ಆಂಧ್ರದಲ್ಲಿ ವಿಧಾನಪರಿಷತ್‌ ರದ್ದತಿಗೆ ಜಗನ್‌ ಮುಂದಾಗಿದ್ದು ಸರಿಯೋ, ತಪ್ಪೋ?

By Kannadaprabha NewsFirst Published Jan 22, 2020, 4:50 PM IST
Highlights

ಜಗನ್‌ ಮೋಹನ್‌ ರೆಡ್ಡಿ ನೇತೃತ್ವದ ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷದ ಸರ್ಕಾರ ಆಂಧ್ರಪ್ರದೇಶದಲ್ಲಿ ಅಧಿಕಾರ ನಡೆಸುತ್ತಿದೆ. ತಾವು ವಿಧಾನಸಭೆಯಲ್ಲಿ ಅಂಗೀಕರಿಸುತ್ತಿರುವ ಮಸೂದೆಗಳಿಗೆಲ್ಲಾ ವಿಧಾನಪರಿಷತ್‌ನಲ್ಲಿ ಬಹುಮತ ಹೊಂದಿರುವ ಟಿಡಿಪಿ ತಡೆಯೊಡ್ಡುತ್ತಿದೆ ಎಂದು ವೈಎಸ್‌ಆರ್‌ ಕಾಂಗ್ರೆಸ್‌ ಆರೋಪಿಸುತ್ತಿದೆ. ಇದೇ ಕಾರಣಕ್ಕಾಗಿಯೇ ವಿಧಾನ ಪರಿಷತ್ತನ್ನು ರದ್ದುಪಡಿಸಲು ಜಗನ್‌ ಸರ್ಕಾರ ಮುಂದಾಗಿದೆ.

ಹೈದರಾಬಾದ್ (ಜ. 22): 5 ಉಪಮುಖ್ಯಮಂತ್ರಿಗಳ ನೇಮಕ, 3 ರಾಜಧಾನಿಯ ನಿರ್ಮಾಣದಂತಹ ‘ಅಪರೂಪದ’ ನಿರ್ಧಾರ ಕೈಗೊಂಡಿರುವ ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್‌ ಮೋಹನ್‌ ರೆಡ್ಡಿ ಇದೀಗ ತಮ್ಮ ಸರ್ಕಾರದ ನಿರ್ಣಯಗಳಿಗೆ ವಿಧಾನ ಪರಿಷತ್‌ ಅಡ್ಡಿಯಾಗುತ್ತಿದೆ ಎಂದು ಅದನ್ನೇ ರದ್ದು ಮಾಡಲು ನಿರ್ಧರಿಸಿದ್ದಾರೆ.

ಸಂಸತ್ತಿನಲ್ಲಿರುವ ರಾಜ್ಯಸಭೆಗೆ ಹಾಗೂ ಕೆಲ ರಾಜ್ಯಗಳ ವಿಧಾನಮಂಡಲದಲ್ಲಿರುವ ವಿಧಾನ ಪರಿಷತ್‌ಗೆ ನಮ್ಮ ದೇಶದಲ್ಲಿ ಮೇಲ್ಮನೆ ಎಂದು ಕರೆಯಲಾಗುತ್ತದೆ. ವಿವಿಧ ಕ್ಷೇತ್ರಗಳ ತಜ್ಞರು ಹಾಗೂ ಗಣ್ಯರೇ ಸದಸ್ಯರಾಗಿರುವ ಈ ಶಾಸನಸಭೆಗೆ ಅದರದೇ ಆದ ಹಿರಿಮೆಯಿದೆ.

