ರಾಜ್ಯದ ಕ್ರೈಸ್ತರಿಗೆ ವಕ್ಫ್‌ ಬಿಸಿ ತಟ್ಟಿಲ್ಲ | ಮತಾಂತರ ನಡೆಯುತ್ತಿದ್ದರೆ ಕ್ರೈಸ್ತರ ಸಂಖ್ಯೆ ಏಕೆ ಕುಸಿದಿದೆ?: ಫಾ. ಸಲ್ಡಾನಾ

By Kannadaprabha News  |  First Published Nov 15, 2024, 7:14 AM IST

ವಕ್ಫ್‌ ಆಸ್ತಿ ವಿವಾದದಿಂದ ರಾಜ್ಯದಲ್ಲಿ ಕ್ರೈಸ್ತ ಸಮುದಾಯಕ್ಕೆ ಸಮಸ್ಯೆ ಆಗಿರುವುದು ಈವರೆಗೆ ತಿಳಿದು ಬಂದಿಲ್ಲ. ವಿಶೇಷವಾಗಿ ಕ್ರೈಸ್ತ ಸಮುದಾಯದವರು ಹೆಚ್ಚಾಗಿರುವ ಕರಾವಳಿ ಪ್ರದೇಶದಲ್ಲಿ ಇಂಥ ಸಮಸ್ಯೆ ನಮ್ಮ ಗಮನಕ್ಕೆ ಬಂದಿಲ್ಲ. ಆದರೂ ನಮ್ಮ ಆಸ್ತಿ ಪಾಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ಮಂಗಳೂರು-ಉಡುಪಿ ಧರ್ಮಪ್ರಾಂತ್ಯಗಳು, ಸಿಎಸ್‌ಐ ಚರ್ಚ್‌ಗಳು, ಬೆಂಗಳೂರಿನ ಧರ್ಮಪ್ರಾಂತ್ಯದವರು ಪರಿಶೀಲಿಸುತ್ತಿದ್ದಾರೆ.


ಮುಖಾಮುಖಿ- ಫಾದರ್‌ ಜೆ.ಬಿ. ಸಲ್ಡಾನಾ, ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದ ಪ್ರಮುಖ, ಮಂಗಳೂರಿನ ಬಿಜೈ ಚರ್ಚ್‌ನ ಧರ್ಮಗುರು

ಸಂದರ್ಶನ- ಸಂದೀಪ್‌ ವಾಗ್ಲೆ

Tap to resize

Latest Videos

undefined

ಹಲವು ದಶಕಗಳ ಕಾಲ ಹುಟ್ಟಿ ಬೆಳೆದ ಮನೆ, ಬಿತ್ತಿದ ಭೂಮಿ, ಮಠ, ಮಂದಿರದ ಜಾಗವನ್ನು ಇದ್ದಕ್ಕಿದ್ದಂತೆ ತನ್ನದೆನ್ನುವ ವಕ್ಫ್‌ ಮಂಡಳಿ ವಾದ ಕರ್ನಾಟಕದಲ್ಲಿ ಮಾತ್ರ ನಡೆಯುತ್ತಿಲ್ಲ, ಹಿಂದುಗಳು ಮಾತ್ರ ಆತಂಕಗೊಂಡಿಲ್ಲ. ನೆರೆಯ ಕೇರಳ ರಾಜ್ಯದಲ್ಲಿರುವ ಬಡ ಕ್ರಿಶ್ಚಿಯನ್‌ ಕುಟುಂಬಗಳಿಗೂ ಈ ಬಿಸಿ ತಟ್ಟಿದೆ. ಸುಮಾರು ನಾಲ್ಕು ನೂರಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿರುವ ಜಾಗ ತನಗೆ ಸೇರಿದೆ ಎಂದು ಕೇರಳದ ವಕ್ಫ್‌ ಮಂಡಳಿ ಹೇಳಿಕೊಂಡಿದೆ. ಇದರ ಪರಿಣಾಮ ಅಲ್ಲಿಯ ಕ್ರೈಸ್ತ ಸಮುದಾಯ ದೊಡ್ಡ ಪ್ರಮಾಣದಲ್ಲಿ ಸಿಡಿದೆದ್ದಿದೆ. ಹೀಗಿರುವಾಗ ರಾಜ್ಯದ ಕ್ರೈಸ್ತರೂ ಇಂತಹ ಸಮಸ್ಯೆ ಎದುರಿಸುತ್ತಿದ್ದಾರೆಯೇ? ಇಂತಹ ವಿವಾದ ಎದುರಾಗದಂತೆ ಯಾವ ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ? ಸಮಸ್ಯೆ ಪರಿಹರಿಸಲು ಯಾವ ಕ್ರಮ ಅನುಸರಿಸಬೇಕು ಎಂಬ ಬಗ್ಗೆ ಉತ್ತರಿಸಲು ‘ಕನ್ನಡಪ್ರಭ’ಕ್ಕೆ ಮುಖಾಮುಖಿಯಾಗಿದ್ದಾರೆ ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದ ಪ್ರಮುಖರೂ ಹಾಗೂ ಮಂಗಳೂರಿನ ಬಿಜೈ ಚರ್ಚ್‌ನ ಧರ್ಮಗುರು ಫಾದರ್‌ ಜೆ.ಬಿ. ಸಲ್ಡಾನಾ.

