Nagaland Civilian Deaths: ಹತ್ಯೆ ಉದ್ದೇಶದಿಂದಲೇ ಜನರ ಮೇಲೆ ದಾಳಿ: ಸೇನೆ ಮೇಲೆ FIR!

By Kannadaprabha NewsFirst Published Dec 7, 2021, 7:14 AM IST
Highlights

*ಅರೆ ಸೇನಾಪಡೆ ವಿರುದ್ಧ ಹತ್ಯೆ ಕೇಸ್‌ ದಾಖಲು!
*ತಪ್ಪು ಗ್ರಹಿಕೆಯೇ ನಾಗಾಲ್ಯಾಂಡ್‌ ಘಟನೆಗೆ ಕಾರಣ: ಶಾ
*14 ನಾಗರಿಕರ ಸಾವಿಗೆ ಸಂಸತ್ತಿನಲ್ಲಿ ವಿಪಕ್ಷಗಳ ಆಕ್ರೋಶ

ನವದೆಹಲಿ(ಡಿ. 07): ನಾಗಾಲ್ಯಾಂಡ್‌ನಲ್ಲಿ 14 ಜನ ನಾಗರಿಕರ ಹತ್ಯೆಗೆ ಕಾರಣವಾದ ಯೋಧರ (Nagaland Civilian Killings) ಕಾರಾರ‍ಯಚರಣೆ ಕುರಿತು ಸ್ಥಳೀಯ ಪೊಲೀಸರು ಸೋಮವಾರ ಅರೆ ಸೇನಾಪಡೆ ವಿರುದ್ಧ ಹತ್ಯೆ ಕೇಸ್‌ (Murder Case) ದಾಖಲಿಸಿದ್ದಾರೆ. ಈ ಕುರಿತು ದಾಖಲಿಸಲಾದ ಎಫ್‌ಐಆರ್‌ನಲ್ಲಿ (FIR), ಭದ್ರತಾ ಪಡೆಗಳ ಉದ್ದೇಶ ಜನಸಾಮಾನ್ಯರನ್ನು ಗಾಯಗೊಳಿಸುವುದು ಮತ್ತು ಹತ್ಯೆ ಮಾಡುವದೇ ಆಗಿತ್ತು ಎಂಬ ಗಂಭೀರ ಆರೋಪ ಮಾಡಲಾಗಿದೆ. ಈ ಕುರಿತಂತೆ ಲೋಕಸಭೆ (Lok Sabha) ಮತ್ತು ರಾಜ್ಯಸಭೆಯಲ್ಲಿ (Rajya Sabha) ಹೇಳಿಕೆ ನೀಡಿದ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಇಂಥ ಘಟನೆಗಳು ಮರುಕಳಿಸಂತೆ ಸೇನೆಗೆ (Army) ಸೂಚಿಸಲಾಗಿದೆ’ ಎಂದು ಹೇಳಿದರು

ಎಫ್‌ಐಆರ್‌ನಲ್ಲಿರುವ ಅಂಶ

ಡಿ.4ರಂದು ಕಲ್ಲಿದ್ದಲು ಗಣಿ ಕಾರ್ಮಿಕರು ತಿರು ಎಂಬಲ್ಲಿಂದ ವಾಹನದಲ್ಲಿ ಒಟಿಂಗ್‌ ಗ್ರಾಮದಲ್ಲಿರುವ ಮನೆಗಳಿಗೆ ತೆರಳುತ್ತಿದ್ದರು. ಈ ನಡುವೆ ತಿರು ಹಾಗೂ ಒಟಿಂಗ್‌ ಗ್ರಾಮಗಳ ಮಧ್ಯೆ ಬರುವ ಲಾಂಗ್ಖಾವ್‌ ಪ್ರದೇಶಕ್ಕೆ ವಾಹನ ಆಗಮಿಸುತ್ತಿದ್ದ ವೇಳೆ ಭದ್ರತಾ ಪಡೆಗಳು ಏನೂ ಯೋಚಿಸದೇ ಕಾರಿನ ಮೇಲೆ ಗುಂಡಿನ ಸುರಿಮಳೆಗೆರೆದಿದ್ದಾರೆ. ಈ ದಾಳಿಯಲ್ಲಿ ಹಲವರು ಸಾವನ್ನಪ್ಪಿ, ಇನ್ನು ಹಲವರು ಗಾಯಗೊಂಡಿದ್ದಾರೆ. ದಾಲಿ ಸಂದರ್ಭದಲ್ಲಿ ಭದ್ರತಾ ಪಡೆಗಳು, ಈ ಕಾರ್ಯಾಚರಣೆಗೆ ಪೊಲೀಸರ ಮಾರ್ಗದರ್ಶನವನ್ನು ಪಡೆದಿಲ್ಲ. ಹೀಗಾಗಿ ಪೊಲೀಸರು ನಾಗರಿಕರನ್ನು ಹತ್ಯೆ ಮಾಡುವ ದುರುದ್ದೇಶ ಹೊಂದಿದ್ದರು ಎಂಬುದು ಸ್ಪಷ್ಟಎಂದ ಹೇಳಲಾಗಿದೆ.

