ಒಣಕೊಬ್ಬರಿ (Dried Coconut) ಪ್ರತಿನಿತ್ಯ ಸೇವಿಸುವುದರಿಂದ ಸಿಗುವ ಲಾಭಗಳೇನು ಹಾಗೂ ಯಾವ ರೀತಿಯ ರೋಗ (Disease)ಗಳಿಗೆ ಒಣಕೊಬ್ಬರಿ ಸೇವನೆ ಒಳ್ಳೆಯದು ಎಂಬುದನ್ನು ನೋಡೋಣ..
ಅಡುಗೆಯಲ್ಲಿ ಹಸಿ ತೆಂಗಿನಕಾಯಿ ಬಳಕೆ ಅತ್ಯುತ್ತಮ ಎಂದು ಹಿರಿಯರು ಹೇಳುತ್ತಾರೆ. ಆದರೆ ನಿಮಗೆ ಗೊತ್ತಾ ಒಣ ಕೊಬ್ಬರಿಯಲ್ಲೂ ಆರೋಗ್ಯಕ್ಕೆ ಬೇಕಾಗುವ ಹಲವು ಅಂಶಗಳಿವೆ. ಮನೆಯಲ್ಲಿ ಹಿರಿಯರು ಇದ್ದರೆ ಹೆಚ್ಚಾಗಿ ಹಸಿ ತೆಂಗಿನಕಾಯಿ ಅಥವಾ ಒಣಕೊಬ್ಬರಿ ((Dried Coconut)ಯನ್ನು ಬೆಲ್ಲದ ಜತೆ ತಿನ್ನಲು ಸಲಹೆ ನೀಡುತ್ತಾರೆ. ಯಾಕೆಂದರೆ ಅವರು ಒಣಕೊಬ್ಬರಿಯಲ್ಲಿರುವ ಉತ್ತಮ ಅಂಶಗಳ ಬಗ್ಗೆ ತಿಳಿದಿದ್ದಾರೆ. ಒಣ ಕೊಬ್ಬರಿಯಲ್ಲಿ ಒಳ್ಳೆಯ ಕೊಲೆಸ್ಟ್ರಾಲ್, ನಾರಿನಾಂಶ, ಕಾಪರ್, ಸೆಲೇನಿಯಂ ಎನ್ನುವ ಪೋಷಕಾಂಶಗಳಿವೆ. ಇದು ಆರೋಗ್ಯ ವರ್ಧನೆಗೆ ನೆರವಾಗುತ್ತದೆ. ದಿನವೊಂದಕ್ಕೆ 20ರಿಂದ 25 ಗ್ರಾಂನಷ್ಟು ಕೊಬ್ಬರಿಯನ್ನು ಚಿಕ್ಕ ತುಂಡುಗಳನ್ನಾಗಿ ಜಗಿದು ತಿನ್ನುವ ಅಭ್ಯಾಸವನ್ನು ರೂಢಿಸಿಕೊಂಡರೆ, ಯಾವುದೇ ಆರೋಗ್ಯ ಸಮಸ್ಯೆಗಳು ಕಾಡುವುದಿಲ್ಲ. ಒಣಕೊಬ್ಬರಿ ಆ್ಯಂಟಿ ಬಯೋಟಿಕ್ ತರ ಕೆಲಸ ಮಾಡುತ್ತದೆ
ರಕ್ತಹೀನತೆಯ ಸಮಸ್ಯೆಗೆ ಪರಿಹಾರ
ರಕ್ತಹೀನತೆಯ ಸಮಸ್ಯೆಗೆ ಒಣ ಕೊಬ್ಬರಿ ರಾಮಬಾಣ. ಮಹಿಳೆಯರಲ್ಲಿ ಸಾಮಾನ್ಯವಾಗಿ ರಕ್ತಹೀನತೆಯ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತದೆ. ರಕ್ತಹೀನತೆಯ ಸಮಸ್ಯೆ ಹೆಚ್ಚಾದರೆ ಶರೀರದಲ್ಲಿ ಶಕ್ತಿಯಿರುವುದಿಲ್ಲ, ತಲೆಸುತ್ತು, ಆಯಾಸ ಮೊದಲಾದ ತೊಂದರೆ ಎದುರಾಗುತ್ತದೆ. ಇಂತಹ ಸಮಸ್ಯೆಯಿಂದ ಬಳಲುತ್ತಿರುವವರು ಒಣಕೊಬ್ಬರಿಯ ಸೇವನೆ ಮಾಡುವುದು ತುಂಬಾನೇ ಒಳ್ಳೆಯದು. ಏಕೆಂದರೆ ಒಣ ಕೊಬ್ಬರಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಬ್ಬಿಣ ಅಂಶವಿದೆ. ಇದು ಶರೀರದಲ್ಲಿ ರಕ್ತವನ್ನು ಹೆಚ್ಚು ಮಾಡುತ್ತದೆ.
