2020ರಲ್ಲಿ ಗರಿಷ್ಠ ಸುಗ್ರೀವಾಜ್ಞೆ ಮೂಲಕ ಮಸೂದೆ ಜಾರಿ: ಕರ್ನಾಟಕ ನಂ.2!

By Kannadaprabha NewsFirst Published Jun 5, 2021, 7:54 AM IST
Highlights

* ಸುಗ್ರೀವಾಜ್ಞೆ ಮೂಲಕ ಮಸೂದೆ ಜಾರಿ: ಕರ್ನಾಟಕ ನಂ.2

* ಕೋವಿಡ್‌ ಹಿನ್ನೆಲೆ ಕಲಾಪ ಸಾಧ್ಯವಾಗದೇ ಸುಗ್ರೀವಾಜ್ಞೆಗೆ ಮೊರೆ

* ಸುಗ್ರೀವಾಜ್ಞೆ ಮೂಲಕ ಮಸೂದೆ ಜಾರಿಯಲ್ಲಿ ಕೇರಳ ನಂ.1

* ಅಧಿವೇಶನದ ಮೂಲಕ ಮಸೂದೆ ಅಂಗೀಕಾರ: ಕರ್ನಾಟಕ ನಂ.1

ನವದೆಹಲಿ(ಜೂ.05): ಕೋವಿಡ್‌ ಹಿನ್ನೆಲೆಯಲ್ಲಿ 2020ರಲ್ಲಿ ಯಾವುದೇ ರಾಜ್ಯಗಳಲ್ಲೂ ವಿಧಾನಸಭೆಯ ಸುಗಮ ಕಲಾಪ ಸಾಧ್ಯವಾಗದ ಕಾರಣ, ಬಹುತೇಕ ರಾಜ್ಯಗಳು ಕಾಯ್ದೆ ಜಾರಿಗೆ ಸುಗ್ರೀವಾಜ್ಞೆಗೆ ಮೊರೆ ಹೋಗಿರುವುದು ವರದಿಯೊಂದರಿಂದ ಬಹಿರಂಗವಾಗಿದೆ. ಹೀಗೆ ಸುಗ್ರೀವಾಜ್ಞೆ ಮೂಲಕ ಕಾಯ್ದೆ ಜಾರಿಗೆ ಮುಂದಾದ ರಾಜ್ಯಗಳಲ್ಲಿ ಕೇರಳ (81)ಮೊದಲ ಸ್ಥಾನದಲ್ಲಿದ್ದರೆ, ಕರ್ನಾಟಕ (24) ನಂ.2, ಮತ್ತು ಉತ್ತರಪ್ರದೇಶ (23) ಮೂರನೇ ಸ್ಥಾನದಲ್ಲಿವೆ ಸ್ಥಾನದಲ್ಲಿದೆ.

ಇನ್ನು ಇರುವ ಸಮಯದಲ್ಲೇ ವಿಧಾನಸಭೆ ಕಲಾಪದ ಮೂಲಕ ಅತಿ ಹೆಚ್ಚು ಮಸೂದೆಗಳನ್ನು ಅಂಗೀಕರಿಸಿದ ರಾಜ್ಯಗಳ ಪೈಕಿ ಕರ್ನಾಟಕ (55) ದೇಶದಲ್ಲೇ ಮೊದಲ ಸ್ಥಾನದಲ್ಲಿದೆ.

‘ಪಿಆರ್‌ಎಸ್‌ ಲೆಜಿಸ್ಲೇಟಿವ್‌’ ಎಂಬ ಸರ್ಕಾರೇತರ ಸಂಸ್ಥೆ 2020ರಲ್ಲಿ ದೇಶದ ವಿವಿಧ ರಾಜ್ಯಗಳ ವಿಧಾನಸಭಾ ಕಲಾಪದ ಮಾಹಿತಿಯನ್ನು ಪರಿಗಣಿಸಿ ವರದಿಯೊಂದನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಈ ಅಂಶಗಳಿವೆ.

ಸುಗ್ರೀವಾಜ್ಞೆ:

ಎಲ್ಲಾ ವಿಧಾನಸಭೆಗಳ ಅಂಕಿ ಅಂಶ ಪರಿಗಣಿಸಿದರೆ ಕಳೆದ ವರ್ಷ ಸರಾಸರಿ 14 ಸುಗ್ರೀವಾಜ್ಞೆ ಹೊರಡಿಸಲಾಗಿದೆ. ಇನ್ನು ರಾಜ್ಯವಾರು ಬಂದರೆ ಕೇರಳ (81), ಕರ್ನಾಟಕ (24), ಉತ್ತರಪ್ರದೇಶ (23), ಮಹಾರಾಷ್ಟ್ರ (21), ಆಂಧ್ರಪ್ರದೇಶ (16) ಹೆಚ್ಚು ಸುಗ್ರೀವಾಜ್ಞೆ ಹೊರಡಿಸಿದ ಟಾಪ್‌ 5 ರಾಜ್ಯಗಳಾಗಿವೆ. ಕೇರಳದಲ್ಲಿ ಹೆಚ್ಚಿನ ಅವಧಿಗೆ ಅಧಿವೇಶನ ನಡೆಸಲು ಸಾಧ್ಯವಾಗದ ಕಾರಣ ಬಹುತೇಕ ಸುಗ್ರೀವಾಜ್ಞೆಗಳನ್ನು ವಿಧಾನಸಭೆಯಲ್ಲಿ ಮಸೂದೆ ಸ್ವರೂಪದಲ್ಲಿ ಅಂಗೀಕರಿಸಲು ಸಾಧ್ಯವಾಗಿಲ್ಲ. ಹೀಗಾಗಿ ಪದೇ ಪದೇ ಹಳೆಯ ಸುಗ್ರಿವಾಜ್ಞೆಗಳನ್ನೇ ಮರುಜಾರಿ ಮಾಡಿದ ಪರಿಣಾಮ ಅಲ್ಲಿ ಹೊರಡಿಸಿದ ಸುಗ್ರೀವಾಜ್ಞೆಗಳ ಪ್ರಮಾಣ 81ಕ್ಕೆ ಏರಿದೆ.

