ರೈಲು ಡಿಕ್ಕಿ ತಡೆಯುವ Kavach ಪರೀಕ್ಷೆ ಯಶಸ್ವಿ

By Kannadaprabha NewsFirst Published Mar 5, 2022, 1:19 AM IST
Highlights

ಪರೀಕ್ಷೆಯಲ್ಲಿ ಭಾಗಿಯಾದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್

ಸಿಕಂದರಾಬಾದ್ ನಲ್ಲಿ ಸ್ವಯಂಚಾಲಿತ ರೈಲು ರಕ್ಷಣಾ ವ್ಯವಸ್ಥೆ ಪರೀಕ್ಷೆ

ಡಿಕ್ಕಿ ಹೊಡೆಯದೇ 380 ಮೀ. ಅಂತರದಲ್ಲಿ ನಿಂತ ರೈಲುಗಳು

ನವದೆಹಲಿ: ರೇಲ್ವೆ ಇಲಾಖೆಯು (Indian Railway) ಶೂನ್ಯ ಅಪಘಾತದ ಗುರಿಯನ್ನು ಸಾಧಿಸಲು ‘ಕವಚ್‌’ (Kavach ) ಸ್ವಯಂಚಾಲಿತ ರೈಲು ರಕ್ಷಣಾ ವ್ಯವಸ್ಥೆಯನ್ನು(Automatic Train Protection) ಅಭಿವೃದ್ಧಿ ಪಡಿಸಿದೆ. ಶುಕ್ರವಾರ ‘ಕವಚ್‌’ ವ್ಯವಸ್ಥೆಯ ಪರೀಕ್ಷಾರ್ಥ ಪ್ರಯೋಗವನ್ನು ಸಿಕಂದರಾಬಾದ್‌ನಲ್ಲಿ(Secunderabad  ) ನಡೆಸಲಾಯಿತು. ಪರೀಕ್ಷೆಗೆ ಒಳಪಡಿಸುತ್ತಿರುವ ರೇಲ್ವೆ ಸಚಿವ ಅಶ್ವಿನಿ ವೈಷ್ಣವ್‌ (Ashwini Vaishnav) ಹಾಗೂ ರೇಲ್ವೆ ಬೋರ್ಡಿನ ಮುಖ್ಯಸ್ಥ ಕೂಡಾ ರೈಲಿನಲ್ಲಿದ್ದರು.ವೇಗದಲ್ಲಿ ಮುಖಾಮುಖಿಯಾಗಿ ಬರುತ್ತಿರುವ ಎರಡು ರೈಲುಗಳು ಪರಸ್ಪರ ಡಿಕ್ಕಿ ಹೊಡೆಯದೇ 380 ಮೀಟರ್‌ ದೂರದಲ್ಲೇ ಸ್ವಯಂಚಾಲಿತವಾಗಿ ಸ್ಥಗಿತಗೊಂಡವು.

ಕವಚ್‌ ವಿಶೇಷತೆ: ಕವಚ್‌ ಸ್ವಯಂಚಾಲಿತ ವ್ಯವಸ್ಥೆಯು ರೈಲಿನ ವೇಗವನ್ನು ನಿಯಂತ್ರಿಸುತ್ತದೆ ಹಾಗೂ ರೈಲಿನ ಚಾಲಕ ಬ್ರೇಕ್‌ ಹಾಕಲು ವಿಫಲವಾದಾಗ ಅಪಾಯವನ್ನು ಗುರುತಿಸಿ ಸ್ವಯಂಚಾಲಿತವಾಗಿ ಬ್ರೇಕ್‌ ಕೂಡಾ ಹಾಕುತ್ತದೆ. 160 ಕಿಮೀ ಪ್ರತಿ ಗಂಟೆಯ ವೇಗದಲ್ಲಿ ಚಲಿಸುವ ರೈಲನ್ನು ನಿಯಂತ್ರಿಸುವ ಸಾಮರ್ಥ್ಯ ಹೊಂದಿರುವಂತೆ ಇದನ್ನು ವಿನ್ಯಾಸಗೊಳಿಸಲಾಗಿದೆ.