ಕೇರಳದ ಮುನಂಬಂ ಪ್ರದೇಶದ 600ಕ್ಕೂ ಹೆಚ್ಚು ಕ್ರೈಸ್ತರಿಗೆ ಸೇರಿದ 400 ಎಕರೆ ತನ್ನದು ಎಂದು ವಕ್ಫ್‌ ಬೋರ್ಡ್‌ ಪ್ರತಿಪಾದಿಸಿದೆ. ಕರ್ನಾಟಕದಲ್ಲಿ ಯಾವ ಪರಿಸ್ಥಿತಿಯಿದೆ?

ಕೇರಳ ಕ್ರೈಸ್ತರ ಹೋರಾಟವನ್ನು ಬೆಂಬಲಿಸುತ್ತೇವೆ. ಕೇರಳದ ಮುನಂಬಂನಲ್ಲಿ ಮಾತ್ರವಲ್ಲ. ವಯನಾಡ್‌, ತ್ರಿಶೂರ್‌, ಎರ್ನಾಕುಲಂನಲ್ಲೂ ಈ ಸಮಸ್ಯೆ ಇದೆ. ಮುಖ್ಯವಾಗಿ ಅತ್ಯಂತ ಬಡ ಮೀನುಗಾರಿಕೆ ಕುಟುಂಬಗಳು, ಎಸ್ಟೇಟ್‌ ಕೆಲಸಗಾರರಿಗೆ ತೊಂದರೆಯಾಗಿದೆ. ಬಡವರ ಮೂಲಭೂತ ಹಕ್ಕುಗಳಿಗಾಗಿ ನಡೆಯುತ್ತಿರುವ ಈ ಹೋರಾಟದಲ್ಲಿ ಚರ್ಚ್‌ಗಳ ಬೆಂಬಲ ಸಂತೋಷದ ವಿಚಾರ. ಸತ್ಯ, ನ್ಯಾಯ, ಮಾನವ ಹಕ್ಕುಗಳ ರಕ್ಷಣೆ, ಬಡವರಿಗಾಗಿ ಹೋರಾಟ ನಡೆಸುವುದು ಅರ್ಥಭರಿತ. ಕ್ರೈಸ್ತ ಸಮುದಾಯ ಖಂಡಿತವಾಗಿ ಹೋರಾಟವನ್ನು ಬೆಂಬಲಿಸುತ್ತದೆ. ರಾಜ್ಯದಲ್ಲಿ ಅಂತಹ ಸ್ಥಿತಿ ಇನ್ನೂ ಕಂಡು ಬಂದಿಲ್ಲ.

