ಮಳೆಗಾಲದಲ್ಲಿ ಆರೋಗ್ಯ ಸಂರಕ್ಷಣೆಗೆ ಏನೆಲ್ಲ ಮಾಡ್ಬೇಕು ಗೊತ್ತಾ?

By Suvarna NewsFirst Published Jul 9, 2020, 4:21 PM IST
Highlights

ಮಳೆಗಾಲ ಅಂದ್ರೆ ಕಾಯಿಲೆಗಳ ಸೀಸನ್. ಶೀತ, ಜ್ವರ ಕಾಮನ್. ಆದ್ರೆ ಈ ಬಾರಿ ಕೊರೋನಾ ಎಲ್ಲೆಡೆ ಹಬ್ಬಿರುವ ಕಾರಣ ಸಾಮಾನ್ಯ ಶೀತ, ಜ್ವರ ಬಂದ್ರು ಭಯ ಮೂಡೋದು ಸಹಜ. ಹೀಗಾಗಿ ಮಳೆಗಾಲದಲ್ಲಿ ಆರೋಗ್ಯ ಕಾಳಜಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡೋದು ಅಗತ್ಯ.

ಜಿಟಿ ಜಿಟಿ ಮಳೆಗೆ ಮನೆಯೊಳಗೆ ಬೆಚ್ಚಗೆ ಕುಳಿತು ಕಾಫಿ ಹೀರುವ ಸುಖವೇ ಬೇರೆ. ಆದ್ರೆ ಮಳೆಗಾಲ ಅಂದ್ರೆ ರೋಗ-ರುಜಿನಗಳ ಸೀಸನ್ ಕೂಡ. ಹೀಗಾಗಿ ಈ ಸಮಯದಲ್ಲಿ ಮಕ್ಕಳಿಂದ ಹಿಡಿದು ವೃದ್ಧರ ತನಕ ಪ್ರತಿಯೊಬ್ಬರೂ ಆರೋಗ್ಯದ ಬಗ್ಗೆ ಒಂದಿಷ್ಟು ಮುಂಜಾಗ್ರತೆ ವಹಿಸೋದು ಅಗತ್ಯ. ಈಗಂತೂ ಕೊರೋನಾ ಎಂಬ ಹೆಮ್ಮಾರಿ ಜಗತ್ತನ್ನೇ ತಲ್ಲಣಗೊಳಿಸಿರುವ ಕಾರಣ ಮಳೆಗಾಲದಲ್ಲಿ ಸರ್ವೇಸಾಮಾನ್ಯವಾಗಿ ಕಾಣಿಸಿಕೊಳ್ಳುವ ಶೀತ, ಕೆಮ್ಮು ಹಾಗೂ ಜ್ವರ ಬಂದ್ರೂ ಬೆಚ್ಚಿ ಬೀಳುವಂತಹ ಪರಿಸ್ಥಿತಿಯಿದೆ. ಅಷ್ಟೇ ಅಲ್ಲದೆ,ಕೊರೋನಾ ಅಲ್ಲದ ಶೀತ, ಕೆಮ್ಮು ಹಾಗೂ ಜ್ವರಕ್ಕೆ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯೋದು ಕೂಡ ಕಷ್ಟದ ಕೆಲಸವೇ ಆಗಿದೆ. ಹೀಗಾಗಿ ಈ ಬಾರಿಯ ಮಳೆಗಾಲದಲ್ಲಿ ಹಿಂದೆಂದಿಗಿಂತಲೂ ಹೆಚ್ಚು ಆರೋಗ್ಯ ಕಾಳಜಿ ವಹಿಸಬೇಕಾದ ಅಗತ್ಯವಿದೆ. ಹಾಗಾದ್ರೆ ಮಳೆಗಾಲದಲ್ಲಿ ಆರೋಗ್ಯ ಸಂರಕ್ಷಣೆ ಹೇಗೆ?

ಲೈಂಗಿಕ ನಿರಾಸಕ್ತಿಯೇ? ಆಹಾರವೇ ಸೆಕ್ಸ್ ಡ್ರೈವ್ ಕುಗ್ಗಿಸ್ತಿರಬಹುದು!

