ಮೈಸೂರು: ಚಿರತೆ ದಾಳಿ ನಿಯಂತ್ರಣದ ಹಿಂದೆ ಅರಬ್ಬಿತಿಟ್ಟು!

By Kannadaprabha NewsFirst Published Jul 30, 2019, 1:39 PM IST
Highlights

ಅರಬ್ಬಿತಿಟ್ಟು ಸಂರಕ್ಷಿತ ಅರಣ್ಯ ಪ್ರದೇಶವು ಈಗ ಜಿಂಕೆಗಳ ಆವಾಸ ಸ್ಥಾನವಾಗಿ ಮಾರ್ಪಾಡಾಗಿದ್ದು, ಕಾಕತಾಳಿಯವೆಂಬಂತೆ ಮೈಸೂರಿಗೆ ಚಿರತೆ ದಾಳಿ ನಿಯಂತ್ರಣದಲ್ಲಿದೆ. ನೂರಕ್ಕೂ ಹೆಚ್ಚು ಜಿಂಕೆಗಳನ್ನು ಚಾಮರಾಜೇಂದ್ರ ಮೃಗಾಲಯದಿಂದ ಸ್ಥಳಾಂತರಿಸಲಾಗಿದೆ.

ಮೈಸೂರು(ಜು.30): ಜಿಲ್ಲೆಯಲ್ಲಿ ಅನೇಕರಿಗೆ ಗೊತ್ತಿಲ್ಲದ ಅರಬ್ಬಿತಿಟ್ಟು ಸಂರಕ್ಷಿತ ಅರಣ್ಯ ಪ್ರದೇಶವು ಈಗ ಜಿಂಕೆಗಳ ಆವಾಸ ಸ್ಥಾನವಾಗಿ ಮಾರ್ಪಾಡಾಗಿದ್ದು, ಕಾಕತಾಳಿಯವೆಂಬಂತೆ ಮೈಸೂರಿಗೆ ಚಿರತೆ ದಾಳಿ ನಿಯಂತ್ರಣದಲ್ಲಿದೆ. 

ಸಾಮಾನ್ಯವಾಗಿ ಜಿಂಕೆಯ ಸಂತತಿ ಹೆಚ್ಚು. ಈ ಹಿನ್ನೆಲೆಯಲ್ಲಿ ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿನ ಜಿಂಕೆ ಮನೆ ತುಂಬಿ ತುಳುಕುತ್ತಿತ್ತು. ಒಂದು ಪ್ರಾಣಿ ಮನೆಯಲ್ಲಿ ಇಂತಿಷ್ಟೇ ಪ್ರಾಣಿ ಇರಬೇಕು ಎಂಬ ನಿಯಮವಿದೆ. ಆದ್ದರಿಂದ ಹೆಚ್ಚುವರಿ ಜಿಂಕೆಗಳನ್ನು ಕೇಂದ್ರ ಮೃಗಾಲಯ ಪ್ರಾಧಿಕಾರದ ಅನುಮತಿ ಪಡೆದು ಹುಣಸೂರು ರಸ್ತೆಯ ಅರಬ್ಬಿತಿಟ್ಟು ಬಿಡಲಾಗಿದೆ. ಅದೂ ವೈಜ್ಞಾನಿಕ ವಿಧಾನದ ಮೂಲಕ.

100ಕ್ಕೂ ಹೆಚ್ಚು ಜಿಂಕೆಗಳ ಸ್ಥಳಾಂತರ:

ಈ ಮುಂಚೆ ಪ್ರಾಣಿಗಳನ್ನು ಸಾಗಿಸುವಾಗ ಅವುಗಳಿಗೆ ಪ್ರಜ್ಞೆ ತಪ್ಪಿಸಿ ಬೋನಿಗೆ ಹಾಕಿ ಸಾಗಿಸಲಾಗುತ್ತಿತ್ತು. ಆದರೆ ಜಿಂಕೆಗಳನ್ನು ವೈಜ್ಞಾನಿಕ ವಿಧಾನದ ಮೂಲಕ ಅಂದರೆ ಬೋನಿನಲ್ಲಿ ಅಗತ್ಯವಿರುವ ಆಹಾರವನ್ನಿಟ್ಟು, ಜಿಂಕೆಗಳು ತಾನೇ ತಾನಾಗಿ ಒಳಗೆ ಹೋಗುವುದನ್ನು ಅಭ್ಯಾಸ ಮಾಡಿಸಿ, ನಂತರ ಅವುಗಳನ್ನು ಅರಬ್ಬಿತಿಟ್ಟಿಗೆ ಸಾಗಿಸಲಾಗಿದೆ. ಈ ವಿಧಾನದ ಮೂಲಕ ನೂರಕ್ಕೂ ಹೆಚ್ಚು ಜಿಂಕೆಗಳನ್ನು ಸ್ಥಳಾಂತರಿಸಲಾಗಿದೆ.

