
ಚೆನ್ನೈ: ನಾಯಿ ಕಚ್ಚಿದ 3 ತಿಂಗಳ ನಂತರ ಯುವಕನೋರ್ವ ರೇಬೀಸ್‌ಗೆ ಬಲಿಯಾದ ಘಟನೆ ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯಲ್ಲಿ ನಡೆದಿದೆ. 31 ವರ್ಷದ ಅಯ್ಯಪ್ಪನ್ ಮೃತಪಟ್ಟ ಯುವಕ. ಮೂರು ತಿಂಗಳ ಹಿಂದೆ ಅಯ್ಯಪ್ಪನ್ ಅವರಿಗೆ ನಾಯಿ ಕಚ್ಚಿತ್ತು. ಆದರೆ ಅವರು ನಾಯಿ ಕಚ್ಚಿದ್ದನ್ನು ನಿರ್ಲಕ್ಷಿಸಿ ಚಿಕಿತ್ಸೆ ಪಡೆಯಲೇ ಇಲ್ಲ, ಪರಿಣಾಮ ನಾಯಿ ಕಚ್ಚಿದ ಮೂರು ತಿಂಗಳ ನಂತರ ಅವರ ಸಾವು ಸಂಭವಿಸಿದೆ. ರೇಬೀಸ್‌ಗೆ ಅವರು ಪ್ರಾಣ ಕಳೆದುಕೊಂಡಿದ್ದಾರೆ. ಅಯ್ಯಪ್ಪನ್ ಅವರು ಕಾವಲ್ ಕಿನಾರು ಪ್ರದೇಶದ ಕಟ್ಟಡ ನಿರ್ಮಾಣ ಸ್ಥಳವೊಂದರಲ್ಲಿ(construction site)ಕೆಲಸ ಮಾಡುತ್ತಿದ್ದ ವೇಳೆ ಈ ಘಟನೆ ನಡೆದಿತ್ತು.
ನಾಯಿ ಕಚ್ಚಿದ್ದನ್ನು ಅಯ್ಯಪ್ಪನ್ ಅವರು ಸಂಪೂರ್ಣ ನಿರ್ಲಕ್ಷಿಸಿದ್ದರು. ಯಾವುದೇ ಲಸಿಕೆಯನ್ನು ಅವರು ಪಡೆದಿರಲಿಲ್ಲ, ಆದರೆ ಮೂರು ತಿಂಗಳ ನಂತರ ಅವರು ರೇಬೀಸ್‌ಗೆ ಬಲಿಯಾಗಿದ್ದಾರೆ. ಅಸರಿಪಲ್ಲಂ ಸರ್ಕಾರಿ ವೈದ್ಯಕೀಯ ಕಾಲೇಜಿನ ಡೀನ್ ಡಾ. ಲಿಯೋ ಡೇವಿಡ್ ಅವರು ಅಯ್ಯಪ್ಪನ್ ರೇಬೀಸ್‌ನಿಂದಲೇ ಮೃತಪಟ್ಟಿರುವುದಾಗಿ ಖಚಿತಪಡಿಸಿದ್ದಾರೆ. ಆತನನ್ನು ಆಸ್ಪತ್ರೆಗೆ ಕರೆತಂದ ವೇಳೆ ಆತ ಸಂಪೂರ್ಣವಾಗಿ ರೇಬೀಸ್ ಲಕ್ಷಣಗಳನ್ನು ಹೊಂದಿದ್ದನು ಎಂದು ಅವರು ಹೇಳಿದ್ದಾರೆ.
3 ತಿಂಗಳ ಹಿಂದೆ ಕಚ್ಚಿದ್ದ ನಾಯಿ ಔಷಧಿ ಪಡೆಯದೇ ನಿರ್ಲಕ್ಷ್ಯ
ಆ ವ್ಯಕ್ತಿ ನಿರಂತರ ಚಡಪಡಿಸುತ್ತಿದ್ದನ್ನು, ಆತನಿಗೆ ನುಂಗಲು ಸಾಧ್ಯವಾಗುತ್ತಿರಲಿಲ್ಲ, ಆತನನ್ನು ಅಸರಿಪಲ್ಲಂನ ಸರ್ಕಾರಿ ಆಸ್ಪತ್ರೆಗೆ ಸೇರಿಸುವ ಮೊದಲು ಎರಡು ಖಾಸಗಿ ಆಸ್ಪತ್ರೆಗೂ ಕರೆದೊಯ್ಯಲಾಗಿತ್ತು. ಆದರೆ ಆತನನ್ನು ಬದುಕಿಸಲು ಸಾಧ್ಯವಾಗಲಿಲ್ಲ ಎಂದು ವೈದ್ಯರು ಹೇಳಿದ್ದಾರೆ. ರೇಬೀಸ್ ಲಕ್ಷಣಗಳಿರುವ ನಾಯಿಗಳನ್ನು ಪ್ರತ್ಯೇಕಿಸಲು ಸುಪ್ರೀಂ ಕೋರ್ಟ್ ಆದೇಶಿಸಿದ ಮತ್ತು ತಮಿಳುನಾಡು ಸರ್ಕಾರವು ರಾಜ್ಯದಲ್ಲಿ ಬೀದಿ ನಾಯಿಗಳಿಗೆ ಲಸಿಕೆ ಹಾಕುವ ಅಭಿಯಾನವನ್ನು ಆರಂಭಿಸಿದ ಸಮಯದಲ್ಲೇ ಅಯ್ಯಪ್ಪನ್ ಸಾವು ಸಂಭವಿಸಿದೆ.
