ಬೆಂಗಳೂರಲ್ಲಿ ಭಾರೀ ಪ್ರಮಾಣದಲ್ಲಿ ಕೊರೋನಾ ಸೋಂಕು ಇಳಿಕೆ..!

Kannadaprabha News   | Asianet News
Published : Nov 16, 2020, 08:05 AM ISTUpdated : Nov 16, 2020, 09:48 AM IST
ಬೆಂಗಳೂರಲ್ಲಿ ಭಾರೀ ಪ್ರಮಾಣದಲ್ಲಿ ಕೊರೋನಾ ಸೋಂಕು ಇಳಿಕೆ..!

ಸಾರಾಂಶ

ಸೋಂಕು ಇಳಿಮುಖ| ನಿಯಮಗಳ ಬದಲಾವಣೆ, ಪರಿಣಾಮ ಒಂದಕ್ಕಿಗೆ ಇಳಿದ ಕಂಟೈನ್ಮೆಂಟ್‌ ವಲಯ| ಸೋಂಕಿತರ ಮನೆಗಳಿಗೆ ಬಿಬಿಎಂಪಿ ಆರೋಗ್ಯ ಸಿಬ್ಬಂದಿ ಭೇಟಿ, ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕ ಹೊಂದಿದವರ ಕ್ವಾರಂಟೈನ್‌| 5 ತಿಂಗಳ ಬಳಿಕ ಬೆಂಗಳೂರಲ್ಲಿ ಕನಿಷ್ಠ ಕೇಸ್‌| 

ಬೆಂಗಳೂರು(ನ.16): ನಗರದಲ್ಲಿ ಕೊರೋನಾ ಸೋಂಕು ಪ್ರಕರಣಗಳು ಭಾರೀ ಪ್ರಮಾಣದಲ್ಲಿ ಇಳಿಕೆಯಾಗುತ್ತಿದ್ದು, ಭಾನುವಾರ 840 ಹೊಸ ಪ್ರಕರಣ ವರದಿಯಾಗಿವೆ. ಜುಲೈ ಬಳಿಕ ದಿನವೊಂದರಲ್ಲಿ ದಾಖಲಾದ ಕಡಿಮೆ ಪ್ರಕರಣಗಳ ಸಂಖ್ಯೆ ಇದಾಗಿದೆ.

"

ಜು.1ರಂದು ನಗರದಲ್ಲಿ 735 ಪ್ರಕರಣ ದಾಖಲಾಗಿತ್ತು. ಆದರೆ, ನಂತರದ ದಿನಗಳಲ್ಲಿ ಈ ಸಂಖ್ಯೆ ಹೆಚ್ಚಾಗುತ್ತಾ ಸಾಗಿ, 10000 ಗಡಿಯನ್ನು ದಾಟಿತ್ತು. ಅ.15ರ ನಂತರ ಸೋಂಕಿತರ ಸಂಖ್ಯೆ ಕಡಿಮೆ ಆಗುತ್ತಿದ್ದು, ನವೆಂಬರ್‌ ತಿಂಗಳ ಮೊದಲ ವಾರದಿಂದ ಸೋಂಕಿನ ಪ್ರಕರಣ ಹಾಗೂ ಸಾವಿನ ಸಂಖ್ಯೆಯಲ್ಲಿ ಭಾರೀ ಇಳಿಕೆ ಆಗುತ್ತಾ ಬಂದಿದೆ.

