುಪ್ರೀಂಕೋರ್ಟ್‌

ಸಾರಾಂಶ

*  ಅವಿವಾಹಿತ/ ವಿಧವೆ ಪುತ್ರಿಗಷ್ಟೇ ಉದ್ಯೋಗಾವಕಾಶ *  ಸುಪ್ರೀಂಕೋರ್ಟ್‌ ಮೊರೆ ಹೋಗಿದ್ದ ರಾಜ್ಯ ಖಜಾನೆ ನಿರ್ದೇಶಕರು *  ಮಂಡ್ಯ ಪ್ರಕರಣದಲ್ಲಿ ಮಹತ್ವದ ತೀರ್ಪು ನೀಡಿದ ಸುಪ್ರೀಂ   

ಮಂಡ್ಯ(ಸೆ.15): ಸರ್ಕಾರಿ ನೌಕರರ ವಿಚ್ಛೇದಿತ ಪುತ್ರಿಗೆ ಅನುಕಂಪದ ಆಧಾರದ ಮೇಲೆ ಸರ್ಕಾರಿ ಉದ್ಯೋಗ ಕೊಡುವಂತಿಲ್ಲ ಎಂದು ಮಂಡ್ಯ ಪ್ರಕರಣವೊಂದರ ಸಂಬಂಧ ಸುಪ್ರೀಂಕೋರ್ಟ್‌ ಮಹತ್ವದ ತೀರ್ಪು ನೀಡಿದೆ.

ಈ ಸಂಬಂಧ ಉದ್ಯೋಗ ನೀಡುವಂತೆ ರಾಜ್ಯ ಹೈಕೋರ್ಟ್‌ ನೀಡಿದ್ದ ನಿರ್ದೇಶನವನ್ನು ತಳ್ಳಿಹಾಕಿರುವ ಸುಪ್ರೀಂಕೋರ್ಟ್‌, ಅನುಕಂಪದ ಆಧಾರದ ನೇಮಕಾತಿ ನಿಯಮಗಳಿಗೆ 2021ರಲ್ಲಿ ತಿದ್ದುಪಡಿ ತರಲಾಗಿದ್ದು, ಅದರ ವ್ಯಾಪ್ತಿಗೆ ವಿಚ್ಛೇದಿತ ಪುತ್ರಿಯೂ ಸೇರುವುದರಿಂದ ಅನುಕಂಪದ ಆಧಾರದ ಮೇಲೆ ಉದ್ಯೋಗ ಪಡೆಯುವುದಕ್ಕೆ ಅರ್ಹರಲ್ಲ ಎಂದು ಸ್ಪಷ್ಟವಾಗಿ ತಿಳಿಸಿದೆ.

ತಲಾಖ್ ಕೊಟ್ಟು ಪತ್ನಿಯ ಖಾಸಗಿ ವಿಡಿಯೋವನ್ನೇ ಹರಿಬಿಟ್ಟ ಪಾಪಿ ಪತಿ!

ಪ್ರಕರಣವೇನು?:

ಮಂಡ್ಯ ಜಿಲ್ಲಾ ಖಜಾನೆಯಲ್ಲಿ ಪಿ.ಭಾಗ್ಯಮ್ಮ ಅವರು ದ್ವಿತೀಯ ದರ್ಜೆ ಸಹಾಯಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಇವರ 2012ರ ಮಾ.25ರಂದು ಪಿ.ಭಾಗ್ಯಮ್ಮ ಮೃತಪಟ್ಟಿದ್ದರು. ಪುತ್ರಿ ವಿ.ಸೌಮ್ಯಶ್ರೀ ವಿವಾಹವಾಗಿದ್ದು, 2012ರ ಸೆ.12ರಂದು ಪತಿಯಿಂದ ವಿಚ್ಛೇದನ ಪಡೆದುಕೊಂಡಿದ್ದರು. 2013ರ ಮಾರ್ಚ್‌ 20ರಂದು ಮಂಡ್ಯ ನ್ಯಾಯಾಲಯವು ಇವರ ವಿಚ್ಛೇದನವನ್ನು ಊರ್ಜಿತಗೊಳಿಸಿತ್ತು.

