'ಅತ್ಯಾಚಾರಿ ಆರೋಪಿಗಳಿಗೆ ಯುಪಿ ಸಿಎಂ ರಕ್ಷಣೆ'

By Kannadaprabha NewsFirst Published Oct 6, 2020, 7:22 AM IST
Highlights

ಉತ್ತರ ಪ್ರದೇಶ ಸರ್ಕಾರ ಅತ್ಯಾಚಾರ ಆರೋಪಿಗಳನ್ನು ರಕ್ಷಣೆ ಮಾಡುತ್ತಿದೆ. ನೇರವಾಗಿ ಸರ್ಕಾರ ಆರೋಪಿಗಳ ರಕ್ಷಣೆಗೆ ಮುಂದಾಗಿದೆ ಎನ್ನಲಾಗಿದೆ

ಬೆಂಗಳೂರು (ಅ.06):  ಉತ್ತರ ಪ್ರದೇಶದ ಹಥ್ರಾಸ್‌ನಲ್ಲಿ ದಲಿತ ಯುವತಿ ಮೇಲಿನ ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ನೇರವಾಗಿ ಆರೋಪಿಗಳ ರಕ್ಷಣೆಗೆ ಮುಂದಾಗಿದ್ದಾರೆ. ಅವರ ಸೂಚನೆ ಮೇರೆಗೆಯೇ ರಾತ್ರೋರಾತ್ರಿ ಯುವತಿಯ ಶವವನ್ನು ಸುಟ್ಟು ಹಾಕಲಾಗಿದೆ. ಹೀಗಾಗಿ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ವಜಾಗೊಳಿಸಬೇಕು ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ಉತ್ತರ ಪ್ರದೇಶದಲ್ಲಿ ದಲಿತ ಯುವತಿ ಮೇಲೆ ನಡೆದ ಅತ್ಯಾಚಾರ ಹಾಗೂ ಹತ್ಯೆ ಖಂಡಿಸಿ ಕೇಂದ್ರ ಹಾಗೂ ಉತ್ತರ ಪ್ರದೇಶ ಸರ್ಕಾರದ ವಿರುದ್ಧ ಸೋಮವಾರ ನಗರದ ಕಾಂಗ್ರೆಸ್‌ ಭವನದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಬಿಜೆಪಿಯು ಅಧಿಕಾರದಲ್ಲಿ ಇರುವ ಕಡೆಯಲ್ಲೆಲ್ಲಾ ಸಂವಿಧಾನ ವಿರೋಧಿ ಕ್ರಮಗಳ ಮೂಲಕ ತನ್ನ ಅಜೆಂಡಾ ಪ್ರತಿಷ್ಠಾಪಲು ಮುಂದಾಗುತ್ತಿದೆ. ಈ ವಿಷಯದಲ್ಲಿ ಹುಡುಗಾಟ ಆಡಲು ಹೋದರೆ ಬೆಂಕಿ ಹೊತ್ತಿಕೊಳ್ಳುತ್ತದೆ ಹುಷಾರ್‌ ಎಂದು ಎಚ್ಚರಿಕೆ ನೀಡಿದ್ದಾರೆ.

ಹತ್ರಾಸ್ ಪ್ರಕರಣ; ಕೋಮು ಸೌಹಾರ್ದ ಕದಡಲು ಹಬ್ಬಿಸಿದ ಸುಳ್ಳು ಸುದ್ದಿ ಯಾವುದು?

ಜೈಲ್‌ ಭರೋ ಹೋರಾಟಕ್ಕೆ ಅಣಿಯಾಗಿ:

ರಾಜ್ಯ ಹಾಗೂ ಕೇಂದ್ರ ಸರ್ಕಾರದ ಅವ್ಯವಹಾರ ಹಾಗೂ ಜನ ವಿರೋಧಿ ನೀತಿಗಳ ವಿರುದ್ಧ ಶಾಂತಿಯುತ ಹಾಗೂ ಜೈಲ್‌ ಭರೋ ಹೋರಾಟಕ್ಕೆ ಅಣಿಯಾಗಬೇಕಿದೆ. ನಮ್ಮ ಹೋರಾಟ ಶಾಂತಿಯುತವಾಗಿರಬೇಕು. ಈ ನಿಟ್ಟಿನಲ್ಲಿ ಬಿಜೆಪಿಯ ಅನೈತಿಕ ಸರ್ಕಾರವನ್ನು ಕಿತ್ತು ಹಾಕಲು ಶಪಥ ಮಾಡಬೇಕು ಎಂದು ಕರೆ ನೀಡಿದರು.

