ಕಾರ್ಡ್‌ ರಸ್ತೇಲಿ ಮತ್ತೊಂದು ಮೇಲ್ಸೇತುವೆ!

By Web DeskFirst Published Jun 5, 2019, 8:32 AM IST
Highlights

ಬೆಂಗಳೂರಿನ ಕಾರ್ಡ್ ರಸ್ತೆಯಲ್ಲಿ ಮತ್ತೊಂದು ಮೇಲ್ಸೇತುವೆ ನಿರ್ಮಾಣ ಮಾಡಲು ಬಿಬಿಎಂಪಿ ಸಜ್ಜಾಗುತ್ತಿದೆ. ಈ ನಿಟ್ಟಿನಲ್ಲಿ  ಹಲವೆಡೆಯಿಂದ ವಿರೋಧ ವ್ಯಕ್ತವಾಗುತ್ತಿದೆ. 

ಬೆಂಗಳೂರು :  ಈಗಾಗಲೇ ಎರಡು ಮೇಲ್ಸೇತುವೆ ನಿರ್ಮಾಣ ಕಾಮಗಾರಿಯಿಂದ ಸಂಚಾರ ದಟ್ಟಣೆಯ ಕಿರಿಕಿರಿ ಎದುರಿಸುತ್ತಿರುವ ವೆಸ್ಟ್‌ ಆಫ್‌ ಕಾರ್ಡ್‌ ರಸ್ತೆಯಲ್ಲಿ ಮತ್ತೊಂದು ಮೇಲ್ಸೇತುವೆ ನಿರ್ಮಾಣಕ್ಕೆ ಬಿಬಿಎಂಪಿ ಸಜ್ಜಾಗುತ್ತಿದೆ. ಪಾಲಿಕೆಯ ಈ ಕ್ರಮಕ್ಕೆ ಸ್ಥಳೀಯರು, ವಾಹನ ಸವಾರರು ಮತ್ತು ತಜ್ಞರಿಂದ ವಿರೋಧ, ಆಕ್ರೋಶ ವ್ಯಕ್ತವಾಗಿದೆ.

ಮೈಸೂರು ರಸ್ತೆಯಿಂದ ವಿಜಯನಗರ ಮಾರ್ಗವಾಗಿ ತುಮಕೂರು ರಸ್ತೆಗೆ ಸಂಪರ್ಕ ಕಲ್ಪಿಸುವ ಪಶ್ಚಿಮ ಕಾರ್ಡ್‌ ರಸ್ತೆಯಲ್ಲಿ ಈಗಾಗಲೇ ಇರುವ ಎರಡು ಗ್ರೇಡ್‌ ಸೆಪರೇಟರ್‌, ಮೂರು ಮೇಲ್ಸೇತುವೆಗಳ ಜೊತೆಗೆ ಪ್ರಸ್ತುತ ಇನ್ನೂ ಎರಡು ಮೇಲ್ಸೇತುವೆ ಕಾಮಗಾರಿ ಸದ್ಯ ಪ್ರಗತಿಯಲ್ಲಿದೆ. ಇದೀಗ, ರಾಜಾಜಿನಗರ ಇಂಡಸ್ಟ್ರಿಯಲ್‌ ಏರಿಯಾ ಬಳಿ ಇದೇ ರಸ್ತೆಯಲ್ಲಿ ಮತ್ತೊಂದು ಮೇಲ್ಸೇತುವೆ ನಿರ್ಮಾಣಕ್ಕೆ ಬಿಬಿಎಂಪಿ ಮುಂದಾಗಿದೆ.