ಸಂಸತ್‌ ಅಥವಾ ವಿಧಾನಸಭೆ ಅಧಿವೇಶನ ನಡೆಯದಿರದ ವೇಳೆ, ಯಾವುದೇ ಕಾಯ್ದೆ ಜಾರಿ ಮಾಡಬೇಕಾದ ತುರ್ತು ಅನಿವಾರ್ಯತೆ ಬಂದಾಗ ಸರ್ಕಾರಗಳು ಸುಗ್ರೀವಾಜ್ಞೆಗೆ ಮೊರೆ ಹೋಗುತ್ತವೆ. ಹೀಗೆ ಹೊರಡಿಸಿದ್ದ ಸುಗ್ರೀವಾಜ್ಞೆಯನ್ನು ಮುಂದಿನ 6 ವಾರಗಳ ಒಳಗೆ ವಿಧಾನಸಭೆಯಲ್ಲಿ ಮಸೂದೆ ಸ್ವರೂಪದಲ್ಲಿ ಮಂಡಿಸಿ ಅದಕ್ಕೆ ಅಂಗೀಕಾರ ಪಡೆದುಕೊಳ್ಳಬೇಕಾಗುತ್ತದೆ. ಒಂದು ವೇಳೆ ಅಧಿವೇಶನ ಸಾಧ್ಯವಾಗದೇ ಇದ್ದಲ್ಲಿ ಸುಗ್ರೀವಾಜ್ಞೆಯನ್ನು ಮರು ಜಾರಿ ಮಾಡಬೇಕಾಗುತ್ತದೆ. ಆದರೆ ವಿಧಾನಸಭೆ ಅದರಲ್ಲೂ ವಿಪಕ್ಷಗಳ ಪರಿಶೀಲನೆಯಿಂದ ಕಾಯ್ದೆಯನ್ನುಹೊರಗಿಡಲೆಂದೇ ಸರ್ಕಾರಗಳು ಸುಗ್ರೀವಾಜ್ಞೆಗೆ ಮೊರೆ ಹೋಗುತ್ತವೆ ಎಂಬುದು ವಿಪಕ್ಷಗಳ ದೂರಾಗಿರುತ್ತದೆ.

ತರಾತುರಿ:

2020ರಲ್ಲಿ ಸರ್ಕಾರಗಳು ವಿಧಾನಸಭೆಯಲ್ಲಿ ಮಸೂದೆ ಅಂಗೀಕಾರದಲ್ಲೂ ಭಾರೀ ತರಾತುರಿ ತೋರಿವೆ. ಶೇ.59ರಷ್ಟುಮಸೂದೆಗಳನ್ನು ಮಂಡಿಸಿದ ದಿನ ಮತ್ತು ಶೇ.14 ಮಸೂದೆಗಳನ್ನು ಮಂಡಿಸಿದ ಒಂದು ದಿನದೊಳಗಾಗಿ ಅಂಗೀಕರಿಸಲಾಗಿದೆ. ಹರ್ಯಾಣದಲ್ಲಿ ಮಂಡಿಸಿದ 35 ಮಸೂದೆಗಳ ಪೈಕಿ 34 ಅನ್ನು ಅದೇ ದಿನ ಅಂಗೀಕರಿಸಲಾಗಿದೆ. ಇನ್ನು ಉತ್ತರಪ್ರದೇಶದಲ್ಲಿ 37ರ ಪೈಕಿ 32 ಅದೇ ದಿನ ಅಂಗೀಕಾರವಾಗಿದೆ.

ಕಲಾಪದ ಮೂಲಕ ಕಾಯ್ದೆ: ರಾಜ್ಯ ನಂ.1

ಇನ್ನು ಕಳೆದ ವರ್ಷ ವಿಧಾನಸಭೆಯ ಕಲಾಪದ ಮೂಲಕ ಸರಾಸರಿ 23 ಕಾನೂನು (ಧನ ವಿನಿಯೋಗ ಹೊರುತುಪಡಿಸಿ) ಅಂಗೀಕರಿಸಲಾಗಿದೆ. ಇನ್ನು ರಾಜ್ಯವಾರು ಪಟ್ಟಿನೋಡಿದರೆ ಕರ್ನಾಟಕ 55 ಮಸೂದೆ ಅಂಗೀಕಾರದೊಂದಿಗೆ ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ಆಂಧ್ರಪ್ರದೇಶ (41), ಕೇರಳ (3) ರಾಜ್ಯಗಳಿವೆ.

ಕರ್ನಾಟಕ ದಾಖಲೆ:

ಯಾವುದೇ ಮಸೂದೆ ಅಂಗೀಕಾರಕ್ಕೆ ಅತಿ ಹೆಚ್ಚು ದಿನ (31) ತೆಗೆದುಕೊಂಡ ಕರ್ನಾಟಕದ ಹೆಸರಿನಲ್ಲಿದೆ. ನಂತರದ ಸ್ಥಾನದಲ್ಲಿ ರಾಜಸ್ಥಾನ (29), ಹಿಮಾಚಲಪ್ರದೇಶ (25) ರಾಜ್ಯಗಳಿವೆ.

click me!