ಉತ್ತರ ಕರ್ನಾಟಕದಲ್ಲೀಗ ಜೋಳದ ಸೀತೆನಿ ಸಂಭ್ರಮ; ಆ ಕಡೆಗೆ ಹೋದವರು ತಿನ್ನದೇ ಬರಬೇಡಿ!

By Kannadaprabha NewsFirst Published Feb 25, 2020, 9:27 AM IST
Highlights

‘ಎಳೆನೀರು, ಹೊಳೆನೀರು, ಹಾಲ್ದೆನೆಯ ಕಾಳಿನಲಿ, ಸಾರುತಿದೆ ಸೃಷ್ಟಿಸವಿಯಾಗು ಎಂದು, ಸವಿಯಾಗು, ಸವಿಯಾಗು, ಸವಿಯಾಗು ಎಂದು...’

ಸೃಷ್ಟಿಯ ಸೊಬಗು, ಅಲ್ಲಿನ ಸವಿ- ಸಿಹಿ ಬಣ್ಣಿಸಿರುವ ಕನ್ನಡದ ಕವಿವಾಣಿಯ ಸಾಲುಗಳಿವು. ಕವನದಲ್ಲಿನ ’ಹಾಲ್ದೆನೆ ಕಾಳು’ ಎಂದರೆ ಅದೊಂಥರಾ ಇತ್ತ ಹೂವಾಡುವ ಹಂತ ದಾಟಿದ, ಆದರೆ ಸಂಪೂರ್ಣ ಗಟ್ಟಿಕಾಳಿನ ರೂಪ ತಾಳದ ‘ಧಾನ್ಯ’ದ ‘ನಟ್ಟನಡುವಿನ’ ಅವಸ್ಥೆ. ಇದಕ್ಕೇ ಹಾಲ್ದೆನೆ ಅನ್ನೋದು. ಹಾಲ್ದೆನೆಗಳನ್ನೆಲ್ಲ ಹೆಕ್ಕಿ ತಂದು ಬೆಂಕಿ ಝಳಕ್ಕೆ ಹಾಕಿ ಹಿತವಾಗಿ ಬೇಯಿಸಿ ಸವಿದರೆ ಆಹಾ.., ಸ್ವರ್ಗಸುಖ, ಇಂತಹ ಹಾಲ್ದೆನೆಯ ಸಿಹಿ- ಸವಿ ಸವಿದವನೇ ಬಲ್ಲ!

ಯಾಕೀಗ ‘ಹಾಲ್ದೆನೆ’ ಕಾಳಿನ ಪ್ರಸ್ತಾಪ ಅಂತೀರೇನು? ಈಗ ಅದ ನೋಡ್ರಿ, ಅಂತಹ ಅಪರೂಪದ ‘ಹಾಲ್ದೆನೆ ಸವಿ’ ಸವಿಯಲು ಸಕಾಲ. ಕಲಬುರಗಿ ಸೇರಿದ್ಹಂಗೆ ಉತ್ತರ ಕರ್ನಾಟಕದ ಹೊಲಗದ್ದೆಗಳಲ್ಲೀಗ ಜೋಳದ ಹಾಲ್ದೆನೆ ತೊನೆದಾಡುತ್ತಿವೆ.

23ನೇ ವಯಸ್ಸಿನಿಂದಲೂ ಗಿಡ ನೆಡುತ್ತಲೇ ಇದ್ದಾರೆ 72 ವರ್ಷದ ತುಳಸಿಗೌಡ

ಇತ್ತ ಹೂವಾಡುವ ಹಂತ ದಾಟಿರುವ ಆದರೆ ಸಂಪೂರ್ಣ ಕಾಳು ಕಟ್ಟದ, ಆದರೆ ಸೃಷ್ಟಿಯ ಸಿಹಿ- ಸವಿ ರಸ ತುಂಬಿಕೊಡಂತಂಹ ‘ಹಾಲ್ದೆನೆ’ಗಳ ಲೋಕವೇ ಜೋಳದ ಹೊಲಗಳಲ್ಲಿ ಸೃಷ್ಟಿಯಾಗಿದೆ. ಇಂತಹ ಕಾಳಿನಲ್ಲಿ ಸಿಹಿ- ಸವಿ ಹಾಲು ತುಂಬಿಕೊಂಡಿರುವ ಜೋಳದ ತೆನೆಗಳನ್ನೆಲ್ಲ ಒಟ್ಟಾಗಿ ತಂದು ಬೆಂಕಿಯಲ್ಲಿ ಹದವಾಗಿ ಬೇಯಿಸಿದಾಗ ಹೊರಬರುವುದೇ ಸಿಹಿತೆನೆ ಕಾಳು ‘ಶೀತನಿ’ ಕಾಳು. ಈ ಕಾಳನ್ನು ಮೆಲ್ಲುವುದೇ ಒಂದು ರೀತಿಯ ಚೆಂದದ ಅನುಭವ.