ಒಳಮೀಸಲಿಗೆ ಅಡ್ಡಿ ಇದೆ, ಯಾರಿಂದ ಅಂತ ಗೊತ್ತಿಲ್ಲ: ಎಚ್‌.ಆಂಜನೇಯ ಸಂದರ್ಶನ

ಹಾಗಂದರೆ, ರಾಜ್ಯದಲ್ಲಿ ಕ್ರೈಸ್ತರ ಆಸ್ತಿಗೆ ವಕ್ಫ್ ಹಕ್ಕು ಪ್ರತಿಪಾದನೆಯಾಗಿಲ್ಲವೇ?

ವಕ್ಫ್‌ ಆಸ್ತಿ ವಿವಾದದಿಂದ ರಾಜ್ಯದಲ್ಲಿ ಕ್ರೈಸ್ತ ಸಮುದಾಯಕ್ಕೆ ಸಮಸ್ಯೆ ಆಗಿರುವುದು ಈವರೆಗೆ ತಿಳಿದು ಬಂದಿಲ್ಲ. ವಿಶೇಷವಾಗಿ ಕ್ರೈಸ್ತ ಸಮುದಾಯದವರು ಹೆಚ್ಚಾಗಿರುವ ಕರಾವಳಿ ಪ್ರದೇಶದಲ್ಲಿ ಇಂಥ ಸಮಸ್ಯೆ ನಮ್ಮ ಗಮನಕ್ಕೆ ಬಂದಿಲ್ಲ. ಆದರೂ ನಮ್ಮ ಆಸ್ತಿ ಪಾಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ಮಂಗಳೂರು-ಉಡುಪಿ ಧರ್ಮಪ್ರಾಂತ್ಯಗಳು, ಸಿಎಸ್‌ಐ ಚರ್ಚ್‌ಗಳು, ಬೆಂಗಳೂರಿನ ಧರ್ಮಪ್ರಾಂತ್ಯದವರು ಪರಿಶೀಲಿಸುತ್ತಿದ್ದಾರೆ.

ಭವಿಷ್ಯದಲ್ಲಿ ರಾಜ್ಯದ ಚರ್ಚ್ ಆಸ್ತಿಗಳ ಬಗ್ಗೆ ವಕ್ಫ್‌ ಮಾದರಿಯ ವಿವಾದ ಎದುರಾಗದಂತೆ ಮಾಡಲು ಏನು ಮಾಡಿದ್ದಿರಿ?

ಪಾರದರ್ಶಕತೆ ಇಲ್ಲದಿದ್ದರೆ ಮಾತ್ರ ಈ ಸಮಸ್ಯೆ ಉದ್ಭವಿಸುತ್ತದೆ. ನಮ್ಮಲ್ಲಿ ಆದಷ್ಟು ಮಟ್ಟಿಗೆ ಆಂತರಿಕವಾಗಿ ಪಾರದರ್ಶಕತೆ ಉಳಿಸುವ ಪ್ರಯತ್ನ ಮಾಡುತ್ತಿದ್ದೇವೆ. ಯಾವುದೇ ಚರ್ಚ್‌, ಧರ್ಮಸಭೆ ಇರಲಿ, ಸಂಬಂಧಿಸಿದ ಆಸ್ತಿಗಳ ಎಲ್ಲ ದಾಖಲೆಗಳನ್ನು ಇಟ್ಟುಕೊಂಡು ಪಾರದರ್ಶಕತೆ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೇವೆ.

ವಕ್ಫ್‌ ಆಸ್ತಿ ವಿವಾದ ಏಕೆ ಈ ಪರಿ ಎಲ್ಲ ಸಮುದಾಯಗಳನ್ನು ಕಾಡುತ್ತಿದೆ?

