ಕಾಲಿಟ್ಟಲ್ಲೆಲ್ಲ ಹಾವು ಕಾಣಿಸಿಕೊಂಡ್ರೆ ಏನಾಗ್ಬೇಡ? ಪಶ್ಚಿಮ ಬಂಗಾಳದ ಗ್ರಾಮವೊಂದರಲ್ಲಿ ಇದೇ ಪರಿಸ್ಥಿತಿ ನಿರ್ಮಾಣವಾಗಿದೆ. ಹಾವುಗಳ ಹಾವಳಿ ಹೆಚ್ಚಾಗಿದೆ. ಇದ್ರಿಂದ ಗ್ರಾಮಸ್ಥರು ಭಯಗೊಂಡಿದ್ದಾರೆ.
ಹಾವು (Snake) ಅಂದ್ರೆ ಪ್ರತಿಯೊಬ್ಬರಿಗೂ ಭಯ ಸಾಮಾನ್ಯ. ಹಾಗಂತ ಹಾವಿನ ಭಯ (fear)ಕ್ಕೆ ಮನೆಯಲ್ಲೇ ಇರಲು ಸಾಧ್ಯವಾ ಅಂತ ನೀವು ಕೇಳ್ಬಹುದು. ಪಶ್ಚಿಮ ಬಂಗಾಳ (West Bengal) ದ ಗ್ರಾಮವೊಂದರಲ್ಲಿ ವಾಸಿಸುವ ಜನರ ಸ್ಥಿತಿ ಈಗ ಇದಕ್ಕಿಂತ ಭಿನ್ನವಾಗಿಲ್ಲ. ಹಾವಿಗೆ ಹೆದರಿ ಅವರು ಮನೆಯಲ್ಲಿ ಕಾಲ ಕಳೆಯುವ ಸ್ಥಿತಿ ನಿರ್ಮಾಣವಾಗಿದೆ. ಸಂಜೆಯಾಗ್ತಿದ್ದಂತೆ ಗ್ರಾಮದ ಜನರು ಮನೆಯಿಂದ ಹೊರಗೆ ಬೀಳೋದಿಲ್ಲ. ಎಲ್ಲಿ, ಯಾವ ಹಾವು ದಾಳಿ ಮಾಡುತ್ತೆ ಎಂಬುದು ಅವರಿಗೆ ತಿಳಿಯುತ್ತಿಲ್ಲ. ಈಗಾಗಲೇ 20 -25 ಮಂದಿ ಹಾವಿನಿಂದ ಕಚ್ಚಿಸಿಕೊಂಡಿದ್ದಾರೆ. ಹಾವಿನ ದಾಳಿಗೆ ಹೆದರಿರುವ ಜನರು ನಿತ್ಯದ ಕೆಲಸವನ್ನು ಆರಾಮವಾಗಿ ಮಾಡಲು ಸಾಧ್ಯವಾಗ್ತಿಲ್ಲ. ಅವರ ನೆಮ್ಮದಿ ಹಾವಿನಿಂದ ಹಾಳಾಗಿದೆ. ಹಾವಿಗೆ ವಾಸಸ್ತಾನವಾಗಿರುವ ಊರು ಪಶ್ಚಿಮ ಬಂಗಾಳದ ಉತ್ತರ 24 ಪರಗಣದ ಕಚುವಾ ಗ್ರಾಮ ಪಂಚಾಯತಿಯ ಗೋಬಿಲಾ (Gobila) ಹಳ್ಳಿ. ಇಲ್ಲಿ ಒಂದೋ ಎರಡೋ ಹಾವಿಲ್ಲ. ಹಾವಿನ ದಂಡೇ ಇದೆ.
ಕಳೆದ ವರ್ಷ ಮಳೆ ನಂತ್ರ ಇಲ್ಲಿನ ಪರಿಸ್ಥಿತಿ ಬದಲಾಗಿದೆ. ಮೊದಲು ಹಾವಿನ ಸಂಖ್ಯೆ ಅತೀ ಕಡಿಮೆ ಇತ್ತು. ಆದ್ರೆ ಮಳೆಗಾಲ ಮುಗಿಯುತ್ತಿದ್ದಂತೆ ಹಾವುಗಳು, ಗೋಬಿಲಾವನ್ನು ತಮ್ಮ ಮನೆ ಮಾಡ್ಕೊಂಡಿವೆ. ಈಗಾಗಲೇ ಮೂರು ಮಂದಿ ಹಾವು ಕಚ್ಚಿ ಸಾವನ್ನಪ್ಪಿದ್ದಾರೆ. 20 -25 ಮಂದಿ ಹಾವಿನಿಂದ ಕಚ್ಚಿಸಿಕೊಂಡಿದ್ದಾರೆ. ಇಲ್ಲಿನ ಜನರು ಮೂಢ ನಂಬಿಕೆಯಲ್ಲಿ ಹೆಚ್ಚು ವಿಶ್ವಾಸವಿಟ್ಟಿದ್ದಾರೆ. ಹಾವು ಕಡಿತಕ್ಕೊಳಗಾದ ತಕ್ಷಣ ವೈದ್ಯರ ಬಳಿ ಹೋಗುವ ಬದಲು, ಮಂತ್ರ – ತಂತ್ರದ ಮೊರೆ ಹೋಗುವವರ ಸಂಖ್ಯೆ ಹೆಚ್ಚಿದೆ. ಹಾಗಾಗಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಸ್ಥಳೀಯ ಅಧಿಕಾರಿಗಳು ಮಾಡ್ತಿದ್ದಾರೆ. ಅರಣ್ಯ ಇಲಾಖೆ ಜೊತೆ ನಿರಂತರ ಸಂಪರ್ಕದಲ್ಲಿರುವಂತೆ ಸೂಚನೆ ನೀಡಲಾಗಿದೆ.