ಭಾನುವಾರ ಪತ್ತೆಯಾದ ಹೊಸ ಪ್ರಕರಣಗಳೊಂದಿಗೆ ಈವರೆಗಿನ ಸೋಂಕಿತರ ಸಂಖ್ಯೆ 3,57,280ಕ್ಕೆ ಏರಿಕೆಯಾಗಿದೆ. 847 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಒಟ್ಟು ಗುಣಮುಖರ ಸಂಖ್ಯೆ 3,35,105ಕ್ಕೆ ಏರಿಕೆಯಾಗಿದೆ. ಒಟ್ಟು ಆರು ಮಂದಿ ಮೃತಪಟ್ಟಿದ್ದು, ಈವರೆಗಿನ ಸೋಂಕಿತರ ಸಾವಿನ ಸಂಖ್ಯೆ 4,003ಕ್ಕೆ ತಲುಪಿದೆ. ಸದ್ಯ 18,171 ಸಕ್ರಿಯ ಸೋಂಕು ಪ್ರಕರಣಗಳಿವೆ. 369 ಮಂದಿಗೆ ವಿವಿಧ ಆಸ್ಪತ್ರೆಗಳ ತೀವ್ರ ನಿಗಾ ಘಟಕಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಕರ್ನಾಟಕದಲ್ಲಿ ಕೊರೋನಾ ದಾಖಲೆ ಪ್ರಮಾಣದಲ್ಲಿ ಇಳಿಕೆ

ಕಂಟೈನ್ಮೆಂಟ್‌ ವಲಯಗಳ ಸಂಖ್ಯೆ ಎರಡಕ್ಕೆ ಇಳಿಕೆ

ಒಂದು ಸಂದರ್ಭದಲ್ಲಿ 30,000ಕ್ಕಿಂತ ಹೆಚ್ಚು ಕಂಟೈನ್ಮೆಂಟ್‌ ವಲಯಗಳಿದ್ದ ನಗರದಲ್ಲಿ, ಕೊರೋನಾ ಸೋಂಕಿನ ಇಳಿಕೆಯಾಗುವುದರೊಂದಿಗೆ ಕಂಟೈನ್ಮೆಂಟ್‌ ವಲಯದ ಸಂಖ್ಯೆಈಗ ಎರಡಕ್ಕೆ ಇಳಿಕೆಯಾಗಿದೆ. ಕಂಟೈನ್ಮೆಂಟ್‌ ಮಾರ್ಗಸೂಚಿಯನ್ನು ಕಾಲ ಕಾಲಕ್ಕೆ ಪರಿಷ್ಕರಣೆ ಮಾಡಿದ್ದು ಸಹ ಕಂಟೈನ್ಮೆಂಟ್‌ ವಲಯದ ಸಂಖ್ಯೆ ಕಡಿಮೆಯಾಗಲು ಕಾರಣವಾಗಿದೆ.

ಪ್ರಸ್ತುತ ನಗರದಲ್ಲಿ ಸಕ್ರಿಯ ಸೋಂಕಿತರ ಸಂಖ್ಯೆ ಸುಮಾರು 18 ಸಾವಿರ ಇದ್ದರೂ, ಸಕ್ರಿಯ ಕಂಟೈನ್ಮೆಂಟ್‌ ವಲಯಗಳ ಸಂಖ್ಯೆ ಮಾತ್ರ ಹೆಚ್ಚಾಗದೇ ಕೇವಲ ಎರಡು ಮಾತ್ರ ಇದೆ. ಸಕ್ರಿಯ ಕಂಟೈನ್ಮೆಂಟ್‌ ವಲಯಗಳ ಸಂಖ್ಯೆ ಕಡಿಮೆ ಮಾಡಿದ ಪರಿಣಾಮ ವ್ಯಾಪಾರ ವಹಿವಾಟು, ಜನಸಂಚಾರ ಸೇರಿ ಎಲ್ಲ ಕಾರ್ಯಕ್ಕೂ ಮುಕ್ತ ಅವಕಾಶ ಲಭ್ಯವಾಗಿದೆ. ಸೋಂಕು ಹರಡುವಿಕೆ ಪ್ರಮಾಣ ಜುಲೈ ಮತ್ತು ಆಗಸ್ಟ್‌ನಲ್ಲಿ ಭಾರೀ ಸಂಖ್ಯೆಯಲ್ಲಿ ಹೆಚ್ಚಾಗಿತ್ತು. ಆಗ ಸೋಂಕಿತ ವ್ಯಕ್ತಿ ಪತ್ತೆಯಾದ ಪ್ರತಿ ಮನೆಯನ್ನೂ ಕಂಟೈನ್ಮೆಂಟ್‌ ಪ್ರದೇಶ ಎಂದು ಗುರುತಿಸಿ ಸುತ್ತಲೂ 100 ಮೀ. ಸಂಚಾರ ನಿರ್ಬಂಧ ಹೇರಲಾಗಿತ್ತು.