ಮಾಗಡಿ ರಸ್ತೆ ಟೋಲ್‌ಗೇಟ್‌ನ ಗ್ರೇಡ್‌ ಸೆಪರೇಟರ್‌ ಮತ್ತು ಬಸವೇಶ್ವರ ನಗರ 1ನೇ ಮುಖ್ಯರಸ್ತೆ ಜಂಕ್ಷನ್‌ನಲ್ಲಿ ನಿರ್ಮಾಣವಾಗುತ್ತಿರುವ ಮೇಲ್ಸೇತುವೆಗಳ ನಡುವೆ ಕೇವಲ 1.5 ಕಿ.ಮೀ. ಅಂತರವಿದೆ. ಇವುಗಳ ನಡುವೆ ರಾಜಾಜಿನಗರ ಇಂಡಸ್ಟ್ರಿಯಲ್‌ ಏರಿಯಾದ 72ನೇ ಅಡ್ಡ ರಸ್ತೆಯ ಬಳಿ ಹೊಸದಾಗಿ ಮೇಲ್ಸೇತುವೆ ನಿರ್ಮಾಣಕ್ಕೆ ಪಾಲಿಕೆ ಸಮಗ್ರ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸುತ್ತಿದೆ. ಆದರೆ, ಬಿಬಿಎಂಪಿಯ ಈ ನಿರ್ಧಾರ ಅವೈಜ್ಞಾನಿಕವಾದುದು ಎನ್ನುತ್ತಾರೆ ತಜ್ಞರು.

8 ಕಿ.ಮೀ. ಉದ್ದದ ಪಶ್ಚಿಮ ಕಾರ್ಡ್‌ ರಸ್ತೆಯನ್ನು ಭಾಗಶಃ ಸಿಗ್ನಲ್‌ ಮುಕ್ತ ರಸ್ತೆಯಾಗಿಸುವ ನಿಟ್ಟಿನಲ್ಲಿ ಬಿಬಿಎಂಪಿ ಅವೈಜ್ಞಾನಿಕವಾಗಿ ಮೇಲ್ಸೇತುವೆಗಳನ್ನು ನಿರ್ಮಾಣ ಮಾಡುತ್ತಿದೆ. ಈ ರಸ್ತೆಯಲ್ಲಿ ಮೇಲ್ಸೇತುವೆಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಈ ರೀತಿ ಕಿ.ಮೀ.ಗೊಂದು ಮೇಲ್ಸೇತುವೆ ನಿರ್ಮಾಣ ಮಾಡುವುದರಿಂದ ಸಂಚಾರ ದಟ್ಟಣೆಗೆ ಪರಿಹಾರ ಸಿಗುವುದಿಲ್ಲ. ಒಂದು ಭಾಗದ ಸಂಚಾರ ದಟ್ಟಣೆ ಸ್ವಲ್ಪ ಮುಂದಕ್ಕೆ ಸಾಗಿ ಮತ್ತೊಂದು ಭಾಗದಲ್ಲಿ ಸಮಸ್ಯೆಯಾಗುತ್ತದೆ ಅಷ್ಟೆ. ತೆರಿಗೆ ಹಣವೂ ವೃತಾ ಪೋಲಾಗುತ್ತದೆ. ಈ ರಸ್ತೆಯಲ್ಲಿ ಮತ್ತೊಂದು ಅನಗತ್ಯ. ಮೇಲ್ಸೇತುವೆ ನಿರ್ಮಿಸಲು ಉದ್ದೇಶಿಸಿರುವ ಜಾಗದಿಂದ ವಿಜಯನಗರ ಕಡೆಗೆ ಮುಕ್ಕಾಲು ಕಿ.ಮೀ. ದೂರದಲ್ಲಿ ಟೋಲ್‌ಗೇಟ್‌ ಗ್ರೇಡ್‌ ಸೆಪರೇಟರ್‌ ಇದೆ. ತುಮಕೂರು ರಸ್ತೆ ಕಡೆಗೆ ಕೇವಲ 400 ಮೀಟರ್‌ ದೂರದಲ್ಲಿ ಮತ್ತೊಂದು ಮೇಲ್ಸೇತುವೆ ನಿರ್ಮಾಣ ಮಾಡಲಾಗುತ್ತಿದೆ. ಹೀಗಿರುವಾಗ ಈ ಸ್ಥಳದಲ್ಲಿ ಮೇಲ್ಸೇತುವೆ ಅಗತ್ಯವಿಲ್ಲ. ಕೇವಲ ಐದು ನಿಮಿಷದಲ್ಲಿ ಈ ಭಾಗಕ್ಕೆ ಬರುವ ವಾಹನಗಳು ಯಾವುದೇ ಭಾಗದಿಂದ ತಿರುವು ಮೂಲಕ ತಲುಪಬಹುದು. ಇದಕ್ಕಾಗಿ ಹತ್ತಾರು ಕೋಟಿ ರು. ವೆಚ್ಚ ಮಾಡಿ ಮೇಲ್ಸೇತುವೆ ನಿರ್ಮಾಣ ಮಾಡುವುದು ಅವೈಜ್ಞಾನಿಕ ನಿರ್ಧಾರ ಎನ್ನುವುದು ತಜ್ಞರ ಅಭಿಪ್ರಾಯ.