ಆಸ್ತಿ ಮಾಲೀಕತ್ವದ ಕುರಿತ ವಿವಾದಗಳ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳುವಲ್ಲಿ ಸಂಬಂಧಿಸಿದ ವಕ್ಫ್‌ ಬೋರ್ಡ್‌, ಅಧಿಕಾರಿಗಳು, ಸರ್ಕಾರ ಎಲ್ಲರೂ ಒಟ್ಟು ಸೇರಿ ಚರ್ಚಿಸಿ ಪರಿಹಾರ ತೆಗೆದುಕೊಳ್ಳಬೇಕು. ನಿರ್ವಹಣೆ ಕೊರತೆ, ಭ್ರಷ್ಟಾಚಾರ ಇರುವ ಕಡೆಗಳಲ್ಲೆಲ್ಲ ಪಾರದರ್ಶಕತೆ ಕಾಯ್ದುಕೊಳ್ಳಲು ಜಾಸ್ತಿ ಗಮನ ನೀಡಬೇಕು. ಆಸ್ತಿ ವಿವಾದದ ಪ್ರಕರಣಗಳನ್ನು ಇತ್ಯರ್ಥಪಡಿಸುವಾಗ ಜನರ ಮೂಲಭೂತ ಹಕ್ಕುಗಳು, ವಿಶೇಷವಾಗಿ ಬಡವರ ಹಕ್ಕುಗಳನ್ನು ರಕ್ಷಿಸುವ ಪ್ರಯತ್ನ ವಕ್ಫ್‌ ಬೋರ್ಡ್‌ ಹಾಗೂ ಸರ್ಕಾರದಿಂದಲೂ ನಡೆಯಬೇಕು. ರಾಜಕೀಯ ರಹಿತವಾಗಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಿದೆ.

ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿರುವುದರಿಂದಲೇ ಈ ಸಮಸ್ಯೆ ಉದ್ಭವವಾಗಿದೆ ಅಂತಾರೆ?

ಸರ್ಕಾರ ನಿಲುವು ತೆಗೆದುಕೊಳ್ಳುವಾಗ ಜನರ ಒಳಿತಿಗಾಗಿಯೇ ಇರುತ್ತದೆ. ಅದಕ್ಕೂ ಮೊದಲು ಸಂಬಂಧಿಸಿದವರ ಜತೆ ಸಂಪೂರ್ಣ ಚರ್ಚೆ ನಡೆಸುವುದು ಅಗತ್ಯ. ಇದು ಸರ್ಕಾರದ ಕಡೆಯಿಂದ ಅಷ್ಟಾಗಿ ಕಾಣುತ್ತಿಲ್ಲ. ಕಾಯ್ದೆಗೆ ತಿದ್ದುಪಡಿ ಮಾಡುವ ಮೊದಲು ಚರ್ಚೆಗೆ ಬೇಕಾದಷ್ಟು ಸಮಯ ನೀಡಬೇಕು. ಸಂಪೂರ್ಣ ಚರ್ಚೆ, ಚಿಂತನೆ ನಡೆಸಿ ನಿರ್ಧಾರ ತೆಗೆದುಕೊಂಡರೆ ಮಾತ್ರ ಸಮಚಿತ್ತದ ಕಾನೂನು ತರಲು ಸಾಧ್ಯ.

ದಲಿತ ಕ್ರಿಶ್ಚಿಯನ್ನರಿಗೂ ಮೀಸಲಾತಿ ಕೊಡಬೇಕು ಎಂಬ ವಾದವಿದೆ?

ಭಾರತ ದೇಶದಲ್ಲಿನ ಕ್ರೈಸ್ತರ ನಿಲುವು ಜಾತಿ ಆಧಾರಿತ ಅಲ್ಲ. ದಲಿತರು ಯಾವುದೇ ಸಮುದಾಯಕ್ಕೆ ಸೇರಿದ್ದರೂ ಅವರನ್ನು ಮುಖ್ಯವಾಹಿನಿಗೆ ತರಬೇಕಾದರೆ ಅರ್ಥಭರಿತ ಯೋಜನೆ ಜಾರಿ ತರಬೇಕು. ದಲಿತ ಹಿಂದೂ, ದಲಿತ ಕ್ರಿಶ್ಚಿಯನ್‌, ದಲಿತ ಮುಸ್ಲಿಂ ಎಂಬ ಭೇದ ಮಾಡದೆ ದಲಿತರು, ಶ್ರಮಿಕ ವರ್ಗದವರು, ಹಿಂದುಳಿದವರಿಗೆ ಮೀಸಲಾತಿ ನೀಡಿ ಮುಂದಕ್ಕೆ ತರುವ ಪ್ರಯತ್ನ ಮಾಡಬೇಕು. ದಲಿತರಾಗಿಯೇ ಅವರು ಉಳಿದರೆ ಖಂಡಿತವಾಗಿಯೂ ಸಮಾಜಕ್ಕೆ ಶೋಭೆಯಲ್ಲ.