ಈ ಹಾವಿನ ಡ್ರಾಮಾ ನೋಡಿದ್ರೆ ದಂಗಾಗ್ತೀರಿ!
ಈಗಾಗಲೇ ಅನೇಕ ಹಾವುಗಳನ್ನು ಹಿಡಿದು ಅದನ್ನು ಅರಣ್ಯಕ್ಕೆ ಬಿಡಲಾಗಿದೆ. ರಾತ್ರಿ ಸರಿಯಾದ ಬೆಳಕಿನ ವ್ಯವಸ್ಥೆ ಇರದ ಕಾರಣ, ಹಾವು ಎಲ್ಲಿದೆ ಎಂಬುದು ತಿಳಿಯುತ್ತಿಲ್ಲ. ಇದ್ರಿಂದ ಪ್ರಾಣಕ್ಕೆ ಅಪಾಯವಾಗ್ತಿದೆ. ಬೀದಿ ದೀಪದ ವ್ಯವಸ್ಥೆ ಮಾಡ್ಬೇಕು, ಹೆಚ್ಚು ಹೆಚ್ಚು ಹಾವುಗಳನ್ನು ಹಿಡಿಯುವ ಕೆಲಸ ನಡೆಯಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಗ್ರಾಮಸ್ಥರ ಬೇಡಿಕೆಗೆ ಪಂಚಾಯತಿ ಮಣಿದಿದೆ. ಬೀದಿ ದೀಪಗಳ ವ್ಯವಸ್ಥೆ ಆಗ್ತಿದೆ. ಹಾಗೆಯೇ ಚಿಕಿತ್ಸೆ ಬಗ್ಗೆ ಜನರಿಗೆ ಮಾಹಿತಿ ನೀಡಲಾಗ್ತಿದೆ. ಕೆಲವೇ ದಿನಗಳಲ್ಲಿ ಗ್ರಾಮಸ್ಥರಿಗೆ ಹಾವಿನ ಕಾಟ ತಪ್ಪಲ್ಲಿದ್ದು, ಅವರು ನೆಮ್ಮದಿ ಜೀವನ ನಡೆಸಲಿದ್ದಾರೆಂದು ಪಂಚಾಯತಿ ಅಧಿಕಾರಿಗಳು ಆಶ್ವಾಸನೆ ನೀಡಿದ್ದಾರೆ.
undefined
7,500 ವರ್ಷ ಹಳೆಯ 'ಹಾವಿನ-ಮನುಷ್ಯ' ಕಲಾಕೃತಿ ಪತ್ತೆ!
ಹಾವು ಕಡಿತದಿಂದ ಇಷ್ಟು ಸಾವು : ಗ್ರಾಮೀಣ ಭಾರತದಲ್ಲಿ ಹಾವು ಕಡಿತಕ್ಕೆ ಪ್ರತಿ ವರ್ಷ ನೂರಾರು ಮಂದಿ ಸಾವನ್ನಪ್ಪುತ್ತಾರೆ. ಇದನ್ನು ಸಾರ್ವಜನಿಕ ಆರೋಗ್ಯ ಸಮಸ್ಯೆ ಎಂದು ಪರಿಗಣಿಸಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಮಾಹಿತಿಯ ಪ್ರಕಾರ, ಪ್ರಪಂಚದಾದ್ಯಂತ ಪ್ರತಿ ವರ್ಷ ಸುಮಾರು 25 ಲಕ್ಷಕ್ಕೂ ಹೆಚ್ಚು ಮಂದಿ ವಿಷಕಾರಿ ಹಾವು ಕಡಿತಕ್ಕೊಳಗಾಗುತ್ತಾರೆ. ಭಾರತದಲ್ಲಿ ಪ್ರತಿ ವರ್ಷ 10 ಸಾವಿರ ಸಾವುಗಳು ಹಾವಿನ ಕಡಿತದಿಂದ ಸಂಭವಿಸುತ್ತವೆ. ಏಷ್ಯಾದಲ್ಲಿ ಪ್ರತಿ ವರ್ಷ ಸುಮಾರು 4 ಮಿಲಿಯನ್ ಪ್ರಕರಣಗಳು ಮತ್ತು 100,000 ಸಾವುಗಳು ಸಂಭವಿಸುತ್ತವೆ. ಪಶ್ಚಿಮ ಬಂಗಾಳದ ಬಂಕುರಾ ಜಿಲ್ಲೆಯಲ್ಲಿ ಜನವರಿ 2006 ರಿಂದ ಡಿಸೆಂಬರ್ 2008 ರವರೆಗಿನ ಮೂರು ವರ್ಷಗಳ ಅವಧಿಯಲ್ಲಿ ಹಾವು ಕಡಿತದಿಂದ 86 ಮಂದಿ ಸಾವನ್ನಪ್ಪಿದ್ದರು. ಸಾವನ್ನಪ್ಪಿದವರಲ್ಲಿ ಪುರುಷರ ಸಂಖ್ಯೆ ಹೆಚ್ಚಿದ್ದು, ಮಳೆಗಾಲ ಹಾಗೂ ಹಗಲಿನಲ್ಲಿ ಘಟನೆ ನಡೆಯೋದು ಹೆಚ್ಚು ಎಂದು ವರದಿಯಲ್ಲಿ ಹೇಳಲಾಗಿದೆ.