' ಬೆಂಗಳೂರು, 9 ನಗರ ಸ್ಥಿತಿ ಗಂಭೀರ: ಟೆಸ್ಟಿಂಗ್‌, ಐಸೋಲೇಶನ್‌ ಹೆಚ್ಚಿಸಿ'

By Kannadaprabha NewsFirst Published Mar 31, 2021, 7:17 AM IST
Highlights

ಬೆಂಗಳೂರು, 9 ನಗರ ಸ್ಥಿತಿ ಗಂಭೀರ: ಕೇಂದ್ರ| ಕರ್ನಾಟಕದಲ್ಲಿ ಟೆಸ್ಟಿಂಗ್‌, ಐಸೋಲೇಶನ್‌ ಹೆಚ್ಚಿಸಿ| ಲೋಪ ಆಗಬಾರದು: ರಾಜ್ಯಕ್ಕೆ ಕೇಂದ್ರ ಸೂಚನೆ

ನವದೆಹಲಿ(ಮಾ.31): ಕೊರೋನಾ ಸಕ್ರಿಯ ಸೋಂಕಿತರು ತೀರಾ ಅಧಿಕವಾಗಿರುವ ನಗರಗಳ ಪಟ್ಟಿಯನ್ನು 2ನೇ ಬಾರಿ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದು, ಟಾಪ್‌-10ರ ಪಟ್ಟಿಯಲ್ಲಿ ಪುನಃ ಬೆಂಗಳೂರು ಸ್ಥಾನ ಪಡೆದಿದೆ. ಇದರ ನಡುವೆಯೇ ಕೊರೋನಾ ವೈರಸ್‌ ಬಿಕ್ಕಟ್ಟು ದೇಶದಲ್ಲಿ ವಿಷಮ ಸ್ಥಿತಿ ತಲುಪುತ್ತಿದೆ ಎಂದು ಸರ್ಕಾರ ಎಚ್ಚರಿಸಿದೆ.

ಇದೇ ವೇಳೆ, ಕರ್ನಾಟಕವು ಕೊರೋನಾ ಪರೀಕ್ಷೆ ಹೆಚ್ಚಿಸಬೇಕು ಹಾಗೂ ಸೋಂಕಿತರ ಐಸೋಲೇಶನ್‌ ಪ್ರಕ್ರಿಯೆಯನ್ನು ಚುರುಕುಗೊಳಿಸಬೇಕು. ಯಾವುದೇ ಲೋಪ ಆಗಕೂಡದು ಎಂದೂ ಕೇಂದ್ರ ಕಠಿಣ ಸಂದೇಶ ರವಾನಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಸಂಜೆ ಮಾತನಾಡಿದ ಕೇಂದ್ರ ಆರೋಗ್ಯ ಇಲಾಖೆ ಕಾರ್ಯದರ್ಶಿ ರಾಜೇಶ್‌ ಭೂಷಣ್‌, ‘ಅತೀ ಹೆಚ್ಚು ಸಕ್ರಿಯ ಸೋಂಕಿತರನ್ನು ಹೊಂದಿರುವ ದೇಶದ 10 ನಗರಗಳ ಪಟ್ಟಿಯಲ್ಲಿ ಸಿಲಿಕಾನ್‌ ಸಿಟಿ ಬೆಂಗಳೂರು, ದೆಹಲಿ ಹಾಗೂ ಮುಂಬೈ ಸೇರಿದಂತೆ ಮಹಾರಾಷ್ಟ್ರದ 8 ನಗರಗಳಿವೆ. ಇದು ಆತಂಕದ ವಿಚಾರ. ಪುಣೆ (59,475), ಮುಂಬೈ (46,248), ನಾಗ್ಪುರ (45,322), ಥಾಣೆ (35,264), ನಾಶಿಕ್‌ (26,553), ಔರಂಗಾಬಾದ್‌ (21,282), ಬೆಂಗಳೂರು ನಗರ (16,259), ನಾಂದೇಡ್‌ (15,171), ದಿಲ್ಲಿ (15,171) ಹಾಗೂ ಅಹಮದಾಬಾದ್‌(7952)ನಲ್ಲಿ ಅಧಿಕ ಸಕ್ರಿಯ ಸೋಂಕಿತರಾಗಿದ್ದಾರೆ’ ಎಂದರು.