ಆಕ್ಸಿಡೆಂಟ್ ಸೂಚನೆ ಇದ್ದಾಗ ಲೋಕೋ ಪೈಲಟ್ ಬ್ರೇಕ್ ಹಾಕಲು ವಿಫಲವಾದಲ್ಲಿ ಸ್ವಯಂಚಾಲಿತ ರೈಲು ರಕ್ಷಣಾ ವ್ಯವಸ್ಥೆ "ಕವಚ್" ಮೂಲಕ ರೈಲಿನ ವೇಗವನ್ನು ನಿಯಂತ್ರಣ ಮಾಡಲಾಗುತ್ತದೆ. ಕವಚ್ ಆಡಿಯೊ-ವಿಡಿಯೋ ಮೂಲಕ ಮೊದಲು ಎಚ್ಚರಿಸುತ್ತದೆ. ಅದಕ್ಕೆ ಯಾವುದೇ ಪ್ರತಿಕ್ರಿಯೆ ಇಲ್ಲದಿದ್ದರೆ, ರೈಲಿನಲ್ಲಿ ಸ್ವಯಂಚಾಲಿತ ಬ್ರೇಕ್‌ಗಳನ್ನು ಅನ್ವಯಿಸಲಾಗುತ್ತದೆ. ಇದರೊಂದಿಗೆ, ಈ ವ್ಯವಸ್ಥೆಯು ರೈಲು ನಿಗದಿತ ವಿಭಾಗದ ವೇಗಕ್ಕಿಂತ ವೇಗವಾಗಿ ಓಡಲು ಅನುಮತಿಸುವುದಿಲ್ಲ. ರಕ್ಷಾಕವಚದಲ್ಲಿರುವ RFID ಸಾಧನಗಳನ್ನು ರೈಲು ಎಂಜಿನ್, ಸಿಗ್ನಲ್ ವ್ಯವಸ್ಥೆ, ರೈಲು ನಿಲ್ದಾಣದ  (Railway Station) ಒಳಗೆ ಅಳವಡಿಸಲಾಗುವುದು. ಜಿಪಿಎಸ್ (GPS), ರೇಡಿಯೋ ಫ್ರೀಕ್ವೆನ್ಸಿಯಂತಹ ವ್ಯವಸ್ಥೆಗಳಲ್ಲಿ ಕವಚ್ ತಂತ್ರಜ್ಞಾನ ಕಾರ್ಯ ನಿರ್ವಹಿಸಲಿದೆ. ಪ್ರಯೋಗಗಳ ಆಧಾರದ ಮೇಲೆ, 160 kmph ವೇಗಕ್ಕೆ 'ಕವಚ' ಅನ್ನು ಅನುಮೋದಿಸಲಾಗಿದೆ. ಇಲ್ಲಿಯವರೆಗೆ, ದಕ್ಷಿಣ ಮಧ್ಯ ರೈಲ್ವೆಯ (South Central Railway) ನಡೆಯುತ್ತಿರುವ ಯೋಜನೆಗಳಲ್ಲಿ 1098 ಕಿಲೋಮೀಟರ್ ರೂಟ್  ಮತ್ತು 65 ಲೋಕೋಗಳಲ್ಲಿ ಕವಚವನ್ನು ನಿಯೋಜಿಸಲಾಗಿದೆ.


