ವಿಶ್ವವಿದ್ಯಾಲಯ ಧನ ಸಹಾಯ ಆಯೋಗ (ಯುಜಿಸಿ) ನಿರ್ದೇಶನಗಳನ್ನು ಬೆಂಗಳೂರು ವಿಶ್ವವಿದ್ಯಾಲಯದ ದೂರ ಶಿಕ್ಷಣ ನಿರ್ದೇಶನಾಲಯ ಪಾಲನೆ ಮಾಡದಿರುವುದರಿಂದ ಮುಂದಿನ ಶೈಕ್ಷಣಿಕ ಸಾಲಿಗೆ (2020-21) ಮಾನ್ಯತೆ ಸಿಗುವುದು ಅನುಮಾನವಾಗಿದೆ.
ಬೆಂಗಳೂರು(ಜ.15): ದೂರ ಶಿಕ್ಷಣಕ್ಕೆ ಅಧ್ಯಯನ ಕೇಂದ್ರ ಆರಂಭಿಸುವುದು, ವಿಷಯ ಸಂಯೋಜಕರ ನೇಮಕ ಹಾಗೂ ವಿಷಯಕ್ಕೆ ತಕ್ಕಂತೆ ತರಗತಿಗಳನ್ನು ನಡೆಸಬೇಕೆಂಬ ವಿಶ್ವವಿದ್ಯಾಲಯ ಧನ ಸಹಾಯ ಆಯೋಗ (ಯುಜಿಸಿ) ನಿರ್ದೇಶನಗಳನ್ನು ಬೆಂಗಳೂರು ವಿಶ್ವವಿದ್ಯಾಲಯದ ದೂರ ಶಿಕ್ಷಣ ನಿರ್ದೇಶನಾಲಯ ಪಾಲನೆ ಮಾಡದಿರುವುದರಿಂದ ಮುಂದಿನ ಶೈಕ್ಷಣಿಕ ಸಾಲಿಗೆ (2020-21) ಮಾನ್ಯತೆ ಸಿಗುವುದು ಅನುಮಾನವಾಗಿದೆ.
ಯುಜಿಸಿ ನೀಡಿರುವ 2018-19 ಮತ್ತು 19-20ನೇ ಸಾಲಿಗೆ ಮಾನ್ಯತೆ ಅವಧಿ 2019ರ ಡಿ.30ಕ್ಕೆ ಕೊನೆಯಾಗಿದೆ. 2020ನೇ ಸಾಲಿನ ಮಾನ್ಯತೆಗಾಗಿ ಡಿ.11ರೊಳಗೆ ಅರ್ಜಿ ಸಲ್ಲಿಸಬೇಕಿತ್ತು. ಬೆಂ.ವಿವಿ ಅರ್ಜಿ ಸಲ್ಲಿಕೆಯಲ್ಲಿಯೂ ವಿಳಂಬ ನೀತಿ ಅನುಸರಿಸಿದೆ ಎಂದು ತಿಳಿದು ಬಂದಿದೆ. ಅಲ್ಲದೆ, ಯುಜಿಸಿ ಬಿಡುಗಡೆ ಮಾಡಿರುವ 2020ನೇ ಸಾಲಿನ ಪಟ್ಟಿಯಲ್ಲಿ ಬೆಂಗಳೂರು ವಿವಿ ಹೆಸರು ಇಲ್ಲ. ಹೀಗಾಗಿ, ಮುಂದಿನ ಶೈಕ್ಷಣಿಕ ವರ್ಷ ಆರಂಭಿಸಲು ಅನುಮತಿ ಸಿಗಲಿದೆಯೇ ಎಂಬುದನ್ನು ಕಾಯ್ದು ನೋಡಬೇಕಿದೆ.