ಬ್ರಿಟನ್‌, ಅಮೆರಿಕದಂತಹ ದೇಶಗಳಲ್ಲೂ ಮೇಲ್ಮನೆಗಳು ಶತಮಾನಗಳಿಂದ ಇವೆ. ಶಾಸನ ರೂಪಿಸುವ ಪ್ರಧಾನ ಹೊಣೆ ಹೊತ್ತಿರುವ ಲೋಕಸಭೆ ಅಥವಾ ವಿಧಾನಸಭೆಗಳು ತಮ್ಮ ಕಾರ್ಯದಲ್ಲಿ ಎಡವಿದರೆ ಎಚ್ಚರ ನೀಡಲು ಅಥವಾ ತಪ್ಪು ಘಟಿಸದಂತೆ ನೋಡಿಕೊಳ್ಳುವುದು ಮೇಲ್ಮನೆಯ ಪ್ರಧಾನ ಉದ್ದೇಶ. ಆದರೆ, ಇದೊಂದು ನಿರರ್ಥಕ ಸದನ ಎಂಬ ವಾದವೂ ಇದೆ. ಹೀಗಾಗಿಯೇ ಕರ್ನಾಟಕವೂ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಮೇಲ್ಮನೆಯನ್ನು ರದ್ದುಪಡಿಸುವ ಮಾತು ಆಗಾಗ ಕೇಳಿಬರುತ್ತಿರುತ್ತದೆ. ಜಗನ್‌ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ.

ಜಗನ್‌ ನಿರ್ಧಾರಕ್ಕೆ ಏನು ಕಾರಣ?

ಜಗನ್‌ ಮೋಹನ್‌ ರೆಡ್ಡಿ ನೇತೃತ್ವದ ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷದ ಸರ್ಕಾರ ಆಂಧ್ರಪ್ರದೇಶದಲ್ಲಿ ಅಧಿಕಾರ ನಡೆಸುತ್ತಿದೆ. ತಾವು ವಿಧಾನಸಭೆಯಲ್ಲಿ ಅಂಗೀಕರಿಸುತ್ತಿರುವ ಮಸೂದೆಗಳಿಗೆಲ್ಲಾ ವಿಧಾನಪರಿಷತ್‌ನಲ್ಲಿ ಬಹುಮತ ಹೊಂದಿರುವ ಟಿಡಿಪಿ ತಡೆಯೊಡ್ಡುತ್ತಿದೆ ಎಂದು ವೈಎಸ್‌ಆರ್‌ ಕಾಂಗ್ರೆಸ್‌ ಆರೋಪಿಸುತ್ತಿದೆ. ಇದೇ ಕಾರಣಕ್ಕಾಗಿಯೇ ವಿಧಾನ ಪರಿಷತ್ತನ್ನು ರದ್ದುಪಡಿಸಲು ಜಗನ್‌ ಸರ್ಕಾರ ಮುಂದಾಗಿದೆ.

ವಿಧಾನಸಭೆಯಲ್ಲಿ ಇತ್ತೀಚೆಗೆ ಅಂಗೀಕರಿಸಿದ್ದ ಎಲ್ಲಾ ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮ ಬೋಧನೆ ಕಡ್ಡಾಯ ಸೇರಿದಂತೆ ಹಲವು ಮಸೂದೆಗಳನ್ನು ವಿಧಾನಪರಿಷತ್‌ ತಿರಸ್ಕರಿಸಿದೆ. ಇನ್ನು ಟಿಡಿಪಿ ಕನಸಿನ ಅಮರಾವತಿ ರಾಜಧಾನಿ ಯೋಜನೆ ಕೈಬಿಟ್ಟು 3 ಹೊಸ ರಾಜಧಾನಿ ರಚಿಸುವ ಮಸೂದೆಯನ್ನು ಸೋಮವಾರ ಜಗನ್‌ ವಿಧಾನಸಭೆಯಲ್ಲಿ ಮಂಡಿಸಿದ್ದಾರೆ. ಇದಕ್ಕೂ ಕೂಡಾ ವಿಧಾನಪರಿಷತ್‌ನಲ್ಲಿ ವಿರೋಧ ಎದುರಾಗುವುದು ಖಚಿತ. ಹೀಗಾಗಿ ಮೇಲ್ಮನೆಯನ್ನೇ ರದ್ದು ಮಾಡಿದರೆ ಎಲ್ಲಾ ಮಸೂದೆಗಳನ್ನು ಸುಲಭವಾಗಿ ಅಂಗೀಕರಿಸಬಹುದು ಎಂಬುದು ಜಗನ್‌ ಇರಾದೆ.