ಹಲ್ಲಿನ ಬಿಳುಪಿಗೂ ಸಹಕಾರಿ: ನಿಮಗರಿಯದ ಕೊಬ್ಬರಿ ಎಣ್ಣೆಯ ಗುಣಗಳಿವು
ಥೈರಾಯ್ಡ್ ಸಮಸ್ಯೆಗೆ ಕೊಬ್ಬರಿ ಸೇವನೆ ಒಳ್ಳೆಯದು
ಥೈರಾಯ್ಡ್ (Thyroid) ಸಮಸ್ಯೆ ಇರುವವರು ಒಣಕೊಬ್ಬರಿ ಸೇವನೆ ಮಾಡುವುದು ತುಂಬಾನೇ ಒಳ್ಳೆಯದು. ಥೈರಾಯ್ಡ್ ಸಮಸ್ಯೆ ದೇಹದಲ್ಲಿ ಸೆಲೇನಿಯಂ ಕೊರತೆಯಿಂದ ಉಂಟಾಗುತ್ತದೆ. ಒಣ ಕೊಬ್ಬರಿಯಲ್ಲಿ ಸೆಲೇನಿಯಂ ಅಧಿಕ ಪ್ರಮಾಣದಲ್ಲಿ ಇರುತ್ತದೆ. ಹೈಪರ್ ಥೈರಾಯ್ಡ್ ಇರಲಿ ಅಥವಾ ಹೈಪೋ ಥೈರಾಯ್ಡ್ ಇರಲಿ ತಪ್ಪದೇ ಒಣಕೊಬ್ಬರಿ ಸೇವಿಸಿ. ಇದು ನಿಮ್ಮ ಥೈರಾಯ್ಡ್ ಹಾರ್ಮೋನನ್ನು ಬ್ಯಾಲೆನ್ಸ್ ಆಗಿ ಇಡುತ್ತದೆ.
ಮೂಳೆಗಳು ಬಲಶಾಲಿಯಾಗುತ್ತವೆ
ಒಣಕೊಬ್ಬರಿ ಸೇವಿಸುವುದರಿಂದ ದೇಹದ ಮೂಳೆಗಳು ಬಲಶಾಲಿಯಾಗುತ್ತವೆ. ಕೊಬ್ಬರಿ ಸೇವನೆ ನಮ್ಮ ಮೂಳೆಗಳ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಮೂಳೆಗಳ ಅಂಗಾಂಶಗಳಲ್ಲಿ ಕಣಜ ಅಂಶಗಳು ಹೆಚ್ಚಾಗಿ ಇರುತ್ತದೆ. ಇದು ದೇಹದಲ್ಲಿ ಕಡಿಮೆಯಾದರೆ ದೇಹದ ಯಾವುದೇ ಭಾಗಕ್ಕೂ ತೊಂದರೆಯಾಗಬಹುದು. ಕೊಬ್ಬರಿ ಸೇವನೆ ಮಾಡುವುದರಿಂದ ಇಂಥಹಾ ಸಮಸ್ಯೆ ಎದುರಾಗುವುದಿಲ್ಲ. ಒಣ ಕೊಬ್ಬರಿಯ ಸೇವನೆಯಿಂದ ಮೂಳೆಗಳಲ್ಲಿನ ಖನಿಜಾಂಶ ಹೆಚ್ಚಾಗುತ್ತದೆ. ಒಣ ಕೊಬ್ಬರಿಯಿಂದ ದೊರೆಯುವ ಈ ಮಿನರಲ್ ದೇಹಕ್ಕೆ ಬೇಗನೆ ಸೇರಿಬಿಡುತ್ತದೆ. ಇದರಿಂದಾಗಿ ಆರ್ಥರೈಟಿಸ್‌ನಂತಹ ತೊಂದರೆಯಿಂದ ಪಾರಾಗಬಹುದು.
