ಫೋಕ್ಸ್‌ವ್ಯಾಗನ್‌ ಅಕ್ರಮ ಬಯಲಿಗೆಳೆದ ಬೆಂಗಳೂರಿಗ ಈಗ ನಿರುದ್ಯೋಗಿ!

By Web Desk  |  First Published May 9, 2019, 10:51 AM IST

ಫೋಕ್ಸ್‌ವ್ಯಾಗನ್‌ ಅಕ್ರಮ ಬಯಲಿಗೆ ಎಳೆದ ಬೆಂಗಳೂರಿಗ ಈಗ ನಿರುದ್ಯೋಗಿ| ಕೆಲಸದಿಂದ ವಜಾಗೊಳಿಸಿದ ಅಮೆರಿಕದ ಜನರಲ್‌ ಮೋಟ​ರ್ಸ್| 2 ತಿಂಗಳ ಸಂಬಳ ಪಡೆದು ಬೆಂಗಳೂರಿಗೆ ಮರಳಿದ ಹೇಮಂತ್‌| ಈತ ಮಾಡಿದ ತನಿಖೆಯಿಂದ ಫೋಕ್ಸ್‌ವ್ಯಾಗನ್‌ 2.2 ಲಕ್ಷ ಕೋಟಿ ಕಟ್ಟಿತ್ತು


ಫ್ರಾಂಕ್‌ಫರ್ಟ್‌[ಮೇ.09]: ತನ್ನ ಡೀಸೆಲ್‌ ಕಾರುಗಳು ಹೆಚ್ಚು ಮಾಲಿನ್ಯ ಉಂಟು ಮಾಡುವ ವಿಷಯ ಬಚ್ಚಿಡಲು ರಹಸ್ಯ ಸಾಫ್ಟ್‌ವೇರ್‌ವೊಂದನ್ನು ಎಂಜಿನ್‌ಗೆ ಅಳವಡಿಸಿದ್ದ ಜರ್ಮನಿಯ ಪ್ರಖ್ಯಾತ ಆಟೋಮೊಬೈಲ್‌ ಕಂಪನಿ ಫೋಕ್ಸ್‌ವ್ಯಾಗನ್‌ ಹಗರಣವನ್ನು ಬಯಲಿಗೆಳೆದ ಬೆಂಗಳೂರಿನ ಎಂಜಿನಿಯರ್‌ ಈಗ ನಿರುದ್ಯೋಗಿಯಾಗಿದ್ದಾರೆ.

ಅಮೆರಿಕದ ಜನರಲ್‌ ಮೋಟ​ರ್‍ಸ್ ಕಂಪನಿ ಕಳೆದ ಫೆಬ್ರವರಿಯಲ್ಲೇ ಹೇಮಂತ್‌ ಕಪ್ಪಣ್ಣ ಅವರನ್ನು ಕೆಲಸದಿಂದ ತೆಗೆದು ಹಾಕಿದೆ. ಮತ್ತೊಂದು ಕೆಲಸ ಸಿಗದ ಕಾರಣ ಹಾಗೂ ವೀಸಾ ಅವಧಿ ಮುಗಿಯುತ್ತಿದ್ದ ಹಿನ್ನೆಲೆಯಲ್ಲಿ ಕಪ್ಪಣ್ಣ ಅವರು ತವರು ಬೆಂಗಳೂರಿಗೆ ಮರಳಿದ್ದಾರೆ ಎಂದು ಅಮೆರಿಕದ ಪತ್ರಿಕೆಯೊಂದು ವರದಿ ಮಾಡಿದೆ.

Latest Videos

undefined

ಕಪ್ಪಣ್ಣ ಅವರನ್ನು ಕೆಲಸದಿಂದ ತೆಗೆದಿದ್ದಕ್ಕೂ ಫೋಕ್ಸ್‌ವ್ಯಾಗನ್‌ ಹಗರಣಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಜನರಲ್‌ ಮೋಟ​ರ್‍ಸ್ ಸ್ಪಷ್ಟಪಡಿಸಿದೆ. ಆದರೆ ಅವರು ಸರ್ಕಾರಿ ನಿಯಮಗಳಿಗೆ ಬದ್ಧರಾಗಿರುತ್ತಾರೆ ಎಂಬ ಕಾರಣಕ್ಕೆ ಕೆಲಸ ಹೋಗಿದೆಯಾ ಎಂಬ ಅನುಮಾನ ವ್ಯಕ್ತವಾಗಿದೆ.

