
ಬೆಂಗಳೂರು(ಮಾ.17): ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ 45 ದಿನಗಳಲ್ಲಿ 7 ಅಂತಸ್ತಿನ ಕಟ್ಟಡವನ್ನು ನಿರ್ಮಿಸಿದೆ. ಈ ಕಟ್ಟಡವನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗುರುವಾರ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಡಿಆರ್‌ಡಿಒ ಮುಖ್ಯಸ್ಥ ಜಿ ಸತೀಶ್ ರೆಡ್ಡಿ ಉಪಸ್ಥಿತರಿದ್ದರು.
ಐದನೇ ತಲೆಮಾರಿನ ಸುಧಾರಿತ ಮಧ್ಯಮ ಯುದ್ಧ ವಿಮಾನ (AMCA) ಗಾಗಿ ಈ ಕಟ್ಟಡವನ್ನು ಸಂಶೋಧನೆ ಮತ್ತು ಅಭಿವೃದ್ಧಿ ಸೌಲಭ್ಯವಾಗಿ ಬಳಸಲಾಗುತ್ತದೆ. ಬೆಂಗಳೂರು ಮೂಲದ ಏರೋನಾಟಿಕಲ್ ಡೆವಲಪ್‌ಮೆಂಟ್ ಎಸ್ಟಾಬ್ಲಿಷ್‌ಮೆಂಟ್ ಈ ಕಟ್ಟಡದಲ್ಲಿ ವಿಮಾನ ಹಾರಾಟ ನಿಯಂತ್ರಣ ವ್ಯವಸ್ಥೆಗಾಗಿ ಏವಿಯಾನಿಕ್ಸ್ ಅನ್ನು ಅಭಿವೃದ್ಧಿಪಡಿಸುತ್ತದೆ. ಅದಕ್ಕೆ ಸಂಬಂಧಿಸಿದ ಯೋಜನೆಗಳ ಪ್ರಸ್ತುತಿಯನ್ನೂ ರಕ್ಷಣಾ ಸಚಿವರ ಮುಂದೆ ನೀಡಲಾಯಿತು.
ಡಿಆರ್‌ಡಿಒ ಬೆಂಗಳೂರಿನ ಎಡಿಇಯಲ್ಲಿ ಹೈಬ್ರಿಡ್ ತಂತ್ರಜ್ಞಾನದ ಮೂಲಕ ಬಹುಮಹಡಿ ಕಟ್ಟಡದ ನಿರ್ಮಾಣವನ್ನು ದಾಖಲೆಯ 45 ದಿನಗಳಲ್ಲಿ ಪೂರ್ಣಗೊಳಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸುಧಾರಿತ ಮಧ್ಯಮ ಯುದ್ಧ ವಿಮಾನ (AMCA) ಯೋಜನೆಯಡಿಯಲ್ಲಿ ಯುದ್ಧ ವಿಮಾನಗಳು ಮತ್ತು ಏರ್‌ಕ್ರಾಫ್ಟ್ ಫ್ಲೈಟ್ ಕಂಟ್ರೋಲ್ ಸಿಸ್ಟಮ್ (FCS) ಗಾಗಿ ಏವಿಯಾನಿಕ್ಸ್ ಅಭಿವೃದ್ಧಿ ಸೌಲಭ್ಯವನ್ನು ಕಟ್ಟಡವು ಹೊಂದಿರುತ್ತದೆ.
ಭಾರತವು 5 ನೇ ತಲೆಮಾರಿನ ಯುದ್ಧ ವಿಮಾನವನ್ನು ಅಭಿವೃದ್ಧಿಪಡಿಸುತ್ತಿದೆ
ನಿಮ್ಮ ಮಾಹಿತಿಗಾಗಿ, ಭಾರತವು ತನ್ನ ವಾಯು ರಕ್ಷಣೆಯನ್ನು ಬಲಪಡಿಸಲು ಮತ್ತು ಆಧುನೀಕರಿಸಲು ಅಲ್ಟ್ರಾ-ಆಧುನಿಕ ಸ್ಟೆಲ್ತ್ ತಂತ್ರಜ್ಞಾನವನ್ನು ಹೊಂದಿರುವ 5 ನೇ ತಲೆಮಾರಿನ ಯುದ್ಧ ವಿಮಾನಗಳನ್ನು ಅಭಿವೃದ್ಧಿಪಡಿಸಲು ಮಹತ್ವಾಕಾಂಕ್ಷೆಯ AMCA ಯೋಜನೆಯಲ್ಲಿ ಕೆಲಸ ಮಾಡುತ್ತಿದೆ ಎಂಬುವುದು ಉಲ್ಲೇಖನೀಯ. ಈ ಯೋಜನೆಯ ಆರಂಭಿಕ ಅಭಿವೃದ್ಧಿ ವೆಚ್ಚ ಸುಮಾರು 15,000 ಕೋಟಿ ಎಂದು ಅಂದಾಜಿಸಲಾಗಿದೆ. ಎಎಂಸಿಎ ವಿನ್ಯಾಸ ಮತ್ತು ಮೂಲಮಾದರಿ ಅಭಿವೃದ್ಧಿಗೆ ಭದ್ರತೆಗೆ ಸಂಬಂಧಿಸಿದ ಪ್ರಧಾನಿ ನೇತೃತ್ವದ ಸಂಪುಟ ಸಮಿತಿಯ ಅನುಮೋದನೆ ಪಡೆಯುವ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ ಎಂದು ರಕ್ಷಣಾ ಸಚಿವಾಲಯ ಸೋಮವಾರ ತಿಳಿಸಿದೆ.
ಈ ಕಟ್ಟಡದಲ್ಲಿ ಎಎಂಸಿಎ ಯೋಜನೆಗೆ ಸಂಬಂಧಿಸಿದ ಕಾಮಗಾರಿ ನಡೆಯಲಿದೆ
ಎಎಂಸಿಎ ಯೋಜನೆ ಮತ್ತು ಸಂಬಂಧಿತ ಚಟುವಟಿಕೆಗಳಿಗೆ ಅಗತ್ಯವಾದ ಮೂಲಸೌಕರ್ಯಗಳನ್ನು ಒದಗಿಸುವ ಉದ್ದೇಶದಿಂದ ಕೇವಲ 45 ದಿನಗಳ 'ಕನಿಷ್ಠ ಕಾಲಮಿತಿ'ಯಲ್ಲಿ ಸಂಯೋಜಿತ ಉತ್ಪಾದನಾ ತಂತ್ರಜ್ಞಾನವನ್ನು ಬಳಸಿಕೊಂಡು ಕಟ್ಟಡವನ್ನು ನಿರ್ಮಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನವೆಂಬರ್ 22, 2021 ರಂದು ಯೋಜನೆಯ ಅಡಿಗಲ್ಲು ಹಾಕಲಾಯಿತು ಮತ್ತು ಫೆಬ್ರವರಿ 1 ರಿಂದ ನಿಜವಾದ ನಿರ್ಮಾಣ ಕಾರ್ಯ ಪ್ರಾರಂಭವಾಯಿತು. ಏಳು ಅಂತಸ್ತಿನ ಕಟ್ಟಡದ ಕಾಮಗಾರಿಯನ್ನು 45 ದಿನಗಳಲ್ಲಿ ಪೂರ್ಣಗೊಳಿಸಿದ ವಿಶಿಷ್ಟ ದಾಖಲೆ ಇದಾಗಿದೆ. ದೇಶದಲ್ಲಿ ಇದೇ ಮೊದಲ ಬಾರಿಗೆ ನಡೆದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