ಆಂಧ್ರ ಶಾಸನಸಭೆ ಬಲಾಬಲ

ವಿಧಾನಸಭೆ - ಒಟ್ಟು ಸ್ಥಾನ 175

ವೈಎಸ್‌ಆರ್‌ ಕಾಂಗ್ರೆಸ್‌ - 151

ವಿಧಾನಪರಿಷತ್‌ - ಒಟ್ಟು ಸ್ಥಾನ 58

ವೈಎಸ್‌ಆರ್‌ ಕಾಂಗ್ರೆಸ್‌ - 9

ಟಿಡಿಪಿ - 26

ನಾಮನಿರ್ದೇಶಿತ - 8

ಖಾಲಿ - 3

ತಂದೆ ವೈಎಸ್‌ಆರ್‌ ರಚಿಸಿದ್ದ ಮೇಲ್ಮನೆಗೆ ಮಗನ ಎಳ್ಳುನೀರು!

ಆಂಧ್ರದಲ್ಲಿ ವಿಧಾನ ಪರಿಷತ್‌ ಮೊದಲ ಬಾರಿಗೆ ರಚನೆಯಾಗಿದ್ದು 1958ರಲ್ಲಿ. ನಂತರ 1985ರಲ್ಲಿ ಟಿಡಿಪಿ ಅಧಿಕಾರಕ್ಕೆ ಬಂದಾಗ, ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್‌ ಬಹುಮತ ಹೊಂದಿತ್ತು. ಹೀಗಾಗಿ ಎನ್‌.ಟಿ.ರಾಮರಾವ್‌ ಸರ್ಕಾರ ವಿಧಾನ ಪರಿಷತ್ತನ್ನೇ ರದ್ದು ಮಾಡಿತ್ತು.

ಆಂಧ್ರದಲ್ಲಿ 12 ಹೊಸ ಜಿಲ್ಲೆ ರಚನೆಗೆ ಜಗನ್‌ ರೆಡ್ಡಿ ಸರ್ಕಾರ ಚಿಂತನೆ!

ಆದರೆ 2007ರಲ್ಲಿ ಜಗನ್‌ ಅವರ ತಂದೆ ವೈ.ಎಸ್‌.ರಾಜಶೇಖರ ರೆಡ್ಡಿ ಅವರು ಮುಖ್ಯಮಂತ್ರಿ ಆಗಿದ್ದಾಗ ಮತ್ತೆ ವಿಧಾನ ಪರಿಷತ್‌ ರಚಿಸಲಾಯಿತು. ತಮಿಳುನಾಡಿನಲ್ಲಿಯೂ ಎಂ.ಜಿ.ರಾಮಚಂದ್ರನ್‌ ನೇತೃತ್ವದ ಎಐಎಡಿಎಂಕೆ ಸರ್ಕಾರವಿದ್ದಾಗ (1986) ವಿಧಾನಪರಿಷತ್ತನ್ನು ರದ್ದುಪಡಿಸಲಾಗಿತ್ತು. ನಂತರ 2010ರಲ್ಲಿ ಡಿಎಂಕೆ ಸರ್ಕಾರದ ಅವಧಿಯಲ್ಲಿ ಮತ್ತೆ ಮೇಲ್ಮನೆ ಅಸ್ತಿತ್ವಕ್ಕೆ ತರುವ ಮಸೂದೆ ಅಂಗೀಕರಿಸಲಾಗಿದ್ದು, ಅದು ಸಂಸತ್ತಿನಲ್ಲಿ ಬಾಕಿ ಉಳಿದಿದೆ.

ಇದು ಜಗನ್‌ ಸರ್ಕಾರಕ್ಕೆ ಮಾತ್ರ ಇರುವ ಸಮಸ್ಯೆಯೇ?

