ಸೈಬರ್‌ ವಂಚನೆ: 6 ತಿಂಗಳಲ್ಲೇ 56 ಪ್ರಕರಣ

By Web DeskFirst Published Jul 13, 2019, 9:24 AM IST
Highlights

6 ತಿಂಗಳಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಒಟ್ಟು 56 ಸೈಬರ್ ವಂಚನೆ ಪ್ರಕರಣಗಳು ದಾಖಲಾಗಿದೆ. ಸೈಬರ್‌, ಎಕಾನಿಮಿಕ್‌, ನಾರ್ಕೋಟಿಕ್‌ ಮತ್ತು ಅಪರಾಧ ಠಾಣೆಯಲ್ಲಿ ಕಳೆದೆರಡು ವರ್ಷದಿಂದ ಸೈಬರ್‌ ಸಂಬಂಧಿತ ಪ್ರಕರಣ ಹಾಗೂ ವಂಚನೆಯ ಮೊತ್ತದಲ್ಲಿ ಏರಿಕೆ ಕಂಡು ಬಂದಿದೆ. 

ಶಿವಮೊಗ್ಗ (ಜು.13): ಸೈಬರ್‌, ಎಕಾನಿಮಿಕ್‌, ನಾರ್ಕೋಟಿಕ್‌ ಮತ್ತು ಅಪರಾಧ ಠಾಣೆಯಲ್ಲಿ ಕಳೆದೆರಡು ವರ್ಷದಿಂದ ಸೈಬರ್‌ ಸಂಬಂಧಿತ ಪ್ರಕರಣ ಹಾಗೂ ವಂಚನೆಯ ಮೊತ್ತದಲ್ಲಿ ಏರಿಕೆ ಕಂಡು ಬಂದಿದೆ. 6 ತಿಂಗಳಲ್ಲೇ 56 ಸೖಬರ್ ವಂಚನೆ ಪ್ರಕರಣಗಳು ದಾಖಲಾಗಿದೆ.

2018ರಲ್ಲಿ 48 ಜನರು ಮೊಬೈಲ್‌ ಮೂಲಕ ಬಂದ ಕರೆಗೆ ಪ್ರತಿಯಾಗಿ ತಮ್ಮ ಬ್ಯಾಂಕಿನ ಎಟಿಎಂ ಪಿನ್‌ ನಂಬರ್‌ ನೀಡಿ 2,35,38,100 ರು. ಕಳೆದುಕೊಂಡಿದ್ದಾರೆ. ಅದೇ ರೀತಿ 2019ರ ಜೂನ್‌ ಅಂತ್ಯದ ವರೆಗೆಯೇ 56 ಪ್ರಕರಣ ದಾಖಲಾಗಿದ್ದು 1,08,24,500 ರು. ಕಳೆದುಕೊಂಡು ಮೋಸ ಹೋಗಿದ್ದಾರೆ.

ಬೇಗ ದೂರು ನೀಡಿದರೆ ಒಳಿತು:

ದಾಖಲಾದ ದೂರಿನ ಸ್ವರೂಪವನ್ನಾಧರಿಸಿ ಖದೀಮರ ಪತ್ತೆಗೆ ಮುಂದಾದ ಸಿಇಎನ್‌ ಮತ್ತು ಅಪರಾಧ ಠಾಣೆ ಪೊಲೀಸರು 2018 ರಲ್ಲಿ 39,45,200 ರು. ಹಾಗೂ 2019 ರಲ್ಲಿ 22, 94,100 ರು. ಗಳನ್ನು ವಸೂಲಿ ಮಾಡಿ ದೂರುದಾರರಿಗೆ ಮುಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಖದೀಮರು ಹಣ ವರ್ಗಾಯಿಸಿದ ಖಾತೆಗಳನ್ನು ನಿಷ್ಕ್ರಿಯಗೊಳಿಸುವ ಮೂಲಕ ಹಣದ ದುರ್ಬಳಕೆ ತಡೆಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ವಂಚಕರು ಬಡವರು, ಮಹಿಳೆಯರು ಹಾಗೂ ಬ್ಯಾಂಕಿಂಗ್‌ ವ್ಯವಹಾರದ ಜ್ಞಾನವೇ ಇರದವರ ಹೆಸರಿನಲ್ಲಿ ಖಾತೆ ತೆರೆದು ಅವರಿಂದ ಚೆಕ್‌ ಪುಸ್ತಕ, ಎಟಿಎಂ ಕಾರ್ಡ್‌ ಪಡೆದು ಹಣ ಡ್ರಾ ಮಾಡಿಕೊಳ್ಳುವ, ಇಲ್ಲವೇ ಆನ್‌ಲೈನ್‌ ಮೂಲಕ ಹಣ ವರ್ಗಾಯಿಸುತ್ತಿರುವುದು ಕಂಡುಬಂದಿದೆ ಎಂದು ಮೂಲಗಳು ಹೇಳುತ್ತವೆ.