ಜೋಳದ ಬೇಸಾಯ ಭೂಮಿ ಸೊರಗುತ್ತಿದೆ, ಜೋಳದ ಫಸಲೇ ಕರಗುತ್ತಿದೆ ಎಂಬ ಕೊರತೆಗಳ ನಡುವೆಯೇ ರೈತರು ಅಷ್ಟುಇಷ್ಟುಊಟಕ್ಕಾದರೂ, ರೊಟ್ಟಿಗಾದರೂ, ದನದ ಮೇವಿಗಾದರೂ ಜೋಳ ಬೇಕಲ್ಲವೆ? ಎಂದು ಸಾಗಿರುವ ಜೋಳದ ಬೇಸಾಯದ ಹೊಲಗದ್ದೆಗಳಲ್ಲೇ ಹಾಲ್ದೆನೆ ಕಾಳಿರುವ ತೆನೆಗಳನ್ನೆಲ್ಲ ಹೆಕ್ಕಿ ರಾಶಿಮಾಡಿ ಅದಕ್ಕಾಗಿಯೇ ಸಿದ್ಧಪಡಿಸುವ ವಲ್ಗುಣಿ (ವಿಶೇಷ ವೃತ್ತಾಕಾರಾದ ಒಲೆ) ಯಲ್ಲಿ ಸಾಲುಸಾಲು ತೆನೆಗಳನ್ನಿಟ್ಟು ಹದವಾಗಿ ಬೇಯಿಸಿ ಶೀತನಿ ತಿನ್ನುವ ಸಂಭ್ರಮ ಕಾಣಿಸಿಕೊಂಡಿದೆ.

ವರ್ಷಕ್ಕೊಮ್ಮೆ ಬರುವ ‘ಶೀತನಿ’ ಸುಗ್ಗಿ ಇದೀಗ ಶುರುವಾಗಿದೆ. ಇನ್ನೇನು ವಾರ ಕಳೆದರೆ ಸಾಕು, ಶೀತನಿ ತಿನ್ನುವ ಸುಗ್ಗಿ ಕರಗ್ಹೋಗುತ್ತದೆ, ಏಕೆಂದರೆ ಜೋಳದ ತೆನೆಗಳು ಹಾಲ್ದೆನೆಯಿಂದ ಗಟ್ಟಿಕಾಳಾಗಿ ಮಾರ್ಪಾಟಾಗುತ್ತವೆ, ಬೇಸಿಲು ಜೋರಾದಂತೆ ಈ ಪ್ರಕ್ರಿಯೆಗೂ ವೇಗ ದೊರಕುತ್ತದೆ. ಹೀಗಾಗಿ ಹಾಲ್ದೆನೆಯಿರುವಾಗಲೇ ಜೋಳದ ಹೊಲ ಹೊಕ್ಕು ಶೀತನಿ ತಿನ್ನುವುದೇ ಭಾಗ್ಯ ಎನ್ನಬಹುದು.

ಮೇದಿನಿ ಎಂಬ ಸುಂದರ ಊರಲ್ಲಿ 2ಹಗಲು 1ರಾತ್ರಿ : ಇಲ್ಲಿ ಜೀವಕ್ಕೆ ಗ್ಯಾರಂಟಿ ಇಲ್ಲ!

ಶೀತನಿ ಮಹಿಮೆ ಅಪಾರ!

