ಅತಿವೃಷ್ಟಿ: ಚಿಕ್ಕಮಗಳೂರು ಜಿಲ್ಲೆಗೆ 267 ಕೋಟಿ ಪರಿಹಾರಧನ

Kannadaprabha News   | Asianet News
Published : Jul 28, 2020, 11:52 AM IST
ಅತಿವೃಷ್ಟಿ: ಚಿಕ್ಕಮಗಳೂರು ಜಿಲ್ಲೆಗೆ 267 ಕೋಟಿ ಪರಿಹಾರಧನ

ಸಾರಾಂಶ

ರಾಜ್ಯದಲ್ಲಿ ಕೋವಿಡ್‌-19 ಸಾಂಕ್ರಾಮಿಕ ರೋಗ ಆವರಿಸಿ ಜನ ಆರ್ಥಿಕ ಸಂಕಷ್ಟ ಎದುರಿಸುವಂತೆ ಮಾಡಿತ್ತು. ಈ ನಡುವೆ ರಾಜ್ಯ ಸರ್ಕಾರ 2272 ಕೋಟಿ ರು. ವಿಶೇಷ ಪ್ಯಾಕೇಜ್‌ ಘೋಷಿಸಿ ಆರ್ಥಿಕವಾಗಿ ನಷ್ಟ ಅನುಭವಿಸುತ್ತಿದ್ದ ಎಲ್ಲ ವರ್ಗದ ಬಡ ಜನರ ಕಷ್ಟಗಳಿಗೆ ಸ್ಪಂದಿಸಿದೆ ಎಂದು ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ. ರವಿ ಹೇಳಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಚಿಕ್ಕಮಗಳೂರು(ಜು.28): ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಹಾನಿಗೊಳಗಾದ ಮನೆಗಳ ನಿರ್ಮಾಣ, ಬೆಳೆ ನಷ್ಟ, ರಸ್ತೆ ಕಾಮಗಾರಿ ಒಳಗೊಂಡಂತೆ ವಿವಿಧ ಸಂಕಷ್ಟಗಳಿಗೆ ಪರಿಹಾರ ಧನವಾಗಿ ರಾಜ್ಯ ಸರ್ಕಾರದಿಂದ ಜಿಲ್ಲೆಗೆ 267 ಕೋಟಿ ರು. ಬಿಡುಗಡೆಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಹೇಳಿದರು.

ನಗರದ ಕುವೆಂಪು ಕಲಾಮಂದಿರದಲ್ಲಿ ಸೋಮವಾರ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ನೇತೃತ್ವದ ರಾಜ್ಯ ಸರ್ಕಾರ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸವಾಲುಗಳ ಒಂದು ವರ್ಷ ಪರಿಹಾರದ ಸ್ಪರ್ಶ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರಾಜ್ಯದಲ್ಲಿ ಕೋವಿಡ್‌-19 ಸಾಂಕ್ರಾಮಿಕ ರೋಗ ಆವರಿಸಿ ಜನ ಆರ್ಥಿಕ ಸಂಕಷ್ಟ ಎದುರಿಸುವಂತೆ ಮಾಡಿತ್ತು. ಈ ನಡುವೆ ರಾಜ್ಯ ಸರ್ಕಾರ 2272 ಕೋಟಿ ರು. ವಿಶೇಷ ಪ್ಯಾಕೇಜ್‌ ಘೋಷಿಸಿ ಆರ್ಥಿಕವಾಗಿ ನಷ್ಟ ಅನುಭವಿಸುತ್ತಿದ್ದ ಎಲ್ಲ ವರ್ಗದ ಬಡ ಜನರ ಕಷ್ಟಗಳಿಗೆ ಸ್ಪಂದಿಸಿದೆ ಎಂದರು.