ಮಳೆಯಲ್ಲಿ ನೆನೆದ ತಕ್ಷಣ ಸ್ನಾನ
ಮಳೆಯಲ್ಲಿ ನೆನೆಯೋದು ಕೆಲವರಿಗೆ ಇಷ್ಟದ ಕೆಲಸವಾದ್ರೆ,ಇನ್ನೂ ಕೆಲವರಿಗೆ ಕಷ್ಟ ಕಷ್ಟ. ಇಷ್ಟವಿರಲ್ಲಿ ಇಲ್ಲದಿರಲಿ, ಎಷ್ಟೋ ಬಾರಿ ಅನಿವಾರ್ಯ ಕಾರಣಗಳಿಂದ ಮಳೆಯಲ್ಲಿ ನೆನಯಬೇಕಾದ ಸಂದರ್ಭ ಎದುರಾಗುತ್ತದೆ. ಈ ರೀತಿ ಮಳೆಯಲ್ಲಿ ಮಜ್ಜನ ಮಾಡಿಸಿಕೊಂಡ ಬಳಿಕ ಬಹುತೇಕರು ತಲೆಯನ್ನು ಟವಲ್‍ನಿಂದ ಒರೆಸಿಕೊಂಡು ಸುಮ್ಮನಿದ್ದು ಬಿಡುತ್ತಾರೆ. ಆದ್ರೆ ಮಳೆಯಲ್ಲಿ ತೊಯ್ದ ಬಳಿಕ ಬಿಸಿ ನೀರಿನಲ್ಲಿ ತಲೆಸ್ನಾನ ಮಾಡಿ ಒಣಗಿದ ಟವಲ್‍ನಿಂದ ಕೂದಲನ್ನು ಚೆನ್ನಾಗಿ ಒರೆಸಿಕೊಳ್ಳೋದ್ರಿಂದ ಶೀತ, ನೆಗಡಿಯಿಂದ ತಪ್ಪಿಸಿಕೊಳ್ಳಬಹುದು. ಬಿಸಿ ನೀರಿನ ಸ್ನಾನದಿಂದ ಚಳಿ ಕೂಡ ದೂರವಾಗಿ ದೇಹ ಬೆಚ್ಚಗಾಗುತ್ತದೆ.

ಆಹಾರ ಕ್ರಮ ಹೀಗಿರಲಿ
ಮಳೆಗಾಲದಲ್ಲಿ ದೇಹವನ್ನು ಒಳಗಿನಿಂದ ಬೆಚ್ಚಗಿರಿಸುವ ಆಹಾರ ಪದಾರ್ಥಗಳನ್ನು ಸೇವಿಸಬೇಕು. ಕಾಳುಮೆಣಸು, ಅರಿಶಿಣ, ಶುಂಠಿ, ಬೆಳ್ಳುಳ್ಳಿ, ಚಕ್ಕೆ, ಲವಂಗ ಸೇರಿದಂತೆ ಸಾಂಬಾರು ಪದಾರ್ಥಗಳನ್ನು ನಿತ್ಯದ ಆಹಾರದಲ್ಲಿ ಸೇರಿಸಬೇಕು. ಇವು ದೇಹವನ್ನು ಬೆಚ್ಚಗಿರಿಸುವ ಜೊತೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಅರಿಶಿಣ ಸೋಂಕು ನಿವಾರಕ ಕೂಡ ಹೌದು. ಮಳೆಗಾಲದಲ್ಲಿ ಸಿಗುವ ತರಕಾರಿಗಳು ಹಾಗೂ ಹಣ್ಣುಗಳನ್ನು ತಿನ್ನಿ. ಇದ್ರಿಂದ ಶರೀರಕ್ಕೆ ಅಗತ್ಯ ಪೋಷಕಾಂಶಗಳು ಲಭಿಸುತ್ತವೆ. ತರಕಾರಿ ಮತ್ತು ಹಣ್ಣುಗಳಲ್ಲಿ ಮಳೆಗಾಲದಲ್ಲಿ ಬೇರೆ ಸಮಯಕ್ಕಿಂತ ಹೆಚ್ಚು ಕೊಳೆಯಿರುತ್ತದೆ. ಆದಕಾರಣ ನೀರಿನಿಂದ ತೊಳೆದ ಬಳಿಕ ಸ್ವಲ್ಪ ಹೊತ್ತು ಉಪ್ಪು ಹಾಕಿದ ಉಗುರು ಬೆಚ್ಚಗಿನ ನೀರಿನಲ್ಲಿ ನೆನೆಸಿಟ್ಟು ಆ ಬಳಿಕ ಬಳಸೋದು ಉತ್ತಮ. ಸೊಪ್ಪುಗಳನ್ನು ಕೂಡ ಉಪ್ಪು ನೀರಿನಿಂದ ಸ್ವಚ್ಛಗೊಳಿಸಿ. ಮಾಂಸಾಹಾರಗಳನ್ನು ಚೆನ್ನಾಗಿ ಬೇಯಿಸಿ ತಿನ್ನಿ. ಇದ್ರಿಂದ ಅಜೀರ್ಣದಂತಹ ಸಮಸ್ಯೆ ಉಂಟಾಗೋದಿಲ್ಲ. ಆಹಾರ ಬಿಸಿ ಬಿಸಿ ಇರುವಾಗಲೇ ಸೇವಿಸಿ. ಒಂದು ವೇಳೆ ಅಡುಗೆ ಮಾಡಿ ತುಂಬಾ ಹೊತ್ತಾಗಿದ್ರೆ ಬಿಸಿ ಮಾಡಿ ಸೇವಿಸೋದು ಒಳ್ಳೆಯದು.

