237 ಅರ್ಜಿ ವಿಚಾರಣೆ, ಕೇಂದ್ರದ ಸಿಎಎ ಜಾರಿಗೆ ತಡೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಣೆ!

By Suvarna NewsFirst Published Mar 19, 2024, 3:05 PM IST
Highlights

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆಗೆ ತಡೆ ನೀಡಲು ಬರೋಬ್ಬರಿ 237 ಅರ್ಜಿ ಸಲ್ಲಿಕೆಯಾಗಿತ್ತು.ಇಂದು ಈ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ತಡೆ ನೀಡಲು ನಿರಾಕರಿಸಿದೆ. ಈ ಕುರಿತು ಕೇಂದ್ರ ಸರ್ಕಾರ ಉತ್ತರಿಸಲು ಸೂಚಿಸಿದೆ.
 

ನವದೆಹಲಿ(ಮಾ.19) ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆಗೆ ಪರ ವಿರೋಧಗಳು ವ್ಯಕ್ತವಾಗುತ್ತಿದೆ. ವಿಪಕ್ಷಗಳು ಸಿಎಎ ತಡೆಗೆ ಆಗ್ರಹಿಸಿದೆ. ಹಲವು ನಾಯಕರು, ಮುಸ್ಲಿಮ್ ಸಮುದಾಯದ ನಾಯಕರು ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಹೋರಾಟ ಆರಂಭಿಸಿದ್ದಾರೆ. ಈಗಾಗಲೇ ಸುಪ್ರೀಂ ಕೋರ್ಟ್ ಕದ ತಟ್ಟಿದ್ದಾರೆ. ಸಿಎಎ ಜಾರಿಗೆ ತಡೆ ಕೋರುವಂತೆ  ಈಗಾಗಲೇ 237 ಅರ್ಜಿಗಳು ಸಲ್ಲಿಕೆಯಾಗಿದೆ. ಈ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ತಡೆ ನೀಡಲು ನಿರಾಕರಿಸಿದೆ. ವಿರೋಧ ಹಾಗೂ ತಡೆ ಕುರಿತು ಉತ್ತರಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದೆ.

ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ಡಿವೈ ಚಂದ್ರಚೂಡ್, ಜಸ್ಟೀಸ್ ಜೆಬಿ ಪರಿದ್ವಾಲ್, ಮನೋಜ್ ಮಿಶ್ರಾ ಸೇರಿದ ಪೀಠ ಈ ಅರ್ಜಿಗಳ ವಿಚಾರಣೆ ನಡೆಸಿದೆ. ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ಅವಶ್ಯಕತೆ, ಇದಕ್ಕೆ ಎದುರಾಗಿರುವ ವಿರೋಧಗಳ ಕುರಿತು ಉತ್ತರಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ. ಏಪ್ರಿಲ್ 8ರೊಳಗೆ ಕೇಂದ್ರ ಸರ್ಕಾರಕ್ಕೆ ಈ ಕುರಿತು ಉತ್ತರ ಸಲ್ಲಿಕೆ ಮಾಡುವಂತೆ ಸುಪ್ರೀಂ ಕೋರ್ಟ್ ಸೂಚಿಸಿದೆ. ಬಳಿಕ ಮುಂದಿನ ವಿಚಾರಣೆಯನ್ನು ಎಪ್ರಿಲ್ 9ಕ್ಕೆ ಮುಂದೂಡಿದೆ.

ದೇಶ ವಿಭಜನೆ ಆಗಲೇ ಇಲ್ಲ ಎಂಬಂತೆ ವಿಶ್ವ ಪ್ರತಿಕ್ರಿಯಿಸುತ್ತಿದೆ, ಅಮೆರಿಕದ ಸಿಎಎ ಹೇಳಿಕೆಗೆ ಜೈಶಂಕರ್ ತಿರುಗೇಟು