ಆಂಧ್ರಪ್ರದೇಶದಲ್ಲಿ ಸರ್ಕಾರ ಯಾವುದೇ ಅಭಿವೃದ್ಧಿ ಕಾರ‍್ಯಗಳನ್ನು ಕೈಗೊಳ್ಳಲು ವಿಧಾನಪರಿಷತ್‌ ಅಡ್ಡಿಯಾಗಿದೆ ಎಂದು ಜಗನ್‌ ಆರೋಪಿಸುತ್ತಿದ್ದಾರೆ. ಆದರೆ, ಬಹುಮತ ಹೊಂದಿರುವ ಆಡಳಿತಾರೂಢ ರಾಜಕೀಯ ಪಕ್ಷವೊಂದಕ್ಕೆ ಮೇಲ್ಮನೆಯಲ್ಲಿ ಬಹುಮತ ಇಲ್ಲದೇ ಇರುವುದು ಮತ್ತು ಮಸೂದೆಗಳನ್ನು ಪಾಸು ಮಾಡಿಕೊಳ್ಳಲು ತೊಂದರೆಯಾಗುವುದು ಜಗನ್‌ಗೆ ಮಾತ್ರ ಎದುರಾಗಿರುವ ಸಮಸ್ಯೆಯೇನೂ ಅಲ್ಲ.

ಯಾವುದೇ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷವೊಂದು ಹೊಸತಾಗಿ ಅಧಿಕಾರಕ್ಕೆ ಬಂದರೆ ಆ ಪಕ್ಷಕ್ಕೆ ಮೇಲ್ಮನೆಯಲ್ಲಿ ಬಹುಮತ ಇರುವುದಿಲ್ಲ. ಏಕೆಂದರೆ ವಿಧಾನ ಪರಿಷತ್ತಿನಲ್ಲಿ ಮೂರನೇ ಒಂದರಷ್ಟುಸದಸ್ಯರು ಪ್ರತಿ 2 ವರ್ಷಕ್ಕೊಮ್ಮೆ ನೇಮಕವಾಗುವುದರಿಂದ ಪಕ್ಷಗಳ ಪ್ರಾಧಾನ್ಯತೆ ಬದಲಾಗುತ್ತಿರುತ್ತದೆ. ಹೀಗಾಗಿ ಅದಕ್ಕಿಂತ ಮುಂಚೆ ಅಧಿಕಾರದಲ್ಲಿದ್ದ ರಾಜಕೀಯ ಪಕ್ಷವು ಸಾಮಾನ್ಯವಾಗಿ ಬಹುಮತ ಹೊಂದಿರುತ್ತದೆ. 2014ರಲ್ಲಿ ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ಬಂದಾಗಲೂ ಬಿಜೆಪಿ ಅಥವಾ ಎನ್‌ಡಿಎಗೆ ರಾಜ್ಯಸಭೆಯಲ್ಲಿ ಬಹುಮತ ಇರಲಿಲ್ಲ.

ಈಗಲೂ ಇಲ್ಲ. ವಿಪಕ್ಷಗಳು ಮಸೂದೆ ಅಂಗೀಕಾರಕ್ಕೆ ತಡೆಯೊಡ್ಡುವುದು ನಡೆದೇ ಇದೆ. ಆದರೆ, ಬೇರೆ ಬೇರೆ ರಾಜಕೀಯ ಪಕ್ಷಗಳಿಂದ ವಿಷಯಾಧಾರಿತ ಬೆಂಬಲ ಪಡೆದು, ರಾಜಕೀಯ ದಾಳಗಳನ್ನು ಉರುಳಿಸಿ ಮಸೂದೆಗಳನ್ನು ರಾಜ್ಯಸಭೆಯಲ್ಲಿ ಅಂಗೀಕಾರ ಮಾಡಿಕೊಳ್ಳಲಾಗುತ್ತಿದೆ.

ವಿಧಾನ ಪರಿಷತ್‌ ಏಕೆ ಬೇಕು?