ಕೆಲವರಲ್ಲಿ ಲೂಬ್ರಿಕೇನ್ಟ್ ನ ಕೊರತೆಯಿಂದ ಮೂಳೆಗಳಲ್ಲಿ ನೋವು, ಓಡಾಡುವಾಗ ತೊಂದರೆ ಕಾಣಿಸಿಕೊಳ್ಳುತ್ತದೆ. ಇಂಥವರು ಒಣಕೊಬ್ಬರಿ ಸೇವಿಸಬೇಕು. ಉತ್ತಮ ಒಣಕೊಬ್ಬರಿಯಲ್ಲಿ ನೈಸರ್ಗಿಕವಾದ ಎಣ್ಣೆ ಹಾಗೂ ಖನಿಜ ಇರುವುದರಿಂದ ಇದು ಮೂಳೆಗಳನ್ನು ಬಲಶಾಲಿಯಾಗಿಸುತ್ತದೆ. ಮಂಡಿ ನೋವು, ಸೊಂಟ ನೋವು ಮೊದಲಾದ ಸಮಸ್ಯೆಗಳು ಬರುವುದಿಲ್ಲ..
ಎಳನೀರೆಂದರೆ ಸುಮ್ನೆ ಅಲ್ಲ, ಅದು ಆರೋಗ್ಯದ ಆಗರ, ಅಮೃತಕ್ಕೆ ಸಮ...
ಮೂಲವ್ಯಾಧಿಗೆ ಉತ್ತಮ
ಪೈಲ್ಸ್ ಅಥವಾ ಮೂಲವ್ಯಾಧಿ ಸಮಸ್ಯೆಗೆ ಕೂಡಾ ಒಣಕೊಬ್ಬರಿ ಒಳ್ಳೆಯ ಔಷಧಿ. ಕೊಬ್ಬರಿಯನ್ನು ಮೂಲವ್ಯಾಧಿ ಇರುವವರು ಸೇವಿಸುವುದರಿಂದ ಮೂಲವ್ಯಾಧಿ ಸಮಸ್ಯೆ ಸರಿಹೋಗುತ್ತದೆ. ಒಣ ಕೊಬ್ಬರಿಯಲ್ಲಿ ಹೇರಳವಾದ ನಾರಿನ ಅಂಶವಿರುವುದರಿಂದ ಇದು ಮಲಬದ್ಧತೆಯ ಸಮಸ್ಯೆಯನ್ನು ಕೂಡಾ ಸರಿಪಡಿಸುತ್ತದೆ. ಪದೇ ಪದೇ ತಲೆನೋವು ಅಥವಾ ಮೈಗ್ರೇನ್ ಸಮಸ್ಯೆಯಿಂದ ಬಳಲುತ್ತಿದ್ದರೆ, ತುರಿದ ಕೊಬ್ಬರಿ 20ರಿಂದ 25 ಗ್ರಾಂ, 20ರಿಂದ 25 ಗ್ರಾಂನಷ್ಟು ಕಲ್ಲು ಸಕ್ಕರೆ. ಜಗಿದು ಜಗಿದು ಸೇವಿಸಬೇಕು. ಈ ರೀತಿ ಮಾಡುವುದರಿಂದ ಕ್ರಮೇಣ ಮೈಗ್ರೇನ್ ಸಮಸ್ಯೆ ಕಡಿಮೆಯಾಗುತ್ತದೆ.
