ನ್ಯಾಯಾಂಗದ ಭೀಷ್ಮ, ನೀರಾವರಿ ಹೋರಾಟದ ಧ್ವನಿ ನಾರಿಮನ್‌ : ಐಎಎಸ್ ಆಗಬೇಕೆಂದುಕೊಂಡಿದ್ದವರು ವಕೀಲರಾದರು

By Kannadaprabha NewsFirst Published Feb 22, 2024, 7:02 AM IST
Highlights

ಕಾವೇರಿ ಹಾಗೂ ಕೃಷ್ಣಾ ಸೇರಿದಂತೆ ಅನೇಕ ಜಲ ವಿವಾದಗಳ ವಿಷಯದಲ್ಲಿ ಕರ್ನಾಟಕದ ಪರ ವಾದ ಮಂಡಿಸಿ ಕನ್ನಡಿಗರ ಮನೆಮಾತಾಗಿದ್ದ ಹಿರಿಯ ವಕೀಲ ಫಾಲಿ ಎಸ್ ನಾರಿಮನ್ ನಿಧನದೊಂದಿಗೆ ಭಾರತದ ಕಾನೂನು ವಲಯದ ದೊಡ್ಡ ಪರದೆಯೇ ಸರಿದು ಹೋದಂತಾಗಿದೆ.

ನವದೆಹಲಿ: ನಾರಿಮನ್‌ ನಿಧನದೊಂದಿಗೆ ಭಾರತದ ಕಾನೂನು ವಲಯದ ದೊಡ್ಡ ಪರದೆಯೇ ಸರಿದುಹೋದಂತಾಗಿದೆ. ಕರ್ನಾಟಕದ ಕೃಷ್ಣಾ-ಕಾವೇರಿ ವಿವಾದ, ಭೋಪಾಲ್ ಗ್ಯಾಸ್‌ ದುರಂತ, ಕೇಶವಾನಂದ ಭಾರತಿ ಪ್ರಕರಣ, ಟಿಎಂಎ ಪೈ ಪ್ರಕರಣ, ಜಯಲಲಿತಾ ಪ್ರಕರಣ.. ಹೀಗೆ ದೇಶದ ಅನೇಕ ಪ್ರಮುಖ ಪ್ರಕರಣಗಳಲ್ಲಿ ಅವರು ವಾದ ಮಂಡಿಸಿದ್ದರು. ನ್ಯಾಯಾಧೀಶರನ್ನು ನೇಮಕ ಮಾಡುವ ಕೊಲಿಜಿಯಂ ವ್ಯವಸ್ಥೆಯನ್ನು ಬದಲಿಸಲು ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗವನ್ನು ಸ್ಥಾಪಿಸುವ ಸಾಂವಿಧಾನಿಕ ತಿದ್ದುಪಡಿಗೆ ಅವರು ಸವಾಲು ಹಾಕಿ ಅದರ ವಿರುದ್ಧ ವಾದಿಸಿದ್ದರು. ವಾಸ್ತವವಾಗಿ ನಾರಿಮನ್‌ ಐಎಎಸ್‌ ಅಧಿಕಾರಿ ಆಗಬೇಕೆಂದಿದ್ದರು. ಆದರೆ, ವಕೀಲರಾದರು. ಇದನ್ನು ಮಾಧ್ಯಮ ಸಂದರ್ಶನವೊಂದರಲ್ಲಿ ಅವರೇ ಹೇಳಿದ್ದರು. ಅವರ ಜೀವನ ಕುರಿತ ಪಕ್ಷಿನೋಟ ಇಲ್ಲಿದೆ.