‘ಕಳೆದ ಕೆಲವು ವಾರಗಳಿಂದ ದೇಶದಲ್ಲಿ ಕೊರೋನಾ ವೈರಸ್‌ ಬಿಕ್ಕಟ್ಟು ವಿಷಮ ಸ್ಥಿತಿಯತ್ತ ತಲುಪುತ್ತಿದ್ದು, 5 ಪಟ್ಟು ವೇಗದಲ್ಲಿ ಹೆಚ್ಚುತ್ತಿದೆ. ವಿಶೇಷವಾಗಿ ಕೆಲ ರಾಜ್ಯಗಳಲ್ಲಿ ಪರಿಸ್ಥಿತಿ ತುಂಬಾ ಗಂಭೀರವಾಗಿದೆ. ಮಹಾರಾಷ್ಟ್ರದಲ್ಲಿ ಶೇ.23, ಪಂಜಾಬ್‌ನಲ್ಲಿ ಶೇ.8.82, ಛತ್ತೀಸ್‌ಗಢ ಶೇ.8 ಸಕ್ರಿಯ ಕೇಸು ಇವೆ. ಅಲ್ಲದೆ ಇಡೀ ದೇಶವೇ ಕೊರೋನಾ ವೈರಸ್‌ನ ಅಪಾಯದಲ್ಲಿದ್ದು, ಯಾರೊಬ್ಬರೂ ಅಲಕ್ಷ್ಯ ತೋರಬಾರದು. ವೈರಸ್‌ ತಡೆಗೆ ಆರ್‌ಟಿ-ಪಿಸಿಆರ್‌ ಪರೀಕ್ಷೆಯೊಂದೇ ಮಾರ್ಗ. ಅಲ್ಲದೆ ಹೆಚ್ಚು ಜನನಿಬಿಡ ಪ್ರದೇಶಗಳಲ್ಲಿ ರಾರ‍ಯಪಿಡ್‌ ಆ್ಯಂಟಿಜೆನ್‌ ಪರೀಕ್ಷೆ ಕಡ್ಡಾಯಗೊಳಿಸಬೇಕು’ ಎಂದರು.

‘ಕೊರೋನಾಕ್ಕೆ ತುತ್ತಾದವರನ್ನು ತ್ವರಿತವಾಗಿ ಪತ್ತೆ ಹಚ್ಚಿ ಅವರನ್ನು ಕ್ವಾರಂಟೈನ್‌ ಮಾಡಬೇಕು. ಜೊತೆಗೆ ಅವರ ಸಂಪರ್ಕಿತರನ್ನು ಸಹ ಗುರುತಿಸುವ ಕಾರ‍್ಯವಾಗಬೇಕು. ಸಾರ್ವಜನಿಕ ಮತ್ತು ಖಾಸಗಿ ಆರೋಗ್ಯ ಕೇಂದ್ರಗಳ ಸಂಪನ್ಮೂಲವನ್ನು ಸುಧಾರಿಸಬೇಕು’ ಎಂದು ರಾಜ್ಯಗಳಿಗೆ ಸೂಚಿಸಿದರು.