ತಪ್ಪು ಗ್ರಹಿಕೆಯೇ ನಾಗಾಲ್ಯಾಂಡ್‌ ಘಟನೆಗೆ ಕಾರಣ

ನಾಗಾಲ್ಯಾಂಡ್‌ನಲ್ಲಿ 14 ಜನಸಾಮಾನ್ಯರ ಹತ್ಯೆಗೆ ಕಾರಣವಾದ ಯೋಧರ ಗುಂಡಿನ ಕಾರಾರ‍ಯಚರಣೆಗೆ  ಕೇಂದ್ರ ಸರ್ಕಾರ ವಿಷಾದ ವ್ಯಕ್ತಪಡಿಸಿದೆ. ಸೋಮವಾರ ಈ ಕುರಿತಂತೆ ಲೋಕಸಭೆ  ಮತ್ತು ರಾಜ್ಯಸಭೆಯಲ್ಲಿ  ಹೇಳಿಕೆ ನೀಡಿದ ಕೇಂದ್ರ ಗೃಹ ಸಚಿವ ಅಮಿತ್‌ ಶಾ (Union Home Minister Amit Shah), ‘ಪ್ರಕರಣ ಸಂಬಂಧ ವಿಶೇಷ ತನಿಖಾ ತಂಡ ಒಂದು ತಿಂಗಳ ಒಳಗಾಗಿ ತನಿಖೆ ಪೂರ್ಣಗೊಳಿಸಲಿದೆ. ಭಯೋತ್ಪಾದಕ ವಿರೋಧಿ ಕಾರಾರ‍ಯಚರಣೆ ಸಂದರ್ಭದಲ್ಲಿ ಇಂಥ ಘಟನೆಗಳು ಮರುಕಳಿಸಂತೆ ಸೇನೆಗೆ (Army) ಸೂಚಿಸಲಾಗಿದೆ’ ಎಂದು ಹೇಳಿದರು. ಇದೇ ವೇಳೆ ಮೃತರ ಕುಟುಂಬಕ್ಕೆ ಸಂತಾಪ ಸೂಚಿಸಿದ ಅವರು ತಲಾ 11 ಲಕ್ಷ ರು. ಪರಿಹಾರ ಘೋಷಿಸಿದರು.

ನಾಗಾಲ್ಯಾಂಡ್‌ನ ಮೋನ್‌ ಜಿಲ್ಲೆಯಲ್ಲಿ ಉಗ್ರರ ಚಲನವಲನದ ಬಗ್ಗೆ ಸೇನೆಗೆ ಮಾಹಿತಿ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ‘21 ಪ್ಯಾರಾ ಕಮಾಂಡೋ’ ಪಡೆ ಕಾರಾರ‍ಯಚರಣೆ ಸಿದ್ಧವಾಗಿತ್ತು. ಈ ವೇಳೆ ಧಾವಿಸಿದ ವಾಹನದ ವೇಗವನ್ನು ಕಡಿಮೆ ಮಾಡಲು ಸೂಚಿಸಿದ್ದರೂ ವಾಹನ ಇನ್ನೂ ವೇಗವಾಗಿ ಸಾಗಲು ಆರಂಭಿಸಿತು. ಇದರಿಂದ ಸಂಶಯ ತೀವ್ರವಾಗಿ ಉಗ್ರರೇ (Terrorists) ಇರಬಹುದೆಂದು ತಪ್ಪಾಗಿ ತಿಳಿದು ಭದ್ರತಾ ಸಿಬ್ಬಂದಿ ಗುಂಡಿನ ದಾಳಿ ನಡೆಸಿದ್ದರು. ವೇಳೆ 6 ಮಂದಿ ನಾಗರಿಕರು ಮೃತಪಟ್ಟಿದ್ದರು. ನಂತರ ಸ್ಥಳೀಯರು ಸೇನೆ ಮೇಲೆ ದಾಳಿ ಮಾಡಿ ಒಬ್ಬ ಯೋಧನ ಬಲಿ ಪಡೆದ ಬಳಿಕ ಆತ್ಮರಕ್ಷಣೆಗಾಗಿ ಮತ್ತು ಜನರನ್ನು ಚದುರಿಸಲು ಸೇನೆ ಮತ್ತೆ ಗುಂಡಿನ ದಾಳಿ ನಡೆಸಿದಾಗ 7 ನಾಗರಿಕರು ಮೃತಪಟ್ಟಿದ್ದಾರೆ ಎಂದು ಶಾ ತಿಳಿಸಿದರು.