ಹ್ಯಾಪಿ ಹಾರ್ಮೋನ್ಸ್ ಹೆಚ್ಚಿಸಿಕೊಳ್ಳಿ, ಖುಷ್ ಖುಷಿಯಾಗಿರಿ

ಯಥೇಚ್ಛವಾಗಿ ನೀರು ಕುಡಿಯಿರಿ
ಮಳೆಗಾಲದಲ್ಲಿ ಯಥೇಚ್ಛವಾಗಿ ನೀರು ಕುಡಿಯಬೇಕು. ಬೇಸಿಗೆಗಾಲಕ್ಕೆ ಹೋಲಿಸಿದ್ರೆ ಮಳೆಗಾಲದಲ್ಲಿ ಬಾಯಾರಿಕೆ ಕಡಿಮೆ. ಹಾಗಂತ ದೇಹಕ್ಕೆ ನೀರಿನ ಅವಶ್ಯಕತೆ ಹೆಚ್ಚಿಲ್ಲ ಎಂದರ್ಥವಲ್ಲ. ದಿನಕ್ಕೆ ಕನಿಷ್ಠ 3-4 ಲೀಟರ್ ನೀರು ಕುಡಿಯಿರಿ. ಮಳೆಗಾಲದಲ್ಲಿ ಕುದಿಸಿ ಆರಿಸಿದ ನೀರನ್ನೇ ಕುಡಿಯಿರಿ. ಬೆಚ್ಚಗಿರುವ ನೀರು ದೇಹ ಹಾಗೂ ಮನಸ್ಸಿಗೆ ಹಿತ ನೀಡುತ್ತದೆ. ಮಳೆಗಾಲದಲ್ಲಿ ಬಿಸಿ ಕಾಫಿ ದೇಹ ಹಾಗೂ ಮನಸ್ಸಿಗೆ ಉಲ್ಲಾಸ ನೀಡುತ್ತೆ ನಿಜ. ಆದ್ರೆ ಅತಿಯಾದ ಕಾಫಿ ಸೇವನೆಯಿಂದ ಡಿಹೈಡ್ರೇಷನ್ ಉಂಟಾಗುತ್ತದೆ. ಆದಕಾರಣ ಕಾಫಿ ಸೇವನೆ ಮಿತಿಯಲ್ಲಿರಲಿ. 

ವ್ಯಾಯಾಮಕ್ಕೆ ರೆಸ್ಟ್ ನೀಡಬೇಡಿ
ಮಳೆಗಾಲದಲ್ಲಿ ಬೆಳಗ್ಗೆ ಎದ್ದೇಳೋದಕ್ಕೆ ಉದಾಸೀನವಾಗೋದು ಸಹಜ. ಆದ್ರೆ ಇದೇ ಕಾರಣಕ್ಕೆ ವ್ಯಾಯಾಮಕ್ಕೆ ರೆಸ್ಟ್ ನೀಡೋದು ಸರಿಯಲ್ಲ. ಮನೆಯಲ್ಲೇ ಒಂದಿಷ್ಟು ವ್ಯಾಯಾಮ ಮಾಡಿ. ಯೋಗ ಹಾಗೂ ಧ್ಯಾನ ಕೂಡ ಮಾನಸಿಕ ಹಾಗೂ ದೈಹಿಕ ಆರೋಗ್ಯ ಕಾಪಾಡಲು ನೆರವು ನೀಡುತ್ತದೆ.

ಸೋಂಕಿನ ಭಯಾನಾ? ಹೀಗ್ ಮಾಡಿದ್ರೆ ಹೆಲ್ದಿಯಾಗಿರುತ್ತೆ ವಜೈನಾ

ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳಿ
ಮಳೆಗಾಲದಲ್ಲಿ ಕೀಟಾಣುಗಳು ಬೇಗ ವೃದ್ಧಿಯಾಗುತ್ತವೆ. ಹೀಗಾಗಿ ಮನೆಯನ್ನು ಕೀಟಾಣುಗಳಿಂದ ಮುಕ್ತವಾಗಿರಿಸಿಕೊಳ್ಳೋದು ಅಗತ್ಯ. ಮನೆಯ ಸುತ್ತಮುತ್ತ ಎಲ್ಲೂ ನೀರು ನಿಲ್ಲದಂತೆ ಜಾಗ್ರತೆ ವಹಿಸಬೇಕು. ಇದ್ರಿಂದ ಡೆಂಗ್ಯೂ, ಮಲೇರಿಯಾದಂತಹ ಮಾರಕ ಕಾಯಿಲೆಗಳನ್ನು ಹಬ್ಬುವ ಸೊಳ್ಳೆಗಳ ಸಂತಾನೋತ್ಪತಿಯನ್ನು ತಡೆಯಬಹುದು. 

click me!