ಹೃದಯದ ಆರೋಗ್ಯಕ್ಕೂ ಸಹಕಾರಿ
ಒಣಕೊಬ್ಬರಿ ಹೃದಯ (Heart)ದ ಆರೋಗ್ಯಕ್ಕೂ ತುಂಬಾನೇ ಒಳ್ಳೆಯದು. ಇದರಲ್ಲಿರುವ ಫೈಬರ್ ಹೃದಯವನ್ನು ಆರೋಗ್ಯವಾಗಿಡುತ್ತದೆ. ಒಣಕೊಬ್ಬರಿಯ ಸೇವನೆಯಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಪುರುಷರಲ್ಲಿ ಹಾಗೂ ಮಹಿಳೆಯರಲ್ಲಿ ಬಂಜೆತನದ ಸಮಸ್ಯೆಯನ್ನು ನಿವಾರಿಸುತ್ತದೆ.
ಮೆದುಳು ಚುರುಕಾಗುತ್ತದೆ
ಒಣ ಕೊಬ್ಬರಿ ಸೇವನೆಯಿಂದ ಮೆದುಳು (Brain) ಚುರುಕಾಗುತ್ತದೆ. ಮೆದುಳಿನ ಫಂಕ್ಷನ್ ಇಂಪ್ರೂವ್ ಆಗುತ್ತದೆ. ಜ್ಞಾಪಕ ಶಕ್ತಿ ಹೆಚ್ಚಾಗಬೇಕು ಹಾಗೂ ಮೆದುಳು ಚುರುಕಾಗಿ ಇರಬೇಕು ಅಂದರೆ ತಪ್ಪದೇ ಒಣ ಕೊಬ್ಬರಿಯನ್ನು ಸೇವಿಸಲೇಬೇಕು.
ನಿದ್ರಾಹೀನತೆಯ ಸಮಸ್ಯೆಗೆ ಪರಿಹಾರ
ನಿದ್ರಾಹೀನತೆಯ ಸಮಸ್ಯೆಯನ್ನು ಸರಿಪಡಿಸುವ ಶಕ್ತಿ ಒಣಕೊಬ್ಬರಿಗಿದೆ. ನಿದ್ರಾಹೀನತೆಯಿಂದ ಬಳಲುತ್ತಿರುವವರು ರಾತ್ರಿ ಮಲಗುವ ಮೊದಲು ಒಂದು ಗ್ಲಾಸ್ ಬಿಸಿ ಹಾಲಿಗೆ ಎರಡು ಚಮಚ ತುರಿದ ಒಣ ಕೊಬ್ಬರಿಯನ್ನು ಹಾಕಿ ಕುಡಿಯುವುದರಿಂದ ಚೆನ್ನಾಗಿ ನಿದ್ರೆ ಬರುತ್ತದೆ. ಒಣಕೊಬ್ಬರಿಯನ್ನು ಸೇವಿಸುವುದರಿಂದ ಅಜೀರ್ಣತೆಯ ಸಮಸ್ಯೆಯೂ ಕೂಡ ಸರಿ ಹೋಗುತ್ತದೆ. ಇನ್ನು, ಒಣ ಕೊಬ್ಬರಿಯನ್ನು ಮಧುಮೇಹಿಗಳು ಕೂಡ ಸೇವನೆ ಮಾಡಬಹುದು. ಇದು ರಕ್ತದಲ್ಲಿ ಅಧಿಕ ಗ್ಲುಕೋಸ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಕೊಬ್ಬರಿಯ ಸೇವನೆಯಿಂದ ಕೂದಲು ಉದುರುವ ಸಮಸ್ಯೆಯೂ ಬೇಗನೆ ಕಡಿಮೆಯಾಗುತ್ತದೆ.