ಭಾರತದ ಸಂವಿಧಾನದ 169ನೇ ವಿಧಿಯು ರಾಜ್ಯಗಳಿಗೆ ವಿಧಾನಪರಿಷತ್ತನ್ನು ಹೊಂದುವ ಆಯ್ಕೆ ನೀಡಿದೆ. ಹೀಗಾಗಿ ವಿಧಾನಪರಿಷತ್‌ ಇರುವುದು ಕಡ್ಡಾಯವಲ್ಲ. ಬಹುಮತ ಪಡೆದ ಸರ್ಕಾರವೊಂದು ಆತುರದ ನಿರ್ಣಯಗಳನ್ನು ತೆಗೆದುಕೊಂಡರೆ ಅದನ್ನು ಪರಾಮರ್ಶಿಸುವುದು ಮತ್ತು ಕೆಳಮನೆಯಲ್ಲಿ ಆದ ತಪ್ಪುಗಳನ್ನು ತಿದ್ದಿ ಆಳುವ ಸರ್ಕಾರದ ‘ಕಿವಿ ಹಿಂಡುವ’ ಹಿರಿಯಣ್ಣನಂತೆ ಕೆಲಸ ಮಾಡುವುದು ಮೇಲ್ಮನೆಯ ಉದ್ದೇಶ. ಆದರೆ ಇತ್ತೀಚಿನ ದಿನಗಳಲ್ಲಿ ವಿಧಾನ ಪರಿಷತ್‌ ಹಣವಂತರ, ಜಾತಿ ರಾಜಕಾರಣದ, ರಾಜಕೀಯ ನಿರಾಶ್ರಿತರ ಗಂಜಿ ಕೇಂದ್ರವಾಗಿ ಪರಿವರ್ತನೆಯಾಗುತ್ತಿದೆ ಎಂಬ ಅಪವಾದ ಕೇಳಿಬರುತ್ತಿದೆ. ಹಾಗೆಯೇ ಜನರಿಂದ ನೇರವಾಗಿ ಆಯ್ಕೆಯಾಗಲು ಕಷ್ಟಇರುವವರು ಹಿಂಬಾಗಿಲಿನಲ್ಲಿ ಶಾಸನಸಭೆಯನ್ನು ಪ್ರವೇಶಿಸಲು ವಿಧಾನ ಪರಿಷತ್‌ ಒಂದು ದ್ವಾರವಾಗಿದೆ ಎಂಬ ಟೀಕೆಯೂ ಇದೆ. ಆದ್ದರಿಂದ ಇದರ ರದ್ದತಿ ವಿಷಯದಲ್ಲೂ ಆಳುವ ಸರ್ಕಾರಗಳ ಸ್ವಾರ್ಥ ರಾಜಕೀಯ ಎದ್ದು ಕಾಣುತ್ತಿದೆ.

ಮೇಲ್ಮನೆ ಸದಸ್ಯರ ಆಯ್ಕೆ ಹೇಗೆ?

ವಿಧಾನ ಪರಿಷತ್‌ನ ಒಟ್ಟು ಸದಸ್ಯರಲ್ಲಿ ಮೂರನೇ ಒಂದರಷ್ಟುಸದಸ್ಯರು ಸರ್ಕಾರಿ ಸಂಸ್ಥೆಗಳಿಂದ (ನಗರಸಭೆ, ಪುರಸಭೆ, ಗ್ರಾಮ ಸಭೆ, ಗ್ರಾಮ ಪಂಚಾಯತಿ, ಪಂಚಾಯತಿ ಸಮಿತಿಗಳು ಹಾಗು ಜಿಲ್ಲಾ ಪರಿಷತ್ತುಗಳಿಂದ) ಚುನಾಯತರಾಗಿರುತ್ತಾರೆ. ಮೂರನೇ ಒಂದರಷ್ಟುಜನ ವಿಧಾನಸಭಾ ಸದಸ್ಯರಿಂದ ಚುನಾಯಿತರಾಗುತ್ತಾರೆ. ಹನ್ನೆರಡನೇ ಒಂದರಷ್ಟುಸದಸ್ಯರು ಪದವೀಧರ ಕ್ಷೇತ್ರದಿಂದ, ಉಳಿದ ಹನ್ನೆರಡನೇ ಒಂದರಷ್ಟುಸದಸ್ಯರು ಶಿಕ್ಷಕರ ಕ್ಷೇತ್ರದ ಚುನಾವಣೆಯಿಂದ ಆಯ್ಕೆಯಾಗುತ್ತಾರೆ. ಹಾಗೂ ಮೇಲ್ಮನೆಯ ಒಟ್ಟು ಸದಸ್ಯರಲ್ಲಿ ಆರನೇ ಒಂದರಷ್ಟುಸದಸ್ಯರು ರಾಜ್ಯಪಾಲರಿಂದ ನೇರವಾಗಿ ನೇಮಕವಾಗುತ್ತಾರೆ. ಸಾಹಿತ್ಯ, ವಿಜ್ಞಾನ, ಕಲೆ, ಸಮಾಜ ಸೇವೆ ಮತ್ತಿತರ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ರಾಜ್ಯಪಾಲರು ವಿಧಾನಪರಿಷತ್‌ ಸದಸ್ಯರನ್ನಾಗಿ ನೇಮಕ ಮಾಡುತ್ತಾರೆ. ಹೀಗೆ ಪ್ರತಿ 2 ವರ್ಷಕ್ಕೊಮ್ಮೆ ಮೂರನೇ ಒಂದರಷ್ಟುಸದಸ್ಯರು ಚುನಾಯಿತರಾಗುತ್ತಾರೆ.