ಸ್ಥಳೀಯರಿಂದಲೂ ವಿರೋಧ

ಇನ್ನು, ಸ್ಥಳೀಯ ನಿವಾಸಿಗಳು ಹಾಗೂ ಈ ರಸ್ತೆಯ ವಾಹನ ಸವಾರರು ಕೂಡ ಬಿಬಿಎಂಪಿ ಸದ್ದಿಲ್ಲದೆ ಮತ್ತೊಂದು ಮೇಲ್ಸೇತುವೆ ನಿರ್ಮಿಸಲು ಹೊರಟಿರುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸುತ್ತಾರೆ. ರಾಜಾಜಿನಗರ ಇಂಡಸ್ಟ್ರಿಯಲ್‌ ಏರಿಯಾ ಬಳಿ ಮೇಲ್ಸೇತುವೆ ನಿರ್ಮಾಣ ಅಗತ್ಯವಿಲ್ಲ. ಮೇಲ್ಸೇತುವೆ ನಿರ್ಮಾಣದಿಂದ ರಸ್ತೆಯ ಒಂದು ಬದಿಯಲ್ಲಿರುವ ಪಾರ್ಕ್ ಹಾಳಾಗುತ್ತದೆ. ಮರಗಳೂ ಬಲಿಯಾಗುತ್ತವೆ. ಇಲ್ಲಿಯ ವಾತಾವರಣ ಇನ್ನಷ್ಟುಹಾಳಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ಶಿವನಹಳ್ಳಿ ಜಂಕ್ಷನ್‌ (650 ಮೀ. ಉದ್ದ), ಬಸವೇಶ್ವರನಗರ ಜಂಕ್ಷನ್‌ನಲ್ಲಿ (388 ಮೀಟರ್‌ ಉದ್ದ) ನಿರ್ಮಾಣವಾಗುತ್ತಿರುವ ಮೇಲ್ಸೇತುವೆ ಕಾಮಗಾರಿಯಿಂದ ಕಳೆದ ಆರು ತಿಂಗಳಿಗೂ ಹೆಚ್ಚು ಕಾಲ ಈ ರಸ್ತೆಯಲ್ಲಿ ಸಂಚಾರ ದಟ್ಟಣೆ ಸಮಸ್ಯೆ ಅನುಭವಿಸುತ್ತಿದ್ದೇವೆ. ಒಂದೇ ರಸ್ತೆಯಲ್ಲಿ ಕಡಿಮೆ ಅಂತರದಲ್ಲಿ ಇಷ್ಟೊಂದು ಮೇಲ್ಸೇತುವೆಗಳನ್ನು ಬಿಬಿಎಂಪಿ ಅದ್ಯಾವ ಮಾನದಂಡ ಅನುಸರಿಸಿ ನಿರ್ಮಿಸುತ್ತಿದೆಯೋ ಅರ್ಥವಾಗುತ್ತಿಲ್ಲ ಎನ್ನುತ್ತಾರೆ ಸ್ಥಳೀಯ ನಿವಾಸಿ ಮಂಜುನಾಥ್‌.

5 ಕಿ.ಮೀ. ಅಂತರದಲ್ಲಿ 2 ಗ್ರೇಡ್‌ ಸೆಪರೇಟರ್‌; ಐದು ಮೇಲ್ಸೇತುವೆ

*ಮಾಗಡಿ ರಸ್ತೆ ಟೋಲ್‌ಗೇಟ್‌ ಗ್ರೇಡ್‌ ಸೆಪರೇಟರ್‌

*ಬಸವೇಶ್ವರ ನಗರ 1ನೇ ಮೈನ್‌ ಜಂಕ್ಷನ್‌ ಮೇಲ್ಸೇತುವೆ (ನಿರ್ಮಾಣ ಹಂತæ)

*ಶಿವನಗರ ಜಂಕ್ಷನ್‌ ಮೇಲ್ಸೇತುವೆ (ನಿರ್ಮಾಣ ಹಂತ)