ರಾಜ್ಯದಲ್ಲಿ ಕ್ರೈಸ್ತರಿಂದ ಬಲವಂತದ ಮತಾಂತರ ಜಾಸ್ತಿಯಾಗುತ್ತಿದೆ ಎಂಬ ಆರೋಪ‍‍ವಿದೆ?

ರಾಜಕೀಯ ಕಾರಣಗಳಿಗಾಗಿ ಇಂತಹ ಅಪಪ್ರಚಾರ ನಡೆಯುತ್ತಿದೆ ಅಷ್ಟೇ. ಕರ್ನಾಟಕದಲ್ಲಿ 2001ರಲ್ಲಿ ಹಿಂದುಗಳ ಸಂಖ್ಯೆ ಶೇ. 83.86 ಇದ್ದದ್ದು 2011ರಲ್ಲಿ ಶೇ.84ಕ್ಕೇರಿದೆ. ಆದರೆ ಕ್ರಿಶ್ಚಿಯನ್ನರ ಸಂಖ್ಯೆ 2001ರಲ್ಲಿ ಶೇ.1.91 ಇದ್ದದ್ದು 2011ರಲ್ಲಿ ಶೇ. 1.87ಕ್ಕೆ ಇಳಿದಿದೆ. ಒಂದು ವೇಳೆ ಧರ್ಮ ಪ್ರಚಾರಕರ ಮೂಲಕ ಮತಾಂತರ ಆಗಿದ್ದೇ ಆದರೆ ಈ ಸಂಖ್ಯೆ ಜಾಸ್ತಿಯಾಗಬೇಕಿತ್ತಲ್ಲವೇ? ಆದರೆ ಕ್ರಿಶ್ಚಿಯನ್ನರ ಜನಸಂಖ್ಯೆಯೇ ಕಡಿಮೆಯಾಗಿದೆ. ಕೇವಲ ವೋಟ್‌ ಬ್ಯಾಂಕ್‌ಗಾಗಿ ಈ ರೀತಿಯ ಅಪಪ್ರಚಾರ ನಡೆಯುತ್ತಿದೆ. ಬಲವಂತದ ಮತಾಂತರ ಆಗಿದ್ದರೆ ಈ ಕುರಿತಾದ ಕೇಸುಗಳು ಯಾಕೆ ನಿಲ್ಲುತ್ತಿಲ್ಲ?

ಅಂದರೆ ಕಾರಣವಿಲ್ಲದೆ ಕ್ರೈಸ್ತ ಧಾರ್ಮಿಕ ಕೇಂದ್ರಗಳು, ಸಂಸ್ಥೆಗಳ ಮೇಲೆ ದಾಳಿಗಳನ್ನು ಮಾಡಲಾಗುತ್ತಿದೆ ಎಂದು ಅರ್ಥವೇ?