ಏಡಿ ಹಿಡಿಯಲು ಹೋದ ಮಹಿಳೆಯನ್ನು ಹುಲಿ ಹಿಡಿಯಿತು..!

ಅಲ್ಲಿಯೂ ಹಾಗೆಯೇ ಜಿಂಕೆಗಳನ್ನು ಬಿಟ್ಟು ಬರದೆ, ಅವುಗಳ ವಾಸಕ್ಕೆ ಅನುಕೂಲವಾಗುವಂತೆ ಜಿಂಕೆ ಮನೆ ನಿರ್ಮಿಸಲಾಗಿದೆ. ಅವು ಎಲ್ಲಿ ಬೇಕೋ ಅಲ್ಲಿ ಆರಾಮವಾಗಿ ಇರುವಂತೆ ನೋಡಿಕೊಳ್ಳಲಾಗುತ್ತಿದೆ. ಅರಬ್ಬಿತಿಟ್ಟು ಅರಣ್ಯವು ನೂರಾರು ಎಕರೆ ಪ್ರದೇಶದಷ್ಟುವಿಸ್ತಾರವಾಗಿರುವುದರಿಂದ ಯಥೇಚ್ಛವಾಗಿ ಆಹಾರವೂ ದೊರೆಯುತ್ತದೆ.

ಜಿಂಕೆ ದಾಳಿ ನಿಯಂತ್ರಣ:

ಈ ಮುನ್ನ ಇಸ್ಫೋಸಿಸ್‌, ನಾಗವಾಲ, ಇಲವಾಲ, ಹೆಬ್ಬಾಳು, ವಿಜಯನಗರ, ಆರ್‌ಬಿಐ ಸುತ್ತಮುತ್ತಲಿನ ಭಾಗದಲ್ಲಿ ಆಗಾಗ್ಗೆ ಚಿರತೆಗಳು ಕಾಣಿಸಿಕೊಳ್ಳುತ್ತಿದ್ದವು. ಆದರೆ ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗಿದೆ. ಇದಕ್ಕೆ ಅರಬ್ಬಿತಿಟ್ಟು ಅರಣ್ಯ ಪ್ರದೇಶದಲ್ಲಿ ಜಿಂಕೆಗಳು ಇರುವುದು ಕಾರಣ ಎಂದು ಅಂದಾಜಿಸಲಾಗಿದೆ.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಚಿರತೆಗಳಿಗೆ ಬೇಕಾದ ಆಹಾರವು ಕಾಡಿನಲ್ಲಿಯೇ ದೊರೆಯುತ್ತಿರುವುದರಿಂದ ನಾಡಿಗೆ ಚಿರತೆಗಳು ದಾಳಿ ನಡೆಸುವುದು ಸರ್ವೇ ಸಾಮಾನ್ಯವಾಗಿ ಕಡಿಮೆಯಾಗುತ್ತದೆ ಎಂಬುದು ತಜ್ಞರ ಅಭಿಪ್ರಾಯ. ಈ ವಾದವನ್ನು ಪುಷ್ಟೀಕರಿಸುವಂತೆ ಅರಬ್ಬಿತಿಟ್ಟು ಅರಣ್ಯ ಪ್ರದೇಶದಲ್ಲಿ ಜಿಂಕೆಗಳ ಸಂತತಿ ಹೆಚ್ಚಿದಂತೆಲ್ಲ ಮೈಸೂರಿಗೆ ಚಿರತೆ ದಾಳಿ ನಡೆಸುವುದೂ ಕಡಿಮೆಯಾಗಿದೆ. ಅಲ್ಲದೆ ಇತ್ತೀಚೆಗೆ ಚಾಮುಂಡಿಬೆಟ್ಟದಿಂದಲೂ ಚಿರತೆಗಳು ದಾಳಿ ನಡೆಸುವುದು ಕಡಿಮೆಯಾಗಿದೆ. ಕಳೆದ ಎರಡು ವರ್ಷದ ಹಿಂದೆ ಉತ್ತನಹಳ್ಳಿ ರಸ್ತೆಯ ಬಾಳೆ ಮಂಡಿ ಬಳಿ ಚಿರತೆ ಕಾಣಿಸಿಕೊಂಡಿದ್ದನ್ನು ಹೊರತುಪಡಿಸಿದರೆ, ಉಳಿದಂತೆ ಬೇರೆಲ್ಲಿಯೂ ಚಿರತೆ ಕಂಡುಬಂದಿಲ್ಲ.

click me!