ಒಬ್ಬ ವ್ಯಕ್ತಿಯಲ್ಲಿ ರೇಬೀಸ್ ಲಕ್ಷಣಗಳು ಕಾಣಿಸಿಕೊಂಡ ನಂತರ ಬದುಕುಳಿಯುವ ಸಾಧ್ಯತೆಗಳು ತೀರಾ ವಿರಳ. ರೇಬೀಸ್ ಸೋಂಕು ಕಾಣಿಸಿಕೊಂಡ 7 ರಿಂದ 14 ದಿನಗಳಲ್ಲಿ ಸೋಂಕಿತ ವ್ಯಕ್ತಿ ಸಾವಿಗೀಡಾಗುತ್ತಾನೆ. ಆದರೆ ನಾಯಿ ಅಥವಾ ಇತರ ಸಾಕು ಪ್ರಾಣಿಗಳು ಕಚ್ಚಿದ ಕೂಡಲೇ, ಗಾಯವನ್ನು ತೊಳೆಯುವುದು ಹಾಗೂ ಲಸಿಕೆ ಹಾಕಿಸಿಕೊಳ್ಳುವುದು,ಪೋಸ್ಟ್-ಎಕ್ಸ್‌ಪೋಸರ್ ಪ್ರೊಫಿಲ್ಯಾಕ್ಸಿಸ್ (PEP)ಚುಚ್ಚುಮದ್ದು ಪಡೆದರೆ ರೋಗವನ್ನು 100% ತಡೆಗಟ್ಟಬಹುದು. ಜಾಗತಿಕವಾಗಿ, ರೇಬೀಸ್‌ನಿಂದ ವರ್ಷಕ್ಕೆ ಅಂದಾಜು 59,000 ಸಾವುಗಳು ಸಂಭವಿಸುತ್ತಿವೆ. ಹೆಚ್ಚಾಗಿ ಏಷ್ಯಾ ಮತ್ತು ಆಫ್ರಿಕಾದಲ್ಲಿಯೇ ನಾಯಿ ಕಡಿತದಿಂದ ಸಾವನ್ನಪುವವರ ಸಂಖ್ಯೆ ಹೆಚ್ಚಿದೆ.
ರೇಬೀಸ್ ಏಕೆ ಮಾರಕ?
ಒಮ್ಮೆ ರೇಬೀಸ್ ಇದ್ದ ನಾಯಿ ಕಚ್ಚಿದ ನಂತರ ಅಥವಾ ನಾಯಿ ಗೀರಿದ ನಂತರ ಆ ಗೀರು ಅಥವಾ ಗಾಯದ ಮೂಲಕ ವೈರಸ್ ಸೀದಾ ನರಗಳ ಮೂಲಕ ಮೆದುಳಿಗೆ ಸಾಗುತ್ತದೆ. ಮನುಷ್ಯನಲ್ಲಿ ಲಕ್ಷಣಗಳು ಕಾಣಿಸಿಕೊಳ್ಳುವ ಹೊತ್ತಿಗೆ, ವೈರಸ್ ಕೇಂದ್ರ ನರಮಂಡಲವನ್ನು ತೀವ್ರವಾಗಿ ಹಾನಿಗೊಳಿಸುತ್ತದೆ. ಇದರಿಂದ ಮಾನಸಿಕ ಸಮಸ್ಯೆ, ಭಯ ನೀರು ಕಂಡರೆ ಭಯ ನಂತರ ಕೋಮಾ ಮತ್ತು ಸಾವಿಗೆ ಕಾರಣವಾಗುತ್ತದೆ.
ತಕ್ಷಣ ಚಿಕಿತ್ಸೆ ಪಡೆಯಿರಿ: ರೇಬೀಸ್ ಇದೆ ಎಂದು ಶಂಕಿಸಲಾದ ಪ್ರಾಣಿಯಿಂದ ಕಡಿತಕ್ಕೊಳಗಾದರೆ ಗಾಯವನ್ನು ತಕ್ಷಣವೇ ಸೋಪ್ ಮತ್ತು ನೀರಿನಿಂದ ತೊಳೆಯಿರಿ ಮತ್ತು ತಕ್ಷಣ ವೈದ್ಯಕೀಯ ಚಿಕಿತ್ಸೆ ಪಡೆಯಿರಿ. ಲಸಿಕೆ ಪಡೆಯಿರಿ. ಸಾಕು ನಾಯಿ ಆಗಿದ್ದರೂ ನಿರ್ಲಕ್ಷ್ಯ ಬೇಡ. ಮನೆಯ ಸಾಕು ಪ್ರಾಣಿಗಳಿಗೆ ಲಸಿಕೆ ಹಾಕಿಸುವುದನ್ನು ಮರೆಯಬೇಡಿ.
ಇದನ್ನೂ ಓದಿ: ಹಾರ್ನ್ ಮಾಡಿದ್ರು ಅಂತ ಸ್ಕೂಟಿಯಲ್ಲಿ ಸಾಗ್ತಿದ್ದ ಕುಟುಂಬಕ್ಕೆ ಡಿಕ್ಕಿ ಹೊಡೆದ ಕಾರು
ಇದನ್ನೂ ಓದಿ: ರಾಂಗ್ ಸೈಡಲ್ಲಿ ಬಂದಿದ್ದಲ್ಲದೇ, ಆಟೋ ಚಾಲಕನ ಮೇಲೆ ಮಹಿಳೆಯ ದರ್ಪ: ವೀಡಿಯೋ ವೈರಲ್
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.