ಯಾರೂ, ಯಾವ ಸಂಸ್ಥೆಗಳೂ ಬಲವಂತವಾಗಿ ಮತಾಂತರ ಮಾಡುವ ಪ್ರಕ್ರಿಯೆ ನಡೆಸಬಾರದು. ಅಂಥದ್ದು ನಡೆದರೆ ಖಂಡನೀಯ. ಕ್ರೈಸ್ತ ಧರ್ಮದ ನಿಲುವು ಏನೆಂದರೆ ಯಾರನ್ನು ಕೂಡ ಚರ್ಚ್‌ಗಳಿಗೆ ಬಲವಂತವಾಗಿ ಕರೆಯಬಾರದು, ಬಲವಂತವಾಗಿ ಧರ್ಮಬೋಧನೆ ಮಾಡಬಾರದು. ಸ್ವಇಚ್ಛೆಯಿಂದ ಯಾರಾದರೂ ಆಲಿಸಿದರೆ ಅದಕ್ಕೆ ಯಾರ ಅಭ್ಯಂತರವೂ ಇಲ್ಲ. ಅಂತಹ ನಿರ್ದೇಶನವನ್ನು ಎಲ್ಲ ಚರ್ಚ್‌ಗಳಿಗೆ, ಧರ್ಮ ಮುಖಂಡರಿಗೆ ಬಿಷಪರ ಮೂಲಕ ನೀಡಲಾಗಿದೆ.

ಮತಾಂತರಗೊಂಡ ದಲಿತರು,ಹಿಂದುಳಿದವರನ್ನು ಕ್ರಿಶ್ಚಿಯನ್ನರಿಗೆ ಸಮಾನವಾಗಿ ಪರಿಗಣಿಸುತ್ತಿಲ್ಲ ಎಂಬ ಆರೋಪ‍‍ವೂ ಇದೆ?

ಆಂಧ್ರಪ್ರದೇಶ, ತಮಿಳುನಾಡಿನಲ್ಲಿ ಶೇ.90ರಷ್ಟು ಕ್ರಿಶ್ಚಿಯನ್ನರು ದಲಿತ ವರ್ಗಕ್ಕೆ ಸೇರಿದವರು. ಕೇರಳದಲ್ಲಿ ಹೆಚ್ಚಾಗಿ ಮೀನು ಹಿಡಿಯುವ ಸಮುದಾಯದವರು. ಇವರು ಆರ್ಥಿವಾಗಿ ಹಿಂದುಳಿದಿದ್ದಾರೆ. ಆದರೆ ಚರ್ಚ್‌ನಲ್ಲಿ ಎಲ್ಲರಿಗೂ ಒಂದೇ ರೀತಿಯ ಗೌರವ ಸಿಗುತ್ತಿದೆ. ಚರ್ಚ್‌ನಲ್ಲಿ ಕುಳಿತುಕೊಳ್ಳುವ ಜಾಗ, ಪ್ರಾರ್ಥನಾ ವಿಧಿ, ಧರ್ಮದೀಕ್ಷೆ, ಪ್ರಸಾದ, ಸ್ಮಶಾನ ಯಾವುದರಲ್ಲೂ ಯಾವ ತಾರತಮ್ಯವೂ ಇಲ್ಲ. ಆರ್ಥಿಕವಾಗಿ ಹಿಂದುಳಿದವರಿಗೆ ಶಿಕ್ಷಣ ನೀಡುವ ಬಗ್ಗೆ ವಿಶೇಷ ಗಮನ ನೀಡಲಾಗಿದೆ.

ರಾಜ್ಯದ ಎಲ್ಲ ಚರ್ಚ್‌ಗಳಲ್ಲಿ ಕನ್ನಡದಲ್ಲಿ ಪ್ರಾರ್ಥನೆಗೆ ಆದ್ಯತೆ ಸಿಗುತ್ತಿಲ್ಲ?