ಮೇಲ್ಮನೆ ಇರುವ ರಾಜ್ಯಗಳು

1. ಕರ್ನಾಟಕ

2. ಆಂಧ್ರಪ್ರದೇಶ

3. ಬಿಹಾರ

4. ಮಹಾರಾಷ್ಟ್ರ

5. ತೆಲಂಗಾಣ

6. ಉತ್ತರ ಪ್ರದೇಶ

ಹೊಸತಾಗಿ ಮೇಲ್ಮನೆ ರಚಿಸಲು ಹಲವು ರಾಜ್ಯಗಳು ಉತ್ಸುಕ

ವಿಧಾನಪರಿಷತ್ತನ್ನು ಉಳಿಸಿಕೊಳ್ಳಬೇಕೇ ಅಥವಾ ರದ್ದುಪಡಿಸಬೇಕೇ ಎನ್ನುವ ಕುರಿತು ಚರ್ಚೆ ಆಗಾಗ ಜೋರಾಗುತ್ತದೆ. ಈ ನಡುವೆ ರಾಜಸ್ಥಾನದಲ್ಲಿ ಹೊಸದಾಗಿ ವಿಧಾನಪರಿಷತ್‌ ರೂಪಿಸುವ ಮಸೂದೆಯನ್ನು ಪರಿಶೀಲಿಸಲು ಸ್ಥಾಯಿ ಸಮಿತಿ ರಚಿಸಲಾಗಿದೆ. 2010ರಲ್ಲಿ ರಾಜಸ್ಥಾನದಲ್ಲಿ ವಿಧಾನಪರಿಷತ್‌ ಸ್ಥಾಪಿಸುವ ಕರಡನ್ನು ಎಲ್ಲಾ ಶಾಸಕರು ಸರ್ವಾನುಮತದಿಂದ ಒಪ್ಪಿದ್ದರು. 2012ರಲ್ಲಿಯೂ ಇದೇ ಮಸೂದೆಯನ್ನು ಮತ್ತೊಮ್ಮೆ ಅಂಗೀಕರಿಸಲಾಗಿತ್ತು.

ಕೇಂದ್ರ ಸಂಪುಟ ಸಭೆ 2013ರಲ್ಲಿ ಅಸ್ಸಾಂನಲ್ಲಿ ವಿಧಾನ ಪರಿಷತ್‌ ರಚಿಸಲು ಒಪ್ಪಿಗೆ ನೀಡಿದೆ. ಆದರೆ ಅದಿನ್ನೂ ಅಧಿಕೃತವಾಗಿ ಆರಂಭವಾಗಿಲ್ಲ. ಪಶ್ಚಿಮ ಬಂಗಾಳದಲ್ಲಿ 1969ರಲ್ಲೇ ಮೇಲ್ಮನೆಯನ್ನು ರದ್ದುಪಡಿಸಲಾಗಿತ್ತು. ಆದರೆ ಅದಕ್ಕೆ ಮರುಜೀವ ನೀಡಲು ಈಗಿನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಒಲವು ವ್ಯಕ್ತಪಡಿಸಿದರಾದರೂ, ಅದಕ್ಕೆ ತೃಣಮೂಲ ಕಾಂಗ್ರೆಸ್‌ನಿಂದಲೇ ವಿರೋಧ ವ್ಯಕ್ತವಾಗಿದೆ. ಒಡಿಶಾದಲ್ಲೂ ವಿಧಾನ ಪರಿಷತ್‌ ರಚನೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಮೇಲ್ಮನೆ ರದ್ದತಿ/ ಸೃಷ್ಟಿಗೆ ಸಂಸತ್‌ ಒಪ್ಪಿಗೆ ಕಡ್ಡಾಯ