ಪೌರತ್ವ ತಿದ್ದುಪಡಿ ಕಾಯ್ದೆ ಮುಸ್ಲಿಮರಿಗೆ ಪೌರತ್ವ ನೀಡುವುದಿಲ್ಲ. ಇದರಿಂದಾಗಿ ಸಂವಿಧಾನದ ಮೂಲ ಆಶಯವಾಗಿರುವ ಜಾತ್ಯಾತೀತತೆಯ ಉಲ್ಲಂಘನೆ ಆಗಿದೆ. ಮೇಲಾಗಿ ಕೇಂದ್ರ ಸರ್ಕಾರ 2019ರಲ್ಲಿ ಅಂಗೀಕರಿಸಿದ ಕಾಯ್ದೆಯನ್ನು ಈಗ ಲೋಕಸಭೆ ಚುನಾವಣೆ ಹೊಸ್ತಿಲಿನಲ್ಲಿ ಜಾರಿ ಮಾಡಿರುವ ಆತುರವೇನಿತ್ತು. ಈ ಕಾಯ್ದೆ ಅಡಿ ಮುಸ್ಲಿಮರಿಗೂ ಪೌರತ್ವ ದೊರೆಯಬೇಕು. ಈ ಅರ್ಜಿಯ ಕುರಿತು ನ್ಯಾಯಾಲಯ ತೀರ್ಪು ನೀಡುವವರೆಗೆ ಕಾಯ್ದೆ ಜಾರಿಗೆ ತಡೆ ನೀಡಬೇಕು ಎಂದು ಹಲವು ಅರ್ಜಿಗಳು ಸಲ್ಲಿಕೆಯಾಗಿದೆ. 

ಪೌರತ್ವ ತಿದ್ದುಪಡಿ ಕಾಯ್ದೆಗೆ ತಡೆ ಕೋರುವಂತೆ ಎಂಐಎಂ ಮುಖಂಡ ಅಸಾದುದ್ದೀನ್‌ ಒವೈಸಿ ಕೂಡ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಸಿಎಎ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ಇರುವ ಎಲ್ಲ ಅರ್ಜಿ ಇತ್ಯರ್ಥವಾಗುವವರೆಗೂ ಕಾನೂನು ಜಾರಿಗೆ ತಡೆ ನೀಡಬೇಕು. ಹಾಗೂ ಈಗಾಗಲೇ ಜಾರಿ ಮಾಡಿರುವ ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನೂ ಸ್ಥಗಿತ ಮಾಡಲು ಸೂಚಿಸಬೇಕು’ ಎಂದು ಅರ್ಜಿ ಸಲ್ಲಿಸಿದ್ದಾರೆ.

ಸಿಎಎ ಅಡಿ ಪೌರತ್ವ ನೀಡುವಲ್ಲಿ ರಾಜ್ಯಗಳ ಪಾತ್ರವೇ ಇಲ್ಲ: ಜಾರಿ ಮಾಡಲ್ಲ ಅನ್ನೋ ಕೆಲ ರಾಜ್ಯಗಳ ವಾದ ಅರ್ಥಹೀನ

ಪಾಕಿಸ್ತಾನ, ಬಾಂಗ್ಲಾದೇಶ, ಆಫ್ಘಾನಿಸ್ತಾನದಿಂದ ಭಾರತಕ್ಕೆ ವಲಸೆ ಬಂದಿರುವ ಹಿಂದೂ, ಪಾರ್ಸಿ, ಜೈನ, ಬುದ್ಧ, ಕ್ರಿಶ್ಚಿಯನ್  ಸಮುದಾಯಗಳಿಗೆ ಸಿಎಎ ಅಡಿ ಪೌರತ್ವ ನೀಡಲಾಗುತ್ತದೆ. ವಲಸಿಗರು ಡಿಸೆಂಬರ್ 31, 2014ಕ್ಕಿಂತ ಮೊದಲು ಭಾರಕ್ಕೆ ಬಂದಿರಬೇಕು. ಈ ಕಾಯ್ದೆಯಲ್ಲಿ ಪ್ರಮುಖವಾಗಿ ಮುಸ್ಲಿಮೇತರ ವಲಸಿಗರಿಗೆ ಪೌರತ್ವ ನೀಡಲಾಗುತ್ತದೆ. ಮುಸ್ಲಿಂ ದೇಶದಿಂದ ಧರ್ಮದ ಆಧಾರದಲ್ಲಿ ನರಮೇಧಕ್ಕೆ ಒಳಗಾಗಿರುವ, ದೌರ್ಜನ್ಯಕ್ಕೆ ಒಳಗಾಗಿರುವ ಸಮುದಾಯದ ವ್ಯಕ್ತಿಗಳು ಪ್ರಾಣ ಉಳಿಸಿಕೊಲ್ಳಲು ಭಾರತಕ್ಕೆ ಬಂದವರಿಗೆ ಪೌರತ್ವ ನೀಡಲಾಗುತ್ತದೆ. ಕಾಯ್ದೆಯಿಂದ ಮುಸ್ಲಿಮರನ್ನು ಹೊರಗಿಡಲಾಗಿದೆ ಎಂದು ಪ್ರತಿಭಟನೆ, ಹೋರಾಟ ನಡೆಯುತ್ತಿದೆ.
 

click me!