ವಾರದ ಹಿಂದೆ ಮಹಾರಾಷ್ಟ್ರದಲ್ಲೂ ಶಿರಚ್ಛೇದ?: ವ್ಯಾಪಾರಿ ಹತ್ಯೆಗೂ ಟೇಲರ್‌ ಶಿರಚ್ಛೇದಕ್ಕೂ ಸಾಮ್ಯತೆ!

By Suvarna NewsFirst Published Jun 30, 2022, 10:08 AM IST
Highlights

* ವಾರದ ಹಿಂದೆ ಅಮರಾವತಿಯಲ್ಲಿ ವ್ಯಾಪಾರಿ ಹತ್ಯೆ ನಡೆದಿತ್ತು

* ವ್ಯಾಪಾರಿ ಹತ್ಯೆಗೂ ಟೇಲರ್‌ ಶಿರಚ್ಛೇದಕ್ಕೂ ಸಾಮ್ಯತೆ?

*  ಕತ್ತು ಸೀಳಿ ಬರ್ಬರವಾಗಿ ಅವರ ಹತ್ಯೆ ಮಾಡಲಾಗಿತ್ತು

* ವ್ಯಾಪಾರಿ ಕೊಲ್ಹೆ ನೂಪುರ್‌ ಬೆಂಬಲಿಸಿ ಪೋಸ್ಟ್‌ ಶೇರ್‌ ಮಾಡಿದ್ದರು

ಮಹಾರಾಷ್ಟ್ರ(ಜೂ.30) ರಾಜಸ್ಥಾನದ ಉದಯಪುರದಲ್ಲಿ ಟೇಲರ್‌ ಶಿರಚ್ಛೇದ ನಡೆದ ಮಾದರಿಯಲ್ಲೇ ಮಹಾರಾಷ್ಟ್ರದ ಅಮರಾವತಿಯಲ್ಲಿ 1 ವಾರದ ಹಿಂದೆ ಇಂಥದ್ದೇ ಹತ್ಯೆ ನಡೆದಿತ್ತು ಎಂದು ತಿಳಿದುಬಂದಿದೆ. ವೈದ್ಯಕೀಯ ಉಪಕರಣಗಳ ವ್ಯಾಪಾರಿ ಉದಯ್‌ ಕೊಲ್ಹೆ ಅವರನ್ನು ಹಂತಕರು ಹರಿತವಾದ ಆಯುಧಗಳಿಂದ ಹಲ್ಲೆ ಮಾಡಿ ಅವರ ಕತ್ತು ಸೀಳಿ ಕೊಲೆ ಮಾಡಿದ್ದರು. ಈ ಕೊಲೆ ಕೂಡ ಬಿಜೆಪಿ ಮಾಜಿ ವಕ್ತಾರೆ ನೂಪುರ್‌ ಶರ್ಮಾ ಪರ ಮಾಡಿದ್ದ ಸೋಷಿಯಲ್‌ ಮೀಡಿಯಾ ಪೋಸ್ಟ್‌ನ ಪರಿಣಾಮ ಆಗಿರಬಹುದು ಎಂದು ಶಂಕಿಸಲಾಗಿದೆ.

ಜೂನ್‌ 21ರಂದು ಕೊಲ್ಹೆ ಅವರು ಸ್ಕೂಟರ್‌ನಲ್ಲಿ ಸಾಗುತ್ತಿದ್ದಾಗ, ಹರಿತ ಆಯುಧದಿಂದ ಅವರ ಕತ್ತು ಸೀಳಿ ಸಾಯಿಸಲಾಗಿತ್ತು. ಆಗ ಅವರ ಬಳಿ 35 ಸಾವಿರ ರು. ಹಣ ಇದ್ದರೂ ಅದನ್ನು ಹಂತಕರು ಮುಟ್ಟದೇ ಪರಾರಿಯಾಗಿದ್ದರು. ಬಳಿಕ ಜೂ.23ರಂದು ಮುದಾಸಿರ್‌ ಅಹ್ಮದ್‌, ಶಾರುಖ್‌ ಪಠಾಣ್‌, ಅಬ್ದುಲ್‌ ತೌಫೀಖ್‌ ಶೇಖ್‌, ಶೋಯೆಬ್‌ ಖಾನ್‌ ಹಾಗೂ ಅತೀಕ್‌ ರಷೀದ್‌ ಎಂಬ ಶಂಕಿತರನ್ನು ಬಂಧಿಸಲಾಗಿತ್ತು. ಅವರ ವಿಚಾರಣೆ ಇನ್ನೂ ನಡೆಯುತ್ತಿದ್ದರೂ ಹತ್ಯೆಯ ನಿಖರ ಕಾರಣ ತಿಳಿದುಬಂದಿಲ್ಲ.