ಸೌಮ್ಯಶ್ರೀ ಅವರ ತಾಯಿ ಜಿಲ್ಲಾ ಖಜಾನೆಯಲ್ಲಿ ದ್ವಿತೀಯ ದರ್ಜೆ ಸಹಾಯಕಿಯಾಗಿದ್ದ ಹಿನ್ನೆಲೆಯಲ್ಲಿ ಅವರ ಸಾವಿನ ಬಳಿಕ 2013ರ ಮಾ.21ರಂದು ಅನುಕಂಪದ ಉದ್ಯೋಗ ಪಡೆಯುವುದಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ಕಾನೂನು ಪ್ರಕಾರ ಉದ್ಯೋಗ ನೀಡಲು ನಿರಾಕರಿಸಲಾಯಿತು. ಇದನ್ನು ಪ್ರಶ್ನಿಸಿ ವಿ.ಸೌಮ್ಯಶ್ರೀ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್‌ ಅನುಕಂಪದ ಉದ್ಯೋಗ ನೀಡುವಂತೆ ರಾಜ್ಯ ಸರ್ಕಾರದ ಖಜಾನೆ ನಿರ್ದೇಶಕರಿಗೆ ನಿರ್ದೇಶನ ನೀಡಿತ್ತು.

ಅನುಕಂಪದ ನೌಕರಿ: ಬದಲಾವಣೆ ಮಾಡಿ ಸರ್ಕಾರ ಮಹತ್ವದ ಆದೇಶ

ಉಚ್ಚ ನ್ಯಾಯಾಲಯ ನೀಡಿದ ಆದೇಶವನ್ನು ಪ್ರಶ್ನಿಸಿ ರಾಜ್ಯ ಖಜಾನೆ ನಿರ್ದೇಶಕರು ಸುಪ್ರೀಂಕೋರ್ಟ್‌ ಮೊರೆ ಹೋಗಿದ್ದರು. ಇದರ ವಿಚಾರಣೆ ನಡೆಸಿದ ನ್ಯಾ.ಎಂ.ಆರ್‌.ಶಾ ಮತ್ತು ನ್ಯಾ.ಅನಿರುದ್ಧ ಬೋಸ್‌ ಅವರಿದ್ದ ದ್ವಿಸದಸ್ಯ ಪೀಠವು ಸೌಮ್ಯಶ್ರೀ ಅವರು ಅನುಕಂಪದ ಆಧಾರದಲ್ಲಿ ಉದ್ಯೋಗ ಪಡೆಯುವುದಕ್ಕೆ ಅರ್ಹರಲ್ಲ ಎಂದು ತಿಳಿಸಿ ಹೈಕೋರ್ಟ್‌ ಆದೇಶವನ್ನು ವಜಾಗೊಳಿಸಿತು.

ನಾಗರಿಕ ಸೇವಾ(ಸಹಾನುಭೂತಿ ಆಧಾರದ ನೇಮಕಾತಿ) ನಿಯಮಗಳು-1996ರ ಪ್ರಕಾರ ಸರ್ಕಾರಿ ಉದ್ಯೋಗಿಯ ವಿಚ್ಛೇದಿತ ಪುತ್ರಿಗೆ ಅನುಕಂಪದ ಆಧಾರದ ಮೇಲೆ ಉದ್ಯೋಗ ನೀಡಲು ಅವಕಾಶವಿಲ್ಲ. ಉದ್ಯೋಗಿಯನ್ನೇ ಅವಲಂಬಿಸಿದ್ದ ಮದುವೆಯಾಗದ ಅಥವಾ ವಿಧವೆ ಪುತ್ರಿಗಷ್ಟೇ ಅನುಕಂಪದ ಆಧಾರದಲ್ಲಿ ಉದ್ಯೋಗ ನೀಡಬಹುದು ಎಂದು ಪೀಠ ಹೇಳಿದೆ. ಅನುಕಂಪದ ಆಧಾರದ ನೇಮಕಾತಿ ನಿಯಮಗಳಿಗೆ 2021ರಲ್ಲಿ ತಿದ್ದುಪಡಿ ತಂದು ವಿಚ್ಛೇದಿತ ಪುತ್ರಿಯನ್ನೂ ಇದರೊಳಗೆ ಸೇರ್ಪಡೆಗೊಳಿಸಲಾಗಿದೆ. ಆದರೆ ಉದ್ಯೋಗಿ ಮರಣಹೊಂದಿದ ನಂತರ ವಿಚ್ಛೇದನ ಪಡೆದ ಸಂದರ್ಭದಲ್ಲಿ ಉದ್ಯೋಗಕ್ಕೆ ಪುತ್ರಿಯನ್ನು ಪರಿಗಣಿಸಲಾಗುವುದಿಲ್ಲ ಎಂದು ಸುಪ್ರೀಂಕೋರ್ಟ್‌ ತನ್ನ ತೀರ್ಪಿನಲ್ಲಿ ತಿಳಿಸಿದೆ.
 

PREV
click me!

Recommended Stories

ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ಸುಟ್ಟು ಕರಕಲಾದ ರೆನಾಲ್ಟ್ ಡಸ್ಟರ್ ಕಾರು!
ಕೇಂದ್ರ ಯೋಜನೆಗಳ ಅನುಷ್ಠಾನಕ್ಕೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ: ಸಂಸದ ಯದುವೀರ್