41 ವರ್ಷದ ಕಪ್ಪಣ್ಣ ಅವರು 17 ವರ್ಷಗಳಿಂದ ಅಮೆರಿಕದಲ್ಲಿದ್ದು, 2014ರ ಡಿಸೆಂಬರ್‌ನಲ್ಲಿ ತಮ್ಮ ಪಿಎಚ್‌ಡಿ ಮುಗಿದ ಬಳಿಕ ಜನರಲ್‌ ಮೋಟ​ರ್‍ಸ್ಗೆ ಸೇರ್ಪಡೆಯಾಗಿದ್ದರು. ಜನರಲ್‌ ಮೋಟ​ರ್‍ಸ್ ಕಂಪನಿ 4000 ಮಂದಿಯನ್ನು ಉದ್ಯೋಗದಿಂದ ತೆಗೆದು ಹಾಕಿದ್ದು, ಅದರಲ್ಲಿ ಹೇಮಂತ್‌ ಕೂಡ ಒಬ್ಬರಾಗಿದ್ದಾರೆ. ಕೆಲಸ ಕಳೆದುಕೊಂಡ ಬಳಿಕ 60 ದಿನಳವರೆಗೆ ಹೇಮಂತ್‌ ವೀಸಾ ಅವಧಿ ಇತ್ತು. ಅಷ್ಟರೊಳಗೆ ಹೊಸ ಕೆಲಸ ಸಿಗದ ಕಾರಣ ಅವರು ಬೆಂಗಳೂರಿಗೆ ಮರಳಿದ್ದಾರೆ ಎಂದು ವರದಿ ತಿಳಿಸಿದೆ.

ಏನಿದು ಹಗರಣ?:

ಜರ್ಮನಿ ಮೂಲದ ಫೋಕ್ಸ್‌ವ್ಯಾಗನ್‌ ಕಂಪನಿ ವಿಶ್ವದ ಹಲವು ದೇಶಗಳಲ್ಲಿ ಮಾರುಕಟ್ಟೆಹೊಂದಿದೆ. ಅಮೆರಿಕದ ಮಾಲಿನ್ಯ ನಿಯಮಗಳಿಗೆ ಅನುಗುಣವಾಗಿ ಆ ದೇಶಕ್ಕೂ ಕಾರುಗಳನ್ನು ಪೂರೈಕೆ ಮಾಡಿತ್ತು. ಆದರೆ 2013ರಲ್ಲಿ ಹೇಮಂತ್‌ ಕಪ್ಪಣ್ಣ ಅವರ ತಂಡ ಸಂಶೋಧನೆ ನಡೆಸಿದಾಗ ಆ ಕಂಪನಿಯ ಕಾರಿನ ಎಂಜಿನ್‌ಗಳಲ್ಲಿ ರಹಸ್ಯ ಸಾಫ್ಟ್‌ವೇರ್‌ವೊಂದು ಇರುವುದು ಪತ್ತೆಯಾಗಿತ್ತು. ಪರೀಕ್ಷೆಗೆ ಒಳಪಡಿಸಿದಾಗ ಈ ಸಾಫ್ಟ್‌ವೇರ್‌ ಕಾರಿನ ಮಾಲಿನ್ಯ ಪ್ರಮಾಣ ಕಡಿಮೆ ಇರುವಂತೆ ತೋರಿಸುತ್ತಿತ್ತು. ಮಿಕ್ಕಂತೆ ಅಮೆರಿಕ ಅನುಮತಿಸಿರುವ ಮಾಲಿನ್ಯ ಮಿತಿಗಿಂತ ಹೆಚ್ಚಿನ ಪ್ರಮಾಣವನ್ನು ಉಗುಳುತ್ತಿತ್ತು. ಈ ಹಗರಣ ಬೆಳಕಿಗೆ ಬಂದ ಬಳಿಕ ಫೋಕ್ಸ್‌ವ್ಯಾಗನ್‌ 2.2 ಲಕ್ಷ ಕೋಟಿ ರು.ಗಳನ್ನು ದಂಡವಾಗಿ ಪಾವತಿಸಿತ್ತು.

click me!