ಐಎಎಸ್‌ ಅಧಿಕಾರಿ ಆಗಲಿಲ್ಲ, ವಕೀಲರಾದರು

ನಾರಿಮನ್‌ ಐಎಎಸ್‌ ಅಧಿಕಾರಿ ಆಗಬೇಕೆಂದಿದ್ದರು. ಆದರೆ ಆಗಿದ್ದು ವಕೀಲ. ಮಾಧ್ಯಮವೊಂದಕ್ಕೆ ಅವರು ಸಂದರ್ಶನ ನೀಡಿ, ‘ನಾನು ಭಾರತೀಯ ನಾಗರಿಕ ಸೇವಾ ಪರೀಕ್ಷೆಯನ್ನು ತೆಗೆದುಕೊಳ್ಳಬೇಕೆಂದು ನನ್ನ ತಂದೆ ಬಯಸಿದ್ದರು, ಆದರೆ ಅವರು ಅದರ ಖರ್ಚು ವೆಚ್ಚ ಭರಿಸಲು ಸಾಧ್ಯವಿಲ್ಲ ಎಂದು ನನಗೆ ತಿಳಿದಿತ್ತು. ನಾನು ನನ್ನ ಬಿ.ಎ ಪದವಿಯಲ್ಲಿ ಎರಡನೇ ದರ್ಜೆಯನ್ನು ಗಳಿಸಿದ್ದೆ ಮತ್ತು ನನಗೆ ವಿಜ್ಞಾನ ಅಥವಾ ಗಣಿತದ ಪ್ರಜ್ಞೆ ಇಲ್ಲದ ಕಾರಣ ಕಾನೂನು ಹೊರತುಪಡಿಸಿ ಬೇರೆ ಆಯ್ಕೆ ಇರಲಿಲ್ಲ. ಹೀಗಾಗಿ ವಕೀಲನಾದೆ’ ಎಂದಿದ್ದರು.

ಕರ್ನಾಟಕ ಪರ ಕಾವೇರಿ ವಾದ ಮಂಡಿಸಿದ ಸುಪ್ರೀಂಕೋರ್ಟ್ ಹಿರಿಯ ವಕೀಲ ಪಾಲಿ ನಾರಿಮನ್ ಇನ್ನಿಲ್ಲ

1950ರಲ್ಲಿ ವಕೀಲಿಕೆ ಶುರು

1950ರಲ್ಲಿ ವಕೀಲಿ ವೃತ್ತಿ ಆರಂಭಿಸಿದ ಅವರು, ಬಾಂಬೆ ಹೈಕೋರ್ಟ್ ನಲ್ಲಿ ಮೊದಲು ವೃತ್ತಿ ಶುರು ಮಾಡಿದರು. ಅವರ ಅಸಾಧಾರಣ ಪರಿಣತಿ ಅವರಿಗೆ 1961ರಲ್ಲಿ ಹಿರಿಯ ವಕೀಲರ ಹುದ್ದೆಯನ್ನು ಗಳಿಸಿಕೊಟ್ಟಿತು. ನಂತರ ಅವರು 1971ರಲ್ಲಿ ಹಿರಿಯ ವಕೀಲರಾಗಿ ಸುಪ್ರೀಂ ಕೋರ್ಟ್‌ ಪ್ರವೇಶಿಸಿದರು. ಕೊನೆಯವರೆಗೂ ಈ ಸ್ಥಾನವನ್ನು ಉಳಿಸಿಕೊಂಡರು. ಅವರು 1972 ರಿಂದ 1975 ರವರೆಗೆ ಭಾರತದ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿ ಸೇವೆ ಸಲ್ಲಿಸಿದರು. ಅಂದಿನ ಇಂದಿರಾ ಗಾಂಧಿ ಸರ್ಕಾರ ಹೇರಿದ ತುರ್ತು ಪರಿಸ್ಥಿತಿಯನ್ನು ಪ್ರತಿಭಟಿಸಿ ಅವರು ಹುದ್ದೆಯಿಂದ ಕೆಳಗಿಳಿದರು.

ಭೋಪಾಲ್‌ ಅನಿಲ ದುರಂತದ ವಾದ

ಕನಿಷ್ಠ 3,800 ಜನರನ್ನು ಬಲಿತೆಗೆದುಕೊಂಡ ಮತ್ತು ಲಕ್ಷಾಂತರ ಜನರ ಮೇಲೆ ಪರಿಣಾಮ ಬೀರಿದ 1984 ರ ಭೋಪಾಲ್ ಅನಿಲ ದುರಂತದ ನಂತರ ಬೃಹತ್‌ ಕಾನೂನು ಹೋರಾಟ ನಡೆಯಿತು. ಈ ವೇಳೆ ನಾರಿಮನ್ ಅವರು ಆರೋಪ ಹೊತ್ತಿದ್ದ ಕಂಪನಿಯಾದ ಯೂನಿಯನ್ ಕಾರ್ಬೈಡ್ ಪರವಾಗಿ ಹಾಜರಾಗಿದ್ದರು. ಆದರೆ ಬಹಳ ಸಮಯದ ನಂತರ ಅವರು ಆ ನಿರ್ಧಾರಕ್ಕೆ ವಿಷಾದಿಸಿದರು.