ಈ ನಡುವೆ, ಸುದ್ದಿಗೋಷ್ಠಿಯಲ್ಲಿದ್ದ ನೀತಿ ಆಯೋಗದ ಆರೋಗ್ಯ ವಿಭಾಗದ ಸದಸ್ಯ ವಿ.ಕೆ. ಪೌಲ್‌, ‘ಸೋಂಕು ವ್ಯಾಪಕವಾಗಿರುವ ಪಂಜಾಬ್‌ನಲ್ಲಿ ಟೆಸ್ಟ್‌ ಹಾಗೂ ಐಸೋಲೇಶನ್‌ ಸರಿಯಾಗಿ ನಡೆಯುತ್ತಿಲ್ಲ. ಇನ್ನು ಮಹಾರಾಷ್ಟ್ರದಲ್ಲಿ ಸಕ್ರಿಯ ಸೋಂಕಿತರ ಸಂಖ್ಯೆ 3.37 ಲಕ್ಷ ತಲುಪಿದೆ. ಫೆಬ್ರವರಿಯಲ್ಲಿ 32 ಇದ್ದ ದೈನಂದಿನ ಸಾವಿನ ಸಂಖ್ಯೆ 118ಕ್ಕೆ ಜಿಗಿದಿದೆ. ಹಾಗೆಯೇ ಕರ್ನಾಟಕದಲ್ಲಿ ಕೂಡ ಟೆಸ್ಟಿಂಗ್‌ ಹಾಗೂ ಐಸೋಲೇಶನ್‌ ಸುಧಾರಿಸಬೇಕು’ ಎಂದು ಹೇಳಿದರು.

‘ನಾವು ತೀವ್ರ ಬಿಕ್ಕಟ್ಟಿನ ಸ್ಥಿತಿಯಲ್ಲಿದ್ದು, ಕೊರೋನಾ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಂಡು ಕೊರೋನಾದಿಂದ ನಾಗರಿಕರನ್ನು ರಕ್ಷಿಸಬೇಕಿದೆ’ ಎಂದರು.

ಲಸಿಕೆ ರಾಮಬಾಣ:

ಹೊಸ ಬ್ರಿಟನ್‌ ಮತ್ತು ಬ್ರೆಜಿಲ್‌ನ ಕೊರೋನಾ ವೈರಸ್‌ ತಳಿಗೂ ದೇಶೀಯ ಲಸಿಕೆಗಳಾದ ಕೋವ್ಯಾಕ್ಸಿನ್‌ ಮತ್ತು ಕೋವಿಶೀಲ್ಡ್‌ ಲಸಿಕೆಗಳು ಪರಿಣಾಮಕಾರಿ. ದಕ್ಷಿಣ ಆಫ್ರಿಕಾದ ತಳಿಯ ವೈರಸ್‌ ಮೇಲೆ ಲಸಿಕೆ ಪರಿಣಾಮಕಾರಿಯೇ ಎಂಬ ಪ್ರಯೋಗ ನಡೆದಿದೆ ಆದರೆ ಭಾರತದ ತಳಿ ಎಂಬುದಿಲ್ಲ ಎಂದು ರಾಜೇಶ್‌ ಭೂಷಣ್‌ ಹೇಳಿದರು.

5 ಪಟ್ಟು ಏರಿಕೆ

- ಕೆಲವು ವಾರಗಳಿಂದ ಸೋಂಕು 5 ಪಟ್ಟು ವೇಗದಲ್ಲಿ ಹೆಚ್ಚಳ

- ದೇಶದಲ್ಲಿ ಕೊರೋನಾ ವೈರಸ್‌ ಬಿಕ್ಕಟ್ಟು ವಿಷಮ ಸ್ಥಿತಿಯತ್ತ

- ಸೋಂಕು ತಡೆಗೆ ಆರ್‌ಟಿ- ಪಿಸಿಆರ್‌ ಪರೀಕ್ಷೆಯೇ ಮಾರ್ಗ

- ಕೊರೋನಾ ಸೋಂಕಿತರನ್ನು ಪತ್ತೆ ಹಚ್ಚಿ ಕ್ವಾರಂಟೈನ್‌ ಮಾಡಿ

- ಸಂಪರ್ಕಿತರನ್ನೂ ಪತ್ತೆ ಹಚ್ಚಿ: ಕೇಂದ್ರ ಆರೋಗ್ಯ ಕಾರ‍್ಯದರ್ಶಿ

click me!