ಜೋಳದ ಶೀತನಿ (ಸಿಹಿತೆನೆ) ತಿನ್ನೋದೇ ಅಪರೂಪದ ಅನುಭವ. ವರ್ಷಕ್ಕೊಮ್ಮೆ ಬರುವ ಸಂಭ್ರಮ ಎಂದು ಶೀತನಿಯನ್ನು ಬೇಕಾಬಿಟ್ಟಿತಿನ್ನೋ ಹಾಗಿಲ್ಲ, ಏಕೆಂದರೆ ಹದವರಿತು ತಿನ್ನುವುದರಿಂದ ತಿಂದನ್ನೆಲ್ಲ ಅರಗಿಸಿಕೊಳ್ಳಬಹುದು, ಇಲ್ದೆ ಹೋದ್ರೆ ಹೊಟ್ಟೆನವು, ಭೇದಿ ಸೇರಿದಂತೆ ಹಲವು ರೂಪಗಳಲ್ಲಿ ತಾಪತ್ರಯ ತಪ್ಪಿದ್ದಲ್ಲ. ಇಂಗು, ಬೆಲ್ಲ, ಶೇಂಗಾ ಪುಡಿ ಜೊತೆಗೆ ಶೀತನಿ ತಿನ್ನುವುದರಿಂದ ಇನ್ನೂ ಸವಿ ಹೆಚ್ಚುತ್ತದೆ. ಅಷ್ಟೇ ಅಲ್ಲ, ಶೀತನಿ ತಿಂದು ನೀರು ಕುಡಿಯೋದಕ್ಕಿಂತ ಮಜ್ಜಿಗೆ ಕುಡಿದರೆ ಆರೋಗ್ಯಕ್ಕೆ ಹಿತಕರ. ಶೀತನಿ ಉತಂಬ ಪೋಷಕಾಂಶ ಇರುವ ಪದಾರ್ಥ, ಹೂಈಗಾಗಿ ಇದನ್ನು ತಿನ್ನೋದರಿಂದ ದೇಹ್ಕಕೆ ಅಗತ್ಯ ಶರ್ಕರ- ಪಿಷ್ಟಾದಿಗಳು ಸುಲಭದಲ್ಲಿ ದೊರಕುತ್ತವೆ. ಹೀಗಾಗಿ ಶೀತನಿಯನು ಅನೇಕರು ಔಷಧಿಯ ಗುಣವಿರುವ ಕಾಳೆಂದೂ ಸೇವಿಸುತ್ತಾರೆ. ಶೀತನಿ ತಿಂದು ಮಜ್ಜಿಗೆ ಕುಡಿದರೆ ಮಧುಮೇಹ ಹÜತ್ತಿರ ಸುಳಿಯೋದಿಲ್ಲವಂತೆ, ಅದಕ್ಕೇ ಜೋಳದ ಬೇಸಾಯಗಾರ ರೈತರು ಸುಗ್ಗಿ ಕಾಲದಲ್ಲಿ ಆರೋಗ್ಯವಂತರಾಗಿರೋದರ ಹಿಂದಿನ ಗುಟ್ಟೇ ಇದು ಎಂದು ಹೇಳಲಾಗುತ್ತದೆ.

ವಲ್ಗುಣಿಯೊಳ್ಗ ಸಾಲುಸಾಲು ಹಾಲ್ದೆನೆ!