ನಾಗಾಲ್ಯಾಂಡಲ್ಲಿ ಸೇನಾ ವಿಶೇಷ ಅಧಿಕಾರ ಕಾಯ್ದೆ ರದ್ದಾಗಲಿ

ನಾಗಾಲ್ಯಾಂಡ್‌ನಲ್ಲಿ ಸೇನೆ 14 ಮುಗ್ಧ ನಾಗರಿಕರ ಸಾವಿಗೆ ಕಾರಣವಾದ ಬೆನ್ನಲ್ಲೇ ಸಶಸ್ತ್ರ ಪಡೆಗಳ (ವಿಶೇಷ ಅಧಿಕಾರ) ಕಾಯ್ದೆ-1958 ಅನ್ನು ರದ್ದು ಮಾಡುವಂತೆ ನಾಗಾಲ್ಯಾಂಡ್‌ ಮುಖ್ಯಮಂತ್ರಿ ನೆಪಿಯು ರಿಯು (Neiphiu Rio) ಆಗ್ರಹಿಸಿದ್ದಾರೆ. ಸೇನೆಯ ಗುಂಡೇಟಿಗೆ ಬಲಿಯಾದ 14 ಮಂದಿ ಕೂಲಿ ಕಾರ್ಮಿಕರ ಅಂತ್ಯಸಂಸ್ಕಾರದಲ್ಲಿ ಭಾಗಿಯಾದ ರಿಯು, ಸೇನಾ ವಿಶೇಷ ಅಧಿಕಾರ ಕಾಯ್ದೆ ರದ್ಧತಿ ಬಗ್ಗೆ ಚರ್ಚೆಯಾಗಬೇಕಾದ ಅಗತ್ಯವಿದೆ ಎಂದು ಹೇಳಿದರು. 

ಬಳಿಕ, ‘ನಾಗಾಲ್ಯಾಂಡ್‌ ಮತ್ತು ನಾಗಾ ಜನರು ಯಾವಾಗಲೂ ಸೇನಾ ವಿಶೇಷ ಅಧಿಕಾರ ಕಾಯ್ದೆಯನ್ನು ವಿರೋಧಿಸುತ್ತಾರೆ. ಇದು ರದ್ದಾಗಲೇ ಬೇಕು’ ಎಂದು ಟ್ವೀಟ್‌ ಮಾಡಿದ್ದಾರೆ. ಇದೇ ವೇಳೆ ಮೃತರ ಕುಟುಂಬಗಳಿಗೆ ತಲಾ 5 ಲಕ್ಷ, ಗಾಯಾಳುಗಳಿಗೆ 1 ಲಕ್ಷ ರು. ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ.
ಇದಕ್ಕೂ ಮೊದಲು ಸಂಸತ್ತಿನ ಉಭಯ ಸದನಗಳಲ್ಲೂ ನಾಗಾಲ್ಯಾಂಡ್‌ ಘಟನೆ ಸಂಬಂಧ ವಿಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದವು. ಬಳಿಕ ಸರ್ಕಾರ ನೀಡಿದ ಉತ್ತರಕ್ಕೆ ಅತೃಪ್ತಿ ವ್ಯಕ್ತಪಡಿಸಿ ಕಲಾಪ ಬಹಿಷ್ಕರಿಸಿ ಹೊರನಡೆದವು.

click me!