ಮನೆಯಲ್ಲೇ ಐಸಿಯು ಸೆಟಪ್‌ ಮಾಡಿಕೊಳ್ತಿದ್ದಾರೆ ಜನ!

By Kannadaprabha NewsFirst Published Jun 13, 2020, 7:24 AM IST
Highlights

ದೆಹಲಿ: ಮನೆಯಲ್ಲೇ ಐಸಿಯು ಸೆಟಪ್‌ ಮಾಡಿಕೊಳ್ತಿದ್ದಾರೆ ಜನ!| ದಿಲ್ಲಿಯಲ್ಲಿ ಕೊರೋನಾ ರೋಗಿಗಳಿಗೆ ಆಸ್ಪತ್ರೆಯಲ್ಲಿ ಸಿಗುತ್ತಿಲ್ಲ ಹಾಸಿಗೆ| ಶ್ರೀಮಂತರಿಂದ ಆಕ್ಸಿಜನ್‌ ಸಿಲಿಂಡರ್‌, ವೆಂಟಿಲೇಟರ್‌ ಖರೀದಿ ಜೋರು

ನವದೆಹಲಿ(ಜೂ.13): ಆಸ್ಪತ್ರೆಗಳಲ್ಲಿ ಕೊರೋನಾ ರೋಗಿಗಳಿಗೆ ಹಾಸಿಗೆ ಸಿಗುವುದು ಕಷ್ಟವಾಗುತ್ತಿರುವುದರಿಂದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಶ್ರೀಮಂತರು ತಮ್ಮ ಮನೆಗಳಲ್ಲೇ ಐಸಿಯು ಹಾಗೂ ಐಸೋಲೇಶನ್‌ ವಾರ್ಡ್‌ಗಳನ್ನು ಸಿದ್ಧಪಡಿಸಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲ, ಅನೇಕ ಅಪಾರ್ಟ್‌ಮೆಂಟ್‌ ಸೊಸೈಟಿಗಳು ತಮ್ಮಲ್ಲಿರುವ ಕಮ್ಯುನಿಟಿ ಹಾಲ್‌ ಅಥವಾ ಖಾಲಿ ಫ್ಲ್ಯಾಟ್‌ಗಳಲ್ಲಿ ಸಾಮೂಹಿಕ ಚಿಕಿತ್ಸೆಗೆ ವ್ಯವಸ್ಥೆ ಮಾಡಿಕೊಳ್ಳುತ್ತಿವೆ.

ಅಪೋಲೋ, ಮ್ಯಾಕ್ಸ್‌ ಆಸ್ಪತ್ರೆ, ಎಚ್‌ಡಿಯು ಹೆಲ್ತ್‌ಕೇರ್‌ ಮುಂತಾದ ಕಂಪನಿಗಳು ಗ್ರಾಹಕರಿಗೆ ಮನೆಯಲ್ಲೇ ಐಸಿಯು ಸೆಟ್‌ ಮಾಡಿಕೊಡುವುದು, ಆಕ್ಸಿಜನ್‌ ಸಿಲಿಂಡರ್‌ ಬಾಡಿಗೆಗೆ ನೀಡುವುದು, ವೆಂಟಿಲೇಟರ್‌ ಪೂರೈಸುವುದು, ಮನೆಯಲ್ಲೇ ಐಸೋಲೇಶನ್‌ ವಾರ್ಡ್‌ ಸಿದ್ಧಪಡಿಸಿ ಚಿಕಿತ್ಸೆಗೆ ನರ್ಸ್‌ಗಳನ್ನು ನಿಯೋಜಿಸುವುದು, ಕಾಲಕಾಲಕ್ಕೆ ವೈದ್ಯರನ್ನು ಕಳಿಸಿ ತಪಾಸಣೆ ನಡೆಸುವುದು ಮುಂತಾದ ‘ಹೋಂ ಕೇರ್‌’ ಸೇವೆಗಳನ್ನು ಆರಂಭಿಸಿವೆ. ಈ ಸೇವೆಗಳನ್ನು ಪಡೆಯಲು ಜನರು ಮುಗಿಬೀಳುತ್ತಿದ್ದಾರೆ. ಇದೇ ವೇಗದಲ್ಲಿ ಹೋಂ ಐಸಿಯುಗೆ ಬೇಡಿಗೆ ಮುಂದುವರೆದರೆ ಇನ್ನು 8-10 ದಿನಗಳಲ್ಲಿ ಈ ಆಸ್ಪತ್ರೆಗಳು ಮನೆಯಲ್ಲೇ ಐಸಿಯು ಸೆಟಪ್‌ ಮಾಡಿಕೊಡುವುದನ್ನು ನಿಲ್ಲಿಸಬೇಕಾಗಿ ಬರಲಿದೆ ಎಂದು ಮೂಲಗಳು ಹೇಳಿವೆ.