ಜೋಳದ ಹಾಲ್ದೆನೆ ಹೆಕ್ಕಿ ತಂದು ರಾಶಿಹಾಕಿ ಹೊಲದಲ್ಲೇ ಹದವಾಗಿ ಬೇಯಿಸಬೇಕು. ಹೀಗೆ ಬೇಯಿಸಲೆಂದೇ ವಿಶೇಷ ಮಾದರಿ ಒಲೆ ಸಿದ್ಧಪಡಿಸುತ್ತಾರೆ. ವೃತ್ತಾಕಾರದ ಒಲೆ ಅದಾಗಿರುತ್ತದೆ. ಹೊಲದಲ್ಲೇ ಸಿಗುವ ಸೌದೆಗಳನ್ನೆಲ್ಲ ರಾಶಿಹಾಕಿ ಬೆಂಕಿ ಮಾಡುತ್ತಾರೆ. ಹೀಗೆ ಸಿದ್ಧವಾಗುವ ವಲ್ಗುಣಿಯಲ್ಲಿ ವೃತ್ತಾಕಾರದಲ್ಲೇ ಜೋಳದ ತೆನೆಗಳನ್ನೆಲ್ಲ ಬೆಂಕಿಯೊಳಗಿಟ್ಟು ಬೂದಿಯಿಂದ ಮುಚ್ಚಲಾಗುತ್ತದೆ. ಅಲ್ಪ ಸಮಯದ ನಂತರ ಹೀಗೆ ಮುಚ್ಚಿಟ್ಟಂತಹ ಜೋಳದ ತೆನೆಗಳಲ್ಲಿನ ಹಾಲಿನ ಕಾಳುಗಳು ಹದವಾಗಿ ಬೇಂದಿರುತ್ತವೆ. ಅಂತಹ ತೆನೆಗಳನ್ನು ತೆಗೆದು ಬಿಸಿ ಇರುವಾಗಲೇ ಅಂಗೈಯಲ್ಲಿಟ್ಟು ಮೆಲ್ಲಗೆ ನೀವುತ್ತಾರೆ. ಹೀಗೆ ನೀವಿದಾಗ ಹೊರಬರುವ ಕಾಳುಗಳೇ ಶೀತನಿ, ಅವುಗಳನ್ನು ಹಾಗೇ ತಿನ್ನೋದರಿಂದ ಉತ್ಕೃಷ್ಟಸ್ವಾದ ಅನುಭವಿಸಲು ಸಾಧ್ಯ.

ವಲ್ಗುಣಿ ಬೆಂಕಿಯೊಳಗಿಟ್ಟು ಹಾಲ್ದೆನೆ ಬೇಯಿಸಿ ಕೈಯಿಂದ ತಿಕ್ಕಿ ಶೀತನಿ ತಿನ್ನುವುದು ಒಂದು ಬಗೆಯಾದರೆ, ತೆನೆಯನ್ನೆಲ್ಲ ಸುಟ್ಟು ಬಟ್ಟೆಯಲ್ಲಿ ಹಾಕಿ ನಾಲ್ಕು ಜನ ಹಿಡಿದು ಬಡಿಗೆಯಿಂದ ಚೆನ್ನಾಗಿ ಹೊಡದು ಹದಮಾಡಿ ಶೀತಿನ ತೆಗೆದು ತಿನ್ನದು ಇನ್ನೊಂದು ವಿಧಾನ. ಹೀಗೆ ಬಡಿಗೆ ಹೊಡೆತಕ್ಕೆ ಹದವಾದಂತಹ ಹಾಲ್ದೆನೆ ಇನ್ನೂ ಮೆತ್ತಗಾಗಿರುತ್ತದೆ. ವಯೋವೃದ್ಧರಿಗೂ ಅದು ತಿನ್ನಲು ಅನುಕೂಲ. ಹೀಗಾಗಿ ಹೊಲಗದ್ದೆಗಳಲ್ಲೀಗ ಜೋಳದ ಶೀತನಿ ಸಂಭ್ರಮ ಮುಗಿಲು ಮುಟ್ಟಿದೆ. ಹಂಗಾಗಿ ಇನ್ಯಾಕ್ರಿ ವಿಳಂಬ ಮಾಡ್ತೀರಿ? ನಿಮ್ದೆ ಜೋಳದ ಹೊಲ ಇದ್ರಂತೂ ಬೇಗ ಹೊಲ್ದಕಡಿ ಹೆಜ್ಜೆ ಹಾಕ್ರಿ, ಶೀತನಿ ತಿನ್ರಿ, ಹೊಲ ಇಲ್ದವ್ರು ಭಿಡ್ಯಾ (ಸಂಕೋಚ) ಬಿಟ್ಟು ಬಂಧು- ಬಳಗ, ಸ್ನೇಹಿತರ ಜೋಳದ ಹೊಲಗದ್ದೆಯತ್ತ ಹೆಜ್ಜಿ ಹಾಕ್ರಿ, ಅಲ್ಲಿಗೆ ಹೋಗಿ ರೈತರೊಟ್ಟಿಗೆ ಬೆರೆತು ’ಶೀತನಿ’ ಮೆಲ್ಲಗೆ ಮೆದ್ದು ಸಿಹಿ ಸವೀರಿ, ಏನಂತೀರಿ?

click me!