ನ್ಯಾಯಾಂಗ ನೇಮಕ ಆಯೋಗ ವಿರೋಧಿಸಿದ್ದರು

ನ್ಯಾಯಾಧೀಶರನ್ನು ನೇಮಕ ಮಾಡುವ ಕೊಲಿಜಿಯಂ ವ್ಯವಸ್ಥೆಯನ್ನು ಬದಲಿಸಲು ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗವನ್ನು ಸ್ಥಾಪಿಸುವ ಸಾಂವಿಧಾನಿಕ ತಿದ್ದುಪಡಿಗೆ ಅವರು ಸವಾಲು ಹಾಕಿ ಅದರ ವಿರುದ್ಧ ವಾದಿಸಿದ್ದರು. ಪ್ರಸ್ತಾವಿತ ಆಯೋಗವು ನ್ಯಾಯಾಂಗ ಸ್ವಾತಂತ್ರ್ಯಕ್ಕೆ ಸಂಪೂರ್ಣ ವಿರುದ್ಧವಾಗಿದೆ ಎಂದಿದ್ದರು. ನಾರಿಮನ್‌ ವಾದಕ್ಕೆ ಜಯ ಸಿಕ್ಕಿತು.

ಟಿಎಂಎ ಪೈ ಪ್ರಕರಣ

ಟಿಎಂಎ ಪೈ ಫೌಂಡೇಶನ್ ಪ್ರಕರಣದಲ್ಲಿ ಉನ್ನತ ನ್ಯಾಯಾಲಯವು ಸಂವಿಧಾನದ 19 (1) (ಜಿ) ವಿಧಿಯ ಅಡಿಯಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಸ್ವಾಯತ್ತತೆಯನ್ನು ಗುರುತಿಸಿತು ಮತ್ತು ಸರ್ಕಾರದ ಅತಿಯಾದ ಹಸ್ತಕ್ಷೇಪವಿಲ್ಲದೆ ಕಾರ್ಯನಿರ್ವಹಿಸಲು ಅವಕಾಶ ನೀಡಿತು. ಈ ಪ್ರಕರಣದಲ್ಲಿ ನಾರಿಮನ್‌ ವಾದ ಮಂಡಿಸಿದ್ದರು.

ಐತಿಹಾಸಿಕ ಕೇಶವಾನಂದ ಭಾರತಿ ಪ್ರಕರಣ

ಸ್ವತಂತ್ರ ಭಾರತದ ಅತ್ಯಂತ ಮಹತ್ವದ ಪ್ರಕರಣವಾದ ಕೇಶವಾನಂದ ಭಾರತಿ ಪ್ರಕರಣದಲ್ಲಿ ನಾನಿ ಪಾಲ್ಖಿವಾಲಾ ಅವರಿಗೆ ನಾರಿಮನ್ ಸಹಾಯ ಮಾಡಿದರು. 1973 ರ ತೀರ್ಪು ಸಂವಿಧಾನದ ‘ಮೂಲ ರಚನೆ ಸಿದ್ಧಾಂತ’ವನ್ನು ರೂಪಿಸಿತು, ಸಂವಿಧಾನವನ್ನು ತಿದ್ದುಪಡಿ ಮಾಡುವ ಸಂಸತ್ತಿನ ಅಧಿಕಾರವನ್ನು ಮೊಟಕುಗೊಳಿಸಿತು ಮತ್ತು ಯಾವುದೇ ತಿದ್ದುಪಡಿಯು ಕಾನೂನು ಬಾಹಿರ ಎಂದು ಕಂಡುಬಂದಲ್ಲಿ, ಅದರ ಮರುಪರಿಶೀಲನೆ ಅಧಿಕಾರವನ್ನು ನ್ಯಾಯಾಂಗಕ್ಕೆ ನೀಡಿತು.

click me!