ಸಂವಿಧಾನದ 169ನೇ ಪರಿಚ್ಛೇದದ ಪ್ರಕಾರ, ಯಾವುದೇ ರಾಜ್ಯದಲ್ಲಿ ವಿಧಾನಪರಿಷತ್‌ ಸೃಷ್ಟಿಮತ್ತು ರದ್ದತಿಗೆ ಅವಕಾಶ ಇದೆ. ಇದಕ್ಕೆ ಆಯಾ ರಾಜ್ಯದ ವಿಧಾನಸಭೆ ಬಹುಮತದ ನಿರ್ಣಯವನ್ನು ಅಂಗೀಕರಿಸಿ ಅದನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಡಬೇಕು. ಕೇಂದ್ರ ಸರ್ಕಾರದ ಸಂಪುಟದ ಅನುಮೋದನೆ ನಂತರ ಈ ವಿಧೇಯಕವನ್ನು ಲೋಕಸಭೆ ಹಾಗೂ ರಾಜ್ಯಸಭೆಗಳಲ್ಲಿ ಮಂಡಿಸಿ ಸಮ್ಮತಿ ಪಡೆಯಬೇಕಾಗುತ್ತದೆ.

1985 ರಲ್ಲಿ ಆಂಧ್ರಪ್ರದೇಶ ಮೇಲ್ಮನೆ ರದ್ದತಿ ಪ್ರಸ್ತಾವನೆ ಮಂಡಿಸಿದಾಗ ಅದಕ್ಕೆ ಕಾಂಗ್ರೆಸ್‌ ವಿರೋಧ ವ್ಯಕ್ತಪಡಿಸಿತ್ತು. ಆಗ ಪ್ರಧಾನಿಯಾಗಿದ್ದ ರಾಜೀವ್‌ ಗಾಂಧಿ ಪ್ರಜಾಸತ್ತೆಯ ಮೌಲ್ಯವನ್ನು ಎತ್ತಿಹಿಡಿಯಬೇಕೆಂಬ ಕಾರಣಕ್ಕಾಗಿ ಪ್ರಸ್ತಾವನೆಯನ್ನು ಒಪ್ಪಿಕೊಂಡಿದ್ದರು.

ವಿಧಾನ ಪರಿಷತ್‌ ರಚಿಸಲು ನೂರಾರು ಕೋಟಿ ಬೇಕು!

ವಿಧಾನ ಪರಿಷತ್‌ ರಚನೆಗೆ ಇಂತಿಷ್ಟೇ ಹಣ ಬೇಕಾಗುತ್ತದೆಂಬ ಖಚಿತ ಲೆಕ್ಕಾಚಾರ ಇಲ್ಲ. ಇದು ರಾಜ್ಯದಿಂದ ರಾಜ್ಯಕ್ಕೆ ಬೇರೆ ಬೇರೆಯಾಗುತ್ತದೆ. ಈ ಕುರಿತು ರಾಜಸ್ಥಾನದಲ್ಲಿ ರಚಿಸಲಾಗಿದ್ದ ಸಮಿತಿಯು ವಿಧಾನ ಪರಿಷತ್ತಿನ ರಚನೆಗೆ ಸುಮಾರು 100 ಕೋಟಿ ಬೇಕಾಗಬಹುದು ಎಂದು ಅಂದಾಜಿಸಿದೆ. ಅಸ್ಸಾಂ ಸಮಿತಿಯು 68 ಕೋಟಿ ಬೇಕಾಗಬಹುದು ಎಂದು ಹೇಳಿದೆ. ಇದಲ್ಲದೆ ಮೇಲ್ಮನೆಯ ಕಾರ್ಯನಿರ್ವಹಣೆಗೆ ಪ್ರತಿವರ್ಷ ಕನಿಷ್ಠ 20-30 ಕೋಟಿ ರು. ವೆಚ್ಚವಾಗುತ್ತದೆ.

- ಕೀರ್ತಿ ತೀರ್ಥಹಳ್ಳಿ 

click me!