ಹೋಂ ಐಸಿಯುಗೆ ಬೇಡಿಕೆ ಏಕೆ:

ದೆಹಲಿಯಲ್ಲಿ ತೀವ್ರ ಅನಾರೋಗ್ಯವಿಲ್ಲದ ಕೊರೋನಾ ರೋಗಿಗಳನ್ನು ಆಸ್ಪತ್ರೆಗೆ ಸೇರಿಸಿಕೊಳ್ಳುತ್ತಿಲ್ಲ. ಅವರು ಮನೆಯಲ್ಲೇ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಸರ್ಕಾರ ನಿಯಮ ಜಾರಿಗೊಳಿಸಿದೆ. ಹೀಗೆ ಮನೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವವರು ಅನಾರೋಗ್ಯ ಉಲ್ಬಣಿಸಿದರೆ ಮಾತ್ರ ಆಸ್ಪತ್ರೆಗೆ ಹೋಗಬೇಕು. ಆದರೆ, ಆಸ್ಪತ್ರೆಗಳಲ್ಲಿ ತಕ್ಷಣ ಬೆಡ್‌ ಸಿಗುವುದಿಲ್ಲ. ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದು ಬೆಡ್‌ ಹುಡುಕಬೇಕು. ಅಷ್ಟರಲ್ಲಿ ಜೀವವೇ ಹೋದರೆ ಏನು ಗತಿ ಎಂದು ಜನರು ಚಿಂತಿತರಾಗಿದ್ದಾರೆ. ಹೀಗಾಗಿ ಹೋಂ ಐಸಿಯುಗೆ ಬೇಡಿಕೆ ಹೆಚ್ಚಾಗಿದೆ.

ಎಷ್ಟು ಹಣ ಖರ್ಚಾಗುತ್ತದೆ:

ಮನೆಯಲ್ಲಿ ಒಂದು ಐಸಿಯು ಸೆಟಪ್‌ ಮಾಡಿಕೊಳ್ಳಲು ಸುಮಾರು 1.5 ಲಕ್ಷ ರು. ಖರ್ಚಾಗುತ್ತದೆ. ಆಕ್ಸಿಜನ್‌ ಸಿಲಿಂಡರ್‌ ಹಾಗೂ ವೆಂಟಿಲೇಟರ್‌ಗಳು ಬಾಡಿಗೆಗೆ ಸಿಗುತ್ತವೆ. ಸೇವೆ ಪೂರೈಕೆದಾರ ಆಸ್ಪತ್ರೆಗಳು ಒಬ್ಬ ನರ್ಸನ್ನು ರೋಗಿಯ 24/7 ಆರೈಕೆಗೆ ನಿಯೋಜಿಸುತ್ತವೆ. ವೈದ್ಯರು ಆಗಾಗ ಭೇಟಿ ನೀಡಿ ಆರೋಗ್ಯ ಪರಿಶೀಲಿಸುತ್ತಾರೆ. ಶ್ರೀಮಂತರು ಹಾಗೂ ಮನೆಯಲ್ಲಿ ಸ್ಥಳಾವಕಾಶ ಇರುವವರು ಈ ಸೌಲಭ್ಯವನ್ನು ಹೆಚ್ಚಾಗಿ ಬಳಸಿಕೊಳ್ಳುತ್ತಿದ್ದಾರೆ. ಕೆಲ ಅಪಾರ್ಟ್‌ಮೆಂಟ್‌ ಸೊಸೈಟಿಗಳೂ ಮುಂದೆ ತಮ್ಮಲ್ಲಿ ದೊಡ್ಡ ಪ್ರಮಾಣದಲ್ಲಿ ಕೊರೋನಾ ಕಾಣಿಸಿಕೊಂಡರೆ ಬೇಕಾಗುತ್ತದೆ ಎಂದು ಸಾಮೂಹಿಕ ಚಿಕಿತ್ಸೆಗೆ ವ್ಯವಸ್ಥೆ ಮಾಡಿಕೊಳ್ಳುತ್ತಿವೆ. ತೀವ್ರ ಉಸಿರಾಟದ ತೊಂದರೆ ಎದುರಾದಾಗ ಬೆಡ್‌ ಹುಡುಕುತ್ತಾ ಆಸ್ಪತ್ರೆಗೆ ಅಲೆಯುವುದರ ಬದಲು ಹೋಂ ಐಸಿಯು ಸೆಟಪ್‌ ಮಾಡಿಕೊಳ್ಳುವುದೇ ಒಳ್ಳೆಯದು ಎಂದು ವೈದ್ಯರು ಕೂಡ ಶಿಫಾರಸು ಮಾಡುತ್ತಿದ್ದಾರೆ.

click me!