Latest Videos

ಟೇಲರ್‌ ಶಿರಚ್ಛೇದ ಮಾಡಿದವರಿಗೆ ಕಠಿಣ ಶಿಕ್ಷೆ: ಎಚ್‌ಡಿಕೆ ಆಗ್ರಹ

ಆದರೆ ಅಮರಾವತಿ ಬಿಜೆಪಿ ಮುಖಂಡರು ಹೇಳುವ ಪ್ರಕಾರ, ಕೊಲ್ಹೆ ಅವರು ಪ್ರವಾದಿ ಮೊಹಮ್ಮದರ ಬಗ್ಗೆ ಹೇಳಿಕೆ ನೀಡಿದ್ದ ನೂಪುರ್‌ ಶರ್ಮಾರನ್ನು ಬೆಂಬಲಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹಲವು ಪೋಸ್ಟ್‌ಗಳನ್ನು ಶೇರ್‌ ಮಾಡಿದ್ದರು. ಇದೇ ಅವರ ಸಾವಿಗೆ ಕಾರಣ ಆಗಿರಬಹುದು ಎನ್ನಲಾಗಿದೆ.

ಉದಯಪುರದಲ್ಲಿ ನಡೆದಿದ್ದೇನು?

ಉದಯ್‌ಪುರದ ಧನಮಂಡಿ ಪ್ರದೇಶದಲ್ಲಿರುವ ಕನ್ಹಯ್ಯಾ ಲಾಲ್‌ ಎಂಬಾತನ ಟೈಲರ್‌ ಅಂಗಡಿಗೆ ಆಗಮಿಸಿದ ಮಹಮ್ಮದ್‌ ರಿಯಾಜ್‌ ಅಖ್ತಾರಿ ಮತ್ತು ಮಹಮ್ಮದ್‌ ಬಟ್ಟೆಹೊಲೆಸುವ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ಅಂಗಿಯ ಅಳತೆಯನ್ನು ಕನ್ಹಯ್ಯಾ ಲಾಲ್‌ ತೆಗೆದುಕೊಳ್ಳುವ ವೇಳೆ ಏಕಾಏಕಿ ದೊಡ್ಡ ಆಯುಧವೊಂದನ್ನು ಹೊರತೆಗೆದ ರಿಯಾಜ್‌ ಕತ್ತು ಕತ್ತರಿಸಿ ಹಾಕಿದ್ದಾನೆ. ಈ ಇಡೀ ಘಟನಾವಳಿಗಳನ್ನು ಮೊಹಮ್ಮದ್‌ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾನೆ. ಬಳಿಕ ಇಬ್ಬರೂ ಅಲ್ಲಿಂದ ಪರಾರಿಯಾಗಿದ್ದಾರೆ.

ಕೊಲೆಗೆ ಕೊಲೆಯಿಂದಲೇ ಉತ್ತರ: ಕೆ.ಎಸ್‌.ಈಶ್ವರಪ್ಪ

ಇದಾದ ಕೆಲ ಹೊತ್ತಿನಲ್ಲೇ ಜಾಲತಾಣದಲ್ಲಿ ವಿಡಿಯೋವೊಂದನ್ನು ಪೋಸ್ಟ್‌ ಮಾಡಿದ ಧರ್ಮಾಂಧರು, ಇಸ್ಲಾಂಗೆ ಮಾಡಿದ ಅವಮಾನಕ್ಕೆ ಸೇಡು ತೀರಿಸಿಕೊಳ್ಳಲು ವ್ಯಕ್ತಿಯೊಬ್ಬನನ್ನು ಹತ್ಯೆ ಮಾಡಿದ್ದಾಗಿ ಘೋಷಣೆ ಮಾಡಿದ್ದಾರೆ. ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನೂ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದು, ನಮ್ಮ ಕತ್ತಿ ಅವರನ್ನು ಬಲಿ ಪಡೆಯಲಿದೆ ಎಂದಿದ್ದಾರೆ. ಅಲ್ಲದೆ ಪರೋಕ್ಷವಾಗಿ ನೂಪುರ್‌ ಶರ್ಮಾ ಅವರ ಹೆಸರನ್ನೂ ಪ್ರಸ್ತಾಪಿಸಿದ್ದಾರೆ.

ಈ ವಿಡಿಯೋ ಎಲ್ಲೆಡೆ ಹರಿದಾಡಿದ ಬೆನ್ನಲ್ಲೇ ಉದಯ್‌ಪುರ ಸೇರಿದಂತೆ ಎಲ್ಲೆಡೆ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದ್ದು, ಕೋಮುಗಲಭೆಯ ಭೀತಿ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಮತ್ತು ನೆರೆಯ ರಾಜ್ಯಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

click me!