*ಮಂಜುನಾಥ ನಗರ ಮೇಲ್ಸೇತುವೆ

*ನವರಂಗ್‌ ಬಳಿಯ ಗ್ರೇಡ್‌ ಸೆಪರೇಟರ್‌

*ರಾಜಾಜಿನಗರ 1ನೇ ಬ್ಲಾಕ್‌ ಮೇಲ್ಸೇತುವೆ

*ಮಹಾಲಕ್ಷ್ಮಿ ಲೇಔಟ್‌ ಜಂಕ್ಷನ್‌ ಮೇಲ್ಸೇತುವೆ

*ರಾಜಾಜಿನಗರ ಇಂಡಸ್ಟ್ರಿಯಲ್‌ ಏರಿಯಾ 72ನೇ ಕ್ರಾಸ್‌ ರಸ್ತೆ (ಹೊಸ ಪ್ರಸ್ತಾವನೆ)

ಮೇಲ್ಸೇತುವೆಗಳ ನಿರ್ಮಾಣದಿಂದ ಸಂಚಾರ ದಟ್ಟಣೆಗೆ ಪರಿಹಾರ ಸಿಗುವುದಿಲ್ಲ. ವಸತಿ ಪ್ರದೇಶದ ಪರಿಸರ ಮತ್ತಷ್ಟುಹಾಳಾಗುತ್ತದೆ. ಪಶ್ಚಿಮ ಕಾರ್ಡ್‌ ರಸ್ತೆಯಲ್ಲಿ ಮುಂದಾಲೋಚನೆ ಇಲ್ಲದೆ, ಬಿಬಿಎಂಪಿ ಕೈಗೊಂಡ ಅವೈಜ್ಞಾನಿಕ ನಿರ್ಧಾರದಿಂದ ಮೇಲ್ಸೇತುವೆಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಒಂದು ಜಂಕ್ಷನ್‌ನ ಟ್ರಾಫಿಕ್‌ ಸಮಸ್ಯೆ ಮುಂದಕ್ಕೆ ಹಾಕಲು ಮತ್ತೊಂದು ಮೇಲ್ಸೇತುವೆ ನಿರ್ಮಿಸಿಕೊಂಡು ಹೋಗಲಾಗುತ್ತಿದೆ. ನಗರದ ಕೇಂದ್ರ ಭಾಗದಲ್ಲಿ ಅಥವಾ ಸಂಪೂರ್ಣ ಜನವಸತಿ ಪ್ರದೇಶದ ರಸ್ತೆಯನ್ನು ಸಿಗ್ನಲ್‌ ಮುಕ್ತ ಮಾಡುವ ಪ್ರಯತ್ನ ಕಾರ್ಯಸಾಧುವಾಗುವುದಿಲ್ಲ.

-ವಿ.ರವಿಚಂದರ್‌, ನಗರಾಭಿವೃದ್ಧಿ ತಜ್ಞ.


ಈಗಾಗಲೇ ಶಿವನಹಳ್ಳಿ ಜಂಕ್ಷನ್‌ (650 ಮೀ. ಉದ್ದ), ಬಸವೇಶ್ವರನಗರ ಜಂಕ್ಷನ್‌ನಲ್ಲಿ (388 ಮೀಟರ್‌ ಉದ್ದ) ನಿರ್ಮಾಣವಾಗುತ್ತಿರುವ ಮೇಲ್ಸೇತುವೆ ಕಾಮಗಾರಿಯಿಂದ ಕಳೆದ ಆರು ತಿಂಗಳಿಗೂ ಹೆಚ್ಚು ಕಾಲ ಈ ರಸ್ತೆಯಲ್ಲಿ ಸಂಚಾರ ದಟ್ಟಣೆ ಸಮಸ್ಯೆ ಅನುಭವಿಸುತ್ತಿದ್ದೇವೆ. ಒಂದೇ ರಸ್ತೆಯಲ್ಲಿ ಇಷ್ಟುಕಡಿಮೆ ಅಂತರದಲ್ಲಿ ಇಷ್ಟೊಂದು ಮೇಲ್ಸೇತುವೆಗಳನ್ನು ಬಿಬಿಎಂಪಿ ಅದ್ಯಾವ ಮಾನದಂಡ ಅನುಸರಿಸಿ ನಿರ್ಮಿಸುತ್ತಿದೆಯೋ ಅರ್ಥವಾಗುತ್ತಿಲ್ಲ. ಇದನ್ನು ಕೈಬಿಡಬೇಕು.