ಇದು ವಿಶ್ವದಲ್ಲೇ ಅಗ್ಗದ ರೈಲು ಡಿಕ್ಕಿಯಾಗದಂತೆ ತಡೆಯುವ ಸ್ವಯಂಚಾಲಿತ ರಕ್ಷಣಾ ವ್ಯವಸ್ಥೆಯಾಗಿದೆ. ಇದನ್ನು ದೆಹಲಿ-ಮುಂಬೈ ಹಾಗೂ ದೆಹಲಿ- ಹೌರಾ ಕಾರಿಡಾರ್‌ಗಳಲ್ಲಿ ಅನುಷ್ಠಾನಗೊಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. 2022ರ ಬಜೆಟ್‌ನಲ್ಲಿ ಆತ್ಮನಿರ್ಭರ ಭಾರತದಡಿಯಲ್ಲಿ (Atmanirbhar Bharat initiative) ನಿರ್ಮಾಣವಾದ ಕವಚ್‌ ವ್ಯವಸ್ಥೆಯನ್ನು 2000 ಕಿಮೀ ರೈಲುಮಾರ್ಗಗಳಿಗೆ ಅಳವಡಿಸಲು ನಿರ್ಧರಿಸಲಾಗಿತ್ತು. ಸಚಿವ ವೈಷ್ಣವ್‌ ‘ಕವಚ್‌’ ರೈಲಿನ ಡಿಕ್ಕಿಯನ್ನು ಯಶಸ್ವಿಯಾಗಿ ತಡೆದು ಪರೀಕ್ಷಾರ್ಥ ಪ್ರಯೋಗದಲ್ಲಿ ಸಫಲವಾಗಿದೆ ಎಂದು ಟ್ವೀಟ್‌ ಮಾಡಿದ್ದಾರೆ. "ಹಿಂಬದಿಯ ಘರ್ಷಣೆ ಪರೀಕ್ಷೆ ಯಶಸ್ವಿಯಾಗಿದೆ. ಮುಂಭಾಗದಲ್ಲಿ 380 ಮೀಟರ್‌ಗಿಂತ ಮೊದಲು ಕವಚ್ ಸ್ವಯಂಚಾಲಿತವಾಗಿ ಲೋಕೋವನ್ನು ನಿಲ್ಲಿಸಿತು" ಎಂದು ವೈಷ್ಣವ್ ಟ್ವೀಟ್ ಮಾಡಿದ್ದಾರೆ ಹಾಗೂ ಪರೀಕ್ಷೆಯನ್ನು "ಯಶಸ್ವಿ" ಎಂದು ಕರೆದಿದ್ದಾರೆ.

Selfie On Railway Track : ಸೆಲ್ಫಿ ತೆಗೆಯುವಾಗ ರೈಲು ಡಿಕ್ಕಿ, ನಾಲ್ವರ ಸಾವು!
ಕವಚ್ ಕುರಿತಾಗಿ ಹಲವು ವರ್ಷಗಳ ಕಾಲ ಸಂಶೋಧನೆ ನಡೆಸಲಾಗಿತ್ತು. ಹಲವು ವರ್ಷದ ಪ್ರಯತ್ನದ ಫಲವಾಗಿ ಇದರ ಲೋಕಾರ್ಪಣೆಯಾಗಿದೆ. ರೆಡ್ ಸಿಗ್ನಲ್‌ನ “ಜಂಪಿಂಗ್” ಅಥವಾ ಯಾವುದೇ ದೋಷವನ್ನು ಡಿಜಿಟಲ್ ಸಿಸ್ಟಮ್ ಗಮನಿಸಿದಾಗ ರೈಲುಗಳು ತಾವಾಗಿಯೇ ನಿಲ್ಲುತ್ತವೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. 

IRCTC Confirm Ticket App: ರೇಲ್ವೇ ತತ್ಕಾಲ್‌ ಟಿಕೇಟ್ ಪಡೆಯುವುದು ಈಗ ಇನ್ನೂ ಸುಲಭ: ಬುಕ್‌ ಮಾಡುವುದು ಹೇಗೆ?
"ಇದು ಹೆಚ್ಚಿನ ಫ್ರೀಕ್ವೆನ್ಸಿಯ ರೇಡಿಯೊ ಸಂವಹನವನ್ನು ಬಳಸಿಕೊಂಡು ಚಲನೆಯ ನಿರಂತರ ನವೀಕರಣದ ತತ್ವದ ಮೇಲೆ ಕಾರ್ಯನಿರ್ವಹಿಸುತ್ತದೆ. ಇದು SIL-4 (ಸುರಕ್ಷತಾ ಸಮಗ್ರತೆಯ ಮಟ್ಟ - 4) ಗೆ ಅನುಗುಣವಾಗಿರುತ್ತದೆ, ಇದು ಅತ್ಯುನ್ನತ ಮಟ್ಟದ ಸುರಕ್ಷತಾ ಪ್ರಮಾಣೀಕರಣವಾಗಿದೆ" ಎಂದು ರೈಲ್ವೇ ಪ್ರಕಟಣೆಯಲ್ಲಿ ತಿಳಿಸಿದೆ.

click me!