ಯುಜಿಸಿ ಬೆಂ.ವಿವಿಗೆ ನೀಡಿದ್ದ ಸೂಚನೆ:
ಶೈಕ್ಷಣಿಕ ಸಿಬ್ಬಂದಿ ನೇಮಕ, ಸಂಯೋಜಕರ ನೇಮಕ, ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಅಳವಡಿಕೆ, ಬಯೋಮೆಟ್ರಿಕ್ ಹಾಜರಾತಿ, ಅಧ್ಯಯನ ಕೇಂದ್ರ ಆರಂಭ, ನವೀನ ಮಾದರಿಯ ಪಠ್ಯಪುಸ್ತಕ ರಚನೆ, ಸುಸಜ್ಜಿತ ಗ್ರಂಥಾಲಯ ಹಾಗೂ ಸೆಮಿನಾರ್ ಹಾಲ್ ನಿರ್ಮಿಸಬೇಕು ಎಂಬ ನಿಯಮ ರೂಪಿಸಿ ನಿರ್ದೇಶನ ನೀಡಿತ್ತು. ಆದರೆ, ಬೆಂ.ವಿವಿ ತಮ್ಮಲ್ಲಿರುವ ಸೌಲಭ್ಯಗಳನ್ನು ಬಳಸಿಕೊಂಡು ಕೋರ್ಸ್‌ಗಳನ್ನು ನಡೆಸುತ್ತಿದೆ.
ಅಧ್ಯಯನ ಕೇಂದ್ರಕ್ಕೆ ಗ್ರಹಣ:
ಕಳೆದ ಒಂದೂವರೆ ವರ್ಷದಿಂದ ಬೆಂ.ವಿವಿ ಅಧ್ಯಯನ ಕೇಂದ್ರ ತೆರೆಯುವುದರಲ್ಲೇ ಕಾಲಹರಣ ಮಾಡುತ್ತಿದೆ. ಇದರಿಂದಾಗಿ ವಿದ್ಯಾರ್ಥಿಗಳು ಪ್ರವೇಶ ಪಡೆಯಲು ಅನಿವಾರ್ಯವಾಗಿ ಜ್ಞಾನಭಾರತಿ ಕೇಂದ್ರಕ್ಕೆ ಹೋಗಬೇಕಿದೆ. ವಿವಿ ವ್ಯಾಪ್ತಿಯಲ್ಲಿ ವಿವಿಧ 15 ಅಧ್ಯಯನ ಕೇಂದ್ರಗಳನ್ನು ಗುರುತಿಸಿದ್ದು, ಅಧಿಕೃತವಾಗಿ ಯಾವುದೇ ಕೇಂದ್ರವನ್ನು ಉದ್ಘಾಟನೆ ಮಾಡಿಲ್ಲ. ಅಧ್ಯಯನ ಕೇಂದ್ರದ ನೆಪವೊಡ್ಡಿ ವಿಷಯ ಸಂಯೋಜಕರ ನೇಮಕವನ್ನು ಸಹ ವಿವಿ ಸ್ಥಗಿತಗೊಳಿಸಿದೆ. ಈ ಎಲ್ಲಾ ಕಾರಣಗಳಿಂದ ಪ್ರವೇಶಾತಿಯ ಮೇಲೆ ಪರಿಣಾಮ ಬೀಳುವ ಸಾಧ್ಯತೆಗಳಿವೆ.
ಬಿಬಿಎಂಪಿಯಲ್ಲೂ ವರ್ಗಾವಣೆ ನೀತಿ ಜಾರಿ..?
ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿರುವ ಕಾಲೇಜುಗಳಲ್ಲಿ ಅಧ್ಯಯನ ಕೇಂದ್ರಗಳನ್ನು ತೆರೆಯಲು ನಿರ್ಧರಿಸಿದ್ದೇವೆ. ಅಲ್ಲದೆ, ಯುಜಿಸಿ ಮಾನ್ಯತೆ ಕೋರಿ ಅರ್ಜಿ ಸಲ್ಲಿಸಲಾಗಿದ್ದು, ಮಾನ್ಯತೆ ಸಿಗಲಿದೆ ಎಂಬ ಭರವಸೆ ಇದೆ ಎಂದು ಬೆಂಗಳೂರು ವಿವಿ ಕುಲಪತಿ ಪ್ರೊ. ಕೆ.ಆರ್. ವೇಣುಗೋಪಾಲ್ ಹೇಳಿದ್ದಾರೆ.