ರಾಜ್ಯದಲ್ಲಿ ಅತಿವೃಷ್ಟಿಸಂದರ್ಭದಲ್ಲಿ 20ಕ್ಕೂ ಹೆಚ್ಚು ಜಿಲ್ಲೆಗಳು ಹಾಗೂ 114 ತಾಲೂಕುಗಳು ಸಂಕಷ್ಟಕ್ಕೆ ಸಿಲುಕಿದ್ದಾಗ ರಾಜ್ಯದಲ್ಲಿ 6108 ಕೋಟಿ ಹಣವನ್ನು ಪರಿಹಾರವಾಗಿ ಬಿಡುಗಡೆಗೊಳಿಸಿದ್ದು, ಅದರಲ್ಲಿ ಜಿಲ್ಲೆಗೆ ಮನೆಗಳ ನಿರ್ಮಾಣ, ಬೆಳೆ ನಷ್ಟ, ರಸ್ತೆ ಕಾಮಗಾರಿ ಒಳಗೊಂಡಂತೆ ವಿವಿಧ ಪರಿಹಾರವಾಗಿ 267 ಕೋಟಿ ರು. ಬಿಡುಗಡೆ ಮಾಡಲಾಗಿದೆ. ಈ ವರ್ಷ ಹಲವು ಸಂಕಷ್ಟಹಾಗೂ ಸವಾಲುಗಳ ವರ್ಷವಾಗಿದ್ದು, ಆ ನಡುವೆಯ ಸರ್ಕಾರ ಅಭಿವೃದ್ಧಿಗೆ ಮುಂದಾಗಿದೆ ಎಂದು ಹೇಳಿದರು.

ಲಾಕ್‌ಡೌನ್‌ ಸಂದರ್ಭದಲ್ಲಿ ರಾಜ್ಯ ಸರ್ಕಾರ ಪ್ರತಿ ವರ್ಗಕ್ಕೂ ಸಹಾಯಧನ ನೀಡುವ ಮೂಲಕ ಜನರ ಸಮಸ್ಯೆಗಳಿಗೆ ಸ್ಪಂದಿಸಿದೆ. ಜಿಲ್ಲೆಯಲ್ಲಿ ಒಟ್ಟು 952   ಕ್ಷೌರಿಕರಿಗೆ, 481 ಅಗಸರಿಗೆ, 3896 ಜನ ಆಟೋ, ಟ್ಯಾಕ್ಸಿ ಚಾಲಕರಿಗೆ ತಲಾ 5 ಸಾವಿರದಂತೆ ಸಹಾಯಧನ ನೀಡಲಾಗಿದೆ ಹಾಗೂ 38220 ಕಟ್ಟಡ ಕಾರ್ಮಿಕರಿಗೆ 19.11 ಕೋಟಿ ರು. ಮತ್ತು ಪಿಎಂ ಕಿಸಾನ್‌ ಯೋಜನೆ ಅಡಿ 1,11,650 ಫಲಾನುಭವಿಗಳಿಗೆ ಏಪ್ರಿಲ್‌ ಮಾಹೆಯಲ್ಲಿ ಕೇಂದ್ರದಿಂದ 2 ಸಾವಿರ ಮತ್ತು ರಾಜ್ಯ ಸರ್ಕಾರದಿಂದ 2 ಸಾವಿರ ರು. ಸಹಾಯಧನ ಬಿಡುಗಡೆಗೊಳಿಸಲಾಗಿದೆ. ಎಂಎಸ್‌ಎಂಇ ಯೋಜನೆಯಡಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಘಟಕಗಳ ಪುನಶ್ಚೇತನಕ್ಕಾಗಿ 56 ಕೋಟಿ ರು. ಬಿಡುಗಡೆಯಾಗಿದ್ದು, 3834 ಫಲಾನುಭವಿಗಳು ಇದರ ಸದುಪಯೋಗ ಪಡೆದುಕೊಂಡಿದ್ದಾರೆ ಎಂದು ಹೇಳಿದರು.