ಕರ್ನಾಟಕದಲ್ಲಿ ಕೊಂಕಣ ಕರಾವಳಿಯನ್ನು ಹೊರತುಪಡಿಸಿದರೆ, ಉಳಿದ ಭಾಗಗಳಲ್ಲಿ ಕನ್ನಡದಲ್ಲೇ ಪ್ರಾರ್ಥನೆ ನಡೆಯುತ್ತಿದೆ. ಆದರೆ ಉಡುಪಿ, ದ.ಕ.ದಲ್ಲಿ ಕೊಂಕಣಿ ಭಾಷೆ ಮಾತೃಭಾಷೆ ಆಗಿರುವುದರಿಂದ ಕೊಂಕಣಿ ಭಾಷೆಯಲ್ಲಿ ಪ್ರಾರ್ಥನೆ, ಪೂಜಾ ವಿಧಿಗಳನ್ನು ನೆರವೇರಿಸುತ್ತಾರೆ. ದೇವರ ಬಗ್ಗೆ ಮಾತನಾಡುವಾಗ ಭಾಷೆಯ ವಿಷಯ ತರುವುದು ಸರಿಯಲ್ಲ. ಕನ್ನಡ ಭಾಷೆ ಮಾತನಾಡುವವರು ಪೂಜಾ ವಿಧಿ ಕನ್ನಡದಲ್ಲಿ ಬೇಕೆಂಬ ಬೇಡಿಕೆಯಿಟ್ಟಾಗ ಅವರ ಇಚ್ಛೆ ಪೂರೈಸುವ ಕೆಲಸ ಮಾಡಬೇಕು.

ಕ್ರೈಸ್ತ ಸನ್ಯಾಸಿನಿಯರ ಮೇಲೆ ಪಾದ್ರಿಗಳೇ ಅತ್ಯಾಚಾರ ಮಾಡಿದ ಪ್ರಕರಣಗಳು?

ಅಲ್ಲಿ, ಇಲ್ಲಿ ಒಂದೆರಡು ತಪ್ಪುಗಳು ಖಂಡಿತವಾಗಿಯೂ ನಡೆದಿವೆ. ಅದನ್ನು ಅಲ್ಲಗಳೆಯುವಂತಿಲ್ಲ. ಇದು ಶೋಚನೀಯ. ಧರ್ಮದ ಮುಖಂಡರು ಧಾರ್ಮಿಕತೆ, ನೈತಿಕತೆಯಲ್ಲಿ ತಾವರೆಯಂತೆ ಎಲ್ಲರಿಗಿಂತ ಮೇಲೆ ನಿಲ್ಲುವ ಪ್ರಯತ್ನ ಮಾಡಬೇಕು. ಅದಕ್ಕಾಗಿ ಪಾದ್ರಿಗಳಾಗಲು ನೀಡುವ ತರಬೇತಿಯಲ್ಲಿ ಈ ರೀತಿ ಕಷ್ಟ ನಷ್ಟಗಳು ಆಗದಂತೆ ಸೂಕ್ತ ಮಾರ್ಗದರ್ಶನ ನೀಡಲಾಗುತ್ತಿದೆ. ಎಲ್ಲ ರೀತಿಯ ತರಬೇತಿ ನೀಡಿದ ನಂತರ ಸೇವಾದರ್ಶಿಯಾಗಿ ಜೀವಿಸಲು ಅವರು ಅರ್ಹರೋ ಅಲ್ಲವೋ ಎಂಬ ಬಗ್ಗೆ ಸೂಕ್ತ ನಿರ್ಧಾರವನ್ನು ಹಂತ ಹಂತವಾಗಿ ತೆಗೆದುಕೊಳ್ಳಲಾಗುತ್ತದೆ. ಯೋಗ್ಯರನ್ನು ಮಾತ್ರ ಸೇವಾದರ್ಶಿಗಳಾಗಿ, ಧರ್ಮಗುರುಗಳಾಗಿ ಧರ್ಮ ದೀಕ್ಷೆ ಸ್ವೀಕರಿಸಲು ಪ್ರೇರಣೆ ನೀಡಲಾಗುತ್ತಿದೆ.

ಕ್ರೈಸ್ತ ಸಮುದಾಯಕ್ಕೆ ಸಿಕ್ಕಿರುವ ರಾಜಕೀಯ ಪ್ರಾತಿನಿಧ್ಯದ ಬಗ್ಗೆ ತೃಪ್ತಿ ಇದೆಯೇ?