-ಮಂಜುನಾಥ್‌, ಸ್ಥಳೀಯ ನಿವಾಸಿ


ರಾಜಾಜಿನಗರ ಕೈಗಾರಿಕಾ ಪ್ರದೇಶ 72ನೇ ಅಡ್ಡರಸ್ತೆ ಬಳಿ ವೆಸ್ಟ್‌ ಆಫ್‌ ಕಾರ್ಡ್‌ ರಸ್ತೆಗೆ ಮೇಲ್ಸೇತುವೆ ನಿರ್ಮಾಣಕ್ಕೆ ಸ್ಥಳೀಯ ಶಾಸಕ ವಿ.ಸೋಮಣ್ಣ ಮತ್ತು ಸ್ಥಳೀಯ ಪಾಲಿಕೆ ಸದಸ್ಯರಿಂದ ಪ್ರಸ್ತಾವನೆ ಬಂದಿದೆ. ಜನರು ತಮ್ಮ ಅನಿಸಿಕೆ, ಬೇಡಿಕೆಗಳನ್ನು ಜನಪ್ರತಿನಿಧಿಗಳ ಮೂಲಕವೇ ಕೇಳುತ್ತಾರೆ. ಅಲ್ಲದೆ, ಬಿಬಿಎಂಪಿ ಕೂಡ ಯಾವುದೇ ಫ್ಲೈಓವರ್‌, ಅಂಡರ್‌ಪಾಸ್‌ ನಿರ್ಮಿಸಲು ಆ ರಸ್ತೆಯ ಸಂಚಾರ ದಟ್ಟಣೆ ಪ್ರಮಾಣ ಅಧ್ಯಯನ ಮಾಡಿಯೇ ನಿರ್ಧರಿಸುತ್ತದೆ. ಕಾರ್ಡ್‌ ರಸ್ತೆಯ ಮುಖ್ಯ ಕಾರಿಡಾರ್‌ಗಳಲ್ಲಿ ಬರುವ ವಾಹನಗಳು 72ನೇ ಅಡ್ಡರಸ್ತೆಯ ಜಂಕ್ಷನ್‌ನಲ್ಲೂ ಹಾದುಹೋಗುತ್ತವೆ. ಮೇಲ್ಸೇತುವೆ ನಿರ್ಮಿಸದಿದ್ದರೆ ಅಲ್ಲಿ ಮತ್ತೆ ಸಂಚಾರ ದಟ್ಟಣೆ ಉಂಟಾಗುತ್ತದೆ. ಹಾಗಾಗಿ ತಾಂತ್ರಿಕವಾಗಿ ಈ ಜಾಗದಲ್ಲಿ ಮೇಲ್ಸೇತುವೆ ನಿರ್ಮಾಣ ಅಗತ್ಯವಾಗಿದೆ. ಇದರಿಂದ ವಿಜಯನಗರ, ಮಾರುತಿ ಮಂದಿರ, ಅತ್ತಿಗುಪ್ಪೆ ಜಂಕ್ಷನ್‌ ಬಿಟ್ಟರೆ ಬಹುತೇಕ ಕಾರ್ಡ್‌ ರಸ್ತೆ ಸಿಗ್ನಲ್‌ ಮುಕ್ತವಾಗಲಿದೆ. ಇದರ ನಡುವೆಯೂ ಜನರು ಈ ಜಾಗದಲ್ಲಿ ಮೇಲ್ಸೇತುವೆ ಬೇಡ ಎಂದರೆ ಬೇಡ. ನಾವು ಮಾಡಬೇಕೆಂಬ ಉದ್ದೇಶವೇನೂ ಇಲ್ಲ.

-ಕೆ.ಟಿ.ನಾಗರಾಜ್‌, ಬಿಬಿಎಂಪಿ ಮುಖ್ಯ ಎಂಜಿನಿಯರ್‌ (ಯೋಜನೆ ಕೇಂದ್ರ)

click me!