ಕಂಟೈನ್ಮೆಂಟ್‌ ವಲಯಗಳ ಸಂಖ್ಯೆ ಬರೋಬ್ಬರಿ 36 ಸಾವಿರಕ್ಕಿಂತ ಹೆಚ್ಚಾಗಿತ್ತು. ಪ್ರತಿ ವಾರ್ಡ್‌ನಲ್ಲಿ 3-5 ರಸ್ತೆಗಳನ್ನು ಬಂದ್‌ ಮಾಡಲಾಗಿತ್ತು. ಈಗ ಒಂದು 100 ಮೀ. ವ್ಯಾಪ್ತಿ ಪ್ರದೇಶದಲ್ಲಿ 20ಕ್ಕಿಂತ ಅಧಿಕ ಕೊರೋನಾ ಸೋಂಕಿತ ಪ್ರಕರಣಗಳು ಕಂಡುಬಂದಲ್ಲಿ ಮಾತ್ರ ಅದನ್ನು ಕಂಟೈನ್ಮೆಂಟ್‌ ಎಂದು ಪರಿಗಣಿಸಲಾಗುತ್ತದೆ. ಉಳಿದಂತೆ ಒಬ್ಬ ಅಥವಾ 20ಕ್ಕಿಂತ ಕಡಿಮೆ ಸೋಂಕಿತರು ಕಂಡುಬಂದಲ್ಲಿ ಸೋಂಕಿತರ ಮನೆಗೆ ಮಾತ್ರ ಚಿಕ್ಕ ಭಿತ್ತಿಪತ್ರ ಅಂಟಿಸಲಾಗುತ್ತದೆ.
ಸೋಂಕಿತರ ಮನೆಗಳಿಗೆ ಬಿಬಿಎಂಪಿ ಆರೋಗ್ಯ ಸಿಬ್ಬಂದಿ ಭೇಟಿ ಮಾಡಿ, ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕ ಹೊಂದಿದವರನ್ನು ಕ್ವಾರಂಟೈನ್‌ ಮಾಡಲಾಗುತ್ತದೆ. ಇದೀಗ ಕಂಟೈನ್ಮೆಂಟ್‌ ಮಾರ್ಗಸೂಚಿಯನ್ನು ಸರ್ಕಾರ ಬದಲಾವಣೆ ಮಾಡಿದ ಹಿನ್ನೆಲೆಯಲ್ಲಿ ಕಂಟೈನ್ಮೆಂಚ್‌ ವಲಯದ ಸಂಖ್ಯೆ ಎರಡಕ್ಕೆ ಇಳಿಕೆಯಾಗಿದೆ.

ಮಾರ್ಗಸೂಚಿ ಬದಲಾವಣೆ ಬಳಿಕ ನಗರದಲ್ಲಿ 37 ಕಂಟೈನ್ಮೆಂಟ್‌ ವಲಯದ ಸೃಷ್ಟಿಯಾಗಿದೆ. ಇದರಲ್ಲಿ ಮಹದೇವಪುರದಲ್ಲಿ ಮಾತ್ರ ಎರಡು ಸಕ್ರಿಯ ಕಂಟೈನ್ಮೆಂಟ್‌ ವಲಯಗಳಿವೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ.
 

PREV
click me!

Recommended Stories

ದುಬಾರೆ ಶಿಬಿರದಲ್ಲಿ ಕಳೆದ 10 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ತಕ್ಷ ಹೆಸರಿನ ಆನೆ ಸಾವು
ಕಾರಲ್ಲ, ಸರ್ಕಾರ ಕೆಲಸಕ್ಕೆ ಓಡಾಡಲು ಹೆಲಿಕಾಪ್ಟರ್, ವಿಮಾನ ಖರೀದಿಗೆ ಡಿಕೆಶಿ ನೇತೃತ್ವದಲ್ಲಿ ಸಭೆ