2 ಸ್ಕಿಮ್ಮಿಂಗ್‌ ಸಾಧನ ಅಳವಡಿಕೆ ನಿಷ್ಕ್ರಿಯ:

ಇತ್ತೀಚೆಗೆ ಇಲ್ಲಿನ ಎಟಿಎಂಗಳಲ್ಲಿ ಸ್ಕಿಮ್ಮಿಂಗ್‌ ಸಾಧನ ಅಳವಡಿಸಿ ಪಾಸ್‌ವರ್ಡ್‌ ಪಡೆದು ವಂಚಿಸುವ ಜಾಲ ಸಕ್ರಿಯವಾಗಿದೆ. ಇತ್ತೀಚೆಗೆ ಶಿವಮೊಗ್ಗದ ಬಿ.ಎಚ್‌. ರಸ್ತೆಯ ಎರಡು ಎಟಿಎಂಗಳಲ್ಲಿ ಖದೀಮರು ಅಳವಡಿಸಿದ್ದ ಸ್ಕಿಮ್ಮಿಂಗ್‌ ಸಾಧನವನ್ನು ಪತ್ತೆ ಹಚ್ಚಿ ನಿಷ್ಕ್ರಿಯಗೊಳಿಸಿದ್ಧಾರೆ.

ಎಟಿಎಂಗೆ ಹಣ ತುಂಬುವ ಏಜೆನ್ಸಿಯ ಬಿಎಚ್‌ ರಸ್ತೆಯ ಎಟಿಎಂಗೆ ಹೋದಾಗ ಗ್ರಾಹಕರ ಎಟಿಎಂನ ಪಿನ್‌ ನಂಬರ್‌ ತಿಳಿಯುವಂತೆ ಯಂತ್ರದಲ್ಲಿ ಅಳವಡಿಸಿದ್ದ ಸಾಧನ ಕಂಡುಬಂದಿದೆ. ಇದನ್ನು ಸಿಇಎನ್‌ ಮತ್ತು ಅಪರಾಧ ಠಾಣೆ ಗಮನಕ್ಕೆ ತಂದಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸ್‌ ಅಧಿಕಾರಿಗಳು ಸ್ಕಿಮ್ಮಿಂಗ್‌ ಸಾಧನ ವಶಪಡಿಸಿಕೊಂಡು ಅದನ್ನು ನಿಷ್ಕ್ರಿಯಗೊಳಿಸಿದ್ದಾರೆ.

33 ಲಕ್ಷ ವಂಚನೆ; 17 ಲಕ್ಷ ವಾಪಸ್‌:

ಇತ್ತೀಚೆಗೆ ವಿದ್ಯಾನಗರದ ವ್ಯಕ್ತಿಯೊಬ್ಬರು ಆನ್‌ಲೈನಲ್ಲಿ ಇಂಗ್ಲೆಂಡ್‌ನ ಮಹಿಳೆ ಎಂದು ಪರಿಚಯಿಸಿಕೊಂಡ ವ್ಯಕ್ತಿಯ ಮಾತನ್ನು ನಂಬಿ ಕಳೆದುಕೊಂಡ 33 ಲಕ್ಷ ರು. ಪೈಕಿ 17 ಲಕ್ಷ ರು. ಗಳನ್ನು ವಾಪಸ್‌ ಕೊಡಿಸುವ ನಿಟ್ಟಿನಲ್ಲಿ ಪೊಲೀಸರು ನೆರವಾಗಿದ್ದಾರೆ.