ಕರ್ನಾಟಕದಲ್ಲಿ ಕ್ರೈಸ್ತರು ಬಹಳ ಸಣ್ಣ ಸಮುದಾಯ. 11 ಲಕ್ಷ ಜನಸಂಖ್ಯೆ ಮಾತ್ರವೇ ಇದೆ. ಶೇಕಡಾವಾರು ಜನಸಂಖ್ಯೆಗೆ ಅನುಗುಣವಾಗಿ ರಾಜಕೀಯ ಪ್ರಾತಿನಿಧ್ಯ ದೊರೆತರೆ ಅರ್ಥಪೂರ್ಣವಾಗಿರುತ್ತದೆ. ಆದರೆ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಕ್ರೈಸ್ತ ರಾಜಕೀಯ ಧುರೀಣರು ಇರುವುದು ಬೆರಳೆಣಿಕೆ ಮಂದಿ ಮಾತ್ರ. ಆದರೆ ಸ್ಥಳೀಯ ಹಂತದಲ್ಲಿ ರಾಜಕೀಯ ಮುಖಂಡತ್ವ ತೆಗೆದುಕೊಂಡ ಹಲವರು ಇದ್ದಾರೆ. ರಾಜ್ಯ, ದೇಶ ಮಟ್ಟದಲ್ಲಿ ಕ್ರೈಸ್ತ ಸಮುದಾಯಕ್ಕೆ ಸಾಕಷ್ಟು ರಾಜಕೀಯ ಪ್ರಾತಿನಿಧ್ಯ ಸಿಗುತ್ತಿಲ್ಲ,

ವಕ್ಫ್ ನೋಟಿಸ್‌ ಹಿಂಪಡೆವ ಆದೇಶ ಕಣ್ಣೊರೆಸುವ ತಂತ್ರ: ಪ್ರಲ್ಹಾದ್ ಜೋಶಿ ಆಕ್ರೋಶ

ಕರ್ನಾಟಕದಲ್ಲಿ ಕ್ರಿಶ್ಚಿಯನ್ನರಿಗೆ ಪ್ರತ್ಯೇಕ ನಿಗಮ ಸ್ಥಾಪನೆ ಕುರಿತ ಬೇಡಿಕೆ ಎಲ್ಲಿಯವರೆಗೆ ಬಂದಿದೆ? ಸರ್ಕಾರದೊಂದಿಗೆ ಈ ಕುರಿತು ಚರ್ಚಿಸಿದ್ದೀರಾ?

ಕ್ರಿಶ್ಚಿಯನ್ನರಿಗೆ ಪ್ರತ್ಯೇಕ ನಿಗಮ ಬೇಡಿಕೆ ಹುಟ್ಟುವ ಮೊದಲು ಕ್ರಿಶ್ಚಿಯನ್ ಸಮುದಾಯಕ್ಕೆ ಆರ್ಥಿಕ ನೆರವು ನೀಡುವ ನಿಟ್ಟಿನಲ್ಲಿ ಆಗಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪ್ರಯತ್ನ ಮಾಡಿದ್ದರು. ಕಾಂಗ್ರೆಸ್‌ ಸರ್ಕಾರ ಬಂದ ಮೇಲೆ ಕ್ರಿಶ್ಚಿಯನ್‌ ಸಮುದಾಯಕ್ಕೆ ಸ್ಪಂದನೆ ಸ್ವಲ್ಪ ವಿಳಂಬವಾಗುತ್ತಾ ಬಂತು. 2020- 21ರ ನಂತರ ನಿಗಮದ ಬಗ್ಗೆ ಯಾವ ಚಿಂತನೆಗಳೂ ಮುಂದುವರಿಯುತ್ತಿಲ್ಲ. ಆದರೆ ಸಮುದಾಯಕ್ಕೆ ಸೇರಿದ ಪ್ರಮುಖರು ಸರ್ಕಾರದ ಮುಂದೆ ಬೇಡಿಕೆ ಇಟ್ಟಿದ್ದಾರೆ. ಸರ್ಕಾರ ಸೂಕ್ತವಾಗಿ ಸ್ಪಂದಿಸಲಿದೆ ಎಂಬುದು ನನ್ನ ನಂಬಿಕೆ.

click me!