ರಾಜ್ಯದಲ್ಲಿ ರೈತರ ಹಿತಕಾಯುವ ಉದ್ದೇಶದಿಂದ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ರೂಪಿಸಲಾಗಿದೆ. ನನ್ನ ಬೆಳೆ ನನ್ನ ಹಕ್ಕು ಎನ್ನುವಂತೆ ರೈತರು ತಮ್ಮ ಬೆಳೆಯನ್ನು ಸೂಕ್ತ ಬೆಂಬಲ ಬೆಲೆ ಸಿಗುವ ಯಾವುದೇ ಮಾರುಕಟ್ಟೆಯಲ್ಲಾದರೂ, ಮಾರಾಟ ಮಾಡಬಹುದಾಗಿದೆ. ಇದರಿಂದಾಗಿ ಮಧ್ಯವರ್ತಿಗಳ ಸಮಸ್ಯೆಯಿಲ್ಲದೆ ರೈತರೇ ನೇರ ಲಾಭ ಪಡೆಯಬಹುದು. ಇದರಿಂದಾಗಿ ರೈತರು ಅನುಭವಿಸುತ್ತಿದ್ದ ಸಮಸ್ಯೆಗಳು ನಿವಾರಣೆಯಾಗಲಿವೆ ಎಂದು ತಿಳಿಸಿದರು.

ಭೂ ಸುಧಾರಣೆ ಕಾಯ್ದೆಯು ರಾಜ್ಯದಲ್ಲಿ ಹೊಸದಾಗಿ ಆರಂಭಿಸುವ ಕೈಗಾರಿಕೆಗಳಿಗೆ ಹೆಚ್ಚಿನ ಪೋ›ತ್ಸಾಹ ದೊರೆಯಲಿದ್ದು, ಕೃಷಿ ಕೈಗೊಳ್ಳುವವರಿಗೂ ಅನುಕೂಲವಾಗಲಿದೆ ಇದರಿಂದಾಗಿ ಸಾಕಷ್ಟುಜನರಿಗೆ ಉದ್ಯೋಗ ದೊರೆತು ನಿರುದ್ಯೋಗ ಸಮಸ್ಯೆ ನಿವಾರಣೆಯಾಗಲಿದೆ. ಜೊತೆಗೆ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಸ್ಥಾಪನೆ ಹಾಗೂ ಸ್ವಯಂ ಉದ್ಯೋಗ ಕೈಗೊಳ್ಳಲು ಹೆಚ್ಚು ಪೋ›ತ್ಸಾಹ ನೀಡಿದಂತಾಗಲಿದೆ ಎಂದರು.

ಕೋವಿಡ್‌-19 ಗೆ ಸಂಬಂಧಿಸಿದಂತೆ ರಾಜ್ಯದ ಪಟ್ಟಿಯಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಜಿಲ್ಲೆಯು 26ನೇ ಸ್ಥಾನದಲ್ಲಿದ್ದು, ಗುಣಮುಖವಾಗುವ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿ ಗುರುತಿಸಿಕೊಂಡಿದೆ. ಸದ್ಯ ಜಿಲ್ಲೆಯಲ್ಲಿ 679 ಸೋಂಕಿತರಿದ್ದು, 388 ಜನ ಗುಣಮುಖರಾಗಿದ್ದಾರೆ ಎಂದು ತಿಳಿಸಿದರು.