ಮೇಲ್‌ ಮಾಡಿದ ಮಹಿಳೆ ತಾನು ಇಂಗ್ಲೆಂಡ್‌ ವಾಸಿಯಾಗಿದ್ದು ಕ್ಯಾನ್ಸರ್‌ನಿಂದ ಬಳಲುತ್ತಿದ್ದೇನೆ. ಇನ್ನು ಕೆಲವೇ ದಿನಗಳಲ್ಲಿ ನಿಧನ ಹೊಂದಲಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಶ್ರೀಮಂತೆಯಾದ ನನ್ನ ಬಳಿ 5.7 ಕೋಟಿ ಡಾಲರ್‌ ಇದ್ದು ಅದನ್ನು ಭಾರತದ ಬಡ ಹಾಗೂ ನಿರ್ಗತಿಕ ಮಕ್ಕಳ ಅಭಿವೃದ್ಧಿಗಾಗಿ ಬಳಸಬೇಕಿದೆ. ಅದಕ್ಕೆ ನೀವೇ ಸೂಕ್ತ ವ್ಯಕ್ತಿ ಎಂದು ನನಗೆ ಮನವರಿಕೆಯಾಗಿದೆ. ಆದರೆ ನನ್ನ ಬಳಿ ಇರುವ ಹಣವನ್ನು ನಿಮಗೆ ಕಳಸಿಬೇಕಾದರೆ ಡಾಲರ್‌ ಪರಿವರ್ತನೆ ಶುಲ್ಕ ಪಾವತಿಸಬೇಕಿದೆ. ನೀವು ಈ ಹಣವನ್ನು ಪಾವತಿಸಿದ ಪಕ್ಷದಲ್ಲಿ ನಿಮ್ಮ ಹೆಸರಿನ ಖಾತೆಗೆ ಹಣ ವರ್ಗಾವಣೆ ಮಾಡಲು ಸಾಧ್ಯವಾಗುತ್ತದೆ ಎಂದು ನಂಬಿಸಿದ್ದಾಳೆ. ಜೊತೆಗೆ ಇ ಮೇಲ್‌ ಮೂಲಕವೇ ಕರಾರು ಒಪ್ಪಂದದ ಕಳುಹಿಸಿ ನಂಬಿಕೆ ಬರುವಂತೆ ಮಾಡಿದ್ದಾಳೆ.

ಮಹಿಳೆಯ ಇ ಮೇಲ್‌ ನಂಬಿದ ಹರೀಶ್‌ ಆಕೆ ಹೇಳಿದ್ದ ಬ್ಯಾಂಕ್‌ನ ಖಾತೆಗೆ 33 ಲಕ್ಷ ರು. ಪಾವತಿಸಿದ್ದಾರೆ. ನಂತರ ಈ ಬಗ್ಗೆ ಅನುಮಾನಗೊಂಡ ಹರೀಶ್‌ ಸಿಇಎನ್‌ ಮತ್ತು ಅಪರಾಧ ಠಾಣೆಗೆ ದೂರು ನೀಡಿದ್ದಾರೆ. ತಕ್ಷಣ ಕಾರ್ಯ ಪ್ರವೃತ್ತರಾದ ಪೊಲೀಸರು ಸಂಬಂಧಪಟ್ಟಬ್ಯಾಂಕಿನ ಗಮನಕ್ಕೆ ತಂದಿದ್ದಾರೆ. ಪೊಲೀಸರ ಸೂಚನೆಯಾನುಸಾರ ವಂಚಕರು ಉತ್ತರ ಭಾರತದ ವಿವಿಧ ಬ್ಯಾಂಕುಗಳ ಶಾಖೆಯಲ್ಲಿ ತೆರೆದಿದ್ದ ಖಾತೆಯನ್ನು ನಿಷ್ಕಿ್ರಯಗೊಳಿಸಿ ಹಣದ ವರ್ಗಾವಣೆಗೆ ತಡೆಯೊಡ್ಡಿದ್ದಾರೆ. ಇದರ ಪರಿಣಾಮವಾಗಿ ನ್ಯಾಯಾಲಯದ ಆದೇಶದ ನಂತರ ಹರೀಶ್‌ ಅವರಿಗೆ 17 ಲಕ್ಷ ರು. ಸಿಗಲಿದೆ.

ಗೋಪಾಲ್‌ ಯಡಗೆರೆ

click me!