ವಿಧಾನ ಪರಿಷತ್‌ ಸದಸ್ಯ ಬಿ.ಕೆ. ಹರಿಪ್ರಸಾದ್‌, ಹಿರಿಯ ನಾಯಕರಾದ ಕೆ.ಎಚ್‌. ಮುನಿಯಪ್ಪ, ಮಾಜಿ ಸಚಿವರಾದ ರಾಮಲಿಂಗಾರೆಡ್ಡಿ, ಕೆ.ಜೆ. ಜಾರ್ಜ್, ಎಚ್‌.ಎಂ. ರೇವಣ್ಣ, ಮಾಜಿ ಸಂಸದ ವಿ.ಎಸ್‌. ಉಗ್ರಪ್ಪ, ಶಾಸಕರಾದ ಬೈರತಿ ಸುರೇಶ್‌, ಸೌಮ್ಯಾರೆಡ್ಡಿ ಸೇರಿ ಹಲವರು ಹಾಜರಿದ್ದರು.

ದಲಿತ ಯುವತಿ ಕ್ರೂರವಾಗಿ ಅತ್ಯಾಚಾರಕ್ಕೆ ಒಳಗಾಗಿ ಹತ್ಯೆಯಾದರೂ ಹಂತಕರನ್ನು ರಕ್ಷಿಸಲು ನರೇಂದ್ರ ಮೋದಿ ಹಾಗೂ ಯೋಗಿ ಆದಿತ್ಯನಾಥ್‌ ಸರ್ಕಾರ ಯತ್ನಿಸುತ್ತಿದೆ. ಪೊಲೀಸರು ಅಥವಾ ನ್ಯಾಯಾಲಯದ ಸೂಚನೆ ಮೇರೆಗೆ ಶವ ಸಂಸ್ಕಾರ ನಡೆದಿಲ್ಲ. ಅಲ್ಲಿನ ಮುಖ್ಯಮಂತ್ರಿಯೇ ಶವ ಸುಟ್ಟು ಹಾಕಲು ಸೂಚಿಸಿದ್ದಾರೆ. ಅವರು ಯೋಗಿ ಅಲ್ಲ ಅಯೋಗ್ಯ. ಖಾವಿ ಹಾಕಿಕೊಳ್ಳಲು ನಾಲಾಯಕ್‌ ಎಂದು ಕಿಡಿ ಕಾರಿದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಣ್ಣೆದುರೇ ಇಷ್ಟೆಲ್ಲಾ ನಡೆಯುತ್ತಿದ್ದರೂ ಕಣ್ಮುಚ್ಚಿ ಕುಳಿತಿದ್ದಾರೆ. ಮೋದಿ ಅವರಿಗೆ ಮಹಿಳೆಯರಿಗೆ ಕಿಂಚಿತ್‌ ಕಾಳಜಿ ಇದ್ದರೆ ಆದಿತ್ಯನಾಥ್‌ರನ್ನು ಮುಖ್ಯಮಂತ್ರಿ ಸ್ಥಾನದಿಂದ ಕಿತ್ತೊಗೆಯಬೇಕು ಎಂದು ಒತ್ತಾಯಿಸಿದರು.

ರಾತ್ರೋರಾತ್ರಿ ಯೋಗಿ ಆದಿತ್ಯನಾಥ್‌ ನೇರವಾಗಿ ಸೂಚನೆ ನೀಡಿ ಯುವತಿಯ ದೇಹವನ್ನು ಸುಟ್ಟು ಹಾಕಿಸಿದ್ದಾರೆ. ದಲಿತ ವಿರೋಧಿ, ಪ್ರಜಾಪ್ರಭುತ್ವ ವಿರೋಧಿ ನಡೆಗಳ ಮೂಲಕ ಬಿಜೆಪಿ ತನ್ನ ಅಜೆಂಡಾ ಪ್ರತಿಷ್ಠಾಪಿಸಲು ಹೊರಟಿದೆ. ಇದರ ವಿರುದ್ಧ ಇಡೀ ಸಮಾಜ ಹೋರಾಟ ನಡೆಸಲಿದೆ. ಈ ವಿಷಯದಲ್ಲಿ ಹುಡುಗಾಟ ಆಡಲು ಹೋದರೆ ಬೆಂಕಿ ಹೊತ್ತಿಕೊಳ್ಳುತ್ತದೆ ಹುಷಾರ್‌ ಎಂದರು.

click me!