ಸಮಗ್ರ ಮೀನುಗಾರಿಕಾ ನೀತಿಯ ಕರಡು ಶೀಘ್ರ ಪ್ರಕಟ: ಸಚಿವ ಕೋಟ

ನಗರದಲ್ಲಿ ಕೋವಿಡ್‌-19 ಸೋಂಕು ಪತ್ತೆ ಹಚ್ಚಲು ಹೊಸದಾಗಿ ಲ್ಯಾಬ್‌ ಟ್ರಯಲ್‌ ಟೆಸ್ಟ್‌ ಪ್ರಾರಂಭವಾಗಿದೆ. ಇಲ್ಲಿಯೇ ಪೋ›ಟೆಸ್ಟ್‌ ಪ್ರಾರಂಭವಾದರೆ ತಪಾಸಣಾ ವರದಿಯ ಫಲಿತಾಂಶ ಬಹುಬೇಗ ದೊರೆಯಲಿದ್ದು, ಕೊರೋನಾ ನಿಯಂತ್ರಣಕ್ಕೆ ಸಹಕಾರಿಯಾಗಲಿದೆ. ಜಿಲ್ಲೆಗೆ ಈಗಾಗಲೇ ಹೊಸದಾಗಿ ವೈದ್ಯಕೀಯ ಮಹಾವಿದ್ಯಾಲಯ ಮಂಜೂರಾಗಿದ್ದು, ಟೆಂಡರ್‌ ಪ್ರಕ್ರಿಯೆಗಳು ಆರಂಭವಾಗಬೇಕಿದೆ. ಜೊತೆಗೆ ನೀರಾವರಿ ಯೋಜನೆಗಳ ಮಂಜೂರಾತಿಯು ದೊರೆತು ಕಾಮಗಾರಿ ಕೆಲಸಗಳು ಆರಂಭವಾಗಲಿದೆ ಎಂದರು.

ಸರ್ಕಾರ ರಾಜ್ಯದ ಜನರ ಶ್ರೇಯೋಭಿವೃದ್ಧಿಗಾಗಿ ಸದಾ ಕಾಲ ಶ್ರಮಿಸುತ್ತಿದೆ. ಒಂದು ವರ್ಷದ ಅವಧಿಯಲ್ಲಿ ಹೊಸ ಅಭಿವೃದ್ಧಿ ಪರ್ವದಲ್ಲಿ ಸಾಧನೆಯ ಲಾಂಗ್‌ ಜಂಪ್‌ ಮಾಡದೇ ಇದ್ದರೂ, ಅಭಿವೃದ್ಧಿಯತ್ತ ದಾಪುಗಾಲು ಇಡುತ್ತಿದ್ದೇವೆ. ಈ ಮೂಲಕ ಸ್ಥಿರ ಸರ್ಕಾರ ಸ್ಥಾಪಿಸಿ ಜನರ ಪರವಾದ ಯೋಜನೆಗಳನ್ನು ರೂಪಿಸಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.

ಜಿಪಂ ಅಧ್ಯಕ್ಷೆ ಸುಜಾತ ಕೃಷ್ಣಪ್ಪ, ತಾಪಂ ಅಧ್ಯಕ್ಷೆ ಶುಭಾ ಸತ್ಯಮೂರ್ತಿ, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಂ.ಎಚ್‌.ಅಕ್ಷಯ್‌ ಮಚೇಂದ್ರ, ಅಪರ ಜಿಲ್ಲಾಧಿಕಾರಿ ಡಾ.ಕುಮಾರ್‌, ಉಪ ವಿಭಾಗಾಧಿಕಾರಿ ಡಾ.ಎಚ್‌.ಎಲ್‌.ನಾಗರಾಜ್‌ ಉಪಸ್ಥಿತರಿದ್ದರು.
 

PREV
click me!

Recommended Stories

ವಿಧಾನಸಭೆಯಲ್ಲಿ 'ಉತ್ತರ ಕರ್ನಾಟಕ' ವಿವಾದ: ಶಿವಲಿಂಗೇಗೌಡರ ಮಾತುಗಳಿಗೆ ಗರಂ ಆದ ಯತ್ನಾಳ್, ಗ್ಯಾರಂಟಿ, ಗುಂಡಿ ವಿಚಾರಕ್ಕೆ ಜಟಾಪಟಿ!
ಕೊಡಗಿನ ಇತಿಹಾಸದಲ್ಲೇ ಮೊದಲ ಬಾರಿಗೆ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಿದ ಕೋರ್ಟ್! ಏನಿದು ಪ್ರಕರಣ?